AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ; ಆಸ್ಪತ್ರೆಗೆ ದಾಖಲು

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ, ಪಂಜಾಬ್ ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್​​ನಿಂದ ದಾಳಿ ನಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಖ್‌ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ 'ಗುರುದ್ವಾರ ಮಾತಾ ಸಾಹಿಬ್' ಬಳಿ ನಿಹಾಂಗ್ ಸಿಖ್ ಓರ್ವ ತಲ್ವಾರ್​ನಿಂದ ದಾಳಿ ನಡೆಸಿದ್ದಾನೆ. ಕೆಲವೇ ದಿನಗಳ ಹಿಂದೆ ಸುಖ್​ಬೀರ್ ಸಿಂಗ್ ಬಾದವ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ; ಆಸ್ಪತ್ರೆಗೆ ದಾಖಲು
Sukhbir Singh Badal AttackedImage Credit source: PTI
ಸುಷ್ಮಾ ಚಕ್ರೆ
|

Updated on: Aug 13, 2026 | 5:32 PM

Share

ನಾಂದೇಡ್, ಆಗಸ್ಟ್ 13: ಶಿರೋಮಣಿ ಅಕಾಲಿದಳದ (SAD) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ (Sukhbir Singh Badal) ಅವರ ಮೇಲೆ ಇಂದು (ಆಗಸ್ಟ್ 13) ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರವೊಂದರಲ್ಲಿ ದಿಢೀರ್ ದಾಳಿ ನಡೆದಿದೆ. ಇದರಿಂದ ಅವರು ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ರಾಜ್ಯ ಸಚಿವರೂ ಆಗಿರುವ ಬಾದಲ್ ಅವರು ಮುದ್ಖೇಡ್ ತಾಲೂಕಿನ ಮುಗಾಟ್‌ನಲ್ಲಿರುವ ‘ಗುರುದ್ವಾರ ಮಾತಾ ಸಾಹಿಬ್ ದೇವಾಜಿ’ಗೆ ಭೇಟಿ ನೀಡಿದ್ದಾಗ ಈ ಘಟನೆ ಸಂಭವಿಸಿದೆ.

64 ವರ್ಷದ ಬಾದಲ್ ಅವರ ಕೈಗೆ ತಲ್ವಾರ್​​ನಿಂದ ಇರಿದ ಪರಿಣಾಮವಾಗಿ ತೀವ್ರ ಗಾಯಗಳಾಗಿದ್ದು, ರಕ್ತ ಸೋರುತ್ತಿದ್ದ ಎಡಕೈಗೆ ಬಟ್ಟೆ ಕಟ್ಟಿಕೊಂಡು ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಬಿಜೆಪಿಯಿಂದ ಮಾತ್ರ ಪಂಜಾಬ್​​ನಲ್ಲಿ ಅಭಿವೃದ್ಧಿ ಸಾಧ್ಯ; ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ಮೋದಿ ಭೇಟಿಯ ಬೆನ್ನಲ್ಲೇ ದಾಳಿ:

ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಶಿರೋಮಣಿ ಅಕಾಲಿದಳ ಮತ್ತು ಭಾರತೀಯ ಜನತಾ ಪಾರ್ಟಿ (BJP) ಮತ್ತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳ ನಡುವೆ, ಕಳೆದ ವಾರ ದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಬಾದಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ನಡೆದ ಕೆಲವೇ ದಿನಗಳಲ್ಲಿ ಅವರ ಮೇಲೆ ದಾಳಿ ನಡೆದಿದೆ. ಪ್ರಧಾನಿ ಭೇಟಿಯ ಮರುದಿನವೇ, ಮಹಿಳಾ ಮೀಸಲಾತಿ ವಿಧೇಯಕ ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕವನ್ನು ತಕ್ಷಣವೇ ಜಾರಿಗೆ ತರಬೇಕೆಂದು ಬಾದಲ್ ಅವರ ಪಕ್ಷ ಒತ್ತಾಯಿಸಿತ್ತು.

ದಾಳಿ ನಡೆಸಿದವರ ಬಂಧನ:

ಇಂದು ಮಧ್ಯಾಹ್ನ ಸುಮಾರು 1.50ರ ಸುಮಾರಿಗೆ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ, ಸಿಖ್ ಸ್ವಯಂಸೇವಕನೊಬ್ಬ ಬಾದಲ್ ಅವರ ಕೈಗೆ ತಲ್ವಾರ್​​ನಿಂದ ದಾಳಿ ನಡೆಸಿದನು. ಈ ವೇಳೆ ಬಾದಲ್ ಅವರನ್ನು ರಕ್ಷಿಸಲು ಯತ್ನಿಸಿದ ವಿಶೇಷ ರಕ್ಷಣಾ ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕೇಂಗ್ರೆ ಅವರ ಕೈಗೂ ಗಾಯಗಳಾಗಿವೆ. ಇಬ್ಬರನ್ನೂ ನಾಂದೇಡ್‌ನ ಯಶೋಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಇದನ್ನೂ ಓದಿ: ಪಂಜಾಬ್‌ನ ಸಂಗ್ರೂರ್​​ನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಯನ್ನು ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ನಿಹಾಂಗ್ ಸಿಖ್ ಆಗಿದ್ದು ಕಳೆದ 2 ವರ್ಷಗಳಿಂದ ಗುರುದ್ವಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬಾದಲ್ ಮೇಲಿನ ಎರಡನೇ ಬಾರಿ ದಾಳಿ:

ಕಳೆದ 2 ವರ್ಷಗಳಲ್ಲಿ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿಯವರ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಈ ಹಿಂದೆ 2024ರ ಡಿಸೆಂಬರ್‌ನಲ್ಲಿ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದಲ್ಲಿ ಬಾದಲ್ ಅವರ ಮೇಲೆ ದಾಳಿ ನಡೆಸಲಾಗಿತ್ತು. ಆ ದಾಳಿಕೋರನನ್ನು ಡೇರಾಬಾಬಾ ನಿವಾಸಿ ಹಾಗೂ ದಳ ಖಾಲ್ಸಾ ಸಂಘಟನೆಯ ಸದಸ್ಯ ನಾರಾಯಣ್ ಸಿಂಗ್ ಚೌರಾ ಎಂದು ಗುರುತಿಸಲಾಗಿತ್ತು. 2007ರ ಗುರು ಗ್ರಂಥ ಸಾಹಿಬ್ ಅಪಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಅವರನ್ನು ಬೆಂಬಲಿಸಿದ ಆರೋಪದ ಮೇಲೆ ಅಕಾಲ ತಖ್ತ್ ಬಾದಲ್ ಅವರಿಗೆ ಧಾರ್ಮಿಕ ಶಿಕ್ಷೆ ವಿಧಿಸಿದ ನಂತರ ಆ ದಾಳಿ ನಡೆದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us