AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ನಡೆಸಿದ ತಂದೆ ವಿರುದ್ಧ ಒಬ್ಬಂಟಿಯಾಗಿ ಕಾನೂನು ಹೋರಾಟ ಗೆದ್ದ ಅಪ್ರಾಪ್ತೆ!: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಬೆಂಗಳೂರಿನಲ್ಲಿ ತನ್ನದೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಬಿಹಾರ ಮೂಲದ ತಂದೆಗೆ ವಿಶೇಷ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಕುಟುಂಬದ ಬೆಂಬಲವಿಲ್ಲದಿದ್ದರೂ ಅಪ್ರಾಪ್ತೆ ಒಬ್ಬಂಟಿಯಾಗಿ ಹೋರಾಡಿ ನ್ಯಾಯ ಪಡೆದಿದ್ದಾಳೆ. ಮಗಳಿಗೆ ಬೆಂಬಲ ನೀಡುವ ಬದಲು ತಂದೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಕ್ಕೆ ಸಂತ್ರಸ್ತೆಯನ್ನು ತಾಯಿಯೂ ಗದರಿಸಿದ್ದಳು. ಆದರೂ ಯಾವುದಕ್ಕೂ ಧೃತಿಗೆಡದ ಬಾಲಕಿ ಅಂತಿಮವಾಗಿ ಕಾನೂನು ಹೋರಾಟ ಗೆದ್ದಿದ್ದಾಳೆ.

ಅತ್ಯಾಚಾರ ನಡೆಸಿದ ತಂದೆ ವಿರುದ್ಧ ಒಬ್ಬಂಟಿಯಾಗಿ ಕಾನೂನು ಹೋರಾಟ ಗೆದ್ದ ಅಪ್ರಾಪ್ತೆ!: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Jun 12, 2026 | 12:53 PM

Share

ಬೆಂಗಳೂರು, ಜೂನ್​​ 12: ಮದ್ಯದ ಅಮಲಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ತಂದೆಯ ವಿರುದ್ಧವೇ ಕಾನೂನು ಹೋರಾಟ ಮಾಡಿ ಆತನಿಗೆ ಶಿಕ್ಷೆ ಕೊಡಿಸುವಲ್ಲಿ ಅಪ್ರಾಪ್ತೆ ಸಫಲವಾಗಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. 16 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ದಿನಗೂಲಿ ಕಾರ್ಮಿಕನಿಗೆ ನಗರದ ವಿಶೇಷ ನ್ಯಾಯಾಲಯವು 20 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಮೂರು ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ತಾಯಿ ಹಾಗೂ ಕುಟುಂಬದ ಬೆಂಬಲವಿಲ್ಲದಿದ್ದರೂ ಬಾಲಕಿ ಧೈರ್ಯದಿಂದ ಹೋರಾಡಿ ನ್ಯಾಯ ಪಡೆದಿದ್ದಾಳೆ.

ಆರೋಪಿ ಬಿಹಾರ ಮೂಲದ ದಿನಗೂಲಿ ಕಾರ್ಮಿಕನಾಗಿದ್ದು, ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಉತ್ತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಸಂತ್ರಸ್ತೆ ಆತನ ಹಿರಿಯ ಮಗಳಾಗಿದ್ದು, 9ನೇ ತರಗತಿಯ ಬಳಿಕ ಶಾಲೆ ತೊರೆದಿದ್ದಳು. ತಂದೆ ಮದುವೆಗೆ ಒತ್ತಾಯಿಸುತ್ತಿದ್ದ ಕಾರಣ ಉತ್ತರ ಪ್ರದೇಶದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಕ್ಕೆ ತೆರಳಿದ್ದಳು. ಈ ನಡುವೆ 2023ರ ಜೂನ್ 12ರಂದು ಆರೋಪಿಯ ತಾಯಿ ಬಿಹಾರದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಅಂತ್ಯಕ್ರಿಯೆಗಾಗಿ ಊರಿಗೆ ತೆರಳಿದ್ದರು. ಈ ವೇಳೆ ಮಗಳನ್ನು ಇನ್ನು ಮುಂದೆ ಮದುವೆಗೆ ಒತ್ತಾಯಿಸುವುದಿಲ್ಲ ಎಂದು ಆರೋಪಿ ಭರವಸೆ ನೀಡಿದ್ದ. ಬಳಿಕ ಆತ ಬೆಂಗಳೂರಿಗೆ ಹಿಂದಿರುಗಿದ್ದರೆ, ಮಗಳು ನಂತರ ಬೆಂಗಳೂರಿಗೆ ಬಂದಿದ್ದಳು.

ಇದನ್ನೂ ಓದಿ: ಪ್ರೇಯಸಿಯನ್ನು ಸೇತುವೆಯಿಂದ ತಳ್ಳಿ ಕೊಂದು, ಅಪಘಾತವೆಂದು ಬಿಂಬಿಸಿದ ಪ್ರೇಮಿ!

ಆಟೋ ಚಾಲಕನ ಸಹಾಯ ಪಡೆದು ದೂರು

2023ರ ಜೂನ್ 27ರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಆರೋಪಿ, ಉತ್ತರ ಪ್ರದೇಶದಲ್ಲಿದ್ದಾಗ ಮಗಳಿಗೆ ಪ್ರೇಮ ಸಂಬಂಧವಿತ್ತು ಎಂಬ ಅನುಮಾನ ವ್ಯಕ್ತಪಡಿಸಿ, ಆಕೆಯನ್ನು ಪರೀಕ್ಷೆ ಮಾಡಬೇಕೆಂಬ ನೆಪದಲ್ಲಿ ಅತ್ಯಾಚಾರ ಎಸಗಿದ್ದ. ರಾತ್ರಿ ವೇಳೆ ಊಟ ತರಲು ಮನೆಬಿಟ್ಟು ಹೊರಗೆ ಹೋದ ಸಂದರ್ಭದಲ್ಲಿ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಉದ್ಯಾನವನದಲ್ಲಿ ರಾತ್ರಿ ಕಳೆದಿದ್ದಳು. ಮರುದಿನ ಬೆಳಗ್ಗೆ ಆಟೋ ರಿಕ್ಷಾ ಚಾಲಕನೊಬ್ಬನನ್ನು ಕಂಡು ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಳು. ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಳು.

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿದ್ದರು. ಬಾಲಕಿಯನ್ನು ರಕ್ಷಣೆಗಾಗಿ ಸರ್ಕಾರಿ ಮಹಿಳಾ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪೊಲೀಸರು ತಾಯಿಯನ್ನು ಬೆಂಗಳೂರಿಗೆ ಕರೆಸಿದಾಗ, ಮಗಳಿಗೆ ಬೆಂಬಲ ನೀಡುವ ಬದಲು ತಂದೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಕ್ಕೆ ಆಕೆಯನ್ನು ಗದರಿಸಿದ್ದಳು ಎಂದು ತಿಳಿದುಬಂದಿದೆ. ಸಂತ್ರಸ್ತೆ ಈ ಹೋರಾಟವನ್ನು ಸಂಪೂರ್ಣವಾಗಿ ಒಬ್ಬಳೇ ನಡೆಸಿದ್ದು, ಕಿನಿಷ್ಠ ಆಕೆಯ ತಾಯಿಯೂ ಬೆಂಬಲ ನೀಡಿಲ್ಲ ಎನ್ನಲಾಗಿದೆ. ಅಂತಿಮವಾಗಿ ಪ್ರಕರಣ ಸಂಬಂಧ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆಯೊಂದಿಗೆ 1.10 ಲಕ್ಷ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ. 2023ರ ಜೂನ್‌ನಲ್ಲಿ ಬಂಧನಕ್ಕೊಳಗಾದ ಆರೋಪಿಯು ಅಂದಿನಿಂದಲೂ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ. ಪ್ರಸ್ತುತ 19 ವರ್ಷದ ಯುವತಿಯಾಗಿರುವ ಸಂತ್ರಸ್ತೆ ಟೈಲರಿಂಗ್ ಕೆಲಸ ಮಾಡುತ್ತಿದ್ದಾಳೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us