Arvind Kejriwal: ಸಿಸೋಡಿಯಾ ಮೇಲೆ ಸಿಬಿಐ ದಾಳಿ ಬಳಿಕ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಶೇ 4ರಷ್ಟು ಏರಿದೆ: ಅರವಿಂದ ಕೇಜ್ರೀವಾಲ್
Gujarat Assembly Election: ಗುಜರಾತ್ ಚುನಾವಣೆ ವಿಚಾರವಾಗಿ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ವಿಧಾನಸಭೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ (Bharatiya Janata Party – BJP) ಮತ್ತು ಆಮ್ ಆದ್ಮಿ ಪಕ್ಷದ (Aam Aadmi Party – AAP) ನಾಯಕರ ತಿಕ್ಕಾಟ ತಾರಕಕ್ಕೇರಿದೆ. ಪಕ್ಷದ ನಾಯಕರ ಮೇಲಿನ ಸಿಬಿಐ ದಾಳಿಯನ್ನೇ ರಾಜಕೀಯ ದಾಳವನ್ನಾಗಿಸಲು ಆಪ್ ಮುಂದಾಗಿದ್ದು ಗುಜರಾತ್ ಚುನಾವಣೆ ವಿಚಾರವಾಗಿ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ವಿಧಾನಸಭೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಆಪ್ ನಾಯಕರ ಮೇಲೆ ಸಿಬಿಐ ದಾಳಿ ಬಳಿಕ ಪಕ್ಷದ ಜನಪ್ರಿಯತೆ ಹೆಚ್ಚಾಗಿದೆ. ಅದರಲ್ಲೂ ಗುಜರಾತ್‌ನಲ್ಲಿ ಆಪ್ ಪರವಾಗಿ ಮತದಾರರ ಒಲವು ಶೇ 4ರಷ್ಟು ಏರಿಕೆಯಾಗಿದೆ ಎಂದು ಕೇಜ್ರೀವಾಲ್ ಮಾಹಿತಿ ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿ, ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರ ಮೇಲಿನ ದಾಳಿಯನ್ನು ಸಿಬಿಐ ದಾಳಿಯನ್ನು ಖಂಡಿಸಿದ್ದಾರೆ. ‘ಆಮ್ ಆದ್ಮಿ ಪಕ್ಷದ ನಾಯಕರ ಮೇಲಿನ ಸಿಬಿಐ ದಾಳಿಯಿಂದ ಬಿಜೆಪಿಗೆ ನಷ್ಟವೇ ಹೊರತು ಆಮ್ ಆದ್ಮಿ ಪಕ್ಷಕ್ಕೆ ಅಲ್ಲ. ಮನೀಷ್ ಸಿಸೋಡಿಯಾ ಮೇಲಿನ ದಾಳಿಯ ನಂತರ ಗುಜರಾತ್‌ನಲ್ಲಿ ಆಪ್ ಪರವಾಗಿ ಶೇ 4ರಷ್ಟು ಮತದಾರರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಸಿಸೋಡಿಯಾ ಅವರನ್ನೇನಾದರೂ ಸಿಬಿಐ ಬಂಧಿಸಿದರೆ ಜನಪ್ರಿಯತೆ ಶೇ 6ಕ್ಕೆ ಏರುತ್ತದೆ’ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಮನೀಶ್ ಸಿಸೋಡಿಯ ಅವರನ್ನು ಬಂಧಿಸಿದ ನಂತರ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚನೆಯಾಗುವುದು ಖಚಿತ. ಆಮ್ ಆದ್ಮಿ ಪಕ್ಷವು ನಿಷ್ಠುರವಾದ ಪ್ರಾಮಾಣಿಕ ಪಕ್ಷವಾಗಿದೆ. ಪ್ರಾಮಾಣಿಕವಾಗಿ ಆಡಳಿತ ನೀಡುತ್ತಿದ್ದೇವೆ. ಬಿಜೆಪಿ ಮೂಲಭೂತವಾಗಿ ಅಪ್ರಾಮಾಣಿಕ ಪಕ್ಷವಾಗಿದೆ. ಅದಕ್ಕೆ ಕರ್ನಾಟಕದಲ್ಲಿನ ಅನೇಕ ಹಗರಣಗಳೇ ಸಾಕ್ಷಿ’ ಎಂದು ಹೇಳಿದರು. ಮನೀಶ್ ಸಿಸೋಡಿಯಾ ಅವರ ಬಳಿ ಏನೂ ಪತ್ತೆಯಾಗಿಲ್ಲ ಹೀಗಿದ್ದರೂ ಅವರನ್ನು ಬಂಧಿಸುತ್ತಾರೆ, ಬಂಧನಕ್ಕೆ ಅವರೂ ಸಿದ್ಧರಿದ್ದಾರೆ. ಬರ ಹೇಳಿದ ದಿನ ಅವರ ಬಳಿಗೆ ಮನಿಶ್ ಸಿಸೋಡಿಯಾ ಹೋಗುತ್ತಾರೆ. ಪ್ರಧಾನಿಯಿಂದ ಈ ಹಿಂದೆಯೂ ಅವರು ಹಲವು ಬಾರಿ ಪ್ರಾಮಾಣಿಕತೆಯ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಬಾರಿಯೂ ಮತ್ತೊಮ್ಮೆ ಪ್ರಮಾಣಪತ್ರ ಪಡೆಯುತ್ತಾರೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಅವರು ಗುಡುಗಿದರು.
ದೆಹಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್ ಸರ್ಕಾರದ ಪರ ವಿಶ್ವಾಸಮತ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಮುಖ್ಯಮಂತ್ರಿ ಸೇರಿದಂತೆ 58 ಸದಸ್ಯರು ಪ್ರಸ್ತಾವನೆಯ ಪರವಾಗಿ ಇದ್ದರು. ನಿರ್ಣಯದ ವಿರುದ್ಧ ಯಾರೂ ನಿಲ್ಲಲಿಲ್ಲ. ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದ ಐದನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಕೋಲಾಹಲ ಉಂಟಾಯಿತು. ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಮತ್ತು ಉಪಸಭಾಪತಿ ರಾಖಿ ಬಿರ್ಲಾ ನಡುವೆ ವಿಧಾನಸಭೆಯಲ್ಲಿ ಭ್ರಷ್ಟಾಚಾರದ ವಿಷಯದ ಬಗ್ಗೆ ಚರ್ಚಿಸುವ ಬಗ್ಗೆ ವಾಗ್ವಾದ ನಡೆಯಿತು. ಗದ್ದಲ ಎಬ್ಬಿಸಿದ ವಿಜೇಂದರ್ ಗುಪ್ತಾ ಅವರನ್ನು ಇಡೀ ಅಧಿವೇಶನದ ಅವಧಿಯಿಂದ ಉಚ್ಚಾಟಿಸಲಾಯಿತು.
ವರದಿ: ಹರೀಶ್
Published On - 3:26 pm, Thu, 1 September 22