ಮಗನಿಗೆ 18 ವರ್ಷವಾದ ತಕ್ಷಣ ತಂದೆಯ ಬಾಧ್ಯತೆ ಮುಗಿಯುವುದಿಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
ವಿಚ್ಛೇದಿತ ಮಹಿಳೆಗೆ ಪ್ರೌಢ ಮಗನ ಪದವಿ ವಿದ್ಯಾಭ್ಯಾಸ ಮುಗಿಯುವವರೆಗೆ ಅಥವಾ ಆತ ಉದ್ಯೋಗಿಯಾಗುವವರೆಗೆ ತಿಂಗಳಿಗೆ ₹ 15 ಸಾವಿರ ಮಧ್ಯಂತರ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.
ದೆಹಲಿ: ಮಗನಿಗೆ 18 ವರ್ಷವಾಯ್ತು ಎಂದ ತಕ್ಷಣ ತಂದೆಯ ಬಾಧ್ಯತೆ ಮುಗಿಯುವುದಿಲ್ಲ. ಮಗನ ವಿದ್ಯಾಭ್ಯಾಸದ ಹೊರೆ ಮತ್ತು ಇತರ ವೆಚ್ಚಗಳ ಬಾಧ್ಯತೆಗಳು ಕೇವಲ ತಾಯಿಯದ್ದು ಎಂದುಕೊಳ್ಳಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್, ವಿಚ್ಛೇದಿತ ಮಹಿಳೆಗೆ ಪ್ರೌಢ ಮಗನ ಪದವಿ ವಿದ್ಯಾಭ್ಯಾಸ ಮುಗಿಯುವವರೆಗೆ ಅಥವಾ ಆತ ಉದ್ಯೋಗಿಯಾಗುವವರೆಗೆ ತಿಂಗಳಿಗೆ ₹ 15 ಸಾವಿರ ಮಧ್ಯಂತರ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.
ದಿನದಿಂದ ದಿನಕ್ಕೆ ಜೀವನಾಶ್ಯಕ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿದೆ. ಈ ವಿಚಾರದ ಬಗ್ಗೆ ಹೈಕೋರ್ಟ್ ಕುರುಡಾಗಿರಲು ಸಾಧ್ಯವಿಲ್ಲ. ವಿಚ್ಛೇದಿತ ಪತಿ ನೀಡುತ್ತಿರುವ ಸಣ್ಣಮೊತ್ತದಿಂದ ಆಕೆಯು ಜೀವನ ಸಾಗಿಸುವುದರ ಜೊತೆಗೆ ಮಗನ ವಿದ್ಯಾಭ್ಯಾಸಕ್ಕೂ ಹಣ ಹೊಂದಿಸುವುದು ಕಷ್ಟ. 2018ರಲ್ಲಿ ಅಧೀನ ನ್ಯಾಯಾಲಯವೊಂದು ಇಬ್ಬರು ಮಕ್ಕಳ ಯೋಗಕ್ಷೇಮಕ್ಕೆ ಮಾತ್ರವೇ ಪರಿಹಾರ ಹಣ ಮಂಜೂರು ಮಾಡಿ, ತನ್ನ ಬದುಕು ನಿರ್ಲಕ್ಷಿಸಿದ ಬಗ್ಗೆ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚ್ಛೇದಿತ ಮಹಿಳೆಯ ಮಗ ಪ್ರೌಢನಾಗಿದ್ದಾನೆ. ಆದರೆ ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ ಇನ್ನೂ ಸಂಪಾದನೆ ಮಾಡುತ್ತಿಲ್ಲ. ಕೌಟುಂಬಿಕ ನ್ಯಾಯಾಲಯವು ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು. ಮಹಿಳೆ ಮಾಡುತ್ತಿರುವ ಸಂಪಾದನೆಯಿಂದ ಈ ಕುಟುಂಬದ ಬದುಕು ಸಾಗುವುದರ ಜೊತೆಗೆ ಮಗನ ವಿದ್ಯಾಭ್ಯಾಸಕ್ಕೂ ಆಕೆ ಹಣ ಖರ್ಚು ಮಾಡಬೇಕಾಗಿದೆ ಎಂದು ನ್ಯಾಯಾಧೀಶರಾದ ಸುಬ್ರಹ್ಮಣ್ಯಂ ಪ್ರಸಾದ್ ಹೇಳಿದರು.
ಈ ದಂಪತಿ ನವೆಂಬರ್ 1997ರಲ್ಲಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಹುಟ್ಟಿದ ನಂತರ, ನವೆಂಬರ್ 2011ರಲ್ಲಿ ವಿಚ್ಛೇದನ ಪಡೆದಿದ್ದರು. 20 ವರ್ಷದ ಮಗ ಮತ್ತು 18 ವರ್ಷದ ಮಗಳು ಇದ್ದಾರೆ. ಕೌಟುಂಬಿಕ ನ್ಯಾಯಾಲಯವು ಮಗನಿಗೆ 18 ವರ್ಷ ತುಂಬುವವರೆಗೆ, ಮಗಳು ಕೆಲಸಕ್ಕೆ ಸೇರುವವರೆಗೆ ಅಥವಾ ಮದುವೆಯಾಗುವವರೆಗೆ ಮಾತ್ರ ಜೀವನಭತ್ಯೆ ಪಡೆಯಲು ಅವಕಾಶ ನೀಡಿತ್ತು.
ಈ ಆದೇಶವನ್ನು ಮರುಪರಿಶೀಲನೆಗೆ ಒಳಪಡಿಸಿದ ಹೈಕೋರ್ಟ್, ‘ಇಬ್ಬರೂ ಮಕ್ಕಳು ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಹೆಂಡತಿ ಮತ್ತು ಮಕ್ಕಳು ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕೆ ಮಧ್ಯಂತರ ನಿರ್ವಹಣಾ ಪರಿಹಾರ ನೀಡಲಾಗುತ್ತದೆ. ಇಂಥ ವಿಚಾರಗಳನ್ನು ನ್ಯಾಯಾಲಯಗಳು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಬೇಕು’ ಎಂದು ಹೈಕೋರ್ಟ್ ಹೇಳಿತು.
ಮಗನಿಗೆ 18 ತುಂಬಿದೆ ಎಂದ ಮಾತ್ರಕ್ಕೆ ಅವನು ಸ್ವತಂತ್ರವಾಗಿ ಬದುಕಬಲ್ಲ ಎಂದೇನೂ ಅಲ್ಲ. ಅವನ ವಿದ್ಯಾಭ್ಯಾಸ ಮತ್ತು ಇತರ ಭಾರಗಳನ್ನು ತಾಯಿಯೊಬ್ಬಳೇ ಹೊರಲು ಆಗುವುದಿಲ್ಲ. ಹೀಗಾಗಿ ಮಗನ ವಯಸ್ಸು 18 ವರ್ಷ ತುಂಬಿದ ದಿನದಿಂದ ಆತ ಪದವಿ ಶಿಕ್ಷಣ ಮುಗಿಯುವವರೆಗೆ ಅಥವಾ ಉದ್ಯೋಗ ಸಿಗುವವರೆಗೆ ಆತನ ತಾಯಿಗೆ ತಿಂಗಳಿಗೆ ₹ 15,000 ಮಧ್ಯಂತರ ನಿರ್ವಹಣಾ ಶುಲ್ಕ ನೀಡಬೇಕು ಎಂದು ನ್ಯಾಯಾಲಯವು ಆದೇಶಿಸಿತು.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆಯು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಅಪ್ಪರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ₹ 60 ಸಾವಿರ ವೇತನ ಪಡೆಯುತ್ತಿದ್ದಾರೆ. ಈಕೆಯ ವಿಚ್ಛೇದಿತ ಪತಿಯು ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ಪ್ರಕಾರ ತಿಂಗಳಿಗೆ ₹ 1.67 ಲಕ್ಷ ವೇತನ ಪಡೆಯುತ್ತಿದೆ. ವಿಚ್ಛೇದಿತ ಪತಿಯು ಮತ್ತೊಂದು ಮದುವೆಯಾಗಿದ್ದು, ಎರಡನೇ ಮದುವೆಯಲ್ಲಿಯೂ ಒಂದು ಮಗು ಪಡೆದಿದ್ದಾರೆ. ಹಾಗೆಂದು ಮೊದಲ ಪತ್ನಿಯಿಂದ ಪಡೆದ ಮಕ್ಕಳನ್ನು ಪೋಷಿಸುವ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು.
(Delhi High Court on Fathers Obligation About Son Turning on 18 Years)
ಇದನ್ನೂ ಓದಿ: ದೆಹಲಿ ಹೈಕೋರ್ಟ್ನಲ್ಲಿ ಸುಶಾಂತ್ ಸಿಂಗ್ ತಂದೆಗೆ ಹಿನ್ನಡೆ ಇದನ್ನೂ ಓದಿ: ಪ್ರಚಾರಕ್ಕಾಗಿ ಮಾಡಿದ ಪ್ರಯತ್ನವಿದು: 5ಜಿ ಬಗ್ಗೆ ಪ್ರಶ್ನಿಸಿ ಕೇಸ್ ಹಾಕಿದ್ದಕ್ಕೆ ನಟಿ ಜೂಹಿ ಚಾವ್ಲಾಗೆ ದೆಹಲಿ ಹೈಕೋರ್ಟ್ ತರಾಟೆ, 20 ಲಕ್ಷ ದಂಡ