ದೆಹಲಿಯಲ್ಲಿ ಪ್ರತಿಭಟನೆ ವೇಳೆ ಇಡೀ ದಿನ ಏನೇನಾಯ್ತು? ಇಂದು ಟ್ರಾಫಿಕ್ ಸಂಚಾರ ಹೇಗಿತ್ತು? ಇಲ್ಲಿದೆ ಪೂರ್ತಿ ಮಾಹಿತಿ

ದೆಹಲಿಯಲ್ಲಿ ಇಂದು ಸಿಜೆಪಿ ಮತ್ತು ಇಂಡಿಯ ಒಕ್ಕೂಟ ಜಂಟಿಯಾಗಿ ಪ್ರತಿಭಟನೆ ಆಯೋಜಿಸಿದ್ದವು. ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆನೀಡಲಾಗಿತ್ತು. ಇಂದು ಸಿಜೆಪಿ ನಾಯಕರಾದ ಅಭಿಜಿತ್ ದಿಪ್ಕೆ ಮತ್ತು ಸೌರವ್ ದಾಸ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅದಾದ ಬಳಿಕ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರನ್ನು ಕೂಡ ವಶಕ್ಕೆ ಪಡೆಯಲಾಗಿತ್ತು. ಇಂದು ನಡೆದ ಪ್ರತಿಭಟನೆಯಲ್ಲಿ ಒಟ್ಟಾರೆ 3,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯ ಸಂಚಾರ ವ್ಯವಸ್ಥೆ ಹೇಗಿತ್ತು? ಎಂಬುದರ ಮಾಹಿತಿ ಇಲ್ಲಿದೆ.

ದೆಹಲಿಯಲ್ಲಿ ಪ್ರತಿಭಟನೆ ವೇಳೆ ಇಡೀ ದಿನ ಏನೇನಾಯ್ತು? ಇಂದು ಟ್ರಾಫಿಕ್ ಸಂಚಾರ ಹೇಗಿತ್ತು?  ಇಲ್ಲಿದೆ ಪೂರ್ತಿ ಮಾಹಿತಿ
ದೆಹಲಿಯ ಪ್ರತಿಭಟನೆ
Image Credit source: PTI

Updated on: Oct 10, 2026 | 5:19 PM

ನವದೆಹಲಿ, ಅಕ್ಟೋಬರ್ 10: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸಿಜೆಪಿ ಮತ್ತು ಇಂಡಿಯ ಮೈತ್ರಿಕೂಟದಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆಯಬಹುದು ಎಂಬ ಕಾರಣಕ್ಕೆ ದೆಹಲಿ ಪೊಲೀಸರು ನಿನ್ನೆ ರಾತ್ರಿಯೇ ದೆಹಲಿಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿದ್ದರು. ರೈಲು ಸಂಚಾರ, ವಾಹನಗಳ ಸಂಚಾರ, ಮೆಟ್ರೋ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ನೊಣವನ್ನು ಕೊಲ್ಲಲು ಸುತ್ತಿಗೆ ಅಗತ್ಯವಿದೆಯೇ? ಎಂದು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿತ್ತು. ಇಂದು ಬೆಳಗ್ಗೆಯಿಂದ ದೆಹಲಿಯ ಪ್ರತಿಭಟನೆ ವೇಳೆ ಏನೇನಾಯ್ತು? ಎಂಬ ಕುರಿತು ಪೂರ್ತಿ ವಿವರಗಳು ಇಲ್ಲಿವೆ.

ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ (ಎಸ್​ಐಅರ್​) ಅಕ್ರಮ ನಡೆದಿದೆ ಎಂದು ಆರೋಪಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ), ಇಂಡಿಯಾ ಮೈತ್ರಿಕೂಟ ಮತ್ತು ಎಎಪಿ ಬೆಂಬಲಿತ ನಾಯಕರು ಹಮ್ಮಿಕೊಂಡಿದ್ದ ಜಂತರ್ ಮಂತರ್ ಪ್ರತಿಭಟನೆಯಿಂದಾಗಿ ಇಂದು ರಾಜಧಾನಿ ದೆಹಲಿ ಸಂಪೂರ್ಣವಾಗಿ ಪ್ರಕ್ಷುಬ್ಧಗೊಂಡಿತ್ತು. ಆದರೆ, ನಿರೀಕ್ಷಿಸಿದಂತೆ ಟ್ರಾಫಿಕ್ ಸಮಸ್ಯೆಯೇನೂ ಆಗಲಿಲ್ಲ. ಕಳೆದ ಬಾರಿಯ ಜಂತರ್ ಮಂತರ್ ಪ್ರತಿಭಟನೆಗೆ ಹೋಲಿಸಿದರೆ ಈ ಬಾರಿಯ ಪ್ರತಿಭಟನೆ ಹೆಚ್ಚೇನೂ ಆಕ್ರಮಣಕಾರಿಯಾಗಿರಲಿಲ್ಲ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ!

ಪ್ರತಿಭಟನೆಯನ್ನು ಹತೋಟಿಗೆ ತರಲು ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ನಾಯಕರನ್ನು ವಶಕ್ಕೆ ಪಡೆದಿದ್ದು, ನಗರದಾದ್ಯಂತ ತೀವ್ರ ಭದ್ರತಾ ನಿರ್ಬಂಧಗಳನ್ನು ಹೇರಲಾಗಿತ್ತು.


ದೆಹಲಿ ಪ್ರತಿಭಟನೆಯ ವೇಳೆ ಇಂದು ಏನೇನಾಯ್ತು?:

ನಿನ್ನೆ ರಾತ್ರಿಯೇ ದೆಹಲಿಯ ಬೃಹತ್ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ಮಧ್ಯ 144ನೇ ವಿಧಿ ಜಾರಿಗೊಳಿಸಿದರು. 57ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳ ಗೇಟ್‌ಗಳನ್ನು ಮುಚ್ಚಲಾಯಿತು, ಮಧ್ಯ ದೆಹಲಿಯಲ್ಲಿ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ಅಮಾನತುಗೊಳಿಸಲಾಯಿತು. ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಪ್ರಮುಖ ರೈಲುಗಳನ್ನು ರದ್ದುಗೊಳಿಸಲಾಯಿತು.

ಇಂದು ಬೆಳಿಗ್ಗೆ 6ರಿಂದ 8 ಗಂಟೆ:

ಸಿಜೆಪಿ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಪೊಲೀಸರು ಪ್ರತಿಭಟನೆ ಆರಂಭವಾಗುವ ಮೊದಲೇ ವಶಕ್ಕೆ ಪಡೆದರು.  ಗಡಿ ಭಾಗಗಳಾದ ದೆಹಲಿ-ನೊಯ್ಡಾ ಮತ್ತು ದೆಹಲಿ-ಗುರುಗ್ರಾಮದ ಗಡಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಿ ತಪಾಸಣೆ ತೀವ್ರಗೊಳಿಸಲಾಯಿತು.


ಬೆಳಿಗ್ಗೆ 9ರಿಂದ 11:

ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ, ಸಿಜೆಪಿ ಮತ್ತು ವಿಪಕ್ಷ ಕಾರ್ಯಕರ್ತರು ಕನೌಟ್ ಪ್ಲೇಸ್ ಹಾಗೂ ಬಾಂಗ್ಲಾ ಸಾಹಿಬ್ ಗುರುದ್ವಾರದ ಬಳಿ ಜಮಾಯಿಸಲು ಯತ್ನಿಸಿದರು.   ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದಾಗ ಸಂಘರ್ಷ ಏರ್ಪಟ್ಟಿತು. ಕನೌಟ್ ಪ್ಲೇಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು.

ಮಧ್ಯಾಹ್ನ 12ರಿಂದ 2:

ಸಿಪಿಐಎಂ ನಾಯಕರಾದ ಬೃಂದಾ ಕಾರಾಟ್ ಮತ್ತು ಎಂ.ಎ. ಬೇಬಿ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ನಗರದ ವಿವಿಧ ವಲಯಗಳಿಂದ ಒಟ್ಟು 3,000ಕ್ಕೂ ಹೆಚ್ಚು ಜನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.

ಮಧ್ಯಾಹ್ನ 2ರಿಂದ 3.30:

ದೆಹಲಿಯ ಸೌತ್ ಅವೆನ್ಯೂದಲ್ಲಿ ಧರಣಿ ಕುಳಿತಿದ್ದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಂಸದರಾದ ಡೆರೆಕ್ ಒಬ್ರೇನ್, ಪ್ರತಿಮಾ ಮಂಡಲ್ ಮತ್ತು ಡೋಲಾ ಸೇನ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.  ಎಎಪಿ (AAP) ರಾಷ್ಟ್ರೀಯ ಸಂಯೋಜಕ ಅರವಿಂದ್ ಕೇಜ್ರಿವಾಲ್, ನಾಯಕರಾದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರದ್ವಾಜ್ ಅವರನ್ನು ಸಹ ವಶಕ್ಕೆ ಪಡೆಯಲಾಯಿತು.

ಸಂಜೆ 4ರಿಂದ 5:

ಪ್ರತಿಭಟನೆಗೆ ತಡೆಯೊಡ್ಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ದೆಹಲಿಯಲ್ಲಿ ಪೊಲೀಸ್​ ಬಸ್​ಗೆ ಬೆಂಕಿ ಹಚ್ಚಿದರು. ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಪೊಲೀಸ್ ಠಾಣೆಯಲ್ಲೇ ಮಮತಾ ಬ್ಯಾನರ್ಜಿ ಧರಣಿ ನಡೆಸಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬಂಧನ

ದೆಹಲಿಯಲ್ಲಿ ಸಂಚಾರ ವ್ಯವಸ್ಥೆ ಹೇಗಿತ್ತು?:

ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದು ದೆಹಲಿ ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ನವೀಕೃತ ವರದಿಯ ಪ್ರಕಾರ, ದೆಹಲಿಯ ಹೆಚ್ಚಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವು ಸುಗಮವಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದೆ. ಪ್ರತಿಭಟನಾ ನಿರತರ ಚಟುವಟಿಕೆಗಳು ಹಾಗೂ ಭದ್ರತಾ ತಡೆಗೋಡೆಗಳಿಂದಾಗಿ ಭಗವಾನ್ ದಾಸ್ ರಸ್ತೆ ಮತ್ತು ತಿಲಕ್ ಮಾರ್ಗ್ ಪ್ರದೇಶಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಸ್ವಲ್ಪ ಅಡಚಣೆಯುಂಟಾಗಿತ್ತು.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಟರ್ಮಿನಲ್-1 ಹಾಗೂ ಧೌಲಾ ಕುವಾನ್ ಮಾರ್ಗಗಳಲ್ಲಿ ಸಂಚಾರ ಸಂಪೂರ್ಣವಾಗಿ ಸಾಮಾನ್ಯವಾಗಿದೆ.  ದೆಹಲಿಯ ಗಡಿ ಭಾಗಗಳಾದ ಗಾಜಿಪುರ, ಚಿಲ್ಲಾ, ಲೋನಿ ಮತ್ತು ಭೋಪ್ರಾ ಗಡಿಗಳಲ್ಲಿಯೂ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ತಿಲಕ್ ಮಾರ್ಗ್ ಮತ್ತು ಭಗವಾನ್ ದಾಸ್ ರಸ್ತೆ ಮಾರ್ಗಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ಪರ್ಯಾಯ ರಸ್ತೆಗಳನ್ನು ಬಳಸಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sat, 10 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us