
ಚೆನ್ನೈ, ನವೆಂಬರ್ 29: ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ವಿಚಾರ ಜೋರು ಸದ್ದು ಮಾಡುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ವಿಫಲಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಬಾರಿ ಶತಾಯಗತಾಯ ಮಸೂದೆಗೆ ಬೆಂಬಲ ಗಿಟ್ಟಿಸಲು ಯತ್ನಿಸುತ್ತಿದೆ. ಅದರಲ್ಲಿ ಬಹುತೇಕ ಯಶಸ್ವಿಯಾಗುತ್ತಿದೆ. ಈ ಹಿಂದಿನ ಮಸೂದೆಯನ್ನು ಬಲವಾಗಿ ವಿರೋಧಿಸಿದ್ದ ಡಿಎಂಕೆ ಪಕ್ಷದ ಮನಸ್ಸು ಈಗ ಬದಲಾಗಿದೆ. ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರ ಗುಂಪು ಇವತ್ತು ಭಾನುವಾರ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ನಿವಾಸಕ್ಕೆ ಲಗ್ಗೆ ಹಾಕಿದೆ. ತಮ್ಮ ಮಾಜಿ ಸಹಚರ ಪಕ್ಷದ ಮನಸ್ಸು ಬದಲಾಯಿಸಲು ಪ್ರಯತ್ನಿಸಿದೆ.
ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮೊದಲಾದ ಕಾಂಗ್ರೆಸ್ನ ಪರಮೋಚ್ಚ ನಾಯಕರೆಲ್ಲರೂ ಚೆನ್ನೈನಲ್ಲಿರುವ ಸ್ಟಾಲಿನ್ ನಿವಾಸಕ್ಕೆ ಲಗ್ಗೆ ಹಾಕಿದರು. ಆದರೆ, ವರದಿಗಳ ಪ್ರಕಾರ, ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ಮಾಡುವುದಕ್ಕೆ ಡಿಎಂಕೆಯ ನಿರ್ಧಾರದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇಲ್ಲವೆನ್ನಲಾಗುತ್ತಿದೆ.
ಸದ್ಯ ಲೋಕಸಭೆಗೆ 543 ಕ್ಷೇತ್ರಗಳಿವೆ. ಇದು 1971ರ ಜನಸಂಖ್ಯಾ ಸೆನ್ಸಸ್ ಆಧಾರದಲ್ಲಿ ಮರುವಿಂಡಣೆಗೊಂಡಾಗ ಆದ ಕ್ಷೇತ್ರಗಳ ಸಂಖ್ಯೆ. ಐದು ದಶಕಗಳು ಗತಿಸಿವೆ. ಜನಸಂಖ್ಯೆ ಬಹಳ ಹೆಚ್ಚಿದೆ. ಈಗ ಅಷ್ಟೇ ಲೋಕಸಭಾ ಕ್ಷೇತ್ರಗಳು ಜನರ ಪ್ರಾತಿನಿಧ್ಯವನ್ನು ಸರಿಯಾಗಿ ಮಾಡುವುದಿಲ್ಲ ಎನ್ನುವುದು ಕೇಂದ್ರ ಸರ್ಕಾರದ ವಾದ. ಹಾಗಾಗಿ, ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಏರಿಸಲಾಗುವಂತೆ ಕ್ಷೇತ್ರ ಮರುವಿಂಗಡಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆ: ರಾಹುಲ್ ಮನವಿಗೆ ಸ್ಟಾಲಿನ್ ಪ್ರತಿಕ್ರಿಯೆ, ತಮಿಳುನಾಡಿನ ಹಿತಾಸಕ್ತಿಯಲ್ಲಿ ರಾಜಿ ಇಲ್ಲ
ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಈ ಮೊದಲಿದ್ದ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅದು ಜಾರಿಗೆ ಬಂದರೆ, ಕಳೆದ ಐದು ದಶಕದಲ್ಲಿ ಜನಸಂಖ್ಯೆ ಬೆಳವಣಿಗೆ ವೇಗ ಹೆಚ್ಚಿರುವ ಉತ್ತರದ ರಾಜ್ಯಗಳಿಗೆ ಹೆಚ್ಚು ಕ್ಷೇತ್ರಗಳು ಸಿಗುತ್ತವೆ. ಉತ್ತಮ ಆರ್ಥಿಕ ಬೆಳವಣಿಗೆ ಹೊಂದಿದರೂ ಜನಸಂಖ್ಯೆ ಬೆಳವಣಿಗೆ ಕಡಿಮೆ ಇರುವ ದಕ್ಷಿಣ ರಾಜ್ಯಗಳ ಪ್ರಾತಿನಿಧಿತ್ವ ಕಡಿಮೆ ಆಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಹೀಗಾಗಿ, ಡಿಎಂಕೆ ಮೊದಲಾದ ಪಕ್ಷಗಳು ಇದನ್ನು ವಿರೋಧಿಸಿದ್ದವು.
ಸದ್ಯ ಒಟ್ಟು ಲೋಕಸಭಾ ಸ್ಥಾನಗಳಲ್ಲಿ ತಮಿಳುನಾಡು ಹೊಂದಿರುವ ಶೇಕಡಾವಾರು ಕ್ಷೇತ್ರಗಳ ಪ್ರಮಾಣವನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಆಶ್ವಾಸನೆ ಕೊಟ್ಟಿದೆ. ತಮಿಳುನಾಡು ಮಾತ್ರವಲ್ಲ, ಸದ್ಯ ಎಲ್ಲಾ ರಾಜ್ಯಗಳು ಹೊಂದಿರುವ ಶೇಕಡವಾರು ಕ್ಷೇತ್ರಗಳ ಪಾಲನ್ನು ಶೇ. 50ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ, ಡಿಎಂಕೆ, ಎನ್ಸಿಪಿ ಮೊದಲಾದ ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆಗೆ ಬೆಂಬಲ ನೀಡಲು ನಿರ್ಧರಿಸಿವೆ.
ಲೋಕಸಭೆ ಕ್ಷೇತ್ರ ಮರುವಿಂಗಡಣೆ ಮಸೂದೆ ಜಾರಿಯಾಗಬೇಕಾದರೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮೂರನೇ ಎರಡು ಭಾಗದಷ್ಟು ಮತಗಳ ಬೆಂಬಲ ಬೇಕು. ಡಿಎಂಕೆ ಪಕ್ಷ 22 ಸಂಸದರನ್ನು ಹೊಂದಿದೆ. ಶರದ್ ಪವಾರ್ ಅವರ ಗುಂಪಿನ ಎನ್ಸಿಪಿ ಪಕ್ಷ ಎಂಟು ಸದಸ್ಯರನ್ನು ಹೊಂದಿದೆ. ಪಂಜಾಬ್ನ ಶಿರೋಮಣಿ ಅಕಾಲಿ ದಳ, ಟಿಎಂಸಿ ಬಂಡಾಯ ಗುಂಪು ಹೀಗೆ ಕೇಂದ್ರ ಸರ್ಕಾರವು ಈ ಮಸೂದೆಗೆ ಸಾಕಷ್ಟು ಬೆಂಬಲ ಕ್ರೋಢೀಕರಿಸಿಕೊಂಡಿದೆ. ಹೀಗಾಗಿ, ಈ ಬಾರಿ ಮಸೂದೆಯು ಕೆಳಮನೆ ಮತ್ತು ಮೇಲ್ಮನೆ ಎರಡರಲ್ಲೂ ಗೆಲುವು ಪಡೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: ಭಾರತದ ಆತ್ಮ ಜಾಗೃತವಾಗುತ್ತಿದೆ, ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ಮೋಹನ್ ಭಾಗವತ್
ತಮಿಳುನಾಡು ವಿಧಾನಸಭಾ ಚುನಾವಣೆವರೆಗೂ ಕಾಂಗ್ರೆಸ್ ಮತ್ತು ಡಿಎಂಕೆ ಪರಮದೋಸ್ತಿ ಪಕ್ಷಗಳಾಗಿದ್ದವು. ಚುನಾವಣೆಯಲ್ಲಿ ಟಿವಿಕೆ ಪಕ್ಷ ಗೆಲುವು ಸಾಧಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಟಿವಿಕೆಗೆ ಬೆಂಬಲ ಸೂಚಿಸಿತು. ಇದು ಡಿಎಂಕೆಯನ್ನು ಆಕ್ರೋಶಗೊಳಿಸಿತ್ತು. ಈಗ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ನಿಲುವಿಗೆ ಡಿಎಂಕೆ ಭಿನ್ನ ನಿಲುವು ತಳೆದು ಮುಯ್ಯಿ ತೀರಿಸಿಕೊಳ್ಳುತ್ತಿರುವಂತಿದೆ.
ಸ್ಟಾಲಿನ್ ನಿವಾಸಕ್ಕೆ ಇಂದು ಬಂದ ಕಾಂಗ್ರೆಸ್ ನೇತಾರರಿಗೆ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆಯ ಸ್ವಾಗತ ನೀಡಿದ್ದಾರೆ. ಸ್ಟಾಲಿನ್ ನಿವಾಸದೆದುರು ‘ಗೋ ಬ್ಯಾಕ್ ಕಾಂಗ್ರೆಸ್’ ಫಲಕಗಳು ಡಿಎಂಕೆ ಕಾರ್ಯಕರ್ತರ ಕೈಯಲ್ಲಿದ್ದವು. ಆದಾಗ್ಯೂ ಸ್ಟಾಲಿನ್ ಅವರು ಕಾಂಗ್ರೆಸ್ ನಾಯಕರನ್ನು ಬರಮಾಡಿಕೊಂಡು ಔಪಚಾರಿಕ ಮಾತುಕತೆ ಆಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Sun, 29 November 26