AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಿರಂಗ ಯಾತ್ರೆ ನಡೆಸಬೇಡಿ’; ಅಭಿಜಿತ್ ದೀಪ್ಕೆ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ ದೆಹಲಿ ಪೊಲೀಸರು

ತ್ರಿವರ್ಣ ಧ್ವಜ ಹಾರಿಸಿ ರ‍್ಯಾಲಿಗೂ ಮುನ್ನವೇ ಗಲಾಟೆಯ ಮುನ್ಸೂಚನೆ ನೀಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ನಿವಾಸಕ್ಕೆ ಇಂದು ಮಧ್ಯಾಹ್ನ ದೆಹಲಿ ಪೊಲೀಸರು ಭೇಟಿ ನೀಡಿ, ರ‍್ಯಾಲಿಯಲ್ಲಿ ಭಾಗವಹಿಸದಂತೆ ನೋಟಿಸ್ ಜಾರಿ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಎಸ್​ಐಆರ್​ ಅಕ್ರಮಗಳನ್ನು ಆರೋಪಿಸಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ನಡುವೆ ದೆಹಲಿ ಪೊಲೀಸ್ ಮತ್ತು ಸಿಜೆಪಿ ನಡುವಿನ ಸಂಘರ್ಷ ತೀವ್ರಗೊಂಡಿದೆ. ದೆಹಲಿಯ ದೀಪ್ಕೆ ನಿವಾಸಕ್ಕೆ ಮಹಿಳಾ ಪೊಲೀಸರೂ ಸೇರಿದಂತೆ 10ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಆಗಮಿಸಿದರು. ಹೆಗಲ ಮೇಲೆ ರಾಷ್ಟ್ರಧ್ವಜವನ್ನು ಹೊದ್ದು ಮೌನ ಪ್ರತಿಭಟನೆ ನಡೆಸುತ್ತಿದ್ದ ದೀಪ್ಕೆ ಅವರ ಬಳಿ ಪೊಲೀಸ್ ಅಧಿಕಾರಿಯೊಬ್ಬರು ಕುಳಿತುಕೊಂಡಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.

'ತಿರಂಗ ಯಾತ್ರೆ ನಡೆಸಬೇಡಿ'; ಅಭಿಜಿತ್ ದೀಪ್ಕೆ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ ದೆಹಲಿ ಪೊಲೀಸರು
ಅಭಿಜಿತ್ ದೀಪ್ಕೆ ನಿವಾಸಕ್ಕೆ ಪೊಲೀಸ್ ಭೇಟಿImage Credit source: X
ಸುಷ್ಮಾ ಚಕ್ರೆ
|

Updated on: Oct 16, 2026 | 3:27 PM

Share

ನವದೆಹಲಿ, ಅಕ್ಟೋಬರ್ 16: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಸಾರ್ವಜನಿಕರಿಗೆ ಕರೆ ನೀಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ನಿವಾಸಕ್ಕೆ ಇಂದು (ಶುಕ್ರವಾರ) ತೆರಳಿದ ದೆಹಲಿ ಪೊಲೀಸರು, ರ‍್ಯಾಲಿ ನಡೆಸದಂತೆ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಜೊತೆ ಅಭಿಜಿತ್ ದೀಪ್ಕೆ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದು. ಭುಜದ ಮೇಲೆ ಸಣ್ಣ ರಾಷ್ಟ್ರಧ್ವಜವನ್ನು ಹೊದ್ದುಕೊಂಡು ಹಳದಿ ಬಣ್ಣದ ಸೋಫಾದ ಮೇಲೆ ಕುಳಿತಿರುವ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ, ತಮ್ಮ ಎದುರು ಕುಳಿತಿದ್ದ ಪೊಲೀಸರನ್ನು ನೋಡಿ, “ನನ್ನ ಮೇಲೆ ಇಂಥದ್ದೊಂದು ಆರೋಪವನ್ನು ಹೇಗೆ ಹೊರಿಸಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

ನೋಟೀಸ್‌ನಲ್ಲಿ ಏನಿತ್ತು?:

ಪೊಲೀಸರು ನೀಡಿದ ನೋಟಿಸ್ ಪರಿಶೀಲಿಸಿದ ಅಭಿಜಿತ್ ದೀಪ್ಕೆ, “ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ನಿರಂತರವಾಗಿ ಪ್ರಚೋದಿಸುತ್ತಿದ್ದೀರಿ, ಇದು ಕಾನೂನುಬಾಹಿರ” ಎಂಬ ಅಂಶ ಆ ನೋಟಿಸ್​​ನಲ್ಲಿತ್ತು. ಇದನ್ನು ಓದಿ ಆಕ್ರೋಶಗೊಂಡ ದೀಪ್ಕೆ “ನೀವೇನು ತಮಾಷೆ ಮಾಡುತ್ತಿದ್ದೀರಾ? ಇದೇನಾ ನೋಟೀಸ್ ನೀಡುವ ರೀತಿ? ನಿಮ್ಮ ಮನಸ್ಸಿಗೆ ಬಂದಿದ್ದನ್ನೆಲ್ಲಾ ಬರೆದುಕೊಂಡು ಬರುತ್ತಿದ್ದೀರಿ. ನೇರವಾಗಿ ನನ್ನನ್ನು ಗಲ್ಲಿಗೇರಿಸಿ ಬಿಡಿ, ಇದ್ಯಾವ ರೀತಿಯ ತಮಾಷೆ?” ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದಂದೇ ಜೈಲು ಸೇರಿದ ಸಿಜೆಪಿ ನಾಯಕ ಅಶುತೋಷ್ ರಂಕಾ, ಸೌರವ್ ದಾಸ್​ಗೆ ಐದು ದಿನಗಳ ನ್ಯಾಯಾಂಗ ಬಂಧನ

ತಾನು ಸಾರ್ವಜನಿಕರನ್ನು ಹಿಂಸಾಚಾರಕ್ಕೆ ಪ್ರಚೋದಿಸಿರುವ ಕನಿಷ್ಠ ಒಂದು ವಿಡಿಯೋವನ್ನಾದರೂ ತೋರಿಸುವಂತೆ ಪೊಲೀಸರಿಗೆ ದೀಪ್ಕೆ ಸವಾಲು ಹಾಕಿದರು.

ಇನ್ನೊಂದು ವಿಡಿಯೋದಲ್ಲಿ ಅಭಿಜಿತ್ ದೀಪ್ಕೆ ಬಾಂಡ್ ಸೇರಿದಂತೆ ಕೆಲವು ದಾಖಲೆಗಳಿಗೆ ಸಹಿ ಮಾಡುತ್ತಿರುವುದು ಕಂಡುಬಂದಿದೆ. ದೆಹಲಿ ಪೊಲೀಸ್ ಕಾಯ್ದೆಯ ಸೆಕ್ಷನ್ 29ರ ಅಡಿಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ ನಿರ್ದೇಶನಗಳನ್ನು ನೀಡಲು ಪೊಲೀಸರಿಗೆ ಈ ಸೆಕ್ಷನ್ ಅಡಿಯಲ್ಲಿ ಅಧಿಕಾರವಿದೆ. ಆದರೆ, ಸೆಕ್ಷನ್ 29 ಪೊಲೀಸರಿಗೆ ಪ್ರತಿಭಟನೆಯನ್ನು ಬೇರೆ ಯಾವ ಷರತ್ತುಗಳಿಲ್ಲದೆ ಸಂಪೂರ್ಣವಾಗಿ ನಿಷೇಧಿಸುವ ಅಧಿಕಾರವನ್ನು ನೀಡುವುದಿಲ್ಲ.

ಇದನ್ನೂ ಓದಿ: ದೆಹಲಿಯಲ್ಲಿ ನಾಳೆ ನಡೆಯುವ ಸಿಜೆಪಿ ಪ್ರತಿಭಟನೆ ತಡೆಯಲು ಹೈಕೋರ್ಟ್ ನಕಾರ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಗೆ ಸೂಚನೆ

ಇಂದು ಸಂಜೆ 5 ಗಂಟೆಗೆ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜದೊಂದಿಗೆ ಜಮಾಯಿಸುವಂತೆ ದೀಪ್ಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದ್ದ ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸಿ ರಾಷ್ಟ್ರಧ್ವಜ ಹಾರಿಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕ ಅವರನ್ನು ಬಂಧಿಸಿ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಬೆನ್ನಲ್ಲೇ ದೀಪ್ಕೆ ಈ ಕರೆ ನೀಡಿದ್ದರು.

ಸಿಜೆಪಿ ರ‍್ಯಾಲಿಯ ಹಿನ್ನೆಲೆಯಲ್ಲಿ ಕನ್ನಾಟ್ ಪ್ಲೇಸ್ ಸುತ್ತಮುತ್ತ ಸುಮಾರು 6,000ಕ್ಕೂ ಹೆಚ್ಚು ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರದೇಶವು ಕೋಟೆಯಾಗಿ ಪರಿವರ್ತನೆಯಾಗಿದೆ. 5 ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ 144ರ ಮಾದರಿಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನೆಗೆ ಯಾವುದೇ ಅಧಿಕೃತ ಅನುಮತಿ ನೀಡಿಲ್ಲವಾದರೂ, ಸೂಕ್ತ ಸ್ಥಳದಲ್ಲಿ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು 11 ಜನರ ಆಯ್ಕೆಯಾದ ಗುಂಪಿಗೆ ಮಾತ್ರ ಅನುಮತಿ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More