‘ಯಾರ ಭಾವನೆಗಳಿಗೂ ಧಕ್ಕೆ ತರಲು ಇಷ್ಟವಿಲ್ಲ’; ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧಕ್ಕೆ ಒಪ್ಪದ ಸುಪ್ರೀಂ ಕೋರ್ಟ್

ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. "ಸಾರ್ವಜನಿಕರ ಮನೋಭಾವ ಹಾಗೂ ಮನಸ್ಥಿತಿ ಬದಲಾಗಲು ಸಮಯ ಹಿಡಿಯುತ್ತದೆ" ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಕೇವಲ ಆದೇಶಗಳನ್ನು ನೀಡುವುದಕ್ಕಿಂತ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದು ಪೂರ್ಣ ಪ್ರಮಾಣದ ಪರಿಹಾರವಲ್ಲ. ನಿಯಮಗಳನ್ನು ತಳಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರದಿದ್ದರೆ ಆದೇಶಗಳು ಕೇವಲ 'ಹಾಸ್ಯಾಸ್ಪದ' ಆಗುತ್ತವೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಯಾರ ಭಾವನೆಗಳಿಗೂ ಧಕ್ಕೆ ತರಲು ಇಷ್ಟವಿಲ್ಲ; ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧಕ್ಕೆ ಒಪ್ಪದ ಸುಪ್ರೀಂ ಕೋರ್ಟ್
Supreme Court (11)

Updated on: Oct 29, 2026 | 7:56 PM

ನವದೆಹಲಿ, ಅಕ್ಟೋಬರ್ 29: ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. “ಯಾರ ಧಾರ್ಮಿಕ ಅಥವಾ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರಲು ನಮಗೆ ಇಷ್ಟವಿಲ್ಲ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠವು, ಮಾಲಿನ್ಯ ನಿಯಂತ್ರಣಕ್ಕೆ ಕೇವಲ ನಿಷೇಧ ಹೇರುವುದಕ್ಕಿಂತ ಚಾಲ್ತಿಯಲ್ಲಿರುವ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಅತ್ಯಗತ್ಯ ಎಂದು ಪ್ರತಿಪಾದಿಸಿದೆ. ದೀಪಾವಳಿ ಸಂಭ್ರಮವು ಸಾರ್ವಜನಿಕರಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಹಬ್ಬದ ಸಂಭ್ರಮ ಹಾಗೂ ವಾಯು ಮಾಲಿನ್ಯ ನಿಯಂತ್ರಣದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ದೀಪಾವಳಿ ಮೂಲತಃ ದೀಪಗಳನ್ನು ಬೆಳಗಿಸುವ ಹಬ್ಬವಾಗಿದೆ. ದೀಪ ಬೆಳಗಿಸುವುದು ಸುಂದರವಾದ ಆಚರಣೆ. ಪಟಾಕಿಗಳು ಬಂದ ಮೇಲಷ್ಟೇ ಮಾಲಿನ್ಯದ ಸಮಸ್ಯೆ ಎದುರಾಯಿತು. ಪಟಾಕಿ ನಿಯಂತ್ರಣದ ಬಗ್ಗೆ ಅಧಿಕಾರಿಗಳು ಕೇವಲ ಕಾಗದದ ಮೇಲೆ ಯೋಜನೆಗಳನ್ನು ತೋರಿದರೆ ಸಾಲದು, ಅಕ್ರಮ ಪಟಾಕಿ ಮಾರಾಟಗಾರರ ವಿರುದ್ಧ ಕೈಗೊಂಡ ನಿಜವಾದ ಕ್ರಮಗಳು ಮತ್ತು ಜಪ್ತಿಯ ವಿವರಗಳನ್ನು ದತ್ತಾಂಶದ ಮೂಲಕ ಸಲ್ಲಿಸಬೇಕು” ಎಂದು ಕೇಂದ್ರ ಸರ್ಕಾರ ಹಾಗೂ ದೆಹಲಿ ಆಡಳಿತಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: ದೀಪಾವಳಿಗೂ ಮುನ್ನ ಸುಪ್ರೀಂ ಮಹತ್ವದ ತೀರ್ಪು: ‘ಹಸಿರು ಪಟಾಕಿ’ ಬಳಕೆಗೆ ಷರತ್ತುಬದ್ಧ ಅನುಮತಿ

ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ಸಲಹೆಗಳು:

– ಪಟಾಕಿಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಸಿದ್ಧ ವ್ಯಕ್ತಿಗಳನ್ನು ಬಳಸಿಕೊಳ್ಳುವಂತೆ ದೆಹಲಿ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. “ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸಲು ವಿರಾಟ್ ಕೊಹ್ಲಿ ಅವರಂತಹ ಜನಪ್ರಿಯ ಕ್ರಿಕೆಟಿಗರನ್ನು ನೀವು ಏಕೆ ಬಳಸಿಕೊಳ್ಳಬಾರದು?” ಎಂದು ಪೀಠವು ಪ್ರಶ್ನಿಸಿದೆ.

– ಹೊಸದಾಗಿ ಸಂಪೂರ್ಣ ನಿಷೇಧ ಹೇರುವ ಬದಲು, ಪ್ರಸ್ತುತ ಇರುವ ಪರಿಸರ ಸ್ನೇಹಿ ಪಟಾಕಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳಿಗೆ ಆದೇಶಿಸಿದೆ.

– ಹಬ್ಬದ ಉತ್ಸಾಹ ಮತ್ತು ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ಹಸಿರು ಪಟಾಕಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ನ್ಯಾಯಾಂಗ, ಸಿಜೆಐ ವಿರುದ್ಧದ ಹೇಳಿಕೆಗೆ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ ಸಂಸದ ಸಂಜಯ್ ರಾವತ್

‘ಮಾಲಿನ್ಯ ಎದುರಿಸಲು ಸಂಪೂರ್ಣ ಸಿದ್ಧ’ ಎಂದ ಸರ್ಕಾರ:

ದೆಹಲಿ ಸರ್ಕಾರ ಮತ್ತು ‘ವಾಯು ಗುಣಮಟ್ಟ ನಿರ್ವಹಣಾ ಆಯೋಗ’ದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ದೆಹಲಿಯಲ್ಲಿ ಮಾಲಿನ್ಯ ತಡೆಯಲು ಕೈಗೊಂಡಿರುವ ಕ್ರಮಗಳನ್ನು ನ್ಯಾಯಾಲಯಕ್ಕೆ ವಿವರಿಸಿದರು. ನವೆಂಬರ್ 1ರಿಂದ ದೆಹಲಿಯ ಹೊರಗಿನಿಂದ ಬರುವ ಹಾಗೂ BS-VI ಮಾನದಂಡಗಳನ್ನು ಪಾಲಿಸದ ವಾಹನಗಳಿಗೆ ರಾಷ್ಟ್ರೀಯ ರಾಜಧಾನಿ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಸಂಚಾರ ದಟ್ಟಣೆ ಕಡಿಮೆ ಮಾಡಲು ಸರ್ಕಾರಿ ಕಚೇರಿಗಳ ಕೆಲಸದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ನಿರ್ಮಾಣ ಹಂತದ ಪ್ರದೇಶಗಳ ಬಳಿ ಧೂಳು ನಿಯಂತ್ರಿಸಲು 608 ಆಂಟಿ-ಸ್ಮಾಗ್ ಗನ್‌ಗಳನ್ನು ನಿಯೋಜಿಸಲಾಗಿದೆ. ‘ವಾಯು ರಕ್ಷಕ್’ ಉಪಕ್ರಮ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಕೊಠಡಿಗಳನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆಗೆ ತರಲಾಗಿದೆ ಎಂದು ಕೋರ್ಟ್​ಗೆ ತಿಳಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us