ಮತದಾರರ ನೊಂದಣಿ ಪ್ರಕ್ರಿಯೆಗೆ ಫಾರ್ಮ್ 6 ಜೊತೆಗೆ ಮ್ಯಾಪಿಂಗ್ ಡಿಕ್ಲರೇಶನ್ ಕೊಡಬೇಕಾ? ಚುನಾವಣಾ ಆಯೋಗದಿಂದ ಸ್ಪಷ್ಟನೆ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ನಡೆಯುವ ರಾಜ್ಯಗಳಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಫಾರ್ಮ್ 6 ಜೊತೆ ಮ್ಯಾಪಿಂಗ್ ಡಿಕ್ಲರೇಶನ್ ಸಲ್ಲಿಕೆ ಕಡ್ಡಾಯ. ಆದರೆ, ಎಸ್​ಐಆರ್ ಪ್ರಕ್ರಿಯೆ ನಡೆಯುತ್ತಿಲ್ಲದ ರಾಜ್ಯಗಳಲ್ಲೂ ಈ ಡಿಕ್ಲರೇಶನ್ ಸಲ್ಲಿಸಬೇಕಾ? ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಸ್ಪಷ್ಟಪಡಿಸಿದ್ದು, ಆ ರಾಜ್ಯಗಳಲ್ಲಿ ಮ್ಯಾಪಿಂಗ್ ಘೋಷಣೆ ಅಗತ್ಯ ಇಲ್ಲ ಎಂದಿದೆ.

ಮತದಾರರ ನೊಂದಣಿ ಪ್ರಕ್ರಿಯೆಗೆ ಫಾರ್ಮ್ 6 ಜೊತೆಗೆ ಮ್ಯಾಪಿಂಗ್ ಡಿಕ್ಲರೇಶನ್ ಕೊಡಬೇಕಾ? ಚುನಾವಣಾ ಆಯೋಗದಿಂದ ಸ್ಪಷ್ಟನೆ
ಎಸ್‌ಐಆರ್
Image Credit source: PTI

Updated on: Sep 27, 2026 | 6:04 PM

ನವದೆಹಲಿ, ಸೆಪ್ಟೆಂಬರ್ 27: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ನಡೆಯದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಫಾರ್ಮ್ 6 ಜೊತೆ ಮ್ಯಾಪಿಂಗ್ ಡಿಕ್ಲರೇಶನ್ (Mapping Declaration) ನೀಡುವುದು ಅಗತ್ಯ ಇರುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಸಲ್ಲಿಸುವ ಫಾರ್ಮ್ 6 ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೊಡಲಾಗುತ್ತದೆ. ಎಸ್​ಐಆರ್ ಪ್ರಕ್ರಿಯೆ ಇರುವೆಡೆ ಈ ಫಾರ್ಮ್ 6 ಜೊತೆಗೆ ಮ್ಯಾಪಿಂಗ್ ಡಿಕ್ಲರೇಶನ್ ಅನ್ನೂ ಸಲ್ಲಿಸಬೇಕಾಗುತ್ತದೆ. ಎಸ್​ಐಆರ್ ನಡೆಯುತ್ತಿಲ್ಲದ ಪ್ರದೇಶಗಳಲ್ಲೂ ಈ ಡಿಕ್ಲರೇಶನ್ ಸಲ್ಲಿಸಬೇಕಾ ಎಂಬ ಗೊಂದಲಕ್ಕೆ ಚುನಾವಣಾ ಆಯೋಗ ತೆರೆ ಎಳೆದಿದೆ.

ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ನಡೆಯದಿರುವ ರಾಜ್ಯಗಳಲ್ಲಿ (ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳು ಸೇರಿದಂತೆ) ಎಸ್‌ಐಆರ್ ಪೂರ್ವದಲ್ಲಿದ್ದ ಹಳೆಯ ಫಾರ್ಮ್ 6 ಮಾದರಿಯೇ ತಕ್ಷಣದಿಂದ ಜಾರಿಗೆ ಬರಲಿದೆ. 1960 ರ ‘ಇಲೆಕ್ಟರ್ಸ್ ನೋಂದಣಿ ನಿಯಮಾವಳಿ’ಯಂತೆಯೇ ಅರ್ಜಿ ಸ್ವೀಕರಿಸಲಾಗುತ್ತದೆ.

ಇದನ್ನೂ ಓದಿ: ‘ಚಿಪ್‌ಗಳಿಂದ ಶಿಪ್‌ಗಳವರೆಗೆ ರಕ್ಷಣಾ ವಲಯದಲ್ಲಿ ಭಾರತ ಸಂಪೂರ್ಣ ಸ್ವಾವಲಂಬಿಯಾಗಬೇಕು’ – ರಾಜನಾಥ್ ಸಿಂಗ್ ಕರೆ

ಎಸ್‌ಐಆರ್ ನಡೆಯುತ್ತಿರುವ 12 ರಾಜ್ಯಗಳಿಗೆ ನಿಯಮ ಕಡ್ಡಾಯ: ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಮತದಾರರು ಫಾರ್ಮ್ 6 ಜೊತೆಗೆ ತಮ್ಮ ಅಥವಾ ತಮ್ಮ ಪೋಷಕರ/ಪತಿಯ ಇಪಿಐಸಿ (EPIC) ಸಂಖ್ಯೆ ಮತ್ತು ಕಳೆದ ಎಸ್‌ಐಆರ್ ಪಟ್ಟಿಯ ವಿವರಗಳನ್ನು ಒಳಗೊಂಡ ಮ್ಯಾಪಿಂಗ್ ಸ್ವಯಂ ಘೋಷಣಾಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

ಸುಪ್ರೀಂ ಕೋರ್ಟ್ ಆದೇಶ ಮತ್ತು ಆಯೋಗದ ಸಮರ್ಥನೆ

ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಫಾರ್ಮ್ 6 ಜೊತೆಗೆ ಮ್ಯಾಪಿಂಗ್ ಘೋಷಣಾಪತ್ರವನ್ನು ಪಡೆದುಕೊಳ್ಳುವುದನ್ನು ದೇಶದ ಅತ್ಯುನ್ನತ ನ್ಯಾಯಾಲಯ (Supreme Court) ಎತ್ತಿಹಿಡಿದಿದೆ ಎಂದು ಮೂವರ ಸದಸ್ಯರನ್ನೊಳಗೊಂಡ ಪೂರ್ಣ ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.

ಈ ನಿರ್ಧಾರವನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಎಸ್. ಎಸ್. ಸಂಧು ಹಾಗೂ ವಿವೇಕ್ ಜೋಶಿ ಅವರನ್ನೊಳಗೊಂಡ ಪೂರ್ಣ ಆಯೋಗದ ಸಮ್ಮತಿಯೊಂದಿಗೆ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಕಂಟಕ ತರುವ ಪ್ರತಿ ಪಿತೂರಿಯಲ್ಲಿ ಕಾಂಗ್ರೆಸ್ ಭಾಗಿ: ಸಿಎಂ ಯೋಗಿ ಆದಿತ್ಯನಾಥ್ ನೇರ ವಾಗ್ದಾಳಿ

ರಾಜಕೀಯ ಚರ್ಚೆ ಮತ್ತು ಹಿನ್ನೆಲೆ

ಫಾರ್ಮ್ 6 ರ ಸ್ವರೂಪವನ್ನು ಏಕಪಕ್ಷೀಯವಾಗಿ ಬದಲಾಯಿಸಲಾಗಿದೆ ಎಂದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಇತ್ತೀಚೆಗೆ ಆಕ್ಷೇಪ ಎತ್ತಿದ್ದವು. ಆದರೆ ಆಯೋಗವು 2025 ರ ಜೂನ್ 24 ರಂದು ಬಿಹಾರದಲ್ಲಿ ಜಾರಿಗೆ ತಂದ ಮೊದಲ ಎಸ್‌ಐಆರ್ ಆದೇಶದಿಂದ ಹಿಡಿದು ಇತ್ತೀಚಿನ ಹಂತಗಳವರೆಗೂ ಎಲ್ಲಾ ನಿರ್ಧಾರಗಳನ್ನು ಆಯೋಗವು ಸರ್ವಾನುಮತದಿಂದಲೇ ತೆಗೆದುಕೊಂಡಿದೆ ಎಂದು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಈ ಸ್ಪಷ್ಟನೆಯಿಂದಾಗಿ ಎಸ್‌ಐಆರ್-ರಹಿತ ರಾಜ್ಯಗಳಲ್ಲಿ ಹೊಸದಾಗಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವ ಕೋಟ್ಯಂತರ ಯುವಕರಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Sun, 27 September 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us