
ಲಕ್ನೋ, ಸೆಪ್ಟೆಂಬರ್ 28: ಪಾಕಿಸ್ತಾನದ ಬೇಹುಗಾರಿಕಾ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ಬಂಧಿತರಾಗಿದ್ದ ಇಬ್ಬರು ಪಾಕ್ ಪ್ರಜೆಗಳು 22 ವರ್ಷಗಳ ಬಳಿಕ ಖುಲಾಸೆಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ 2004 ರಲ್ಲಿ ದಾಖಲಾಗಿದ್ದ ಬಹುಚರ್ಚಿತ ಬೇಹುಗಾರಿಕೆ ಮತ್ತು ದೇಶದ್ರೋಹ ಪ್ರಕರಣವೊಂದು ಬರೋಬ್ಬರಿ 22 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ. ಪ್ರಮುಖ ಆರೋಪಿಯಾಗಿದ್ದ ಜಮೀಲ್ ಅಹ್ಮದ್ ಎಂಬ ವ್ಯಕ್ತಿಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ (ADJ-8) ರವಿಕಾಂತ್-II ಅವರ ನ್ಯಾಯಾಲಯವು ಸಕಲ ಆರೋಪಗಳಿಂದ ಮುಕ್ತಗೊಳಿಸಿ ಖುಲಾಸೆಗೊಳಿಸಿದೆ.
ಜನವರಿ 5, 2004 ರಂದು ಮೀರತ್‌ನ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ಕುರ್ತಿ ತಿರುವಿನ ಬಳಿ ಸಮೀರ್ (ಮುಯಿನುದ್ದೀನ್) ಮತ್ತು ಶೇರ್ ಅಲಿ ಎಂಬ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಅನುಮಾನಾಸ್ಪದವಾಗಿ ಬಂಧಿಸಲಾಗಿತ್ತು. ಅವರ ಬಳಿ ಸೇನಾ ಕಂಟೋನ್ಮೆಂಟ್ ಪ್ರದೇಶಗಳ ನಕ್ಷೆಗಳು ಹಾಗೂ ಗೌಪ್ಯ ದಾಖಲೆಗಳು ಪತ್ತೆಯಾಗಿದ್ದವು ಎಂದು ಪೊಲೀಸರು ಹೇಳಿದ್ದರು. ಆ ಆರೋಪಿಗಳ ವಿಚಾರಣೆ ವೇಳೆ ಝಾನ್ಸಿ ನಗರದ ತಲೈಯಾ ನಿವಾಸಿ ಜಮೀಲ್ ಅಹ್ಮದ್ ಹೆಸರು ಕೇಳಿಬಂದಿತ್ತು. ಜನವರಿ 12, 2004 ರಂದು ಜಮೀಲ್ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಇನ್ಸಾಸ್ (INSAS) ರೈಫಲ್ ಕಾರ್ಯಾಚರಣೆಯ ಗೌಪ್ಯ ಸೇನಾ ತರಬೇತಿ ದೃಶ್ಯಗಳಿದ್ದ ಸಿಡಿಯನ್ನು (CD) ವಶಪಡಿಸಿಕೊಂಡಿರುವುದಾಗಿ ಆರೋಪಿಸಿದ್ದರು.
ನ್ಯಾಯಾಧೀಶರ ಮುಂದೆ ಸೀಲ್ ತೆರೆದು ನೋಡಿದಾಗ ಸಿಡಿ ಸಂಪೂರ್ಣವಾಗಿ ಚೂರುಚೂರಾಗಿ ಒಡೆದು ಹೋಗಿತ್ತು. ಪೊಲೀಸರು ಆ ಸಿಡಿಯನ್ನು ಯಾವುದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿರಲಿಲ್ಲ ಅಥವಾ ಸೇನಾ ತಜ್ಞರಿಂದ ಪರೀಕ್ಷೆಗೂ ಒಳಪಡಿಸಿರಲಿಲ್ಲ.
ಮತ್ತಷ್ಟು ಓದಿ:
‘ಹಗಲು ಭದ್ರತೆಯ ಮಾತು, ರಾತ್ರಿ ಭಯೋತ್ಪಾದನೆಗೆ ಕುಮ್ಮಕ್ಕು’; ಪಾಕ್ ಪ್ರಧಾನಿಯ ಬೆವರಿಳಿಸಿದ ಭಾರತದ ಮಹಿಳಾ ಅಧಿಕಾರಿ
ಅಷ್ಟೇ ಅಲ್ಲದೆ, ಆ ಸಿಡಿಯನ್ನು ಪ್ಲೇ ಮಾಡಲಾಗಿದೆ ಎನ್ನಲಾದ ಜಮೀಲ್ ಅವರ ಮನೆಯಲ್ಲಿದ್ದ ಕಂಪ್ಯೂಟರ್ ಅನ್ನಾಗಲಿ ಅಥವಾ ಹಾರ್ಡ್ ಡಿಸ್ಕ್ ಅನ್ನಾಗಲಿ ಪೊಲೀಸರು ವಶಪಡಿಸಿಕೊಂಡಿರಲಿಲ್ಲ.
ತನ್ನ 16 ಪುಟಗಳ ತೀರ್ಪಿನಲ್ಲಿ ತನಿಖಾಧಿಕಾರಿಗಳ ಕಳಪೆ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, “ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಸಾಬೀತುಪಡಿಸುವ ಹೊಣೆಗಾರಿಕೆ ಪ್ರಾಸಿಕ್ಯೂಷನ್ ಮೇಲಿರುತ್ತದೆ. ಜಮೀಲ್ ನಕಲಿ ಪಾಸ್‌ಪೋರ್ಟ್ ಪಡೆಯಲು ಯತ್ನಿಸಿದ್ದಾಗಲಿ ಅಥವಾ ಶತ್ರು ದೇಶಕ್ಕೆ ಭಾರತೀಯ ಸೇನೆಯ ನಕ್ಷೆಗಳನ್ನು ನೀಡಿದ್ದಾಗಲಿ ಸಾಬೀತುಪಡಿಸಲು ಪೊಲೀಸರಿಗೆ ಯಾವುದೇ ಸಾಕ್ಷ್ಯ ಒದಗಿಸಲು ಸಾಧ್ಯವಾಗಿಲ್ಲ” ಎಂದು ಸ್ಪಷ್ಟಪಡಿಸಿ, ಸಂಶಯದ ಲಾಭ ನೀಡಿ ಜಮೀಲ್‌ನನ್ನು ದೋಷಮುಕ್ತಗೊಳಿಸಿತು.
ಬ್ರಿಟಿಷರ ಕಾಲದ ಈ ಕಾಯ್ದೆಯಡಿ ಸೇನಾ ನೆಲೆಗಳು, ಸೂಕ್ಷ್ಮ ರಕ್ಷಣಾ ತಾಣಗಳ ನಕ್ಷೆ ಅಥವಾ ಗೌಪ್ಯ ದಾಖಲೆಗಳನ್ನು ಶತ್ರು ರಾಷ್ಟ್ರಗಳಿಗೆ ರವಾನಿಸುವುದು ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಪೊಲೀಸರು ಸರಿಯಾದ ಡಿಜಿಟಲ್ ಪುರಾವೆಗಳನ್ನು ಸಂರಕ್ಷಿಸಿಡದ ಕಾರಣ ಇಂತಹ ಗಂಭೀರ ಕೇಸ್‌ಗಳಲ್ಲಿ ಶಿಕ್ಷೆ ಖಾತರಿಪಡಿಸುವುದು ಕಷ್ಟಸಾಧ್ಯವಾಗುತ್ತದೆ.
ಡಿಜಿಟಲ್ ಸಾಕ್ಷ್ಯಗಳ ನಿಯಮ : ಭಾರತೀಯ ಪುರಾವೆ ಕಾಯ್ದೆಯ ಪ್ರಕಾರ ಯಾವುದೇ ಸಿಡಿ, ಪೆನ್‌ಡ್ರೈವ್ ಅಥವಾ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯದಲ್ಲಿ ಮಾನ್ಯ ಮಾಡಬೇಕಾದರೆ ಸೂಕ್ತ ಪ್ರಮಾಣಪತ್ರ ಮತ್ತು ಫೋರೆನ್ಸಿಕ್ ಲ್ಯಾಬ್ ವರದಿ ಅತ್ಯಗತ್ಯ. ಈ ಪ್ರಕರಣದಲ್ಲಿ ಪೊಲೀಸರು ಈ ಮೂಲಭೂತ ಪ್ರಕ್ರಿಯೆಯನ್ನೇ ಗಾಳಿಗೆ ತೂರಿದ್ದರು.
ದೀರ್ಘಾವಧಿಯ ವಿಚಾರಣೆ: ಕೇವಲ ಸಾಕ್ಷ್ಯಾಧಾರಗಳ ಕೊರತೆಯಿದ್ದರೂ ಒಬ್ಬ ವ್ಯಕ್ತಿ 22 ವರ್ಷಗಳ ಕಾಲ ‘ದೇಶದ್ರೋಹಿ’ ಎಂಬ ಕಳಂಕ ಹೊತ್ತು ನ್ಯಾಯಾಲಯಕ್ಕೆ ಅಲೆಯುವಂತಾದ ಪರಿಸ್ಥಿತಿಯು ಭಾರತೀಯ ನ್ಯಾಯಾಂಗ ವಿಳಂಬ ನೀತಿಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ