ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಿಂದ ನಾಲ್ಕು ಐಷಾರಾಮಿ ಕಾರು ನಾಪತ್ತೆ
ಜುಲೈ 22ರಂದು ಜಾರಿ ನಿರ್ದೇಶನಾಲಯಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ದಾಳಿ ನಡೆಸಿ 21.90 ಕೋಟಿ ನಗದು ವಶಪಡಿಸಿಕೊಂಡಿತ್ತು
ಗುರುವಾರ ಪಶ್ಚಿಮ ಬಂಗಾಳ ಸಚಿವ ಸಂಪುಟದಿಂದ ವಜಾಗೊಂಡಿರುವ ಸಚಿವ ಪಾರ್ಥ ಚಟರ್ಜಿ(Partha Chatterjee) ಅವರ ಆಪ್ತೆ ಅರ್ಪಿತಾ ಮುಖರ್ಜಿ (Arpita Mukherjee) ಅವರ ಕೊಲ್ಕತ್ತಾದ ಡೈಮಂಡ್ ಸಿಟಿ ಕಾಂಪ್ಲೆಕ್ಸ್ ನಲ್ಲಿರುವ ಮನೆಯಿಂದ ನಾಲ್ಕು ಐಷಾರಾಮಿ ಕಾರುಗಳು ನಾಪತ್ತೆಯಾಗಿವೆ. ಬಲ್ಲಮೂಲಗಳ ಪ್ರಕಾರ, ಅರ್ಪಿತಾ ಅವರನ್ನು ಫ್ಲಾಟ್ನಿಂದ ಬಂದಿಸಿದ ನಂತರ ಈ ಕಾರುಗಳು ನಾಪತ್ತೆಯಾಗಿವೆ ಎಂದು ಹೇಳಲಾಗಿದೆ. ಜುಲೈ 22ರಂದು ಜಾರಿ ನಿರ್ದೇಶನಾಲಯ (Enforcement Directorate ) ಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ದಾಳಿ ನಡೆಸಿ 21.90 ಕೋಟಿ ನಗದು ವಶಪಡಿಸಿಕೊಂಡಿತ್ತು. ಜಾರಿ ನಿರ್ದೇಶನಾಲಯವು 56 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಮತ್ತು 75 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿದೆ. ಇದಾದ ನಂತರ ಇಡಿ 28.90 ಕೋಟಿ ನಗದು, 5 ಕೆಜಿಗಿಂತಲೂ ಹೆಚ್ಚು ಚಿನ್ನ ಮತ್ತು ಅರ್ಪಿತಾ ಮುಖರ್ಜಿ ಅವರ ಎರಡನೇ ಅಪಾರ್ಟ್ ಮೆಂಟ್ ನಿಂದ ಹಲವಾರು ದಾಖಲೆ ವಶ ಪಡಿಸಿ ಕೊಂಡಿದೆ.
ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಆರೋಪಿ ಪಾರ್ಥ ಚಟರ್ಜಿ ಅವರ ಆಪ್ತೆಯಾಗಿದ್ದಾರೆ ಅರ್ಪಿತಾ ಮುಖರ್ಜಿ. ಗ್ರೂಪ್ ಸಿ ಮತ್ತು ಸಿಡಿ, 9ನೇ ತರಗತಿಯಿಂದ 12 ನೇ ತರಗತಿಯ ಸಹಾಯಕ ಶಿಕ್ಷಕರು ಮತ್ತು ಪ್ರೈಮರಿ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಚಟರ್ಜಿ ಮೇಲೆ ಆರೋಪವಿದೆ.
ಅರ್ಪಿತಾ ಮನೆಯಿಂದ ವಶ ಪಡಿಸಿರುವ ಹಣ ಪಾರ್ಥ ಚಟರ್ಜಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಡೆದ ಹಣ ಎಂದು ಹೇಳಲಾಗುತ್ತಿದ್ದು, ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿಯನ್ನು ಆಗಸ್ಟ್ 3ರ ವರೆಗೆ ಇಡಿ ವಶಕ್ಕೆ ತೆಗೆದುಕೊಂಡಿದೆ.
Published On - 12:37 pm, Fri, 29 July 22