ಭಾರತದ ಆರ್ಥಿಕ ಕುಸಿತಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಳಪೆ ನಿರ್ವಹಣೆಯೇ ಕಾರಣ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಭಾರತ ದೇಶವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಆದ್ರೆ ಮೋದಿ ನೇತೃತ್ವದ ಸರ್ಕಾರದ ಕೆಟ್ಟ ನಿರ್ವಹಣೆಯಿಂದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಪ್ರಖ್ಯಾತ ಅರ್ಥಶಾಸ್ತ್ರಜ್ಙರೂ ಆಗಿರುವ ಮನಮೋಹನ್ ಸಿಂಗ್ ಕಿಡಿ ಕಾರಿದ್ದಾರೆ.
ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ದರ ಶೇ.5ಕ್ಕೆ ಕುಸಿದಿರುವುದು ಸರ್ಕಾರದ ನಿಧಾನಗತಿಯನ್ನು ತೋರಿಸುತ್ತದೆ. ದೇಶದ ಆರ್ಥಿಕ ಕುಸಿತವನ್ನು ಮಾನವ ನಿರ್ಮಿತ ಬಿಕ್ಕಟ್ಟು ಎಂದು ಮನಮೋಹನ್ ಸಿಂಗ್ ಕರೆದಿದ್ದಾರೆ. ತರಾತುರಿಯಲ್ಲಿ ಜಾರಿಗೆ ತಂದ ಜಿಎಸ್ಟಿ ಮತ್ತು ನೋಟ್ ಬ್ಯಾನ್ ಮಾಡಿದ್ದೇ ಕಾರಣ ಎಂದು ಸಿಂಗ್ ಆರೋಪಿಸಿದ್ದಾರೆ.
ಮೋದಿ ಸರ್ಕಾರದಲ್ಲಿ ಹಲವಾರು ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ 3.5 ಲಕ್ಷ ನಿರುದ್ಯೋಗಿಗಳಾಗಿದ್ದಾರೆ. ಗ್ರಾಮೀಣ ಭಾಗದಲ್ಲೂ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.