AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆಯಿಂದ ಕೇತನ್​ನ ತಳ್ಳುವ ಮುನ್ನ, ಕೊಲೆಯನ್ನು ಅಪಘಾತ ಎಂದು ಬಿಂಬಿಸುವುದು ಹೇಗೆ? ಎಂದು ಸರ್ಚ್​ ಮಾಡಿದ್ದ ಸಿಯಾ

ಪುಣೆ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ, ಗೂಗಲ್ ಸರ್ಚ್ ಹಿಸ್ಟರಿ ಪ್ರಮುಖ ಪಾತ್ರ ವಹಿಸಿದೆ. ಹತ್ಯೆಯನ್ನು ಅಪಘಾತವೆಂದು ಬಿಂಬಿಸಲು ಸಿಯಾ 'ಕೊಲೆಯನ್ನು ಅಪಘಾತವೆಂದು ತೋರಿಸುವುದು ಹೇಗೆ' ಎಂದು ಗೂಗಲ್‌ನಲ್ಲಿ ಹುಡುಕಿದ್ದಳು. ಈ ಡಿಜಿಟಲ್ ಪುರಾವೆಯು ಸಿಯಾನ್ ಪೂರ್ವಯೋಜಿತ ಪಿತೂರಿಯನ್ನು ಬಯಲಿಗೆಳೆದು, ಆಕೆಯ ನಾಟಕವನ್ನು ಕೊನೆಗೊಳಿಸಿದೆ.

ಕೋಟೆಯಿಂದ ಕೇತನ್​ನ ತಳ್ಳುವ ಮುನ್ನ, ಕೊಲೆಯನ್ನು ಅಪಘಾತ ಎಂದು ಬಿಂಬಿಸುವುದು ಹೇಗೆ? ಎಂದು ಸರ್ಚ್​ ಮಾಡಿದ್ದ ಸಿಯಾ
ಕೇತನ್-ಸಿಯಾ
ನಯನಾ ರಾಜೀವ್
|

Updated on: Jun 24, 2026 | 2:27 PM

Share

ಮುಖ್ಯಾಂಶಗಳು

  • ಕೊಲೆಯನ್ನು ಟ್ರೆಕ್ಕಿಂಗ್ ಅಪಘಾತ ಎಂದು ಬಿಂಬಿಸಲು ಸಿಯಾ ಗೂಗಲ್‌ನಲ್ಲಿ ಹುಡುಕಾಡಿದ್ದಳು
  • ಹೂಡಿ ಧರಿಸಿದ್ದ ಪ್ರಿಯಕರ ಚೇತನ್ ಹಿಂಬಾಲಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
  • ಕೊಲೆ ಬಳಿಕ ಇನ್‌ಸ್ಟಾಗ್ರಾಂ ಪೋಸ್ಟ್​ ಮಾಡಿ ಮೊಸಳೆ ಕಣ್ಣೀರು ಸುರಿಸಿದ್ದ ಸಿಯಾ

ಪುಣೆ, ಜೂನ್ 24: ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಲಾಗಿತ್ತು. ಅದರ ಹಿಂದೆ ಭಾವಿ ಪತ್ನಿಯ ಕೈವಾಡವಿರುವುದು ಸಾಬೀತಾಗಿದೆ. ಕರಾಳ ಸಂಚು ರೂಪಿಸುವ ಸಂದರ್ಭದಲ್ಲಿ ಕೊಲೆಯನ್ನು ಅಪಘಾತವೆಂದು ಬಿಂಬಿಸುವುದು ಹೇಗೆ ಎಂದು ಸಿಯಾ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಳು ಎಂಬುದರ ಮಾಹಿತಿ ಇಲ್ಲಿದೆ.

ಕಳ್ಳಾಟ ಬಯಲು ಮಾಡಿದ ಗೂಗಲ್ ಸರ್ಚ್ ಹಿಸ್ಟರಿ

ಆರಂಭದಲ್ಲಿ ಸಿಯಾ ಪೊಲೀಸರ ಮುಂದೆ, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಆಗ ಕೇತನ್ ಫೋಟೋಗೆ ಪೋಸ್ ನೀಡುವಾಗ ಕಾಲು ಜಾರಿ ಬಿದ್ದರು ಎಂದು ಕಥೆ ಕಟ್ಟಿದ್ದಳು. ಲೋನಾವಾಲ ಪೊಲೀಸರು ಕೂಡ ಇದನ್ನು ಆಕಸ್ಮಿಕ ಸಾವು ಎಂದೇ ದಾಖಲಿಸಿಕೊಂಡಿದ್ದರು. ಆದರೆ ಆಕೆಯ ನಾಟಕದ ಮೇಲೆ ಅನುಮಾನ ಬಂದು ಪೊಲೀಸರು ಸಿಯಾಳ ಮೊಬೈಲ್ ಫೋನ್ ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ಪೂರ್ವಯೋಜಿತ ಪಿತೂರಿ: ಕೊಲೆಗೆ ಕೆಲವು ದಿನಗಳ ಮೊದಲು ಸಿಯಾ ತನ್ನ ಗೂಗಲ್‌ನಲ್ಲಿ, ಕೊಲೆಯಿಂದ ಪಾರಾಗುವ ದಾರಿಗಳು ಮತ್ತು ಅದನ್ನು ಟ್ರೆಕ್ಕಿಂಗ್ ವೇಳೆ ನಡೆದ ಅಪಘಾತದಂತೆ ಜಗತ್ತಿಗೆ ತೋರಿಸುವುದು ಹೇಗೆ ಎಂಬ ಬಗ್ಗೆ ವ್ಯಾಪಕವಾಗಿ ರಿಸರ್ಚ್ ಮಾಡಿದ್ದಳು. ಈ ಡಿಜಿಟಲ್ ಹಾದಿಯೇ ಈಗ ಪ್ರಕರಣದ ಅತ್ಯಂತ ಬಲವಾದ ಸಾಕ್ಷಿಯಾಗಿದೆ.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಹೂಡಿ ಧರಿಸಿ ಹಿಂಬಾಲಿಸಿದ್ದ ಪ್ರಿಯಕರ ಸಿಸಿಟಿವಿಯಲ್ಲಿ ಸೆರೆ

ಜೂನ್ 18 ರಂದು ಸಿಯಾ ಪ್ಲಾನ್ ಮಾಡಿ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದೊಯ್ದಿದ್ದಾಳೆ. ಆಕೆಯ ಒಣಹಣ್ಣುಗಳ ವ್ಯಾಪಾರಿ ಪ್ರಿಯಕರ ಚೇತನ್ ಚೌಧರಿ (22) ತನ್ನ ಗುರುತು ಸಿಗದಿರಲು ಹೂಡಿ ಮತ್ತು ಫೇಸ್ ಮಾಸ್ಕ್ ಧರಿಸಿ ಇವರಿಗಿಂತ ಕೇವಲ 20 ರಿಂದ 30 ಅಡಿ ದೂರದಲ್ಲಿ ಚಾರಣ ಮಾರ್ಗದಲ್ಲಿ ಹಿಂಬಾಲಿಸಿದ್ದಾನೆ. ಇವರು ಕೋಟೆಯ ಅಂಚಿನಲ್ಲಿ ನಿಂತಿರುವುದು ಮತ್ತು ಚೇತನ್ ಇವರನ್ನು ಫಾಲೋ ಮಾಡುತ್ತಿರುವುದು ಅಲ್ಲಿನ ಸಿಸಿಟಿವಿ  ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಕೋಟೆಯ ತುದಿಗೆ ತಲುಪಿದ ತಕ್ಷಣ ಸಿಯಾ ಮತ್ತು ಚೇತನ್ ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ ಕಂದಕಕ್ಕೆ ತಳ್ಳಿ ಕೊಂದಿದ್ದಾರೆ. ಕೊಲೆ ಸಂಪೂರ್ಣವಾಗಿ ಮುಗಿದ ಮೇಲೆ, ತಾನು ಗೂಗಲ್‌ನಲ್ಲಿ ಪ್ಲಾನ್ ಮಾಡಿದ ನಿರೂಪಣೆಯನ್ನು ನಿಜ ಮಾಡಲು ಸಿಯಾ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್‌ಗಳನ್ನು ಹಾಕಿದ್ದಳು.

ನನ್ನ ಹುಟ್ಟುಹಬ್ಬದಂದೇ ನೀನು ನನ್ನನ್ನು ಬಿಟ್ಟು ಹೋದೆ, ವಾಪಸ್ ಬಾ ಎಂದು ಇಡೀ ಜಗತ್ತನ್ನು ನಂಬಿಸಲು ಕಣ್ಣೀರಿನ ನಾಟಕವಾಡಿದ್ದಳು. ಆದರೆ ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರ ಕಪಟ ಪ್ರೇಮದ ಕಥೆ ಮುಗಿದಿದ್ದು, ಇಬ್ಬರನ್ನೂ ಕೊಲೆ ಆರೋಪದಡಿ ಜೈಲಿಗಟ್ಟಲಾಗಿದೆ. ವಿಧಿವಿಜ್ಞಾನ ಹಾಗೂ ಇಂಟರ್ನೆಟ್ ದಾಖಲೆಗಳ ಹೆಚ್ಚಿನ ಪರಿಶೀಲನೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us