ಉಚಿತ ಲಸಿಕೆ ನೀಡಿಕೆಗೆ ಭಾರತ ಸರ್ಕಾರದಿಂದ ಹೊಸ ಗೈಡ್‌ಲೈನ್ಸ್ ಬಿಡುಗಡೆ: ಲಸಿಕೆ ಹಂಚಿಕೆಗೆ 18 ಸಾವಿರ ಕೋಟಿ ಖರ್ಚು
ರಾಜ್ಯಗಳಿಗೆ ಕೇಂದ್ರದಿಂದ ಕೊರೊನಾ ಲಸಿಕೆ ಹಂಚಿಕೆ ಮಾಡುವಾಗ ರಾಜ್ಯಗಳ ಜನಸಂಖ್ಯೆ, ಕೊರೊನಾ ರೋಗದ ತೀವ್ರತೆಯ ಜೊತೆಗೆ ಲಸಿಕೆ ಅಭಿಯಾನದ ಪ್ರಗತಿಯನ್ನೂ ಆಧಾರವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೆಹಲಿ: ಉಚಿತ ಲಸಿಕೆ ನೀಡಿಕೆಗೆ ಭಾರತ ಸರ್ಕಾರವು ಮಂಗಳವಾರ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ರಾಜ್ಯಗಳ ಜನಸಂಖ್ಯೆ, ಸೋಂಕಿತರ ಪ್ರಮಾಣ ಆಧರಿಸಿ ಲಸಿಕೆ ಹಂಚಿಕೆ ಮಾಡಲಾಗುವುದು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡಲಿದೆ. ರಾಜ್ಯಗಳಿಗೆ ಕೇಂದ್ರದಿಂದ ಕೊರೊನಾ ಲಸಿಕೆ ಹಂಚಿಕೆ ಮಾಡುವಾಗ ರಾಜ್ಯಗಳ ಜನಸಂಖ್ಯೆ, ಕೊರೊನಾ ರೋಗದ ತೀವ್ರತೆಯ ಜೊತೆಗೆ ಲಸಿಕೆ ಅಭಿಯಾನದ ಪ್ರಗತಿಯನ್ನೂ ಆಧಾರವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಲಸಿಕೆಯನ್ನ ಹೆಚ್ಚು ವ್ಯರ್ಥ ಮಾಡಿದರೇ ಲಸಿಕೆ ಹಂಚಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಕೇಂದ್ರದ ಹೊಸ ಮಾನದಂಡ ರಾಜ್ಯ ಸರ್ಕಾರಗಳನ್ನು ಎಚ್ಚರಿಸಿದೆ.
ಲಸಿಕೆ ಹಂಚಿಕೆಗಾಗಿ ಕೇಂದ್ರ ಸರ್ಕಾರವು ಒಟ್ಟು ₹18,528 ಕೋಟಿ ಖರ್ಚು ಮಾಡುತ್ತಿದೆ. ಭಾರತದಲ್ಲಿ 18 ವರ್ಷ ಮೇಲ್ಪಟ್ಟ 94 ಕೋಟಿ ಜನರಿದ್ದಾರೆ. 2 ಡೋಸ್ನಂತೆ ಈ ಸಮುದಾಯಕ್ಕೆ ಲಸಿಕೆ ನೀಡಲು ಒಟ್ಟು 188 ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ದೇಶದಲ್ಲಿ ಈವರೆಗೆ 23.3 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇನ್ನೂ 164.7 ಕೋಟಿ ಡೋಸ್ ಲಸಿಕೆ ನೀಡಿಕೆ ಬಾಕಿಯಿದೆ. ಪ್ರತಿ ಡೋಸ್ಗೆ ₹150ರಂತೆ 164 ಕೋಟಿ ಡೋಸ್ ಲಸಿಕೆ ಖರೀದಿಗೆ ₹24,705 ಕೋಟಿ ವೆಚ್ಚ ಮಾಡಬೇಕಾಗುತ್ತದೆ.
ಈ ಲೆಕ್ಕದಂತೆ ಕೇಂದ್ರ ಸರ್ಕಾರ ಶೇ 75ರಷ್ಟು ಲಸಿಕೆ ಖರೀದಿಸಿದರೆ ಒಟ್ಟು ₹18,528 ಕೋಟಿ ಖರ್ಚಾಗುತ್ತದೆ. ಈ ಮೊತ್ತದಲ್ಲಿ ಈಗಾಗಲೇ ಲಸಿಕೆ ಖರೀದಿಗೆ ನೀಡಿರುವ ಹಣ ಸೇರಿಲ್ಲ. ಈಗಾಗಲೇ 24 ಕೋಟಿ ಡೋಸ್ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಹಣ ಪಾವತಿಸಿದೆ. ಕೇಂದ್ರದ ಬಜೆಟ್ನಲ್ಲಿ ಲಸಿಕೆ ಖರೀದಿಗಾಗಿ ₹35 ಸಾವಿರ ಕೋಟಿ ಮೀಸಲಿಟ್ಟಿತ್ತು. ಈಗ ಇದೇ ಹಣ ಬಳಸಿ ಕೇಂದ್ರ ಸರ್ಕಾರವು ಲಸಿಕೆ ಖರೀದಿಗೆ ಮುಂದಾಗಿದೆ.
ಜೂನ್ 21ರ ನಂತರ ಎಲ್ಲ ರಾಜ್ಯಗಳಿಗೂ ಕೇಂದ್ರದಿಂದ ಉಚಿತ ಲಸಿಕೆ: ನರೇಂದ್ರ ಮೋದಿ ಯೋಗ ದಿನವೂ ಆಗಿರುವ ಜೂನ್ 21ರ ನಂತರ ದೇಶದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಕೊಡುವ ಅಭಿಯಾನ ಹೊಸ ವೇಗದಿಂದ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಜೂನ್ 7) ಹೇಳಿದ್ದರು. ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಲಸಿಕೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳಲಿದೆ. ಈ ಕುರಿತು ನೂತನ ಮಾರ್ಗದರ್ಶಿ ಸೂತ್ರಗಳನ್ನು ಶೀಘ್ರ ರೂಪಿಸಲಾಗುವುದು ಎಂದಿದ್ದರು. ಮೋದಿ ಹೇಳಿಕೆಯ ಬೆನ್ನಿಗೇ ಹೊಸ ಮಾರ್ಗದರ್ಶಿ ಸೂತ್ರಗಳೂ ಪ್ರಕಟವಾಗಿವೆ.
ಭಾರತ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊಡಲಿದೆ. ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡಲಾಗುವುದು. ಬಡವರು, ಮಧ್ಯಮ ವರ್ಗದವರು ಎಂಬ ಭೇದ ಇರುವುದಿಲ್ಲ. ಯಾರಿಗಾದರೂ ಉಚಿತ ಲಸಿಕೆಯ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತೇವೆ ಎಂದಾದರೆ ಅದಕ್ಕೂ ಅವಕಾಶವಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆಗಳಿಗೆ ಸೇವಾ ಶುಲ್ಕವಾಗಿ 150 ರೂ. ಮಾತ್ರ ವಿಧಿಸಬಹುದು. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಲಸಿಕೆ ಡೋಸ್ಗಳ ಪೈಕಿ ಶೇ 25ರಷ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು.
(Government Of India Releases New Guidelines for Vaccine Distribution Will Spend 18000 crore for Vaccination)
ಇದನ್ನೂ ಓದಿ: ‘ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆ ಪಡೆದ ವರ ಬೇಕು..’: ಮ್ಯಾಟ್ರಿಮೋನಿಯಲ್ಲಿ ಯುವತಿಯ ಜಾಹೀರಾತು..
ಇದನ್ನೂ ಓದಿ: PM Narendra Modi ಕೊವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ನಮ್ಮ ಸುರಕ್ಷಾ ಕವಚ: ನರೇಂದ್ರ ಮೋದಿ
Published On - 3:14 pm, Tue, 8 June 21