ಪ್ರತಿ ಹಳ್ಳಿಗೂ ಬ್ರಾಡ್​ಬ್ಯಾಂಡ್ ಸಂಪರ್ಕ ಒದಗಿಸಲು ಕೇಂದ್ರದ ನಿರ್ಧಾರ

ದೇಶದ ಪ್ರತಿಯೊಂದು ಹಳ್ಳಿಗೂ ಬ್ರಾಡ್​ಬ್ಯಾಂಡ್ ಸಂಪರ್ಕ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಹಳ್ಳಿಗಳಲ್ಲಿ ಇಂಟರ್ ನೆಟ್ ಸಂಪರ್ಕದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ.

  • Updated On - 8:42 pm, Wed, 21 July 21 Edited By: Ghanashyam D M | ಡಿ.ಎಂ.ಘನಶ್ಯಾಮ
ಪ್ರತಿ ಹಳ್ಳಿಗೂ ಬ್ರಾಡ್​ಬ್ಯಾಂಡ್ ಸಂಪರ್ಕ ಒದಗಿಸಲು ಕೇಂದ್ರದ ನಿರ್ಧಾರ
Bharat-Net

ಭಾರತದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್​ಬ್ಯಾಂಡ್ ಸಂಪರ್ಕ ನೀಡುವ ಉದ್ದೇಶದಿಂದ ರೂಪಿಸಿದ್ದ ಭಾರತ್ ನೆಟ್ ಯೋಜನೆಯ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ಈಗ ವಿಸ್ತರಿಸಿದೆ. ದೇಶದ ಪ್ರತಿಯೊಂದು ಹಳ್ಳಿಗೂ ಬ್ರಾಡ್​ಬ್ಯಾಂಡ್ ಸಂಪರ್ಕ ನೀಡಲು ನಿರ್ಧರಿಸಿದೆ. ಇದರಿಂದ ಹಳ್ಳಿಗಳಲ್ಲಿ ಇಂಟರ್ ನೆಟ್ ಸಂಪರ್ಕದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಭಾರತ್ ನೆಟ್ ಯೋಜನೆಯನ್ನು ಪಿಪಿಪಿ ಮಾಡೆಲ್​ನಲ್ಲಿ ಜಾರಿ ಮಾಡಲು ಕೇಂದ್ರ ಸರ್ಕಾರ ಜಾಗತಿಕ ಟೆಂಡೡ ಕರೆದಿದೆ.

ದೇಶದ ಎಲ್ಲ ಗ್ರಾಮಗಳಿಗೂ ಬ್ರಾಡ್​ಬ್ಯಾಂಡ್ ಸಂಪರ್ಕ ನೀಡಬೇಕು. ಈ ಮೂಲಕ ಡಿಜಿಟಲ್ ಇಂಡಿಯಾದ ಕನಸು ಸಾಕಾರವಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಬಯಕೆ. ಇದಕ್ಕಾಗಿ ಭಾರತ್ ನೆಟ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಈಗ ದೇಶದ 16 ರಾಜ್ಯಗಳಲ್ಲಿ ಪಿಪಿಪಿ ಮಾಡೆಲ್​ನಲ್ಲಿ ಭಾರತ್ ನೆಟ್ ಯೋಜನೆ ಜಾರಿಗೊಳಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಬರೋಬ್ಬರಿ ₹ 29,500 ಕೋಟಿ ವೆಚ್ಚದಲ್ಲಿ ಭಾರತ್ ನೆಟ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈಗ ಕೇಂದ್ರದ ಟೆಲಿಕಮ್ಯೂನಿಕೇಶನ್ ಮತ್ತು ಇನ್​ಫರ್ಮೇಶನ್ ಟೆಕ್ನಾಲಜಿ ಇಲಾಖೆಯ ಹೊಣೆ ಹೊತ್ತಿರುವ ಅಶ್ವಿನಿ ವೈಷ್ಣವ್​ಗೆ ಪ್ರಧಾನಿ ಮೋದಿ ನೀಡಿರುವ ಮೊದಲ ಟಾಸ್ಕ್ ಇದು.

ದೇಶದಲ್ಲಿರುವ 6.3 ಲಕ್ಷ ಹಳ್ಳಿಗಳಿಗೂ 2023ರೊಳಗೆ ಬ್ರಾಡ್​ಬ್ಯಾಂಡ್ ಸಂಪರ್ಕ ನೀಡಬೇಕು ಎನ್ನುವುದು ಕೇಂದ್ರ ಸರ್ಕಾರದ ಗುರಿ. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಕೆಂಪುಕೋಟೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಒಂದು ಸಾವಿರ ದಿನಗಳಲ್ಲಿ ಈ ಗುರಿ ತಲುಪಲಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈಗ ದೇಶದ 3.61 ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ನೀಡಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯನ್ನು ಕಾಲಮಿತಿಯಲ್ಲಿ ಜಾರಿಗೊಳಿಸಿ ಸಾಕಾರಗೊಳಿಸುವ ಸವಾಲನ್ನು ಟಿಲಿಕಮ್ಯುನಿಕೇಶನ್ ಸಚಿವ ಅಶ್ವಿನಿ ವೈಷ್ಣವ್ ಹೊತ್ತಿದ್ದಾರೆ.

ಈ ಹಿಂದೆ ಟೆಲಿಕಮ್ಯೂನಿಕೇಷನ್ ಮತ್ತು ಐಟಿ ಖಾತೆ ಮಂತ್ರಿಯಾಗಿದ್ದ ರವಿಶಂಕರ್ ಪ್ರಸಾದ್ ಅವರು ಭಾರತ್ ನೆಟ್ ಯೋಜನೆಯನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ವಿಫಲವಾಗಿದ್ದು ಕೂಡ ಅವರು ಸಚಿವ ಸ್ಥಾನ ಕಳೆದುಕೊಳ್ಳಲು ಒಂದು ಕಾರಣ ಎನಿಸಿತ್ತು. ಭಾರತ್ ನೆಟ್ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಧಾನಿ ಮೋದಿ ಬೇಸರಗೊಂಡಿದ್ದರು. ಈ ಕಾರಣಕ್ಕಾಗಿ ಭಾರತ್ ನೆಟ್ ಯೋಜನೆಯನ್ನು ಕಾರ್ಪೋರೇಟ್ ಶೈಲಿಯಲ್ಲಿ ವೇಗವಾಗಿ ಜಾರಿಗೊಳಿಸಲು ನಿವೃತ್ತ ಐಎಎಸ್ ಅಧಿಕಾರಿ ಅಶ್ವಿನಿ ವೈಷ್ಣವ್​ಗೆ ಟೆಲಿಕಮ್ಯೂನಿಕೇಷನ್ ಮತ್ತು ಐಟಿ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಎರಡೇ ದಿನದಲ್ಲಿ ಅಶ್ವಿನಿ ವೈಷ್ಣವ್ ಭಾರತ್ ನೆಟ್ ಯೋಜನೆ ಜಾರಿಯ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ 2021ರ ಆಗಸ್ಟ್ ತಿಂಗಳೊಳಗೆ ಆಪ್ಟಿಕಲ್ ಪೈಬರ್ ಸಂಪರ್ಕ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದುವರೆಗೂ 1.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ನೀಡಲಾಗಿದೆ. 5.09 ಲಕ್ಷ ಕಿಲೋಮೀಟರ್ ಉದ್ದದ ಆಪ್ಟಿಕಲ್ ಫೈಬರ್ ಹಾಕಲಾಗಿದೆ ಎಂದು ಈ ವರ್ಷದ ಮಾರ್ಚ್​ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಬಳಿಕ ಕೊರೊನಾ ವೈರಸ್ ಹಾಗೂ ರಾಷ್ಟ್ರಾದ್ಯಂತ ಲಾಕ್​ಡೌನ್​ನಿಂದ ಯೋಜನೆ ಕುಂಟುತ್ತಾ ಸಾಗಿತು. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ನಂತರ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟವು ಕೇವಲ ಗ್ರಾಮ ಪಂಚಾಯಿತಿಗಳು ಮಾತ್ರವಲ್ಲದೆ, ಎಲ್ಲ 6.09 ಲಕ್ಷ ಹಳ್ಳಿಗಳಿಗೂ ಬ್ರಾಡ್ ಬ್ಯಾಂಡ್ ಸಂಪರ್ಕ ನೀಡಲು ಹೆಚ್ಚುವರಿಯಾಗಿ ₹ 19,041 ಕೋಟಿ ಒದಗಿಸಲು ಒಪ್ಪಿಗೆ ನೀಡಿತು.

ಈಗ ಗ್ರಾಪಂಗಳು ಮಾತ್ರವಲ್ಲದೇ, ದೇಶದ 6.09 ಲಕ್ಷ ಗ್ರಾಮಗಳಿಗೆ ಬ್ರಾಡ್​ಬ್ಯಾಂಡ್ ಸಂಪರ್ಕ ನೀಡಲು ₹ 29,500 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಯೋಜನೆಯನ್ನು ಜಾರಿಗೆ ತರಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಇದರ ಜೊತೆಗೆ ಹಾಲಿ ಇರುವ ಭಾರತ್ ನೆಟ್ ಪ್ರಾಜೆಕ್ಟ್ ಅನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವವೂ ಜಾಗತಿಕ ಟೆಂಡರ್​ನಲ್ಲಿ ಸೇರಿದೆ. ಕೊರೊನಾ ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಲಾಕ್​ಡೌನ್​ನಿಂದಾಗಿ ಹಳ್ಳಿಗಳಲ್ಲಿ ಶಾಲಾ ಮಕ್ಕಳು ಇಂಟರ್​ನೆಟ್ ಸಂಪರ್ಕಕ್ಕಾಗಿ ಬೆಟ್ಟಗುಡ್ಡ, ಮರಗಳನ್ನು ಹತ್ತಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಭಾರತ್ ನೆಟ್ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡರೆ ಮಾತ್ರ ಈ ಸಮಸ್ಯೆ ನಿವಾರಣೆಯಾಗಲು ಸಾಧ್ಯ.

ಭಾರತ್ ಬ್ರಾಡ್​ಬ್ಯಾಂಡ್ ನೆಟ್​ವರ್ಕ್ ಲಿಮಿಟೆಡ್ ಈ ಯೋಜನೆ ಜಾರಿಯ ಪ್ರಾಜೆಕ್ಟ್ ಮ್ಯಾನೇಜ್​ಮೆಂಟ್ ಏಜೆನ್ಸಿ ಎನಿಸಿದೆ. ಈ ಮೊದಲು ಮೂರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬಿಎಸ್‌ಎನ್‌ಎಲ್‌, ಪವರ್ ಗ್ರಿಡ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್, ರೈಲ್ ಟೆಲ್ ಕಾರ್ಪೋರೇಷನ್ ಲಿಮಿಟೆಡ್ ಈ ಯೋಜನೆ ಜಾರಿಗೊಳಿಸುತ್ತಿದ್ದವು.

ಈಗ ಪಿಪಿಪಿ ಮಾಡೆಲ್ ಅಂದರೇ, ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಷಿಪ್​ನಲ್ಲಿ ಯೋಜನೆ ಜಾರಿಗೊಳಿಸುವುದರಿಂದ ಖಾಸಗಿ ವಲಯ ಕೂಡ ಯೋಜನೆ ಜಾರಿಗೆ ಕೈ ಜೋಡಿಸಲಿದೆ. ಖಾಸಗಿ ವಲಯದಿಂದ ಅಪರೇಷನ್, ನಿರ್ವಹಣೆ, ಆದಾಯ ತರುವಲ್ಲಿ ದಕ್ಷತೆ ಕಾಪಾಡಿಕೊಳ್ಳಲು ಸಾಧ್ಯ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಎಲ್ಲ ಹಳ್ಳಿಗಳಿಗೂ ಬ್ರಾಡ್​ಬ್ಯಾಂಡ್ ಸಂಪರ್ಕ ನೀಡುವುದರಿಂದ ಕೇಂದ್ರ, ರಾಜ್ಯ ಸರ್ಕಾರದ ಇ-ಸೇವೆಗಳನ್ನು ಹಳ್ಳಿಹಳ್ಳಿಗೂ ನೀಡಲು ಸಾಧ್ಯ. ಈ ಯೋಜನೆ ಪೂರ್ಣ ಜಾರಿಯಿಂದ ನೇರ, ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಾವೆ. ಸರ್ಕಾರಕ್ಕೆ ಆದಾಯವೂ ಬರುತ್ತೆ ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರ.

(Govt of India Decides to Expand Bharat Net Broadband service to every village of India)

ಇದನ್ನೂ ಓದಿ: ಆನ್​ಲೈನ್​​ ಕ್ಲಾಸ್​ ಸಂಕಟಗಳು: ಮೊಬೈಲ್ ಒಡೆದಿದೆ, ಅಪ್ಪನ ಬಳಿ ದುಡ್ಡಿಲ್ಲ, ಅಣ್ಣ ಫೋನ್ ಕೊಡಲ್ಲ- ಟೀಚರ್​ ತೆರೆದಿಟ್ಟ ಕಟು ವಾಸ್ತವ

ಇದನ್ನೂ ಓದಿ: Aadhaar card: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೆಸರು ತಪ್ಪಿದ್ದರೆ ಆನ್​ಲೈನ್​ನಲ್ಲಿ ಸರಿ ಪಡಿಸುವುದು ಹೇಗೆ?

Click on your DTH Provider to Add TV9 Kannada