Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ವಿಚಾರಣೆ ಮೇ 26ಕ್ಕೆ ಮುಂದೂಡಿದ ವಾರಾಣಸಿ ಜಿಲ್ಲಾ ಕೋರ್ಟ್
ಮೇ 26 ರಿಂದ ಪ್ರತಿದಿನ ಈ ವಿಷಯದ ವಿಚಾರಣೆ ನಡೆಯಲಿದೆಯೇ ಎಂಬುದರ ಕುರಿತು ಇನ್ನೂ ಯಾವುದೇ ನಿರ್ದಿಷ್ಟ ಆದೇಶಗಳಿಲ್ಲ. ಮೇ 26ರಂದು ಪ್ರಾಥಮಿಕ ವಾದಗಳು ಆರಂಭವಾಗಲಿವೆ.
ಸೋಮವಾರ ಜ್ಞಾನವಾಪಿ ಮಸೀದಿ (Gyanvapi Mosque Case) ಪ್ರಕರಣದ ಆದೇಶವನ್ನು ಕಾಯ್ದಿರಿಸಿದ ನಂತರ ಇಂದು ವಿಚಾರಣೆ ನಡೆಸಿದ ವಾರಣಾಸಿ (Varanasi) ಜಿಲ್ಲಾ ನ್ಯಾಯಾಲಯವು ಮೇ 26 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಮೇ 26 ರಂದು ಸುಪ್ರೀಂಕೋರ್ಟ್‌ನ (Supreme Court) ಆದೇಶಗಳಿಗೆ ಅನುಸಾರವಾಗಿ ಆದೇಶ 7, ನಿಯಮ 11 ರ ಅಡಿಯಲ್ಲಿ ಮೊಕದ್ದಮೆಯನ್ನು ನಿರ್ವಹಿಸುವ ಕುರಿತು ಮುಸ್ಲಿಂ ಕಡೆಯ ಅರ್ಜಿಯನ್ನು ನ್ಯಾಯಾಲಯವು ಕೈಗೆತ್ತಿಕೊಳ್ಳಲಿದೆ. ಈ ಅರ್ಜಿಯು ಐವರು ಹಿಂದೂ ಅರ್ಜಿದಾರರು ಕೋರಿದ ಪರಿಹಾರಗಳನ್ನು ನ್ಯಾಯಾಲಯದ ಮೂಲಕ ನೀಡಬಹುದೇ ಎಂಬುದಕ್ಕೆ ಸಂಬಂಧಿಸಿದೆ. ಅದೇ ವೇಳೆ 1991 ರ ಪೂಜಾ ಸ್ಥಳದ ಕಾಯಿದೆಯಿಂದ ಮೊಕದ್ದಮೆಯನ್ನು ನಿರ್ಬಂಧಿಸಲಾಗಿದೆ ಎಂದು ಮುಸ್ಲಿಂ ಕಡೆಯವರು ವಾದಿಸುವ ನಿರೀಕ್ಷೆಯಿದೆ. ಮೇ 26 ರಿಂದ ಪ್ರತಿದಿನ ಈ ವಿಷಯದ ವಿಚಾರಣೆ ನಡೆಯಲಿದೆಯೇ ಎಂಬುದರ ಕುರಿತು ಇನ್ನೂ ಯಾವುದೇ ನಿರ್ದಿಷ್ಟ ಆದೇಶಗಳಿಲ್ಲ. ಮೇ 26ರಂದು ಪ್ರಾಥಮಿಕ ವಾದಗಳು ಆರಂಭವಾಗಲಿವೆ. ಹಿಂದೂ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸುಧೀರ್ ತ್ರಿಪಾಠಿ ಆಯೋಗದ ವರದಿ ಹಾಗೂ ಸಮೀಕ್ಷೆ ವೇಳೆ ತೆಗೆದ ವಿಡಿಯೊ ಪ್ರಕರಣಕ್ಕೆ ಸಾಕ್ಷಿಯಾಗಿರುವ ಕಾರಣ ಪರಿಶೀಲಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆಯೋಗದ ವರದಿಯನ್ನು ಅಧ್ಯಯನ ಮಾಡಲು ನಮಗೆ ಅನುಮತಿ ನೀಡುವಂತೆ ಕೋರಿದ್ದು, ವಾರಣಾಸಿ ನ್ಯಾಯಾಲಯವು ಸಮೀಕ್ಷಾ ವರದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಎರಡೂ ಪಕ್ಷಗಳಿಗೆ ಅವಕಾಶ ನೀಡಿದೆ. ಆಯೋಗದ ವರದಿಗೆ ಆಕ್ಷೇಪಣೆಗಳನ್ನು ಎರಡೂ ಪಕ್ಷಗಳು 7 ದಿನಗಳಲ್ಲಿ ಸಲ್ಲಿಸಬೇಕು ಎಂದು ಲೈವ್ ಲಾ ವರದಿ ಮಾಡಿದೆ.
ಏನಿದು ಜ್ಞಾನವಾಪಿ ಪ್ರಕರಣ? 16ನೇ ಶತಮಾನದಲ್ಲಿ ಔರಂಗಜೇಬನ ಆಳ್ವಿಕೆಯಲ್ಲಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ವಾರಣಾಸಿ ನ್ಯಾಯಾಲಯದಲ್ಲಿ 1991 ರಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿದಾರರು ಮತ್ತು ಸ್ಥಳೀಯ ಅರ್ಚಕರು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪೂಜೆ ಮಾಡಲು ಅನುಮತಿ ಕೋರಿದರು. ಅಲಹಾಬಾದ್ ಹೈಕೋರ್ಟ್ 2019 ರಲ್ಲಿ ಅರ್ಜಿದಾರರು ಕೋರಿದ ಎಎಸ್ಐ ಸಮೀಕ್ಷೆಗೆ ತಡೆಯಾಜ್ಞೆ ನೀಡಿತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 2:52 pm, Tue, 24 May 22