Hijab Case ಉಡುಗೆ ಧರಿಸುವ ಹಕ್ಕಿನಲ್ಲಿ ವಿವಸ್ತ್ರದ ಹಕ್ಕು ಕೂಡ ಸೇರಿದೆಯೇ? ಹಿಜಾಬ್ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಪ್ರಶ್ನೆ
ನ್ಯಾಯಮೂರ್ತಿ ಗುಪ್ತಾ ಅವರು ಸರ್ಕಾರಿ ಆದೇಶದ ಈ ವ್ಯಾಖ್ಯಾನವನ್ನು ಒಪ್ಪಲಿಲ್ಲ. ಸರ್ಕಾರಿ ಆದೇಶದ ಬಗ್ಗೆ ನೀವು ಅರ್ಥೈಸಿರುವುದು ಸರಿಯಲ್ಲ, ಏಕೆಂದರೆ ಈ ಒಂದೇ ಒಂದು ಸಮುದಾಯ ಈ ರೀತಿ ಧಾರ್ಮಿಕ ಉಡುಗೆಯಲ್ಲಿ ಬರಲು ಬಯಸುತ್ತಿದೆ ಎಂದಿದ್ದಾರೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್ (Supreme Court) ನ್ಯಾಯಪೀಠ, ಹಿಜಾಬ್ ನಿಷೇಧ (Hijab Case) ಬಗ್ಗೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸುವ ಮೇಲ್ಮನವಿಗಳ ವಿಚಾರಣೆಯನ್ನು ಬುಧವಾರ ನಡೆಸಿದೆ. ಇಂದಿನ ವಿಚಾರಣೆಗಳಲ್ಲಿ, ಹಿರಿಯ ವಕೀಲ ದೇವದತ್ ಕಾಮತ್, ಅರ್ಜಿದಾರರಾದ ಐಶತ್ ಶಿಫಾ ವಿ ಪರ ವಾದಿಸುತ್ತಿದ್ದಾರೆ (Aishat Shifa v. State of Karnataka). ಅರ್ಜಿದಾರರ ಮನವಿಯಲ್ಲಿ ಉಡುಗೆ ತೊಡುಗೆಯ ಸ್ವಾತಂತ್ರ್ಯ ಮತ್ತು ಯುನಿಫಾರ್ಮ್ ಜತೆ ಹೆಡ್ ಸ್ಕಾರ್ಫ್ ಸೇರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ತರ್ಕಬದ್ಧವಲ್ಲದ ಅಂತ್ಯ ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ. ಭಾರತೀಯ ಸಂವಿಧಾನದ 19 ನೇ ವಿಧಿಯು ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತದೆ. ನಿಸ್ಸಂದೇಹವಾಗಿ ಈ ಹಕ್ಕಿನ ಮೇಲೆ ಸಮಂಜಸವಾದ ನಿರ್ಬಂಧಗಳು ಇರಬೇಕಾಗಿತ್ತು ಎಂದು ಹಿರಿಯ ವಕೀಲ ಕಾಮತ್ ವಾದಿಸಿದ್ದಾರೆ. ಅರ್ಜಿದಾರರು ಸಮವಸ್ತ್ರ ಧರಿಸುವುದನ್ನು ವಿರೋಧಿಸಲಿಲ್ಲ, ಅವರು ಸಮವಸ್ತ್ರದೊಂದಿಗೆ ಹೆಡ್ ಸ್ಕಾರ್ಫ್ ಧರಿಸಲು ಬಯಸಿದ್ದರು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗುಪ್ತಾ, ನೀವು ಅದನ್ನು ತರ್ಕಬದ್ಧವಲ್ಲದ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಉಡುಗೆ ಹಕ್ಕು ವಿವಸ್ತ್ರಗೊಳ್ಳುವ ಹಕ್ಕನ್ನು ಸಹ ಒಳಗೊಂಡಿರುತ್ತದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಕಾಮತ್, ಶಾಲೆಯಲ್ಲಿ ಯಾರೂ ವಿವಸ್ತ್ರಗೊಳ್ಳುವುದಿಲ್ಲ. ಈ ರೀತಿ ಹೆಚ್ಚುವರಿ ಉಡುಗೆ ತೊಡುವುದು ಆರ್ಟಿಕಲ್ 19ರ ಭಾಗವೇ ಎಂಬುದು ಪ್ರಶ್ನೆ , ಇದನ್ನು ನಿರ್ಬಂಧಿಸಬಹುದೇ? ಎಂದು ಕೇಳಿದ್ದಾರೆ.
ಈ ವಿಷಯದ ಕೊನೆಯ ವಿಚಾರಣೆಯಲ್ಲಿ, ಸೋಮವಾರ ನ್ಯಾಯಮೂರ್ತಿ ಗುಪ್ತಾ ತಮ್ಮ ಆಯ್ಕೆಯ ಪ್ರಕಾರ ಹುಡುಗಿಯರನ್ನು ಮಿಡೀಸ್, ಮಿನೀಸ್, ಸ್ಕರ್ಟ್‌ಗಳಲ್ಲಿ ಬರಲು ಅನುಮತಿ ನೀಡಬಹುದೇ ಎಂದು ಕೇಳಿದ್ದರು. ಇಂದು, ನ್ಯಾಯಾಲಯವು ವಿವಿಧ ವಸ್ತುಗಳ ಧಾರ್ಮಿಕ ಮಹತ್ವವನ್ನು ಚರ್ಚಿಸಿದ್ದು ಅದನ್ನು ಧರಿಸುವುದರಿಂದ ಶಿಕ್ಷಣ ಸಂಸ್ಥೆಯ ಶಿಸ್ತನ್ನು ಉಲ್ಲಂಘನೆಯಾಗುತ್ತದೆಯೇ ಎಂದು ಕೇಳಿದೆ. ಈ ಹೊತ್ತಲ್ಲಿ ನ್ಯಾಯವಾದಿ ಕಾಮತ್, ದಕ್ಷಿಣ ಆಫ್ರಿಕಾದ KwaZulu-Natal and Others v Pillay ಪ್ರಕರಣದಲ್ಲಿನ ತೀರ್ಪನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ತಮಿಳು ಹಿಂದೂ ವಿದ್ಯಾರ್ಥಿಗೆ ಶಾಲೆಯಲ್ಲಿ ಮೂಗುತಿ ಧರಿಸಲು ಅವಕಾಶ ಮಾಡಿಕೊಟ್ಟಿತು. ಮೂಗುತಿ ಮತ್ತು ಮಂಗಳಸೂತ್ರ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದಿದ್ದಾರೆ ನ್ಯಾಯಮೂರ್ತಿ ಗುಪ್ತಾ. ಪ್ರಪಂಚದಾದ್ಯಂತದ ಮಹಿಳೆಯರು ಕಿವಿಯೋಲೆಗಳನ್ನು ಧರಿಸುತ್ತಾರೆ, ಆದರೆ ಇದು ಧಾರ್ಮಿಕ ಆಚರಣೆಯನ್ನು ರೂಪಿಸಲಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಚರ್ಚೆಯನ್ನು ಮುಂದುವರಿಸುವಾಗ ಕಾಮತ್ ಅವರು ಧನಾತ್ಮಕ ಮತ್ತು ಋಣಾತ್ಮಕ ಜಾತ್ಯತೀತತೆಯ ನಡುವೆ ವ್ಯತ್ಯಾಸವನ್ನು ಹೇಳಿದ್ದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸುವ ಸರ್ಕಾರಿ ಆದೇಶವು ಧನಾತ್ಮಕ ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದಿದ್ದಾರೆ.
ಹಿಜಾಬ್, ಆರ್ಟಿಕಲ್ 25 ರ ಭಾಗವಲ್ಲ. ಅದನ್ನು ನಿರ್ಧರಿಸಲು ಶಾಲಾ ಸಮಿತಿಗಳನ್ನು ಕೇಳುತ್ತದೆ. ಸರ್ಕಾರಿ ಆದೇಶವು ಸಕಾರಾತ್ಮಕ ಜಾತ್ಯತೀತತೆಗೆ ವಿರುದ್ಧವಾಗಿದೆ. ಇದು ಒಂದು ಸಮುದಾಯವನ್ನು ಗುರಿಯಾಗಿಸುತ್ತದೆ ಎಂದು ಕಾಮತ್ ಹೇಳಿದ್ದಾರೆ.
ನ್ಯಾಯಮೂರ್ತಿ ಗುಪ್ತಾ ಅವರು ಸರ್ಕಾರಿ ಆದೇಶದ ಈ ವ್ಯಾಖ್ಯಾನವನ್ನು ಒಪ್ಪಲಿಲ್ಲ. ಸರ್ಕಾರಿ ಆದೇಶದ ಬಗ್ಗೆ ನೀವು ಅರ್ಥೈಸಿರುವುದು ಸರಿಯಲ್ಲ, ಏಕೆಂದರೆ ಈ ಒಂದೇ ಒಂದು ಸಮುದಾಯ ಈ ರೀತಿ ಧಾರ್ಮಿಕ ಉಡುಗೆಯಲ್ಲಿ ಬರಲು ಬಯಸುತ್ತಿದೆ ಎಂದಿದ್ದಾರೆ. ಇತರ ಧರ್ಮಗಳ ವಿದ್ಯಾರ್ಥಿಗಳು ನಾಮ, ರುದ್ರಾಕ್ಷ, ಶಿಲುಬೆ ಇತ್ಯಾದಿಗಳನ್ನು ಧರಿಸುವುದರಿಂದ ಇದು ಕೇವಲ ಒಂದು ಸಮುದಾಯದ ವಿಷಯ ಎಂದು ಕಾಮತ್ ಗಮನಸೆಳೆದರು. ಇದಕ್ಕೆ ಗುಪ್ತಾ ಅವರು “ರುದ್ರಾಕ್ಷ ಅಥವಾ ಶಿಲುಬೆ ವಿಭಿನ್ನವಾಗಿದೆ. ಅವರು ಉಡುಗೆ ಒಳಗೆ ಧರಿಸುತ್ತಾರೆ, ಇತರರಿಗೆ ಕಾಣಿಸುವುದಿಲ್ಲ ಇದು ಶಿಸ್ತಿನ ಉಲ್ಲಂಘನೆ ಅಲ್ಲ ಎಂದಿದ್ದಾರೆ. ಪ್ರಶ್ನೆಯು ಸಮಂಜಸವಾದ ಸೌಕರ್ಯಗಳ ಬಗ್ಗೆ ಮತ್ತು ವಸ್ತು ಗೋಚರಿಸುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಲ್ಲ ಎಂದು ಕಾಮತ್ ಹೇಳಿದ್ದಾರೆ. ಈ ವಿಷಯದ ಕುರಿತು ಕಳೆದ ವಿಚಾರಣೆಯಲ್ಲಿ, ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು “ಪಗ್ಡಿ” “ಹಿಜಾಬ್” ಗೆ ಸಮಾನವಲ್ಲ ಮತ್ತು ಎರಡನ್ನು ಹೋಲಿಸಲಾಗುವುದಿಲ್ಲ ಎಂದು ಮೌಖಿಕವಾಗಿ ಟೀಕಿಸಿದ್ದರು.
Published On - 6:33 pm, Wed, 7 September 22