25ಕ್ಕೂ ಹೆಚ್ಚು ವಿಮಾನಗಳಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ; ಏರ್ ಇಂಡಿಯಾ, ವಿಸ್ತಾರ, ಇಂಡಿಗೋ, ಸ್ಪೈಸ್ ಜೆಟ್ಗೆ ಆತಂಕ
ಭಾರತದ 25ಕ್ಕೂ ಹೆಚ್ಚು ವಿಮಾನಗಳು ಇಂದು ನಕಲಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿವೆ. ಇಂಡಿಗೋ, ವಿಸ್ತಾರ, ಸ್ಪೈಸ್ಜೆಟ್, ಏರ್ ಇಂಡಿಯಾ ವಿಮಾನಗಳಿಗೆ ಹೆಚ್ಚು ಹುಸಿ ಬಾಂಬ್ ಕರೆಗಳು ಬಂದಿವೆ. ಕಳೆದ 12 ದಿನಗಳಲ್ಲಿ 275ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಹೆಚ್ಚಿನ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಲಾಗಿದೆ. ಅಕ್ಟೋಬರ್ 24ರಂದು ವಿವಿಧ ಭಾರತೀಯ ವಿಮಾನಯಾನ ಸಂಸ್ಥೆಗಳ 80ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದವು.
ನವದೆಹಲಿ: ಇಂದು (ಶುಕ್ರವಾರ) ಭಾರತೀಯ ವಾಹಕಗಳು ನಿರ್ವಹಿಸುವ 25ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಬಾಂಬ್ ಬೆದರಿಕೆಗಳನ್ನು ಸ್ವೀಕರಿಸುವುದರೊಂದಿಗೆ ಹುಸಿ ಬಾಂಬ್ ಬೆದರಿಕೆಗಳ ಸರಣಿ ಮುಂದುವರೆದಿದೆ. ಪಿಟಿಐ ವರದಿಯ ಪ್ರಕಾರ, ಇಂಡಿಗೋ, ವಿಸ್ತಾರಾ ಮತ್ತು ಸ್ಪೈಸ್‌ಜೆಟ್‌ನ ತಲಾ 7 ವಿಮಾನಗಳಿಗೆ ಬೆದರಿಕೆಗಳು ಬಂದಿದ್ದರೆ, ಏರ್ ಇಂಡಿಯಾದ 6 ವಿಮಾನಗಳು ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿವೆ.
ಇಂಡಿಗೋ ವಕ್ತಾರರು ಅದರ 7 ವಿಮಾನಗಳು ಭದ್ರತೆಗೆ ಸಂಬಂಧಿಸಿದ ಎಚ್ಚರಿಕೆಗಳನ್ನು ಪಡೆದಿವೆ ಎಂದು ಹೇಳಿದ್ದಾರೆ. ಇಂಡಿಗೋದ 7 ವಿಮಾನಗಳು (ಕೋಝಿಕೋಡ್‌ನಿಂದ ದಮ್ಮಾಮ್), (ಉದಯಪುರದಿಂದ ದೆಹಲಿ), (ದೆಹಲಿಯಿಂದ ಇಸ್ತಾಂಬುಲ್), (ಜೆಡ್ಡಾದಿಂದ ಮುಂಬೈ), (ಮುಂಬೈನಿಂದ ಇಸ್ತಾನ್‌ಬುಲ್), (ಹೈದರಾಬಾದ್‌ನಿಂದ ಚಂಡೀಗಢ) ಮತ್ತು (ಪುಣೆಯಿಂದ ಜೋಧಪುರ) ಬೆದರಿಕೆಗಳನ್ನು ಸ್ವೀಕರಿಸಿದೆ.
ಇದನ್ನೂ ಓದಿ: ಮುಂಬೈ ಬೆಂಗಳೂರು ವಿಮಾನ ಸೇರಿ ಮತ್ತೆ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆ
ಉದಯಪುರದಿಂದ ದೆಹಲಿಗೆ ಹಾರಾಟ ನಡೆಸುತ್ತಿರುವ 6E 2099 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಭದ್ರತಾ ಏಜೆನ್ಸಿ ಮಾರ್ಗಸೂಚಿಗಳನ್ನು ಅನುಸರಿಸಿ, ವಿಮಾನವನ್ನು ಟೇಕ್-ಆಫ್ ಮಾಡುವ ಮೊದಲು ಬೇರೆ ಕಡೆಗೆ ಕಳುಹಿಸಲಾಯಿತು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಏರ್ ಇಂಡಿಯಾ, ವಿಸ್ತಾರಾ ಮತ್ತು ಇಂಡಿಗೋದ ತಲಾ ಸುಮಾರು 20 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದ್ದರೆ, ಆಕಾಶ್ ಏರ್ಲೈನ್ಸ್ನ 13 ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಅಲಯನ್ಸ್ ಏರ್ ಮತ್ತು ಸ್ಪೈಸ್‌ಜೆಟ್‌ನ ತಲಾ 5 ವಿಮಾನಗಳಿಗೆ ಬೆದರಿಕೆಗಳು ಬಂದಿವೆ.
ಇದನ್ನೂ ಓದಿ: ನನ್ನನ್ನು ಬಾಂಬ್ ಹಾಕಿ ಸಾಯಿಸಬೇಕೆಂದು ಯಾರೋ ವಿಡಿಯೋ ಕಳಿಸಿದ್ದಾರೆ: ಜಗದೀಶ್, ವಕೀಲ
ಉನ್ನತ ಮಟ್ಟದ ಸರ್ಕಾರಿ ಮೂಲಗಳ ಪ್ರಕಾರ, ಈ ಹುಸಿ ಕರೆಗಳಿಗೆ ಕಾರಣವಾದ ಹಲವಾರು ವ್ಯಕ್ತಿಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ. ಆದರೆ, ಅಧಿಕಾರಿಗಳು ಈ ಸಂದೇಶಗಳ ಮೂಲ ಅಥವಾ ಒಳಗೊಂಡಿರುವವರ ಗುರುತುಗಳ ಬಗ್ಗೆ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ.
ಈ ವಾರದ ಆರಂಭದಲ್ಲಿ, ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಅವರು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಯ ನಿದರ್ಶನಗಳನ್ನು ಎದುರಿಸಲು ಅಂತಹ ಬೆದರಿಕೆಗಳ ಅಪರಾಧಿಗಳನ್ನು ನೋ-ಫ್ಲೈ ಪಟ್ಟಿಯಲ್ಲಿ ಸೇರಿಸುವುದು ಸೇರಿದಂತೆ ಹಲವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಯೋಜಿಸಿದೆ ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ