ಮಣಿಪುರ ದಂಗೆ ನಿಗ್ರಹಿಸಲು ಗೃಹಸಚಿವಾಲಯ ಮಾಸ್ಟರ್ ಪ್ಲಾನ್​! ಬಿಎಸ್​ಎಫ್ ಹೆಗಲಿಗೆ ಹೋಗುತ್ತಾ ಮಯನ್ಮಾರ್ ಗಡಿ ಭದ್ರತೆ?

ಈಶಾನ್ಯ ರಾಜ್ಯಗಳ ಹೆಬ್ಬಾಗಿಲು ಎಂದೆ ಕರೆಯಲಾಗುವ ಮಣಿಪುರ ಮ್ಯಾನ್ಮಾರ್ ಗಡಿಯೊಂದಿಗೆ ಹೊಂದಿಕೊಂಡಿದೆ. ಮಯನ್ಮಾರ್ ನಿಂದ ಮಣಿಪುರದ ಮೂಲಕ ನಡೆಯುತ್ತಿರುವ ಅಕ್ರಮಗಳಿಗೆ ಪೂರ್ಣವಿರಾಮ ನೀಡಲು ಗೃಹ ಸಚಿವಾಲಯ ತಯಾರಿ ನಡೆಸುತ್ತಿದೆ.

ಮಣಿಪುರ ದಂಗೆ ನಿಗ್ರಹಿಸಲು ಗೃಹಸಚಿವಾಲಯ ಮಾಸ್ಟರ್ ಪ್ಲಾನ್​! ಬಿಎಸ್​ಎಫ್ ಹೆಗಲಿಗೆ ಹೋಗುತ್ತಾ ಮಯನ್ಮಾರ್ ಗಡಿ ಭದ್ರತೆ?
ಮಣಿಪುರ ದಂಗೆ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2023 | 9:46 PM

ಕಳೆದ ಎರಡು ತಿಂಗಳಿಂದ ಮೀಸಲಾತಿ ಜ್ವಾಲೆಯಲ್ಲಿ ಮಣಿಪುರ ಉರಿಯತ್ತಿದೆ (Manipur Violence). ಕೇವಲ ಎರಡು ಜಾತಿಗಳ ನಡುವಿನ ತಿಕ್ಕಾಟ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಇದರ ಹಿಂದಿನ ಮಸಲತ್ತು ಗಡಿಯಾಚೆಗೆ ಇದೆ ಎನ್ನುವ ವಾಸನೆ ಬಡಿಯತೊಡಗಿದೆ. ಗಡಿಯಾಚೆಗಿನ ಸಹಾಯದಿಂದ ಈಶಾನ್ಯ ರಾಜ್ಯಗಳಲ್ಲಿ ಉಗ್ರವಾದ ಪೈಶಾಚಿಕವಾಗಿ ಹರಡುತ್ತಿರುವ ಮುನ್ಸೂಚನೆಯನ್ನು ಮಣಿಪುರ ಗಲಭೆ ನೀಡುತ್ತಿದೆ.

ಮಣಿಪುರ ಸೇರಿದಂತೆ ಈಶಾನ್ಯದಲ್ಲಿ ಹರಡಿರುವ ಉಗ್ರವಾದದ ಬೇರುಗಳನ್ನು ಬುಡ ಸಮೇತ ಕತ್ತರಿಸುವತ್ತ ಕೇಂದ್ರ ಗೃಹ ಸಚಿವಾಲಯ ಹೆಜ್ಜೆ ಇಟ್ಟಿದೆ. ಈಶಾನ್ಯ ರಾಜ್ಯಗಳಲ್ಲಿ ಸರ್ವೇಸಾಮಾನ್ಯವಾಗಿರುವ ಬಂಡಾಯ, ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ, ಅಕ್ರಮ ಗಡಿ ಪ್ರವೇಶ ಮಟ್ಟಹಾಕಲು ಗೃಹಸಚಿವಾಲಯ ಕಾರ್ಯೋನ್ಮುಖವಾಗುತ್ತಿದೆ.

ಈಶಾನ್ಯ ರಾಜ್ಯಗಳ ಹೆಬ್ಬಾಗಿಲು ಎಂದೆ ಕರೆಯಲಾಗುವ ಮಣಿಪುರ ಮ್ಯಾನ್ಮಾರ್ ಗಡಿಯೊಂದಿಗೆ ಹೊಂದಿಕೊಂಡಿದೆ. ಮಯನ್ಮಾರ್ ನಿಂದ ಮಣಿಪುರದ ಮೂಲಕ ನಡೆಯುತ್ತಿರುವ ಅಕ್ರಮಗಳಿಗೆ ಪೂರ್ಣವಿರಾಮ ನೀಡಲು ಗೃಹ ಸಚಿವಾಲಯ ತಯಾರಿ ನಡೆಸುತ್ತಿದೆ. ಮಯನ್ಮಾರ್ ಗಡಿಯ ಭದ್ರತೆಯ ಹೊಣೆಯನ್ನು ಅಸ್ಸಾಂ ರೈಫಲ್ ವಹಿಸಿಕೊಂಡಿದೆ. ಅಸ್ಸಾಂ ರೈಫಲ್ಸ್ ತನ್ನದೇ ಆದ ಸೈನಿಕರನ್ನು ನೇಮಿಸಿಕೊಳ್ಳುತ್ತದೆ, ಆದರೆ ಭಾರತೀಯ ಸೇನೆಯ ಅಧಿಕಾರಿಗಳಿಂದ ನಿರ್ದೇಶನ ಮತ್ತು ಸೂಚನೆಗಳನ್ನು ಪಡೆಯುತ್ತದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದ ಸಿಎಂಗೆ ದೂರವಾಣಿ ಕರೆ ಮಾಡಿ ಪ್ರವಾಹ ಪೀಡಿತ ರಾಜ್ಯದ ಸ್ಥಿತಿಗತಿ ವಿಚಾರಿಸಿದ ಪ್ರಧಾನಿ ಮೋದಿ

ಆಂತರಿಕ ಭದ್ರತೆಯ ಜೊತೆಗೆ ಗಡಿ ಕಾಯುವ ಕೆಲಸವನ್ನೂ ನೋಡಿಕೊಳ್ಳುತ್ತದೆ. ಅಸ್ಸಾಂ ರೈಫಲ್ಸ್‌ನ ಕರ್ತವ್ಯದ ಸ್ವರೂಪವು ಕಂಪನಿಯ ಕಾರ್ಯಾಚರಣಾ ನೆಲೆಯನ್ನು ಆಧರಿಸಿದೆ. 1,643 ಕಿ.ಮೀ ಉದ್ದದ ಮಯನ್ಮಾರ್ ಗಡಿಯ ಭದ್ರತೆಯನ್ನು ಬಿಎಸ್​ಎಫ್​ಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿ ಬಿಎಸ್‌ಎಫ್‌ನಲ್ಲಿ 27 ಹೊಸ ಬೆಟಾಲಿಯನ್‌ಗಳನ್ನು ರಚಿಸಬೇಕಾದ ಅಗತ್ಯ ಸೃಷ್ಟಿಯಾಗಿದೆ.

ಮ್ಯಾನ್ಮಾರ್‌ನ ಉಗ್ರಗಾಮಿ ಗುಂಪುಗಳಿಗೆ ಚೀನಾದಿಂದ ಸಹಾಯ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಅರೆ ಸೇನಾಪಡೆ ಯಾವಾಗಲು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇದನ್ನು ಬಿಎಸ್​ಎಫ್​ ನಿರ್ವಹಿಸುತ್ತಿದೆ. ಕಳೆದ ಮೇ 3ರಿಂದ ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಸುಮಾರು ಎಪ್ಪತ್ತು ಸಾವಿರ ಜನರು ತಮ್ಮ ಮನೆಗಳನ್ನು ತೊರೆದು ಭದ್ರತಾ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಸುಮಾರು ಐದು ಸಾವಿರ ಶಸ್ತ್ರಾಸ್ತ್ರಗಳನ್ನು ಗಲಭೆ ಕೋರರು ಲೂಟಿ ಮಾಡಿದ್ದಾರೆ.

ಭದ್ರತಾ ಪಡೆಗಳು ಸಾಗುವ ದಾರಿಯನ್ನು ದುಷ್ಕರ್ಮಿಗಳು ಹಾಳು ಮಾಡಿದ್ದಾರೆ. ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ನಡೆಯುತ್ತಿರುವ ದೇಶವಿರೋಧಿ ಚಟುವಟಿಕೆಗಳು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿವೆ. ಮಯನ್ಮಾರ್​ನ ಅನೇಕ ಉಗ್ರಗಾಮಿ ಗುಂಪುಗಳು ಚೀನಾದಿಂದ ಸಹಾಯ ಪಡೆಯುತ್ತವೆ. ಚೀನಾದಿಂದ ಪಡೆದ ಸಹಾಯ ಮಣಿಪುರ ಮತ್ತು ಈಶಾನ್ಯದ ಇತರ ರಾಜ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಮಯನ್ಮಾರ್ ಗಡಿಯ ಭದ್ರತೆಯನ್ನು ಅಸ್ಸಾಂ ರೈಫಲ್ ನಿರ್ವಹಿಸುತ್ತಿದೆ. ಮಯನ್ಮಾರ್ ಗಡಿ ಕಾಯುವ ಪಡೆಯ ಜವಾಬ್ದಾರಿಯನ್ನು ಬದಲಾಯಿಸುವ ವಿಚಾರ ಕಳೆದ ಒಂದು ದಶಕದಿಂದ ಕೇಂದ್ರ ಗೃಹ ಸಚಿವಾಲಯದಲ್ಲಿ ಹಲವಾರು ಬಾರಿ ಚರ್ಚೆ ನಡೆದಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂಕೋರ್ಟ್​​​ನ್ನು ವೇದಿಕೆಯಾಗಿ ಬಳಸಬೇಡಿ: ಸಿಜೆಐ

ಮಯನ್ಮಾರ್ ಗಡಿ ಅಕ್ರಮ ತಡೆಯುತ್ತಾ ಬಿಎಸ್​ಎಫ್?

ಒಂದು ವೇಳೆ ಅಸ್ಸಾಂ ರೈಫಲ್ಸ್ ಬದಲು ಮಯನ್ಮಾರ್ ಗಡಿಯಲ್ಲಿ ಬಿಎಸ್​ಎಫ್ ನೇಮಿಸಿದ್ದೇಯಾದಲ್ಲಿ ಗಡಿಯಲ್ಲಿ ಬಿಗಿ ಕ್ರಮಗಳು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಗಡಿಯನ್ನು ಬಿಎಸ್ಎಫ್ ನಿಯಂತ್ರಣಕ್ಕೆ ನೀಡಿದರೆ, ಫಲಿತಾಂಶದಲ್ಲಿ ಖಂಡಿತ ಬದಲಾವಣೆ ಆಗುತ್ತೆ ಅಂತಾ ಸೇನಾ ತಜ್ಞರು ಹೇಳುತ್ತಿದ್ದಾರೆ. ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಜನಸಂಖ್ಯೆಯ ಪ್ರಮಾಣವು ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ.

ಒಳನುಸುಳುವಿಕೆಯಿಂದ ಜನಸಂಖ್ಯೆ ಪ್ರಮಾಣ ಹೆಚ್ಚಾಗಿದೆ ಎನ್ನುವ ಆರೋಪವಿದೆ. ಬಿಎಸ್‌ಎಫ್ ಗಡಿ ಕಾಯುವ ಜವಾಬ್ದಾರಿಯನ್ನು ಪಡೆದರೆ, ಒಳನುಸುಳುವಿಕೆ ಹೆಚ್ಚಿನ ಪ್ರಮಾಣ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಬಿಎಸ್ಎಫ್ ಇದನ್ನು ಸಾಬೀತುಪಡಿಸಿದೆ. ಬಿಎಸ್ಎಫ್ 27 ಬೆಟಾಲಿಯನ್ಗಳನ್ನು ಒಟ್ಟಿಗೆ ಮಯನ್ಮಾರ್ ಗಡಿಯಲ್ಲಿ ನೇಮಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಮಯನ್ಮಾರ್ ಗಡಿಯಲ್ಲಿ ಬಿಎಸ್ ಎಫ್ ನೇಮಿಸುವ ಬಗ್ಗೆ ಗೃಹ ಸಚಿವಾಲಯ ಗಂಭೀರ ಚರ್ಚೆಯಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.