ಸ್ವಿಟ್ಜರ್ಲೆಂಡ್ ಪ್ರವಾಸಕ್ಕೆ ಹೋಗಿದ್ದ ಹೈದರಾಬಾದ್ ದಂಪತಿ ನಾಪತ್ತೆ, 50 ಕೋಟಿ ರೂ. ವಂಚಿಸಿ ಎಸ್ಕೇಪ್ ಆದ್ರಾ?

ಹೈದರಾಬಾದ್‌ನ ಉದ್ಯಮಿ ದಂಪತಿ ಪಬ್ಬಾ ಚಂದ್ರಶೇಖರ್ ಮತ್ತು ಸ್ವಪ್ನಾ ಸ್ವಿಟ್ಜರ್ಲೆಂಡ್‌ನಲ್ಲಿ ನಾಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಸಾಮಾನ್ಯ ಪ್ರಕರಣವಾದರೂ, ಇವರ ವಿರುದ್ಧ 50 ಕೋಟಿ ರೂ. ಹೂಡಿಕೆ ವಂಚನೆಯ ಆರೋಪ ಕೇಳಿಬಂದಿದೆ. ಸುಮಾರು 60ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ದಂಪತಿ ಉದ್ದೇಶಪೂರ್ವಕವಾಗಿ ದೇಶದಿಂದ ಪಲಾಯನ ಮಾಡಿರುವ ಬಗ್ಗೆ ಹೈದರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಇಂಟರ್‌ಪೋಲ್ ನೆರವು ಕೋರಲು ಸಿದ್ಧರಾಗಿದ್ದಾರೆ.

ಸ್ವಿಟ್ಜರ್ಲೆಂಡ್ ಪ್ರವಾಸಕ್ಕೆ ಹೋಗಿದ್ದ ಹೈದರಾಬಾದ್ ದಂಪತಿ ನಾಪತ್ತೆ, 50 ಕೋಟಿ ರೂ. ವಂಚಿಸಿ ಎಸ್ಕೇಪ್ ಆದ್ರಾ?
ಹೈದರಾಬಾದ್ ದಂಪತಿ

Updated on: Jul 12, 2026 | 9:18 AM

ಹೈದರಾಬಾದ್, ಜುಲೈ 12: ಯುರೋಪಿನ ಸುಂದರ ದೇಶ ಸ್ವಿಟ್ಜರ್ಲೆಂಡ್‌ಗೆ ಪ್ರವಾಸ(Tour)ಕ್ಕೆ ಹೋಗಿದ್ದ ಹೈದರಾಬಾದ್‌ನ ಉದ್ಯಮಿ ದಂಪತಿ ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಧಾರಣ ನಾಪತ್ತೆ ಪ್ರಕರಣದಂತೆ ಕಂಡರೂ, ಇದರ ಹಿಂದೆ ಬರೋಬ್ಬರಿ 50 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ವಂಚನೆಯ ಕರಾಳ ಹಗರಣ ಅಡಗಿರುವ ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾದ ದಂಪತಿಯನ್ನು ಉದ್ಯಮಿ ಪಬ್ಬಾ ಚಂದ್ರಶೇಖರ್ (51) ಹಾಗೂ ಅವರ ಪತ್ನಿ ಸ್ವಪ್ನಾ (42) ಎಂದು ಗುರುತಿಸಲಾಗಿದೆ. ಜೂನ್ 22 ರಂದು ರಜೆಗಾಗಿ ವಿದೇಶಕ್ಕೆ ತೆರಳಿದ್ದ ಇವರು ಜುಲೈ 8 ರವರೆಗೆ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅಂದಿನಿಂದ ಇಬ್ಬರ ಮೊಬೈಲ್ ಫೋನ್‌ಗಳು ದಿಢೀರನೆ ಸ್ವಿಚ್ ಆಫ್ ಆಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಮಗಳ ದೂರು

ತಂದೆ-ತಾಯಿ ಜುಲೈ 8 ರ ನಂತರ ಯಾವುದೇ ಕರೆಗಳಿಗೂ ಸಿಗದೇ ಹೋದಾಗ ಆತಂಕಗೊಂಡ ಅವರ 23 ವರ್ಷದ ಮಗಳು ಶ್ರೇಯಾ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದಂಪತಿ ಭಾರತದಿಂದ ಹೊರಟ ವಲಸೆ ದಾಖಲೆಗಳು, ವಿಮಾನದ ಟಿಕೆಟ್‌ಗಳು ಹಾಗೂ ಸ್ವಿಟ್ಜರ್ಲೆಂಡ್‌ನಲ್ಲಿ ಅವರ ಕೊನೆಯ ಲೊಕೇಶನ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಮ್ ಪೊಲೀಸರು ಇಂಟರ್‌ಪೋಲ್ ನೆರವು ಕೋರಲು ಸಜ್ಜಾಗಿದ್ದಾರೆ.

ನಾಪತ್ತೆಯ ಹಿಂದೆ 50 ಕೋಟಿ ರೂ. ರಹಸ್ಯ

ಪೊಲೀಸ್ ತನಿಖೆ ಆಳವಾಗುತ್ತಿದ್ದಂತೆ ದಂಪತಿಯ ಮತ್ತೊಂದು ಶಾಕಿಂಗ್ ಮುಖ ಬಯಲಾಗಿದೆ. ಉದ್ಯಮಿ ಚಂದ್ರಶೇಖರ್ ಕಳೆದ ಕೆಲವು ವರ್ಷಗಳಿಂದ ಪರಿಚಯಸ್ಥರು ಹಾಗೂ ಹೂಡಿಕೆದಾರರು ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಜನರಿಂದ ಬರೋಬ್ಬರಿ 50 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ.

ಮತ್ತಷ್ಟು ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲೇ ದುರಂತ: ಮಸ್ಸೂರಿ ಹೋಂಸ್ಟೇಯಲ್ಲಿ ಮಹಿಳೆ ನಿಗೂಢ ಸಾವು, ತಿಂಗಳ ಬಳಿಕ ಟೆಕ್ಕಿ ಪತಿ ಅರೆಸ್ಟ್

ತಮ್ಮ ವೈಯಕ್ತಿಕ ಮತ್ತು ಬಿಸಿನೆಸ್ ಅಗತ್ಯಗಳ ಹೆಸರಿನಲ್ಲಿ, ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ ಅಥವಾ ಬಡ್ಡಿ ನೀಡುವುದಾಗಿ ನಂಬಿಸಿ ಚಂದ್ರಶೇಖರ್ ಜನರಿಂದ ಕೋಟ್ಯಂತರ ರೂಪಾಯಿ ಕೈಗಡ ತಂದಿದ್ದರು.

ಹೂಡಿಕೆದಾರರು ಹಣ ವಾಪಸ್ ಕೇಳಲು ಶುರುಮಾಡಿದ ಬೆನ್ನಲ್ಲೇ ದಂಪತಿ ಸ್ವಿಟ್ಜರ್ಲೆಂಡ್ ಪ್ಲಾನ್ ಮಾಡಿದ್ದರು. ಹೀಗಾಗಿ ಇವರು ಉದ್ದೇಶಪೂರ್ವಕವಾಗಿಯೇ ಜನರಿಗೆ ವಂಚಿಸಿ, ವಿದೇಶದಲ್ಲಿ ಹಣ ಅಡಗಿಸಿಟ್ಟು ದೇಶ ಬಿಟ್ಟು ಓಡಿಹೋಗಿದ್ದಾರೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರ್ಥಿಕ ಅಪರಾಧಿಗಳ ನೆಚ್ಚಿನ ತಾಣ ಸ್ವಿಟ್ಜರ್ಲೆಂಡ್?

ಜಾಗತಿಕವಾಗಿ ಭಾರತದ ಬ್ಯಾಂಕುಗಳಿಗೆ ಅಥವಾ ಹೂಡಿಕೆದಾರರಿಗೆ ವಂಚಿಸುವ ಆರ್ಥಿಕ ಅಪರಾಧಿಗಳು ಲಂಡನ್ ಅಥವಾ ಸ್ವಿಟ್ಜರ್ಲೆಂಡ್‌ನಂತಹ ದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಸ್ವಿಸ್ ಬ್ಯಾಂಕ್ ರಹಸ್ಯ: ಸ್ವಿಟ್ಜರ್ಲೆಂಡ್‌ನ ಬ್ಯಾಂಕಿಂಗ್ ಕಾನೂನುಗಳು ಖಾತೆದಾರರ ಮಾಹಿತಿಯನ್ನು ಅತ್ಯಂತ ರಹಸ್ಯವಾಗಿಡುತ್ತವೆ. ಹೀಗಾಗಿ ಕಪ್ಪುಹಣ ಮತ್ತು ವಂಚನೆಯ ಹಣವನ್ನು ಅಲ್ಲಿಗೆ ವರ್ಗಾಯಿಸುವುದು ಸುಲಭ ಎಂಬ ನಂಬಿಕೆ ಇದೆ.

ಹಸ್ತಾಂತರ ಪ್ರಕ್ರಿಯೆ ಕಷ್ಟ: ಭಾರತದೊಂದಿಗೆ ಅಪರಾಧಿಗಳ ಹಸ್ತಾಂತರ ಒಪ್ಪಂದ ಇದ್ದರೂ, ವಿದೇಶಿ ನ್ಯಾಯಾಲಯಗಳಲ್ಲಿನ ಕಾನೂನು ಹೋರಾಟ ವರ್ಷಗಟ್ಟಲೆ ಎಳೆಯುವುದರಿಂದ ವಂಚಕರು ಇಂತಹ ದೇಶಗಳಲ್ಲಿ ಆಶ್ರಯ ಪಡೆಯಲು ಯತ್ನಿಸುತ್ತಾರೆ.

ಸದ್ಯಕ್ಕೆ ಹೈದರಾಬಾದ್ ಪೊಲೀಸರು ವಂಚನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಎಫ್‌ಐಆರ್ ದಾಖಲಿಸಿಲ್ಲವಾದರೂ, ದಂಪತಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ದಂಪತಿ ತಾವಾಗಿಯೇ ನಾಪತ್ತೆಯಾಗಿದ್ದಾರೆಯೇ ಅಥವಾ ಯಾವುದಾದರೂ ಅಪಾಯದಲ್ಲಿ ಸಿಲುಕಿದ್ದಾರೆಯೇ ಎಂಬುದು ಸದ್ಯದಲ್ಲೇ ತಿಳಿಯಬೇಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:17 am, Sun, 12 July 26

Loading...
Unable to load recommendations.
Follow Us