ಬಟ್ಟೆ ಬಿಚ್ಚಿ ದೇವಸ್ಥಾನಕ್ಕೆ ನುಗ್ಗಿ, ದೇವಿಯ ವಿಗ್ರಹದ ಜೊತೆ ಕೆರೆಗೆ ಹಾರಿದ ಸಾಫ್ಟ್‌ವೇರ್ ಇಂಜಿನಿಯರ್!
ಹೈದರಾಬಾದ್‌ನಲ್ಲಿ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಲಕ್ಷಾಂತರ ರೂ. ಸಂಬಳ ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್ ತೇಜಸ್ವಿನಿ ಎಂಬಾಕೆ ಮಧ್ಯರಾತ್ರಿ ನಗ್ನವಾಗಿ ದೇವಸ್ಥಾನದ ಒಳಗೆ ನುಗ್ಗಿ, ಅಲ್ಲಿದ್ದ ದೇವಿಯ ವಿಗ್ರಹವನ್ನು ಕೈಯಲ್ಲಿ ಹಿಡಿದುಕೊಂಡು ಕೆರೆಗೆ ಜಿಗಿದು ಮೃತಪಟ್ಟಿರುವ ವಿಚಿತ್ರವಾದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವುದರಿಂದ ರಾತ್ರಿ ಆ ದೇವಸ್ಥಾನದಲ್ಲಿ ನಿಜಕ್ಕೂ ಏನು ನಡೆಯಿತು ಎಂಬುದಕ್ಕೆ ಸಾಕ್ಷಿ ಸಿಕ್ಕಂತಾಗಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಖ್ಯಾಂಶಗಳು
- ಹೈದರಾಬಾದ್‌ನಲ್ಲಿ ವಿಚಿತ್ರ ಘಟನೆ
- ದೇವಾಲಯದಲ್ಲಿದ್ದ ದೇವರ ವಿಗ್ರಹ ಹಿಡಿದುಕೊಂಡು ಕೆರೆಗೆ ಹಾರಿದ ಯುವತಿ
- ಸಾಫ್ಟ್‌ವೇರ್ ಇಂಜಿನಿಯರ್ ನಿಗೂಢ ಸಾವು
ಹೈದರಾಬಾದ್, ಜುಲೈ 19: ಆಕೆಯ ಹೆಸರು ತೇಜಸ್ವಿನಿ. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಮೂಲದ ವಕ್ಕುಲಗಡ್ಡಿ ಈಶ್ವರ್ ರಾವ್ ಮತ್ತು ಅರುಣಾ ದಂಪತಿಯ ಪುತ್ರಿಯಾದ 25 ವರ್ಷದ ತೇಜಸ್ವಿನಿ ಬೆಂಗಳೂರಿನಲ್ಲಿ (Bengaluru) ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ತೀವ್ರ ಒತ್ತಡವನ್ನು ಎದುರಿಸಿದ ಅವರು 6 ತಿಂಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ವಿಶಾಖಪಟ್ಟಣಕ್ಕೆ ತೆರಳಿದ್ದರು. ಇದಾದ ನಂತರ, 2 ತಿಂಗಳ ಹಿಂದೆ ಅವರು ತಮ್ಮ ತಾಯಿ ಅರುಣಾ ಅವರೊಂದಿಗೆ ಹೈದರಾಬಾದ್‌ಗೆ (Hyderabad) ಬಂದು ಪೀರ್ಜಾದಿಗುಡದ ಶಂಕರ್‌ನಗರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಶುಕ್ರವಾರ ಮಧ್ಯರಾತ್ರಿ 2.30ರ ಸುಮಾರಿಗೆ ತೇಜಸ್ವಿನಿ ಎಚ್ಚರಗೊಂಡು ತನ್ನ ತಾಯಿಯ ರೂಮನ್ನು ಹೊರಗಿನಿಂದ ಲಾಕ್ ಮಾಡಿ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಿಂದ ಹೊರಟ ಆಕೆ ಬೆತ್ತಲೆಯಾಗಿ ನಡೆದುಕೊಂಡು ಹೋಗಿ ದೇವಸ್ಥಾನದೊಳಗೆ ಹೊಕ್ಕು, ಅಲ್ಲಿದ್ದ ದೇವರ ವಿಗ್ರಹವನ್ನು ಹಿಡಿದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!.
ಹೈದರಾಬಾದ್‌ನ ಈ ಯುವತಿಯ ನಿಗೂಢ ಸಾವು ಭಾರಿ ತಲ್ಲಣ ಸೃಷ್ಟಿಸಿದೆ. ಮೃತ ಯುವತಿ ಕೆರೆಗೆ ಜಿಗಿಯುವ ಮುನ್ನ ನಗ್ನ ಸ್ಥಿತಿಯಲ್ಲಿ ದೇವಸ್ಥಾನ ಪ್ರವೇಶಿಸಿ, ದೇವಿಯ ವಿಗ್ರಹವನ್ನು ಹೊತ್ತೊಯ್ದು ಕೆರೆಗೆ ಜಿಗಿದಿದ್ದಾರೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಪೊಲೀಸರು ಕೆರೆಯಲ್ಲಿ ನಾಪತ್ತೆಯಾಗಿರುವ ದೇವಿಯ ವಿಗ್ರಹಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದಕ್ಕಾಗಿ ಆಕೆ ಆಯ್ದುಕೊಂಡ ಮಾರ್ಗದ ಬಗ್ಗೆ ತೀವ್ರ ಅನುಮಾನ, ನಿಗೂಢ ಪ್ರಶ್ನೆಗಳು ಎದ್ದಿರುವುದರಿಂದ ಪೊಲೀಸರು ಆಕೆಯ ಮಾನಸಿಕ ಸ್ಥಿತಿ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ
ದೇವಸ್ಥಾನದೊಳಗೆ ಬೆತ್ತಲೆಯಾಗಿ ಹೋಗಿ ಕೆರೆಗೆ ಜಿಗಿದ ಯುವತಿ:
ಪೊಲೀಸ್ ತನಿಖೆಯ ಪ್ರಕಾರ, ತೇಜಸ್ವಿನಿ ತನ್ನ ಬಟ್ಟೆಗಳನ್ನೆಲ್ಲ ಮನೆಯಲ್ಲಿಯೇ ಬಿಚ್ಚಿಟ್ಟು ನಗ್ನ ಸ್ಥಿತಿಯಲ್ಲಿ ಸಮೀಪದ ದೇವಸ್ಥಾನಕ್ಕೆ ನುಗ್ಗಿದ್ದಾರೆ. ಅಲ್ಲಿ ಪೂಜಿಸಲ್ಪಡುತ್ತಿದ್ದ ಅಮ್ಮಾವರ ವಿಗ್ರಹವನ್ನು ಕೈಗೆತ್ತಿಕೊಂಡು ನೇರವಾಗಿ ಹತ್ತಿರದ ಕೆರೆಯತ್ತ ಹೆಜ್ಜೆ ಹಾಕಿದ್ದಾರೆ. ನಂತರ ಆ ವಿಗ್ರಹದೊಂದಿಗೇ ಕೆರೆಯ ನೀರಿಗೆ ಜಿಗಿದಿದ್ದಾರೆ. ಪೊಲೀಸರು ಆಕೆಯ ಮೃತದೇಹವನ್ನು ಹೊರತೆಗೆದಿದ್ದಾರೆಯಾದರೂ, ಆಕೆ ಹಿಡಿದುಕೊಂಡಿದ್ದ ದೇವಿಯ ವಿಗ್ರಹ ಇನ್ನು ಪತ್ತೆಯಾಗಿಲ್ಲ. ಆಕೆ ದೇವಸ್ಥಾನದೊಳಗೆ ಬಂದಿರುವ, ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕೆರೆಯಲ್ಲಿ ವಿಗ್ರಹಕ್ಕಾಗಿ ತೀವ್ರ ಶೋಧ ಕಾರ್ಯ:
ವಿಪತ್ತು ನಿರ್ವಹಣಾ ಪಡೆ (DRF) ಸಿಬ್ಬಂದಿ ದೋಣಿಗಳು ಹಾಗೂ ಅತ್ಯಾಧುನಿಕ ಉಪಕರಣಗಳೊಂದಿಗೆ ಕೆರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತನಿಖೆಯ ದೃಷ್ಟಿಯಿಂದ ಈ ವಿಗ್ರಹ ಅತ್ಯಂತ ಪ್ರಮುಖ ಸಾಕ್ಷ್ಯವಾಗಿರುವುದರಿಂದ, ಇಡೀ ಕೆರೆಯನ್ನು ಜಾಲಾಡಲಾಗುತ್ತಿದೆ. ಪೊಲೀಸರು ತೇಜಸ್ವಿನಿಯ ತಾಯಿ ಅರುಣಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ತೇಜಸ್ವಿನಿ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್ ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಇದರೊಂದಿಗೆ ಆಕೆಯ ಆರ್ಥಿಕ ವಹಿವಾಟುಗಳು ಮತ್ತು ಮೊಬೈಲ್ ಕರೆಗಳ ವಿವರಗಳನ್ನು ಕಲೆಹಾಕಲಾಗುತ್ತಿದೆ.
ಅಂದಹಾಗೆ, ತೇಜಸ್ವಿನಿ ಬಾಡಿಗೆಗೆ ಇದ್ದ ಫ್ಲ್ಯಾಟ್‌ಗೆ ದಿನಕ್ಕೆ ಸುಮಾರು 3,500 ರೂ. ಬಾಡಿಗೆ ಪಾವತಿಸುತ್ತಿದ್ದರು. ಅಂದರೆ ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರು. ಆಕೆ ಇದ್ದ ಕಟ್ಟಡದ ಮೇಲಿನ ಎರಡು ಮಹಡಿಗಳನ್ನು ಲಾಡ್ಜ್ ಮಾದರಿಯಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿತ್ತು. ಈ ಕಟ್ಟಡದ ಮಾಲೀಕರಿಗೂ ಅಥವಾ ಅಲ್ಲಿ ತಂಗಿದ್ದವರಿಗೂ ಈ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:46 am, Sun, 19 July 26




