AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಸೋತಿಲ್ಲ, ರಾಜೀನಾಮೆ ನೀಡೋ ಮಾತೇ ಇಲ್ಲ; ಹೊಸ ಬಾಂಬ್ ಸಿಡಿಸಿದ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಧೂಳೀಪಟವಾಗಿದ್ದು, ಬಿಜೆಪಿ ದಿಗ್ವಿಜಯ ಸಾಧಿಸಿದೆ. ಆದರೂ ಎದೆಗುಂದದ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಕದ್ದಿದೆ. ನಾವು ಚುನಾವಣೆಯಲ್ಲಿ ಸೋತಿಲ್ಲ, ಹಾಗಾಗಿ ರಾಜೀನಾಮೆ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೊಸ ವರಸೆ ತೆಗೆದಿದ್ದಾರೆ. ಇದರಿಂದಾಗಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ನಾವು ಸೋತಿಲ್ಲ, ರಾಜೀನಾಮೆ ನೀಡೋ ಮಾತೇ ಇಲ್ಲ; ಹೊಸ ಬಾಂಬ್ ಸಿಡಿಸಿದ ಸಿಎಂ ಮಮತಾ ಬ್ಯಾನರ್ಜಿ
Mamata Banjerjee Press MeetImage Credit source: PTI
ಸುಷ್ಮಾ ಚಕ್ರೆ
|

Updated on:May 05, 2026 | 5:13 PM

Share

ಕೊಲ್ಕತ್ತಾ, ಮೇ 5: ಯಾವುದೇ ರಾಜ್ಯದಲ್ಲೇ ಆದರೂ ಚುನಾವಣೆ ನಡೆದು ಫಲಿತಾಂಶ ಪ್ರಕಟವಾದ ನಂತರ ಆ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಆದರೆ, ಪಶ್ಚಿಮ ಬಂಗಾಳದಲ್ಲಿ (West Bengal Election Results) ಟಿಎಂಸಿ ಹೀನಾಯವಾಗಿ ಸೋಲನ್ನು ಅನುಭವಿಸಿ ಬಿಜೆಪಿ ಭಾರೀ ಬಹುಮತದ ಗೆಲುವು ಸಾಧಿಸಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ಬ್ಯಾನರ್ಜಿ (Mamata Banerjee Resign) ಒಪ್ಪುತ್ತಿಲ್ಲ! ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

“ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಅನ್ಯಾಯವಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ ಈಗ ರಾಜಭವನಕ್ಕೆ ಹೋಗುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ನಾವು ಚುನಾವಣೆಯಲ್ಲಿ ಸೋತಿಲ್ಲ. ಮರು ಮತ ಎಣಿಕೆ ನಡೆಯಬೇಕು. ಅಲ್ಲಿಯವರೆಗೂ ನಾನೂ ರಾಜೀನಾಮೆ ನೀಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸೋಮವಾರ ಅತ್ಯಂತ ಮಹತ್ವದ ಚುನಾವಣಾ ಫಲಿತಾಂಶಗಳನ್ನು ಘೋಷಿಸಲಾಯಿತು. ಬಂಗಾಳದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗಳಿಸಿ, ಮೂರನೇ ಎರಡರಷ್ಟು ಸ್ಥಾನವನ್ನು ಮೀರಿದೆ. ಬಿಜೆಪಿಯ ಅದ್ಭುತ ಪ್ರದರ್ಶನವು ಟಿಎಂಸಿಯ 15 ವರ್ಷಗಳ ಅಧಿಕಾರಾವಧಿಯನ್ನು ಕೊನೆಗೊಳಿಸಿದೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 148. ಬಿಜೆಪಿಗೆ ಭಾರೀ ಬಹುಮತ ಲಭಿಸಿದ್ದು, ಸರ್ಕಾರ ರಚಿಸಲು ಸಜ್ಜಾಗಿದೆ. ಆದರೆ, ಅದಕ್ಕೆ ಮಮತಾ ಬ್ಯಾನರ್ಜಿ ಅವಕಾಶ ನೀಡುತ್ತಿಲ್ಲ. ಏಕೆಂದರೆ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿಲ್ಲ. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಚುನಾವಣೆ ನಿಷ್ಪಕ್ಷಪಾತವಾಗಿ ನಡೆದಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ” ಎಂದಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಗೆಲುವಿನಿಂದ ದುರ್ಗಾ ದೇವಸ್ಥಾನಕ್ಕೂ ಸಿಕ್ಕಿತು ಮುಕ್ತಿ!

“ನಾನು ಇನ್ನು ಮುಂದೆ ಬಿಜೆಪಿಯ ದೌರ್ಜನ್ಯಗಳನ್ನು ಸಹಿಸುವುದಿಲ್ಲ. ನಾನು ಬೀದಿಗಿಳಿದಿದ್ದೆ, ಬೀದಿಗಿಳಿಯುತ್ತೇನೆ. ನೈತಿಕವಾಗಿ ನಾವು ಚುನಾವಣೆಯನ್ನು ಗೆದ್ದಿದ್ದೇವೆ. ಹೀಗಾಗಿ ರಾಜೀನಾಮೆ ಕೊಡುವುದಿಲ್ಲ” ಎಂದು ಮಮತಾ ಶಪಥ ಮಾಡಿದ್ದಾರೆ.

ಚುನಾವಣಾ ಆಯೋಗದ ಕೆಲಸದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಹಸ್ತಕ್ಷೇಪದ ಬಗ್ಗೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. “ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಲೂಟಿ ಮಾಡಲು ಮತ್ತು ಇವಿಎಂ ಅನ್ನು ಲೂಟಿ ಮಾಡಲು ಚುನಾವಣಾ ಆಯೋಗ ಈ ಚುನಾವಣೆಯಲ್ಲಿ ವಿಲನ್ ಆಗಿದೆ. ಮತದಾನದ ನಂತರ ಇವಿಎಂ ಹೇಗೆ 80-90% ಚಾರ್ಜ್ ಆಗಿದೆ ಎಂದು ಯಾರಾದರೂ ನನಗೆ ತಿಳಿಸುತ್ತೀರಾ? ಅದು ಹೇಗೆ ಸಾಧ್ಯ? ಬಿಜೆಪಿ ನೇರವಾಗಿ ಚುನಾವಣಾ ಆಯೋಗದೊಂದಿಗೆ ಆಟವಾಡಿತು. ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವಿನ ಬೆಟ್ಟಿಂಗ್. ಈ ಚುನಾವಣಾ ಅಕ್ರಮದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರೂ ಭಾಗಿಯಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಈ ರೀತಿಯ ಚುನಾವಣೆಯನ್ನು ನೋಡಿಲ್ಲ.” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇದನ್ನೂ ಓದಿ: West Bengal Election 2026 Result: ಬಂಗಾಳದ ಭವಾನಿಪುರದಲ್ಲಿ ಸುವೇಂದು ಅಧಿಕಾರಿ ಎದುರು ಸಿಎಂ ಮಮತಾ ಬ್ಯಾನರ್ಜಿ ಹೀನಾಯ ಸೋಲು

“ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ, ಚುನಾವಣಾ ಆಯೋಗದ ವಿರುದ್ಧವಾಗಿತ್ತು. ಚುನಾವಣಾ ಆಯೋಗ ಈ ಚುನಾವಣೆಯಲ್ಲಿ ಖಳನಾಯಕನಂತೆ ವರ್ತಿಸಿತು. ನಾವು ಮತ್ತೆ ಪುಟಿದೆದ್ದಿದ್ದೇವೆ. ನಾವು 5 ಸಂಸದರ ಸತ್ಯಶೋಧನಾ ಸಮಿತಿಯನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಹಿಂಸಾಚಾರ ನಡೆದ ಪ್ರದೇಶಗಳಿಗೆ ಅವರು ಭೇಟಿ ನೀಡುತ್ತಾರೆ. ಆಗ ಸತ್ಯ ಹೊರಬೀಳಲಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Tue, 5 May 26

Follow Us