ಸೆಶೆಲ್ಸ್ ಸಂಸತ್ನಲ್ಲಿ ಭಾಷಣ ಮಾಡಿ ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ; ಸಮೋಸಾ, ದೀಪಾವಳಿ, ಗರ್ಭಾ ನೃತ್ಯದ ಮೆಲುಕು
ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಸೆಶೆಲ್ಸ್ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಮ್ಮೆಯೊಂದಿಗೆ ನಿಮ್ಮ ಮುಂದೆ ನಿಂತಿರುವುದು ನನಗೆ ಸಿಕ್ಕ ಅತಿದೊಡ್ಡ ಗೌರವವಾಗಿದೆ. ನಾನು ನಿಮ್ಮೊಂದಿಗೆ ಭಾರತದ 140 ಕೋಟಿ ಜನರ ಆತ್ಮೀಯ ಶುಭಾಶಯಗಳನ್ನು ಹೊತ್ತು ತಂದಿದ್ದೇನೆ. ನಿಮ್ಮ ಸ್ವಾತಂತ್ರ್ಯದ 50 ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಿಮ್ಮೊಂದಿಗೆ ಸೇರಲು ನನಗೆ ಸಂತೋಷವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಕ್ಟೋರಿಯಾ, ಜೂನ್ 28: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಸೆಶೆಲ್ಸ್‌ನ ರಾಜಧಾನಿ ವಿಕ್ಟೋರಿಯಾದಲ್ಲಿ ಆ ದ್ವೀಪ ರಾಷ್ಟ್ರದ ಸಂಸತ್ತನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಮೂಲಕ ಅವರು ಸೆಶೆಲ್ಸ್ ಪಾರ್ಲಿಮೆಂಟ್ನಲ್ಲಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಸಮೋಸಾ, ದೀಪಾವಳಿ ಆಚರಣೆ ಮತ್ತು ನವರಾತ್ರಿಯ ಸಂದರ್ಭದಲ್ಲಿ ಆಡಲಾಗುವ ಗರ್ಭಾ ನೃತ್ಯವನ್ನು ಉಲ್ಲೇಖಿಸಿದರು.
ಸೆಶೆಲ್ಸ್ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಮೋದಿ, 250 ವರ್ಷಗಳಿಗಿಂತಲೂ ಹಿಂದೆ ಈ ದ್ವೀಪಕ್ಕೆ ಆಗಮಿಸಿದ ಮೊದಲ ಭಾರತೀಯರನ್ನು ನೆನಪಿಸಿಕೊಂಡರು. ಅವರ ಕತೆಗಳು ಇಂದು ಹಿಂದೂ ಮಹಾಸಾಗರದ ಈ ರಾಷ್ಟ್ರದ ಆಧುನಿಕ ಇತಿಹಾಸದ ಭಾಗವಾಗಿವೆ ಎಂದು ಹೇಳಿದರು.
ಇದನ್ನೂ ಓದಿ: ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ; ಜೂನ್ 27ರಿಂದ ದ್ವೀಪ ರಾಷ್ಟ್ರಕ್ಕೆ ಪ್ರವಾಸ
“ನಮ್ಮ ಸ್ನೇಹವು 50 ವರ್ಷಗಳ ಹಿಂದೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯೊಂದಿಗೆ ಪ್ರಾರಂಭವಾಗಲಿಲ್ಲ. ಇದು ಅದಕ್ಕಿಂತ ಮುಂಚೆಯೇ ಆಗಸ್ಟ್ 1770ರಲ್ಲಿ ಪ್ರಾರಂಭವಾಯಿತು. ‘ಥೆಲೆಮಾಕ್’ ಹಡಗಿನ ಮೂಲಕ ಸೇಂಟ್ ಆನೆ ದ್ವೀಪಕ್ಕೆ ಬಂದಿಳಿದವರಲ್ಲಿ 5 ಮಂದಿ ಭಾರತೀಯರಿದ್ದರು. ಆ ಪ್ರಯಾಣವು ಮುಂದೆ ಬಂದ ಅನೇಕರಿಗೆ ದಾರಿ ತೋರಿಸಿತು. ಕಾಲಾನಂತರದಲ್ಲಿ, ಅವರ ಕತೆಗಳು ಆಧುನಿಕ ಸೆಶೆಲ್ಸ್‌ನ ಇತಿಹಾಸದ ಭಾಗವಾದವು. ನಮ್ಮ ನಡುವಿನ ಬಾಂಧವ್ಯವನ್ನು ಸರ್ಕಾರಗಳು ಸೃಷ್ಟಿಸಿಲ್ಲ ಎಂಬುದನ್ನು ಇದು ನೆನಪಿಸುತ್ತದೆ. ಇದನ್ನು ಜನರು ನಿರ್ಮಿಸಿದ್ದಾರೆ, ಕುಟುಂಬಗಳು ಪೋಷಿಸಿವೆ ಮತ್ತು ತಲೆಮಾರುಗಳು ಉಳಿಸಿಕೊಂಡು ಬಂದಿವೆ. ಹಿಂದೂ ಮಹಾಸಾಗರ ಇದನ್ನು ಸಾಧ್ಯವಾಗಿಸಿದೆ” ಎಂದು ಅವರು ಸೆಶೆಲ್ಸ್ ಸಂಸತ್ತಿನ ಸದಸ್ಯರಿಗೆ ಪ್ರಧಾನಿ ಮೋದಿ ತಿಳಿಸಿದರು.
𝐇𝐢𝐬𝐭𝐨𝐫𝐢𝐜 𝐦𝐢𝐥𝐞𝐬𝐭𝐨𝐧𝐞 𝐢𝐧 𝐭𝐡𝐞 𝐈𝐧𝐝𝐢𝐚𝐧 𝐎𝐜𝐞𝐚𝐧! 🇮🇳🫱🏻🫲🏼🇸🇨
PM Modi becomes the first Indian PM to address the Extraordinary Sitting of Seychelles’ National Assembly, celebrating 50 years of their Independence.
In a powerful address rooted in friendship, he… pic.twitter.com/bH8YDkkx0f
— BJP Delhi (@BJP4Delhi) June 28, 2026
“ಭಾರತವು ಯಾವಾಗಲೂ ನಿಮ್ಮ ನಂಬಿಕಸ್ಥ ಪಾಲುದಾರನಾಗಿ ಉಳಿಯಲಿದೆ. ನಾವು ನಿಮ್ಮ ಸಾಧನೆಗಳನ್ನು ಸಂಭ್ರಮಿಸುತ್ತೇವೆ. ನಿಮ್ಮ ಆಕಾಂಕ್ಷೆಗಳಿಗೆ ಬೆಂಬಲ ನೀಡುತ್ತೇವೆ ಮತ್ತು ನಿಮ್ಮ ಜೊತೆಗೆ ಸ್ನೇಹಿತರಾಗಿ ಸದಾ ನಿಲ್ಲುತ್ತೇವೆ” ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್‌ನ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ
ಪ್ರಧಾನಿ ನರೇಂದ್ರ ಮೋದಿ ವಿದೇಶಿ ಸಂಸತ್ತನ್ನುದ್ದೇಶಿಸಿ ಮಾಡಿದ 20ನೇ ಭಾಷಣ ಇದಾಗಿದೆ. 2014ರಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಅವರು ಭೂತಾನ್, ನೇಪಾಳ, ಆಸ್ಟ್ರೇಲಿಯಾ ಮತ್ತು ಫಿಜಿ ಸಂಸತ್ತುಗಳನ್ನುದ್ದೇಶಿಸಿ ಮಾತನಾಡಿದ್ದರು.
2015: ಮಾರಿಷಸ್‌ನ ರಾಷ್ಟ್ರೀಯ ಅಸೆಂಬ್ಲಿ, ಶ್ರೀಲಂಕಾ, ಮಂಗೋಲಿಯಾ, ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) ಮತ್ತು ಅಫ್ಘಾನಿಸ್ತಾನದ ಸಂಸತ್ತುಗಳನ್ನುದ್ದೇಶಿಸಿ ಭಾಷಣ ಮಾಡಿದ್ದರು.
2016 ಮತ್ತು 2023: 2016ರಲ್ಲಿ ಮೊದಲ ಬಾರಿಗೆ ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಮಾತನಾಡಿದ್ದ ಅವರು, 2023 ರಲ್ಲಿ ಎರಡನೇ ಬಾರಿಗೆ ಭಾಷಣ ಮಾಡಿದರು. ಈ ಮೂಲಕ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಎರಡು ಬಾರಿ ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ಎಂಬ ಇತಿಹಾಸ ನಿರ್ಮಿಸಿದರು.
2018-2024: ಉಗಾಂಡಾ (2018), ಮಾಲ್ಡೀವ್ಸ್ (2019) ಮತ್ತು ಗಯಾನಾ (2024) ಸಂಸತ್ತುಗಳನ್ನುದ್ದೇಶಿಸಿ ಮಾತನಾಡಿದ್ದರು.
2025: 2025ರಲ್ಲಿ ಪ್ರಧಾನಿ ಮೋದಿ ಜುಲೈನಲ್ಲಿ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೋ, ಹಾಗೂ ನಮೀಬಿಯಾದ ರಾಷ್ಟ್ರೀಯ ಸಂಸತ್ತುಗಳನ್ನುದ್ದೇಶಿಸಿ ಮಾತನಾಡಿದರು. ನಂತರ ಡಿಸೆಂಬರ್‌ನಲ್ಲಿ ಇಥಿಯೋಪಿಯನ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಆಫ್ರಿಕಾ ಮತ್ತು ಗ್ಲೋಬಲ್ ಸೌತ್ ದೇಶಗಳೊಂದಿಗೆ ಭಾರತದ ಗಾಢವಾದ ಬಾಂಧವ್ಯವನ್ನು ಪುನರುಚ್ಚರಿಸಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




