ಬಾಂಗ್ಲಾದೇಶದಲ್ಲಿ ಭದ್ರತಾ ಬಿಕ್ಕಟ್ಟು; ಢಾಕಾದಲ್ಲಿರುವ ವೀಸಾ ಅರ್ಜಿ ಕೇಂದ್ರ ಮುಚ್ಚಿದ ಭಾರತ
ಭದ್ರತಾ ಪರಿಸ್ಥಿತಿಯಿಂದಾಗಿ ಬಾಂಗ್ಲಾದೇಶದ ಢಾಕಾದಲ್ಲಿರುವ ವೀಸಾ ಅರ್ಜಿ ಕೇಂದ್ರವನ್ನು ಭಾರತವು ಮುಚ್ಚಿದೆ. ಉಗ್ರಗಾಮಿ ಬೆದರಿಕೆಗಳು ಮತ್ತು ಬಾಂಗ್ಲಾದೇಶ ನಾಯಕರ ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಭದ್ರತಾ ಕಳವಳಗಳ ನಡುವೆ ಭಾರತವು ಇಂದು ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವನ್ನು ಮುಚ್ಚಿದೆ. ಬಾಂಗ್ಲಾದೇಶದ ಭಾರತೀಯ ರಾಯಭಾರ ಕಚೇರಿಯ ಎದುರು ಇಸ್ಲಾಮಿಸ್ಟ್ ಗುಂಪುಗಳು ದಾಳಿ ಮಾಡಲು ಪ್ರಯತ್ನಿಸಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಬಾಂಗ್ಲಾದೇಶದ ರಾಯಭಾರ ಕಚೇರಿಗೆ ಸಮನ್ಸ್ ಜಾರಿ ಮಾಡಿತ್ತು.

ನವದೆಹಲಿ, ಡಿಸೆಂಬರ್ 17: ಭಾರತೀಯ ವೀಸಾ ಸೇವೆಗಳಿಗಾಗಿ ಬಾಂಗ್ಲಾದೇಶದ (Bangladesh) ಢಾಕಾದ ಜಮುನಾ ಫ್ಯೂಚರ್ ಪಾರ್ಕ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವು ಅಲ್ಲಿನ ಭದ್ರತಾ ಪರಿಸ್ಥಿತಿಯನ್ನು ಉಲ್ಲೇಖಿಸಿ ಇಂದು ಮಧ್ಯಾಹ್ನ 2 ಗಂಟೆಗೆ ವೀಸಾ ಅರ್ಜಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಇಂದು ವೀಸಾ ಸಲ್ಲಿಕೆಗೆ ನಿಗದಿಪಡಿಸಲಾದ ನೇಮಕಾತಿ ಸ್ಲಾಟ್‌ಗಳನ್ನು ಹೊಂದಿರುವ ಎಲ್ಲಾ ಅರ್ಜಿದಾರರನ್ನು ನಂತರದ ದಿನಾಂಕಕ್ಕೆ ಮರು ನಿಗದಿಪಡಿಸಲಾಗುವುದು ಎಂದು ವೀಸಾ ಅರ್ಜಿ ಕೇಂದ್ರ ತಿಳಿಸಿದೆ.
ಇದಕ್ಕೂ ಮುನ್ನ, ನವದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯ (MEA) ಭಾರತಕ್ಕೆ ಬಾಂಗ್ಲಾದೇಶದ ಹೈಕಮಿಷನರ್ ಎಂ. ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿ ಬಾಂಗ್ಲಾದೇಶದಲ್ಲಿ ಹದಗೆಡುತ್ತಿರುವ ಭದ್ರತಾ ವಾತಾವರಣದ ಬಗ್ಗೆ ಭಾರತದ ಬಲವಾದ ಕಳವಳವನ್ನು ತಿಳಿಸಿತು. ಢಾಕಾದಲ್ಲಿರುವ ಭಾರತೀಯ ಮಿಷನ್ ಸುತ್ತಲೂ ಭದ್ರತಾ ಪರಿಸ್ಥಿತಿಯನ್ನು ಸೃಷ್ಟಿಸುವ ಯೋಜನೆಯನ್ನು ಘೋಷಿಸಿದ್ದ ಕೆಲವು ಉಗ್ರಗಾಮಿ ಅಂಶಗಳ ಚಟುವಟಿಕೆಗಳ ಬಗ್ಗೆ ರಾಯಭಾರಿಯ ಗಮನ ಸೆಳೆಯಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆದರಿಕೆ; ಭಾರತದಿಂದ ಬಾಂಗ್ಲಾದೇಶ ಹೈಕಮಿಷನರ್‌ಗೆ ಸಮನ್ಸ್ ಜಾರಿ
ಢಾಕಾದ ಸೆಂಟ್ರಲ್ ಶಹೀದ್ ಮಿನಾರ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹಸ್ನತ್ ಅಬ್ದುಲ್ಲಾ, ಬಾಂಗ್ಲಾದೇಶವು ಪ್ರತ್ಯೇಕತಾವಾದಿ ಗುಂಪುಗಳು ಸೇರಿದಂತೆ ಭಾರತಕ್ಕೆ ಆತಂಕ ತಂದೊಡ್ಡುವ ಪಡೆಗಳಿಗೆ ಆಶ್ರಯ ನೀಡಬಹುದು. ಭಾರತದ “7 ಸಿಸ್ಟರ್ಸ್” ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳನ್ನು ಭಾರತದಿಂದ ಕಡಿತಗೊಳಿಸಲು ಸಹಾಯ ಮಾಡಬಹುದು ಎಂದು ಎಚ್ಚರಿಸಿದ್ದರು.
“ನಾವು ಪ್ರತ್ಯೇಕತಾವಾದಿ ಮತ್ತು ಭಾರತ ವಿರೋಧಿ ಪಡೆಗಳಿಗೆ ಆಶ್ರಯ ನೀಡುತ್ತೇವೆ. ನಂತರ ನಾವು 7 ಸಹೋದರಿ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುತ್ತೇವೆ” ಎಂದು ಹಸ್ನತ್ ಅಬ್ದುಲ್ಲಾ ಹೇಳಿದ್ದರು. “ಬಾಂಗ್ಲಾದೇಶದ ಸಾರ್ವಭೌಮತ್ವ, ಸಾಮರ್ಥ್ಯ, ಮತದಾನದ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ಗೌರವಿಸದ ಶಕ್ತಿಗಳಿಗೆ ಭಾರತ ಆಶ್ರಯ ನೀಡಿದರೆ, ಬಾಂಗ್ಲಾದೇಶ ಕೂಡ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ನಾನು ಭಾರತಕ್ಕೆ ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




