India vs Pak: ಯಾರ ಬಲ ಹೆಚ್ಚು? ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಶಕ್ತಿಗಳ ಒಂದು ಹೋಲಿಕೆ
India vs Pakistan Military Power: ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಶಕ್ತಿಯನ್ನು ಇಲ್ಲಿ ವಿವರವಾಗಿ ಹೋಲಿಸಲಾಗಿದೆ. ಭಾರತವು ಪಾಕಿಸ್ತಾನಕ್ಕಿಂತ ಸಂಖ್ಯಾಬಲದಲ್ಲಿ ಹೆಚ್ಚು ಬಲಿಷ್ಠವಾಗಿದ್ದರೂ, ಪಾಕಿಸ್ತಾನವು ಚೀನಾದಿಂದ ಶಸ್ತ್ರಾಸ್ತ್ರ ಪಡೆಯುತ್ತಿದೆ. ನೆಲ, ವಾಯು ಮತ್ತು ನೌಕಾಪಡೆಗಳ ಸಾಮರ್ಥ್ಯದಲ್ಲಿ ಭಾರತ ಸ್ಪಷ್ಟ ಮೇಲುಗೈ ಹೊಂದಿದೆ, ಆದರೆ ಪರಮಾಣು ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಎರಡೂ ದೇಶಗಳು ಸರಿಸಮಾನವಾಗಿವೆ. ಯುದ್ಧವು ಎರಡೂ ದೇಶಗಳಿಗೂ ಭಾರಿ ಹಾನಿಯನ್ನುಂಟುಮಾಡಬಹುದು.

ನವದೆಹಲಿ, ಏಪ್ರಿಲ್ 24: ಪಹಲ್ಗಾಮ್ ಉಗ್ರದಾಳಿ ಘಟನೆಯನ್ನು ಭಾರತ ಗಂಭೀರವಾಗಿ ತೆಗೆದುಕೊಂಡಿದೆ. ಪುಲ್ವಾಮ ದಾಳಿ ಬಳಿಕ ಭಾರತ ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರತ್ಯುತ್ತರ ಕೊಟ್ಟಿತ್ತು. ಈಗ ಮತ್ತಷ್ಟು ಉಗ್ರ ರೀತಿಯಲ್ಲಿ ಉತ್ತರ ಕೊಡುವ ಸಾಧ್ಯತೆ ಇದೆ. ಪಾಕಿಸ್ತಾನ ಕೂಡ ಇದೇ ನಿರೀಕ್ಷೆಯಲ್ಲಿ, ಕಟ್ಟೆಚ್ಚರದೊಂದಿಗೆ ಸೇನೆಯನ್ನು ಸಜ್ಜುಗೊಳಿಸುತ್ತಿದೆ. ಒಂದು ವೇಳೆ, ಭಾರತವು ಸರ್ಜಿಕಲ್ ಸ್ಟ್ರೈಕ್ಗಿಂತ ಒಂದು ಹೆಜ್ಜೆ ಮುಂದೆ ಹೋಗಲು ಯತ್ನಿಸಿದರೆ, ಪಾಕಿಸ್ತಾನದ ವತಿಯಿಂದಲೂ ಪ್ರತಿಕ್ರಿಯೆ ಬರುತ್ತದೆ. ಇದು ಎರಡು ದೇಶಗಳ ನಡುವೆ ಪೂರ್ಣಪ್ರಮಾಣದ ಯುದ್ಧ (India Pakistan full fledged war) ಸಂಭವಿಸಿದರೂ ಅಚ್ಚರಿ ಇಲ್ಲ. ಯುದ್ಧವಾದರೆ ಪಾಕಿಸ್ತಾನವನ್ನು ಭಾರತ ಸುಲಭವಾಗಿ ಸೋಲಿಸಬಹುದು ಎಂದು ಹೇಳಲಾಗದು. ಪಾಕಿಸ್ತಾನದ ಸೇನಾ ಬಲ ಹೇಗಿದೆ? ಇಲ್ಲಿದೆ ಒಂದಷ್ಟು ಹೋಲಿಕೆ…
ಪಾಕಿಸ್ತಾನದ ಮಿಲಿಟರಿ ಬಲ ಎಷ್ಟಿದೆ..?
ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಗಳ ಪಟ್ಟಿ ತೆಗೆದುಕೊಂಡರೆ ಅಮೆರಿಕ ಮೊದಲು ಬರುತ್ತದೆ. ಚೀನಾ, ರಷ್ಯಾ ಬಳಿಕ 4ನೇ ಸ್ಥಾನದಲ್ಲಿ ಭಾರತ ಇದೆ. ಈ ಸಾಲಿನಲ್ಲಿ ಪಾಕಿಸ್ತಾನ 9ನೇ ಸ್ಥಾನದಲ್ಲಿದೆ. ವಿಶ್ವದ 9ನೇ ಶಕ್ತಿಶಾಲಿ ಮಿಲಿಟರಿ ರಾಷ್ಟ್ರವಾಗಿದೆ ಪಾಕಿಸ್ತಾನ. ಹೀಗಾಗಿ, ಪಾಕಿಸ್ತಾನವನ್ನು ಸುಲಭವಾಗಿ ಮಣಿಸುವುದು ಭಾರತಕ್ಕೆ ತುಸು ಕಷ್ಟವಾಗುತ್ತದೆ.
ಭಾರತದ ಸೈನಿಕರ ಸಂಖ್ಯಾಬಲ
ಭಾರತದಲ್ಲಿ ಕರ್ತವ್ಯನಿರತ ಸೈನಿಕರ ಸಂಖ್ಯೆ 14.80 ಲಕ್ಷ ಇದೆ. ಇದರಲ್ಲಿ ಸೇನಾ ಪಡೆಯಲ್ಲಿ 12.30 ಲಕ್ಷ ಸೈನಿಕರಿದ್ದಾರೆ. ವಾಯುಪಡೆಯಲ್ಲಿ 1,39,576 ಮಂದಿ, ಹಾಗೂ ನೌಕಾಪಡೆಯಲ್ಲಿ 67,228 ಮಂದಿ ಸೈನಿಕರು ಇದ್ದಾರೆ. ಇದರ ಜೊತೆಗೆ, ಮೀಸಲು ಪಡೆಯಲ್ಲಿ 11.5 ಲಕ್ಷ ಹಾಗೂ ಅರೆಮಿಲಿಟರಿ ಪಡೆಗಳಲ್ಲಿ 13 ಲಕ್ಷ ಯೋಧರಿದ್ದಾರೆ. ಸುಮಾರು 40 ಲಕ್ಷ ಸಮೀಪದಷ್ಟು ಯೋಧರು ದೇಶಕ್ಕಾಗಿ ಹೋರಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿಯನ್ನು ಕೇಕ್ ತಿಂದು ಸಂಭ್ರಮಿಸಿತೇ ಭಾರತದಲ್ಲಿರುವ ಪಾಕ್ ಹೈಕಮಿಷನ್?
ಪಾಕಿಸ್ತಾನದ ಸೈನಿಕರ ಬಲ ಹೀಗಿದೆ…
ಭಾರತದ 40 ಲಕ್ಷ ಸೈನಿಕರ ಸಂಖ್ಯೆಗೆ ಪ್ರತಿಯಾಗಿ ಪಾಕಿಸ್ತಾನದ ಬಳಿ ಸಕ್ರಿಯ ಸೈನಿಕರು ಮತ್ತು ಮೀಸಲು ಸೇರಿ ಒಟ್ಟು 12 ಲಕ್ಷ ಯೋಧರು ಲಭ್ಯರಿದ್ದಾರೆ.
ಪಾಕಿಸ್ತಾನಕ್ಕೆ ಚೀನಾದ ಬಲ
ಭಾರತಕ್ಕೆ ಹೋಲಿಸಿದರೆ, ಪಾಕಿಸ್ತಾನದ ಡಿಫೆನ್ಸ್ ಬಜೆಟ್ ಬಹಳ ಕಡಿಮೆ. ಆದರೆ, ಹಲವು ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಭಾರತಕ್ಕೆ ಸಮೀಪದಷ್ಟು ಸಂಖ್ಯೆಯಲ್ಲಿ ಶಸ್ತ್ರಾಸ್ತ್ರ ಹೊಂದಿದೆ. ಯುದ್ಧದಲ್ಲಿ ಬಹಳ ಮಹತ್ವದ್ದಾಗಿರುವ ಏರ್ಕ್ರಾಫ್ಟ್, ಮಿಸೈಲ್, ಡ್ರೋನ್ಗಳನ್ನು ಪಾಕಿಸ್ತಾನಕ್ಕೆ ಚೀನಾ ಸರಬರಾಜು ಮಾಡುತ್ತದೆ. ಕೆಲವು ಶಸ್ತ್ರಾಸ್ತ್ರಗಳು ಚೀನಾ ಸಹಯೋಗದಲ್ಲಿ ಪಾಕಿಸ್ತಾನದಲ್ಲೂ ತಯಾರಾಗುತ್ತಿರುವುದುಂಟು. ಹೀಗಾಗಿ, ಕಡಿಮೆ ಬಜೆಟ್ನಲ್ಲೂ ಪಾಕಿಸ್ತಾನ ಸಾಕಷ್ಟು ಯುದ್ಧಾಸ್ತ್ರಗಳನ್ನು ಸಜ್ಜುಗೊಳಿಸಿದೆ.
ಭಾರತ ಪಾಕಿಸ್ತಾನದ ನೆಲದ ಮೇಲಿನ ಯುದ್ಧ ಸಾಮರ್ಥ್ಯ
ಲ್ಯಾಂಡ್ ವಾರ್ಫೇರ್ ಅಥವಾ ನೆಲದಲ್ಲಿನ ಯುದ್ಧದಲ್ಲಿ ಬ್ಯಾಟಲ್ ಟ್ಯಾಂಕ್ಗಳ ಪಾತ್ರ ಮಹತ್ವದ್ದಿದೆ. ಭಾರತದ ಬಳಿ 3,500 ಟ್ಯಾಂಕ್ಗಳಿವೆ. ಪಾಕಿಸ್ತಾನದ ಬಳಿ 2,500 ಸಮೀಪದಷ್ಟು ಟ್ಯಾಂಕ್ಗಳಿವೆ. ಭಾರತದ ಟಿ-90 ಭೀಷ್ಮಾ ಟ್ಯಾಂಕ್ಗಳು ಪಾಕಿಸ್ತಾನದಲ್ಲಿರುವುದಕ್ಕಿಂತ ಒಂದು ಸ್ತರ ಮೇಲಿನದ್ದಾಗಿದೆ.
ನೆಲದಲ್ಲಿ ನಿಂತ ಎದುರಾಳಿಗಳ ಮೇಲೆ ದಾಳಿ ಮಾಡಲು ಬ್ಯಾಟಲ್ ಟ್ಯಾಂಕ್ ಜೊತೆಗೆ ಆರ್ಟಿಲರಿ ಅಥವಾ ಮದ್ದುಗುಂಡುಗಳ ಅವಶ್ಯಕತೆ ಇದೆ. ಭಾರತದ ಬಳಿ ಎಸ್-15 ಶ್ರೇಣಿಯ 155 ಎಂಎಂನ 180 ಹೋವಿಟ್ಜರ್ ಗನ್ಗಳಿವೆ. ಪಾಕಿಸ್ತಾನದ ಬಳಿ ಇದೇ ಶ್ರೇಣಿಯ ಚೀನೀ ನಿರ್ಮಿತ ಆರ್ಟಿಲರಿಗಳಿವೆ.
ಭಾರತ ಮತ್ತು ಪಾಕಿಸ್ತಾನದ ವಾಯು ಪಡೆ ಸಾಮರ್ಥ್ಯ
ಎರಡು ದೇಶಗಳ ನಡುವಿನ ಯುದ್ಧದಲ್ಲಿ ನೆಲದ ಮೇಲಿನ ಹೋರಾಟಕ್ಕಿಂತ ಪ್ರಮುಖವಾದದು ಮತ್ತು ಪರಿಣಾಮಕಾರಿಯಾದುದು ವಾಯು ಯುದ್ಧ. ಈ ವಿಚಾರದಲ್ಲಿ ಸದ್ಯದ ಮಟ್ಟಿಗೆ ಭಾರತವು ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮುಂದಿದೆ.
ಇದನ್ನೂ ಓದಿ: ಭಾರತದ ಮೇಲೆ ಪಾಕಿಸ್ತಾನ ಅವಲಂಬನೆ ಎಷ್ಟು? ಸಂಬಂಧ ಪೂರ್ತಿ ಕಡಿತವಾದರೆ ಪಾಕ್ಗೆ ಆಗೋ ನಷ್ಟವೆಷ್ಟು?
ಭಾರತದ ವಾಯುಪಡೆ ಬಳಿ 606 ಯುದ್ಧವಿಮಾನಗಳಿವೆ. ಇದರಲ್ಲಿ 272 ಸುಖೋಯ್-30 ವಿಮಾನಗಳಿವೆ. ಫ್ರಾನ್ಸ್ ನಿರ್ಮಿತ 36 ರಫೇಲ್ ಹಾಗೂ ಎಚ್ಎಎಲ್ ನಿರ್ಮಿತ 120 ತೇಜಸ್ ಏರ್ಕ್ರಾಫ್ಟ್ಗಳೂ ಇವೆ.
ಪಾಕಿಸ್ತಾನದ ಬಳಿ 387 ಫೈಟರ್ ಜೆಟ್ಸ್ ಇವೆ.ಇದರಲ್ಲಿ ಹೆಚ್ಚಿನವರು ಚೀನಾದಿಂದ ನೀಡಲಾದ ಜೆಎಫ್-17 ಯುದ್ಧವಿಮಾನಗಳಾಗಿವೆ. ಭಯೋತ್ಪಾದಕರ ವಿರುದ್ಧ ಹೋರಾಡಲು ಅಮೆರಿಕ ನೀಡಿದ ಎಫ್-16 ಜೆಟ್ಗಳೂ ಪಾಕಿಸ್ತಾನದ ಬಳಿ ಇವೆ. ಸುಖೋಯ್ಗಿಂತ ಪಾಕಿಸ್ತಾನದ ಎಫ್-16 ಹೆಚ್ಚು ಶಕ್ತಿಶಾಲಿ ಎನಿಸಿದೆ. ಆದರೆ, ಫ್ರಾನ್ಸ್ನ ರಫೇಲ್ ಯುದ್ಧವಿಮಾನದ ಮುಂದೆ ಎಫ್-16 ಕುಬ್ಜ ಎನಿಸುತ್ತದೆ.
ಅಷ್ಟೇ ಅಲ್ಲ, ಭಾರತದ ಬಳಿ ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಂ ಇದೆ. 400 ಕಿಮೀ ದೂರದವರೆಗೂ ಇದು ಪ್ರತಿರೋಧ ಸಾಮರ್ಥ್ಯ ಹೊಂದಿದೆ. ಪಾಕಿಸ್ತಾನದ ಬಳಿ ಚೀನಾದ ಎಚ್ಕ್ಯೂ-9ಬಿ ಎನ್ನುವ ಡಿಫೆನ್ಸ್ ಸಿಸ್ಟಂ ಇದ್ದು ಇದು 250 ಕಿಮೀ ಕವರೇಜ್ ಹೊಂದಿದೆ.
ಭಾರತ ಪಾಕಿಸ್ತಾನ ನೌಕಾಪಡೆ ಸಾಮರ್ಥ್ಯ
ಪಾಕಿಸ್ತಾನಕ್ಕಿಂತ ಭಾರತದ ನೌಕಾಪಡೆ ಸರ್ವವಿಧದಲ್ಲೂ ಬಲಿಷ್ಠವಾಗಿದೆ. ಭಾರತದ ನೌಕಾಪಡೆಯಲ್ಲಿ 150 ಯುದ್ಧಹಡಗುಗಳಿವೆ. ಚೀನಾವನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತದ ನೌಕಾಪಡೆ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ, ಪಾಕಿಸ್ತಾನವು ಈ ಕ್ಷೇತ್ರದಲ್ಲಿ ಭಾರತಕ್ಕೆ ಸಾಟಿಯಾಗುವುದು ಕಷ್ಟ.
ಇದನ್ನೂ ಓದಿ: ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಪಾಕಿಸ್ತಾನಕ್ಕಾಗುವ ನಷ್ಟವೇನು?
ನ್ಯೂಕ್ಲಿಯಾರ್ ವಾರ್ಹೆಡ್: ಭಾರತ-ಪಾಕ್ ಸರಿಸಮ
ಪರಮಾಣು ದಾಳಿ ಸಂದರ್ಭ ಬಂದಾಗ ವಾರ್ಹೆಡ್ಸ್ ಮುಖ್ಯ. ಭಾರತದ ಬಳಿ 172 ನ್ಯೂಕ್ಲಿಯಾರ್ ವಾರ್ಹೆಡ್ಗಳಿವೆ. ಆದರೆ, ಪಾಕಿಸ್ತಾನದ ಬಳಿ 170 ವಾರ್ಹೆಡ್ಗಳಿವೆ. ಭಾರತವು ಈ ವಾರ್ಹೆಡ್ಗಳನ್ನು ಕೊಂಡೊಯ್ಯಲು ಅಗ್ನಿ-5, ಪೃಥ್ವಿ-2 ಕ್ಷಿಪಣಿಗಳನ್ನು ಹೊಂದಿದೆ. ಆದರೆ, ಯುದ್ಧದಲ್ಲಿ ಅಣ್ವಸ್ತ್ರವನ್ನು ಯಾವುದೇ ದೇಶ ಬಳಕೆ ಮಾಡಿದರೂ ಅದು ಶತ್ರು ಸಂಹಾರದ ಜೊತೆ ಆತ್ಮಸಂಹಾರವೂ ಆದಂತೆ. ಭೂಮಿಗೂ ಸಂಚಕಾರ ತಂದಂತೆ. ಹೀಗಾಗಿ, ಪರಮಾಣ ಅಸ್ತ್ರ ಬಳಕೆ ಸಾಧ್ಯತೆ ಕಡಿಮೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ