IVF Surrogacy New Law: ಐವಿಎಫ್, ಸರೊಗಸಿ ಚಿಕಿತ್ಸಾಲಯಗಳಿಗೆ ಕೇಂದ್ರದ ಹೊಸ ನಿಯಮ: ಇನ್ಮುಂದೆ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣ ಕಡ್ಡಾಯ
ಕೇಂದ್ರ ಸರ್ಕಾರವು ಐವಿಎಫ್ ಮತ್ತು ಸರೊಗಸಿ ಚಿಕಿತ್ಸಾಲಯಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ, ಐವಿಎಫ್ ಚಿಕಿತ್ಸಾಲಯಗಳು ಪ್ರತಿ ಐದು ವರ್ಷಗಳಿಗೊಮ್ಮೆ, ಸರೊಗಸಿ ಚಿಕಿತ್ಸಾಲಯಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಪರವಾನಗಿಯನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು. ವಿಳಂಬಕ್ಕೆ ದಂಡ ವಿಧಿಸಲಾಗುತ್ತದೆ. ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಯನ್ನು ಖಚಿತಪಡಿಸುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ, ಇದು ಕ್ಷೇತ್ರದಲ್ಲಿ ಪಾರದರ್ಶಕತೆ ತರಲಿದೆ.

ನವದೆಹಲಿ, ಜುಲೈ 02: ದೇಶಾದ್ಯಂತ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಹಾಗೂ ಐವಿಎಫ್ (IVF) ಕೇಂದ್ರಗಳ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಎಲ್ಲಾ ಫಲವತ್ತತೆ ಚಿಕಿತ್ಸಾಲಯಗಳು (Fertility Clinics) ಮತ್ತು ವೀರ್ಯ ಬ್ಯಾಂಕುಗಳು (Sperm Banks) ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾಲಯಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಹೊಸ ನಿಯಮ ಜಾರಿಗೊಳಿಸಿದೆ.
ಲೈಸೆನ್ಸ್ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ART ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಂತ 1 IVF ಮತ್ತು ವೀರ್ಯ ಬ್ಯಾಂಕ್‌ಗಳು: ನವೀಕರಣ ಶುಲ್ಕ 25,000 ರೂ. ನಿಗದಿತ ಸಮಯ ಮೀರಿದರೆ 50,000 ರೂ. (ಡಬಲ್ ದಂಡ) ಪಾವತಿಸಬೇಕು.
ಹಂತ 2 IVF ಚಿಕಿತ್ಸಾಲಯಗಳು: ನವೀಕರಣ ಶುಲ್ಕ 1 ಲಕ್ಷ ರೂ. ಒಂದು ವೇಳೆ ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ಬರೋಬ್ಬರಿ 2 ಲಕ್ಷ ರೂ. ದಂಡ ತೆರಬೇಕಾಗುತ್ತದೆ.
ವಿನಾಯಿತಿ: ಈ ಎಲ್ಲಾ ನಿಯಮ ಹಾಗೂ ಶುಲ್ಕಗಳಿಂದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಮತ್ತು ಸಂಸ್ಥೆಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಗೆ ಆದ್ಯತೆ ತಜ್ಞರ ಅಭಿಪ್ರಾಯ: ನವದೆಹಲಿಯ ನರ್ಚರ್ ಕ್ಲಿನಿಕ್‌ನ ಐವಿಎಫ್ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ಅವರ ಪ್ರಕಾರ, ಸದ್ಯ ದೇಶದ ಕೇವಲ ಶೇ. 20 ರಿಂದ 25 ರಷ್ಟು ಚಿಕಿತ್ಸಾಲಯಗಳಲ್ಲಿ ಮಾತ್ರ ಅಧಿಕೃತ ತಪಾಸಣೆ ನಡೆದಿದೆ. ಈ ಹೊಸ ನಿಯಮದಿಂದಾಗಿ ಕ್ಲಿನಿಕ್‌ಗಳು ತಮ್ಮ ಸೇವೆಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಲೇಬೇಕಾಗುತ್ತದೆ ಮತ್ತು ರೋಗಿಗಳ ದಾಖಲೆಗಳನ್ನು ಉತ್ತಮವಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ.
ಮತ್ತಷ್ಟು ಓದಿ: ಕರೆಂಟ್, ನೀರು ಆಯ್ತು ಈಗ ಹಾಸ್ಪಿಟಲ್ ಬಿಲ್ ಸರದಿ: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರವೂ ದುಬಾರಿ
ಅರ್ಜಿ ಸಲ್ಲಿಸಿದ 60 ದಿನಗಳ ಒಳಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎಲ್ಲಾ ಕ್ಲಿನಿಕಲ್ ಮತ್ತು ನೈತಿಕ ಮಾನದಂಡಗಳನ್ನು ಪಾಲಿಸಿದ್ದರೆ ಮಾತ್ರ ಪರವಾನಗಿ ನವೀಕರಣಗೊಳ್ಳಲಿದ್ದು, ನವೀಕರಿಸಿದ ಪ್ರಮಾಣಪತ್ರವನ್ನು ಚಿಕಿತ್ಸಾಲಯದ ಮುಂಭಾಗದಲ್ಲೇ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯ ಪ್ರಕಾರ, ಭಾರತದಲ್ಲಿ ಸದ್ಯ ಸುಮಾರು ಶೇ. 15 ರಷ್ಟು ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ವಾಣಿಜ್ಯ ಸರೊಗಸಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಯಾವುದೇ ಆರ್ಥಿಕ ವ್ಯವಹಾರವಿಲ್ಲದ ಪರಹಿತಚಿಂತನೆಯ ಸರೊಗಸಿಗೆ ಭಾರಿ ಬೇಡಿಕೆಯಿದೆ.
ಉದ್ಯಮದ ಅಂದಾಜಿನ ಪ್ರಕಾರ, ಭಾರತದ ಸಂತಾನೋತ್ಪತ್ತಿ ಆರೋಗ್ಯ ಮಾರುಕಟ್ಟೆಯು ಪ್ರಸ್ತುತ 5,000 ಕ್ಕೂ ಹೆಚ್ಚು ಕ್ಲಿನಿಕ್‌ಗಳೊಂದಿಗೆ ಭಾರಿ ವೇಗದಲ್ಲಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇದರ ಮೌಲ್ಯ ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ. ಮುಂಬೈನ ಲೀಲಾವತಿ ಆಸ್ಪತ್ರೆಯ ಐವಿಎಫ್ ತಜ್ಞ ಹೃಷಿಕೇಶ್ ಪೈ ಅವರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದು, ಸಣ್ಣ ಚಿಕಿತ್ಸಾಲಯಗಳಿಗೆ ತೊಂದರೆಯಾಗದಂತೆ ಪ್ರಾಯೋಗಿಕವಾಗಿ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:01 am, Thu, 2 July 26




