AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಸಿಎಂ ಆಯ್ಕೆಯ ಕಗ್ಗಂಟು ಬಿಡಿಸಿದ ಸೋನಿಯಾ-ಆಂಟನಿ ‘ಮಾಸ್ಟರ್ ಪ್ಲಾನ್’! ರಟ್ಟಾಯ್ತು ವಿಡಿ ಸತೀಶನ್ ಆಯ್ಕೆ ಹಿಂದಿನ ಗುಟ್ಟು

ಕೇಂದ್ರ ಸಚಿವರಾಗಿ, ಮೂರು ಬಾರಿ ಕೇರಳದ ಮುಖ್ಯಮಂತ್ರಿಯಾಗಿ ಹಾಗೂ ಕಾಂಗ್ರೆಸ್ ಹೈಕಮಾಂಡ್​ಗೆ, ಅದರಲ್ಲೂ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿ ಇರುವವರು ಎಕೆ ಆಂಟನಿ. ಇದೀಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮತ್ತೆ ಪಕ್ಷವನ್ನು ಬಚಾವ್ ಮಾಡಿದ್ದಾರೆ! ಕೇರಳ ಸಿಎಂ ಆಯ್ಕೆ ಕಗ್ಗಂಟು ಬಿಡಿಸಲು ಸೋನಿಯಾ ಗಾಂಧಿಗೆ ಅವರೇ ನೆರವಾಗಿದ್ದಾರೆ. ಆಂಟನಿ ನೀಡಿದ ಸಲಹೆಯೇ ಕೇರಳ ಸಿಎಂ ಆಯ್ಕೆ ಕಗ್ಗಂಟು ಬಗೆಹರಿಸಿತು ಎಂಬ ಅಚ್ಚರಿಯ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಕೇರಳ ಸಿಎಂ ಆಯ್ಕೆಯ ಕಗ್ಗಂಟು ಬಿಡಿಸಿದ ಸೋನಿಯಾ-ಆಂಟನಿ ‘ಮಾಸ್ಟರ್ ಪ್ಲಾನ್’! ರಟ್ಟಾಯ್ತು ವಿಡಿ ಸತೀಶನ್ ಆಯ್ಕೆ ಹಿಂದಿನ ಗುಟ್ಟು
ಎಕೆ ಆಂಟನಿ, ವಿಡಿ ಸತೀಶನ್ ಹಾಗೂ ಸೋನಿಯಾ ಗಾಂಧಿImage Credit source: tv9
ಗಣಪತಿ ಶರ್ಮಾ
|

Updated on: May 15, 2026 | 12:54 PM

Share

ತಿರುವನಂತಪುರ, ಮೇ 15: ಕೇರಳ (Kerala) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​​ (UDF) ಭರ್ಜರಿ ಗೆಲುವಿನ ಬಳಿಕ ಎದುರಾಗಿದ್ದ ‘ಮುಖ್ಯಮಂತ್ರಿ ಆಯ್ಕೆ’ಯ ಬಿಕ್ಕಟ್ಟನ್ನು ಹೈಕಮಾಂಡ್ ಅಂತಿಮವಾಗಿ ಯಶಸ್ವಿಯಾಗಿ ಬಗೆಹರಿಸಿದೆ. ಈ ಕಗ್ಗಂಟನ್ನು ಬಿಡಿಸಲು ಯುಪಿಎ ಹಿರಿಯ ನಾಯಕ ಮತ್ತು ಸೋನಿಯಾ ಗಾಂಧಿ (Sonia Gandhi) ಪರಮಾಪ್ತ ಎಕೆ ಆಂಟನಿ (AK Antony) ಸಲಹೆಗಳು ಪ್ರಮುಖ ಪಾತ್ರ ವಹಿಸಿವೆ ಎಂಬ ಕುತೂಹಲಕಾರಿ ಮಾಹಿತಿ ಈಗ ತಿಳಿದುಬಂದಿದೆ. ಕೇರಳದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ವಿಡಿ ಸತೀಶನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರು ಸತತ ಒಂಬತ್ತು ದಿನಗಳ ಕಾಲ ಸಮಾಲೋಚನೆಗಳನ್ನು ನಡೆಸಿದರೂ ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.  ಇಂಥ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಬಗೆಹರಿಸಲು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಖುದ್ದು ಅಖಾಡಕ್ಕಿಳಿಯಬೇಕಾಯಿತು!

ಆಂಟನಿ ನೀಡಿದ ಆ ಒಂದು ಫೋನ್ ಕರೆಯ ಸಲಹೆ!

ಸೋನಿಯಾ ಗಾಂಧಿ ಅವರು ಕೇರಳ ರಾಜಕಾರಣದ ನಾಡಿಮಿಡಿತ ಬಲ್ಲ ತಮ್ಮ ಹಳೆಯ ಮಿತ್ರ ಎಕೆ ಆಂಟನಿ ಅವರಿಗೆ ಕರೆ ಮಾಡಿ ಚರ್ಚಿಸಿದರು. ಈ ವೇಳೆ ಆಂಟನಿ ಅವರು ನೀಡಿದ ಪ್ರಾಯೋಗಿಕ ಸಲಹೆಗಳು ಇಡೀ ಚಿತ್ರಣವನ್ನೇ ಬದಲಿಸಿದವು ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ಬಳಿ ಆಂಟನಿ ಹೇಳಿದ್ದೇನಂತೆ ಗೊತ್ತಾ?

ಕೆಸಿ ವೇಣುಗೋಪಾಲ್​ರನ್ನು ಸಿಎಂ ಮಾಡಿದರೆ, ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅಲ್ಲದೆ, ಕೇರಳದ ಯಾರಾದರೊಬ್ಬ ಶಾಸಕರು ಅವರಿಗಾಗಿ ಕ್ಷೇತ್ರ ಬಿಟ್ಟುಕೊಡಬೇಕಾಗುತ್ತದೆ. ಆ ವಿಧಾನಸಭಾ ಕ್ಷತ್ರಕ್ಕೆ ಹಾಗೂ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾಗುತ್ತದೆ. ವಿಧಾನಸಭೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಎರಡು ಉಪಚುನಾವಣೆಗಳನ್ನು ಎದುರಿಸುವುದು ಪಕ್ಷಕ್ಕೆ ರಿಸ್ಕ್ ಎಂದು ಆಂಟನಿ ಎಚ್ಚರಿಕೆಯ ಮಾತುಗಳನ್ನಾಡಿದ್ದರು ಎಂಬುದು ತಿಳಿದುಬಂದಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜನರು ವಿಡಿ ಸತೀಶನ್ ಅವರ ನಾಯಕತ್ವ ಮತ್ತು ಕಳೆದ ಐದು ವರ್ಷಗಳ ಅವರ ಹೋರಾಟವನ್ನು ಮೆಚ್ಚಿ ಮತ ನೀಡಿದ್ದಾರೆ. ಮೈತ್ರಿಕೂಟದ ಮಿತ್ರಪಕ್ಷಗಳೂ ಕೂಡ ಸತೀಶನ್ ಪರವಾಗಿಯೇ ಇವೆ. ಹೀಗಾಗಿ ದೆಹಲಿಯಿಂದ ಅಭ್ಯರ್ಥಿಯನ್ನು ಹೇರುವುದು ಸರಿಯಲ್ಲ ಎಂದು ಸೋನಿಯಾ ಗಾಂಧಿ ಬಳಿ ಆಂಟನಿ ತಿಳಿಸಿದ್ದರು ಎಂಬುದು ಉನ್ನತ ಮೂಲಗಳಿಂದ ಗೊತ್ತಾಗಿದೆ.

ರಾಹುಲ್-ಪ್ರಿಯಾಂಕಾ ಸಂಧಾನ

ಆಂಟನಿ ಅವರ ಈ ತರ್ಕಬದ್ಧ ಸಲಹೆಯನ್ನು ಒಪ್ಪಿದ ಸೋನಿಯಾ ಗಾಂಧಿ, ಅಂತಿಮ ನಿರ್ಧಾರಕ್ಕೆ ಬಂದರು. ನಂತರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಕೆಸಿ ವೇಣುಗೋಪಾಲ್ ಅವರೊಂದಿಗೆ ಮಾತನಾಡಿ, ರಾಷ್ಟ್ರ ರಾಜಕಾರಣದಲ್ಲಿ ಅವರ ಅಗತ್ಯವ ಇರುವುದನ್ನು ಮನವರಿಕೆ ಮಾಡಿಕೊಟ್ಟರು. ವೇಣುಗೋಪಾಲ್ ದೆಹಲಿಯಲ್ಲೇ ಮುಂದುವರಿಯಲು ಒಪ್ಪಿದ ನಂತರ, ವಿಡಿ ಸತೀಶನ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

ತೆರೆಮರೆಯಲ್ಲೇ ಕೆಲಸ ಮಾಡಿ ಸೈ ಎನಿಸಿಕೊಂಡ ಸೋನಿಯಾ ಭಂಟ

ಈ ಇಡೀ ಪ್ರಕ್ರಿಯೆಯಲ್ಲಿ ತೆರೆಯ ಮರೆಯಿಂದಲೇ ಸೋನಿಯಾಗೆ ನೆರವಾದ ಎಕೆ ಆಂಟನಿಯ ಪ್ರಾಮಾಣಿಕತೆ ಮತ್ತು ರಾಜಕೀಯ ಚಾಣಾಕ್ಷತೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದೆ. ಮೂರು ಬಾರಿ ಕೇರಳದ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಆಂಟನಿ ಹೈಕಮಾಂಡ್​ಗೆ ಸದಾ ನಿಷ್ಠರಾಗಿದ್ದುದಲ್ಲದೆ, ಸರಳತೆಯಿಂದಲೇ ಗುರುತಿಸಿಕೊಂಡಿದ್ದವರು. ಇದೀಗ ಕಷ್ಟಕಾಲದಲ್ಲಿ ಮತ್ತೆ ಹೈಕಮಾಂಡ್​ಗೆ, ಅದರಲ್ಲೂ ಸೋನಿಯಾಗೆ ನೆರವಾಗುವ ಮೂಲಕ ಕೇರಳ ಕಾಂಗ್ರೆಸ್​​ನ ಬಲು ದೊಡ್ಡ ಬಿಕ್ಕಟ್ಟನ್ನು ಸಲೀಸಾಗಿ ಬಗೆಹರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More