ಆದಿತ್ಯ L1 ಉಡಾವಣೆಗೆ ಇಸ್ರೋ ಸಂಪೂರ್ಣ ಸಿದ್ಧ; ಇಲ್ಲಿದೆ ಕೊನೇ ಕ್ಷಣದ ಸಿದ್ಧತೆಯ ಮಾಹಿತಿ
Aditya L1 Launch; ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ. ಶ್ರೀಹರಿಕೋಟಾದಲ್ಲಿ ಇಂದಿನ ಹವಾಮಾನ ಸ್ಪಷ್ಟವಾಗಿದ್ದು, ಮಿಷನ್ ಉಡಾವಣೆಗೆ ವಿಜ್ಞಾನಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಬೆಂಗಳೂರು, ಸೆಪ್ಟೆಂಬರ್ 2: ಭಾರತದ ಮೊದಲ ಸೂರ್ಯ ಮಿಷನ್ ಉಡಾವಣೆಗೆ ಸಿದ್ಧವಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಇಂದು ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್-1 (Aditya L1) ಉಪಗ್ರಹವನ್ನು ಉಡಾವಣೆ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ನಡೆಯಲಿದೆ. ಇದನ್ನು ಐದು ಲ್ಯಾಗ್ರೇಂಜ್ ಪಾಯಿಂಟ್‌ಗಳಲ್ಲಿ ಒಂದು ‘ಪಾಯಿಂಟ್-1’ ರಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಿಎಸ್‌ಎಲ್‌ವಿ ರಾಕೆಟ್‌ನ ಸಹಾಯದಿಂದ ಆದಿತ್ಯ ಎಲ್1 ತನ್ನ ಗಮ್ಯಸ್ಥಾನಕ್ಕೆ ಪಯಣಿಸಲಿದೆ. ಮಿಷನ್ ಉಡಾವಣೆ ಮಾಡಲು ಪಿಎಸ್‌ಎಲ್‌ವಿ ರಾಕೆಟ್‌ನ ಎಕ್ಸ್‌ಎಲ್ ಆವೃತ್ತಿಯನ್ನು ಬಳಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಕೆಲವೇ ದಿನಗಳ ಹಿಂದೆ ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಹೊರಹೊಮ್ಮಿತ್ತು. ಇದಾದ ನಂತರವೇ ಇಸ್ರೋ ಸೂರ್ಯ ಮಿಷನ್ ಉಡಾವಣೆ ದಿನಾಂಕ ಘೋಷಿಸಿತ್ತು. ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ.
ಶ್ರೀಹರಿಕೋಟಾದಲ್ಲಿ ಇಂದಿನ ಹವಾಮಾನ ಸ್ಪಷ್ಟವಾಗಿದ್ದು, ಮಿಷನ್ ಉಡಾವಣೆಗೆ ವಿಜ್ಞಾನಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಬೆಂಗಳೂರು ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ. ಮಿಷನ್ ಉಡಾವಣೆಗೂ ಮುನ್ನ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಸ್ರೋ ಕಚೇರಿಗೆ ಆಗಮಿಸಲಿದ್ದಾರೆ.
ಆದಿತ್ಯ ಎಲ್1 ಮುಖ್ಯಾಂಶಗಳು
- ಖಗೋಳಶಾಸ್ತ್ರಜ್ಞ ಮತ್ತು ಪ್ರೊಫೆಸರ್ ಆರ್‌ಸಿ ಕಪೂರ್ ಅವರು ಆದಿತ್ಯ ಎಲ್1 ಬಿಡುಗಡೆಯ ಸಂದರ್ಭವನ್ನು ಬಹಳ ಮುಖ್ಯವೆಂದು ಬಣ್ಣಿಸಿದ್ದಾರೆ. ಆದಿತ್ಯ ಎಲ್ 1 ನಲ್ಲಿರುವ ಪ್ರಮುಖ ಸಾಧನವು ಸೂರ್ಯನ ಆವರಣದ ಬಗ್ಗೆ ಅಧ್ಯಯನ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ, ಇದನ್ನು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಅಧ್ಯಯನ ಮಾಡಬಹುದಾಗಿದೆ.
- ಭಾರತದ ಸೂರ್ಯ ಮಿಷನ್ ಆದಿತ್ಯ ಎಲ್1 ಉಡಾವಣೆ ಕುರಿತು ಪ್ರತಿಕ್ರಿಯಿಸಿದ ಪದ್ಮಶ್ರೀ ವಿಜೇತ ಮತ್ತು ಮಾಜಿ ಇಸ್ರೋ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ ಅವರು ತಾಂತ್ರಿಕವಾಗಿ L1 ಪಾಯಿಂಟ್‌ನಲ್ಲಿ ಉಪಗ್ರಹವನ್ನು ಇರಿಸುವುದು ಮತ್ತು ಐದು ವರ್ಷಗಳ ಕಾಲ ಅದರ ಸುತ್ತ ನಿರ್ವಹಿಸುವುದು ಬಹು ಕಷ್ಟದ ಕೆಲಸವಾಗಿದೆ ಎಂದು ಹೇಳಿದ್ದಾರೆ.
- ಆದಿತ್ಯ L1 ಉಡಾವಣೆಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಶ್ರೀಹರಿಕೋಟಾವನ್ನು ತಲುಪುತ್ತಿದ್ದಾರೆ.
- ಆದಿತ್ಯ L1 ಯಶಸ್ವಿ ಉಡಾವಣೆಗಾಗಿ ದೇಶಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ. ಚಂಡೀಗಢದಲ್ಲಿ ಆದಿತ್ಯ ಮಿಷನ್‌ಗಾಗಿ ‘ಅಖಂಡ ವಿಜಯೀ ಭವ’ ಯಜ್ಞವನ್ನು ನಡೆಸಲಾಗುತ್ತಿದೆ. ಭೋಪಾಲ್‌ನಲ್ಲಿ ಮಿಷನ್‌ನ ಯಶಸ್ಸಿಗಾಗಿ, ಮಾ ವೈಷ್ಣೋಧಾಮ ಆದರ್ಶ ನವದುರ್ಗಾ ದೇವಾಲಯದಲ್ಲಿ ಭಗವಾನ್ ಪಶುಪತಿನಾಥನಿಗೆ ರುದ್ರಾಭಿಷೇಕವನ್ನು ನಡೆಸಲಾಗುತ್ತಿದೆ. ಕರ್ನಾಟಕದ ಹಲವೆಡೆಯೂ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.
ಇದನ್ನೂ ಓದಿ: ಆದಿತ್ಯ-ಎಲ್1 ಸೂರ್ಯನ ಬಳಿ ಸಾಗುತ್ತದೆಯೇ? ತಪ್ಪು ಕಲ್ಪನೆಗಳ ಬಗ್ಗೆ ಇಸ್ರೋ ನೀಡಿದ ಸ್ಪಷ್ಟನೆ ಇಲ್ಲಿದೆ
ಆದಿತ್ಯ L1 ಗಮ್ಯ ತಲುಪಲು ಎಷ್ಟು ದಿನ ಬೇಕು?
ಆದಿತ್ಯ L1 ತನ್ನ ಗಮ್ಯಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಆದಿತ್ಯ-L1 ಪೇಲೋಡ್ ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್ (CME), ಪ್ರೀ-ಫ್ಲೇರ್ ಮತ್ತು ಫ್ಲೇರ್ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಡೈನಾಮಿಕ್ಸ್ ಮತ್ತು ಬಾಹ್ಯಾಕಾಶ ಹವಾಮಾನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಉಪಗ್ರಹವು ಪ್ರತಿದಿನ 1400 ಕ್ಕೂ ಹೆಚ್ಚು ಚಿತ್ರಗಳನ್ನು ಇಸ್ರೋಗೆ ಕಳುಹಿಸಲಿದೆ. ಇದರಿಂದ ಸೂರ್ಯನ ಚಟುವಟಿಕೆಗಳ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ಲಭ್ಯವಾಗುತ್ತದೆ.