
ನವದೆಹಲಿ, ಅಕ್ಟೋಬರ್ 31: ವಿಪಕ್ಷಗಳ ಇಂಡಿಯ ಮೈತ್ರಿಕೂಟವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಸಿದ ಸಾಂಕೇತಿಕ ‘ಜನತಾ ಮಹಾಭಿಯೋಗ‘ ನಡಾವಳಿಯ ವಿರುದ್ಧ ಬಿಜೆಪಿ ಕಟು ವಾಗ್ದಾಳಿ ನಡೆಸಿದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಮೂಲೆಗುಂಪು ಮಾಡಿ ಅಕ್ರಮವಾಗಿ ಪ್ರಧಾನಿ ಹುದ್ದೆಗೇರಿದ್ದರು ಎಂದು ಆರೋಪಿಸಿರುವ ಬಿಜೆಪಿ, “ಸ್ವತಂತ್ರ ಭಾರತದ ಮೊದಲ ಮತ ಕಳ್ಳತನ ನಡೆದಿದ್ದೇ ನೆಹರೂ ಅವರಿಂದ” ಎಂದು ತಿರುಗೇಟು ನೀಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಅಣಕು ಸಂಸತ್ನಲ್ಲಿ ಮಾಡಿದ ‘ಮತ ಕಳವು’ ಆರೋಪಗಳಿಗೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಿರುಗೇಟು ನೀಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಉಲ್ಲೇಖಿಸಿ ಮಾತನಾಡಿದ ಸಂಬಿತ್ ಪಾತ್ರ, “ಖರ್ಗೆ ಅವರು ದೇಶದಲ್ಲಿ ‘ಮತ ಕಳವು’ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಹೌದು, ದೇಶದಲ್ಲಿ ಮತ ಕಳವು ನಡೆದದ್ದು ಸತ್ಯ! ಆದರೆ ಭಾರತದ ಇತಿಹಾಸದಲ್ಲೇ ಮೊದಲ ಮತ ಕಳವು ನಡೆದದ್ದು ಗಾಂಧಿ ಕುಟುಂಬದ ಮೊದಲ ಸದಸ್ಯ ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ. ಅವರು ಕಾಂಗ್ರೆಸ್ನ ಹಿರಿಯ ನಾಯಕರ ಮತಗಳನ್ನು ಕದ್ದು ಪ್ರಧಾನಿಯಾದರು” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಅಣಕು ಪಾರ್ಲಿಮೆಂಟ್’ ರದ್ದು; ಜ್ಞಾನೇಶ್ ಕುಮಾರ್ ವಿರುದ್ಧ ಜನ ಮಹಾಭಿಯೋಗಕ್ಕೆ ಇಂಡಿಯಾ ಒಕ್ಕೂಟ ಮಾಸ್ಟರ್ ಪ್ಲಾನ್
ಪಟೇಲ್ ಮತಗಳನ್ನು ಕದ್ದರಾ ನೆಹರೂ?:
“ಭಾರತ ದೇಶದ ಮೊದಲ ಪ್ರಧಾನಿಯನ್ನು ಆಯ್ಕೆ ಮಾಡಲು ಹಿರಿಯ ಕಾಂಗ್ರೆಸ್ ನಾಯಕರು ಸರ್ದಾರ್ ಪಟೇಲ್ ಅವರ ಪರವಾಗಿ ಮತಪೆಟ್ಟಿಗೆಯಲ್ಲಿ ಮತ ಚಲಾಯಿಸಿದ್ದರು. ಆದರೆ ಆ ಮತಗಳನ್ನು ಕದ್ದು, ಜನರಿಂದ ಆಯ್ಕೆಯಾಗದ ನೆಹರೂ ಅವರು ದೇಶದ ಪ್ರಧಾನಿ ಪೀಠವನ್ನು ಗಿಟ್ಟಿಸಿಕೊಂಡರು” ಎಂದು ಸಂಬಿತ್ ಪಾತ್ರ ಗಂಭೀರ ಆರೋಪ ಮಾಡಿದ್ದಾರೆ.
ವಿಪಕ್ಷಗಳು ಖರ್ಗೆ ನಿವಾಸದಲ್ಲಿ ನಡೆಸಿದ ‘ಜನ ಸಂಸತ್’ ನಡಾವಳಿಯನ್ನು ರಾಜಕೀಯ ನಾಟಕ ಎಂದು ಕರೆದ ಸಂಬಿತ್ ಪಾತ್ರ, ಪ್ರತಿಪಕ್ಷಗಳು ಸಂಸತ್ತು ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಅಪಹಾಸ್ಯ ಮಾಡುತ್ತಿವೆ ಎಂದಿದ್ದಾರೆ.
ಎಸ್ಐಆರ್ ಪ್ರಕ್ರಿಯೆಗೆ ಸಮರ್ಥನೆ:
ವಿಪಕ್ಷಗಳು ಹೊರಿಸಿರುವ 13.2 ಕೋಟಿ ಮತದಾರರ ಹೆಸರು ಡಿಲೀಟ್ ಆಗಿರುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಸಂಬಿತ್ ಪಾತ್ರ, ಚುನಾವಣಾ ಆಯೋಗದ ‘ಎಸ್ಐಆರ್’ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದಕ್ಕೆ ಆಯೋಗದ ASDD (Absent, Shifted, Dead, Duplicate) ಸೂತ್ರವೇ ಕಾರಣ.
‘A’ ಎಂದರೆ ‘ಆಬ್ಸೆಂಟ್’ (ಗೈರುಹಾಜರಿ): ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ನಮೂನೆ ತೆಗೆದುಕೊಂಡು 3 ಬಾರಿ ಭೇಟಿ ನೀಡುತ್ತಾರೆ. ಮೂರೂ ಬಾರಿಯೂ ವ್ಯಕ್ತಿ ಮನೆಯಲ್ಲಿ ಸಿಗದಿದ್ದರೆ ಅವರನ್ನು ‘ಗೈರುಹಾಜರಾದವರು’ ಎಂದು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.
ಇದನ್ನೂ ಓದಿ: ಮುಂಬರುವ ಜನವರಿ 25 ರಿಂದ ಫೆಬ್ರವರಿ 28ರವರೆಗೆ ರಾಷ್ಟ್ರೀಯ ಜನಗಣತಿ ಸಮೀಕ್ಷೆ: ಚುನಾವಣಾ ಹಾಗೂ ಹಿಮಪಾತ ಪ್ರದೇಶಗಳಿಗೆ ವಿನಾಯಿತಿ!
‘S’ ಎಂದರೆ ‘ಶಿಫ್ಟೆಡ್’ (ಸ್ಥಳಾಂತರಗೊಂಡವರು): ಖಾಯಂ ಆಗಿ ಬೇರೆಡೆಗೆ ವಾಸಸ್ಥಳ ಬದಲಾಯಿಸಿದವರ ಹೆಸರುಗಳನ್ನು ನಿಯಮಾವಳಿ ಪ್ರಕಾರ ಪರಿಶೀಲಿಸಿ ತೆರವುಗೊಳಿಸಲಾಗುತ್ತದೆ. ಸತತ ಚುನಾವಣಾ ಸೋಲುಗಳನ್ನು ಮುಚ್ಚಿಕೊಳ್ಳಲು ವಿಪಕ್ಷಗಳು ಇವಿಎಂ ಹಾಗೂ ಮತದಾರರ ಪಟ್ಟಿಯ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದು ಬಿಜೆಪಿ ಟೀಕಿಸಿದೆ.
13 ಕೋಟಿ ಮತದಾರರ ಮತಗಳು ಎಲ್ಲಿಗೆ ಹೋದವು ಎಂದು ಖರ್ಗೆ ಅವರನ್ನು ಪ್ರಶ್ನಿಸಿದ ಅವರು, 13 ಕೋಟಿ ಮತದಾರರ ಮತಗಳು ಅಳಿಸಿಹೋಗಿದ್ದರೆ, ಅವರು ಬೀದಿಗೆ ಬರುತ್ತಿದ್ದರು. ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆಗಾಗಿ ಎಸ್ಐಆರ್ ಇದೆ. ಅದಕ್ಕಾಗಿ ಅಣಕು ಸಂಸತ್ನ ಅಗತ್ಯವಿಲ್ಲ. ರಾಹುಲ್ ಗಾಂಧಿಯನ್ನು ಅಣಕು ಸಂಸದರನ್ನಾಗಿ ಇರಿಸಿ. ನಮಗೆ ಅಭ್ಯಂತರವಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Sat, 31 October 26