
ನವದೆಹಲಿ, ನವೆಂಬರ್ 27: ಜೆಡಿಎಸ್ ಪಕ್ಷವು ಮಹಿಳಾ ಮೀಸಲಾತಿ ವಿಧೇಯಕ ಮತ್ತು ಕ್ಷೇತ್ರ ಪುನರ್ವಿಂಗಡಣೆ ವಿಧೇಯಕಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯಿಂದ ಯಾವುದೇ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ. ಈ ಮಸೂದೆಯಿಂದ ಕರ್ನಾಟಕದ ಲೋಕಸಭಾ ಸ್ಥಾನಗಳು ಶೇ. 50ರಷ್ಟು ಹೆಚ್ಚಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಇಂದು ಸಂಜೆ ನವದೆಹಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿದರು. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಕನಸು 3 ದಶಕಗಳಿಂದ ಬಾಕಿ ಉಳಿದಿತ್ತು ಎಂದ ಅವರು, ಮುಂಬರುವ ಸಂಸತ್ ಅಧಿವೇಶನದಲ್ಲಿ ಧ್ವನಿಮತದ ಮೂಲಕ ಈ ವಿಧೇಯಕ ಅಂಗೀಕಾರಗೊಂಡು ಜಾರಿಗೆ ಬರಲಿದೆ ಎಂದು ಹೇಳಿದರು.
ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ, ಯುನೈಟೆಡ್ ಫ್ರಂಟ್‌ನ ಮಿತ್ರಪಕ್ಷಗಳು ಒಪ್ಪದ ಕಾರಣ ಅದು ಅಂಗೀಕಾರವಾಗಲಿಲ್ಲ ಎಂದು ಅವರು ಸ್ಮರಿಸಿದರು. ಈಗ 30 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದನ್ನು ಸಂಸತ್ತಿಗೆ ತರಲಾಗುತ್ತಿದ್ದು, ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಘೋಷಿಸಿದರು.
ಕ್ಷೇತ್ರ ಪುನರ್ವಿಂಗಡಣೆಯ ಕುರಿತು ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ವಿಧೇಯಕವು ಅಂಗೀಕಾರವಾಗಿ ಜಾರಿಗೆ ಬಂದ ನಂತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳು ಶೇ. 50ರಷ್ಟು ಹೆಚ್ಚಾಗಲಿವೆ ಎಂದರು. “ಎನ್‌ಡಿಎ ಭಾಗವಾಗಿ, ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಕ್ಷೇತ್ರ ಪುನರ್ವಿಂಗಡಣೆ ವಿಧೇಯಕವು ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಲೋಕಸಭೆಯಲ್ಲಿ ಕನ್ನಡಿಗರ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚಾಗಲಿದೆ” ಎಂದು ಅವರು ಹೇಳಿದರು. ಲೋಕಸಭೆಯಲ್ಲಿ ಕನ್ನಡಿಗರ ಧ್ವನಿ ದುರ್ಬಲಗೊಳ್ಳುವುದಿಲ್ಲ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣದ ರಾಜ್ಯಗಳು ಪ್ರಾತಿನಿಧ್ಯವನ್ನು ಕಳೆದುಕೊಳ್ಳಲಿವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದ ಪ್ರಸ್ತುತ ಲೋಕಸಭಾ ಕ್ಷೇತ್ರಗಳೆಲ್ಲವೂ ಶೇ. 50ರಷ್ಟು ಹೆಚ್ಚಾಗಲಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಇಂಡಿಯ ಬಣಕ್ಕೆ ಶಾಕ್; ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲ ಘೋಷಣೆ
ಕ್ಷೇತ್ರ ಪುನರ್ವಿಂಗಡಣೆ ವಿಧೇಯಕದ ಬಗ್ಗೆ ಕಾಂಗ್ರೆಸ್ ದೇಶವನ್ನು ಅನಗತ್ಯವಾಗಿ ಗೊಂದಲಕ್ಕೀಡುಮಾಡುತ್ತಿದೆ ಮತ್ತು ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ ಎಂದು ಅವರು ಆರೋಪಿಸಿದರು. ದೇಶದ ಎಲ್ಲಾ ಮಹಿಳೆಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮೋದಿ ನೇತೃತ್ವದ ಎನ್‌ಡಿಎ ಈ ವಿಧೇಯಕವನ್ನು ಸಂಸತ್ತಿಗೆ ತರುತ್ತಿದೆ ಎಂದ ಅವರು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮುಕ್ತ ಮನಸ್ಸಿನಿಂದ ಎರಡೂ ವಿಧೇಯಕಗಳನ್ನು ಬೆಂಬಲಿಸಬೇಕು ಎಂದರು.
ಕೆಲವು ಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ವಿಧೇಯಕದ ಬಗ್ಗೆ ಆಧಾರರಹಿತ ಸುಳ್ಳುಗಳನ್ನು ಹರಡುತ್ತಿವೆ ಮತ್ತು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಆರೋಪಿಸಿದ ಅವರು, ದಕ್ಷಿಣದ ರಾಜ್ಯಗಳೂ ಸೇರಿದಂತೆ ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಶೇ. 50ರಷ್ಟು ಹೆಚ್ಚಾಗಲಿವೆ ಎಂದು ಪುನರುಚ್ಚರಿಸಿದರು. ಈ ಅಪಪ್ರಚಾರಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶಕ್ಕೆ ಉತ್ತರಿಸಬೇಕು ಎಂದ ಅವರು, ಎಲ್ಲಾ ಪಕ್ಷಗಳು ಎರಡೂ ವಿಧೇಯಕಗಳನ್ನು ಸರ್ವಾನುಮತದಿಂದ ಬೆಂಬಲಿಸುವಂತೆ ಒತ್ತಾಯಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ