ರಾಹುಲ್ ಗಾಂಧಿ ಭಾಷಣಗಳ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್

ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ದೇಶದ ವಿವಿಧ ನಗರಗಳಲ್ಲಿ ನಡೆಸಿದ 'ಚಾತ್ರೋಂ ಕಿ ಗೂಂಜ್' (Chhatron Ki Goonj) ವಿದ್ಯಾರ್ಥಿ ರ್ಯಾಲಿಗಳಲ್ಲಿ ನೀಡಿದ್ದ ಹೇಳಿಕೆಗಳನ್ನು ಪರಿಶೀಲಿಸುವ ಡೇಟಾ ಆಧಾರಿತ ಸತ್ಯಾಸತ್ಯತೆ ತನಿಖಾ ವೆಬ್‌ಸೈಟ್ 'ಜೂಟ್ ಕಿ ಗೂಂಜ್' (Jhooth ki Goonj) ಪ್ರಾರಂಭವಾಗಿದೆ. ಜೂನ್‌ನಿಂದ ಆಗಸ್ಟ್ ನಡುವೆ ಕೋಟಾ, ಡೆಹರಾಡೂನ್, ಪ್ರಯಾಗ್‌ರಾಜ್ ಮತ್ತು ಪುಣೆ ನಗರಗಳಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಪ್ರತಿಪಾದಿಸಿದ್ದ ಪ್ರಮುಖ ವಿಷಯಗಳ ನೈಜತೆಯನ್ನು ಈ ಪೋರ್ಟಲ್ ಸಾರ್ವಜನಿಕರ ಮುಂದಿಟ್ಟಿದೆ.

ರಾಹುಲ್ ಗಾಂಧಿ ಭಾಷಣಗಳ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್
Rahul Gandhi
Image Credit source: PTI

Updated on: Aug 26, 2026 | 8:08 PM

ನವದೆಹಲಿ, ಆಗಸ್ಟ್ 26: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ‘ಚಾತ್ರೋಂ ಕಿ ಗೂಂಜ್’ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮಗಳಲ್ಲಿ ಮಾಡಲಾದ ಪ್ರತಿಪಾದನೆಗಳನ್ನು ಹಂತ-ಹಂತವಾಗಿ ಪ್ರಶ್ನಿಸುವ ಹಾಗೂ ಟೀಕಿಸುವ ಜೂಟ್ ಕಿ ಗೂಂಜ್ (Jhooth Ki Goonj) ಎಂಬ ನೂತನ ವೆಬ್‌ಸೈಟ್ ರಾಹುಲ್ ಗಾಂಧಿಯವರ ಭಾಷಣದಲ್ಲಿನ ತಪ್ಪುಗಳನ್ನು ಪಟ್ಟಿ ಮಾಡುತ್ತಿದೆ. 4 ರ್ಯಾಲಿಗಳಲ್ಲಿ ರಾಹುಲ್ ಗಾಂಧಿ ನೀಡಿದ್ದ 40 ಹೇಳಿಕೆಗಳನ್ನು ಪರಿಶೀಲಿಸಲಾಗಿದ್ದು, ಅವುಗಳನ್ನು ಸವಾಲಿಗೊಡ್ಡಲು ಅಥವಾ ಶ್ರೇಣೀಕರಿಸಲು 134 ಮೂಲಗಳನ್ನು ಬಳಸಲಾಗಿದೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ.

ರಾಹುಲ್ ಗಾಂಧಿಯವರ ‘ಚಾತ್ರೋಂ ಕಿ ಗೂಂಜ್’ ಪ್ರಚಾರ ಅಭಿಯಾನವು ಜೂನ್ 17ರಂದು ಕೋಟಾದಲ್ಲಿ ಪ್ರಾರಂಭವಾಗಿತ್ತು. ನಂತರ ಡೆಹ್ರಾಡೂನ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಕಾರ್ಯಕ್ರಮಗಳು ನಡೆದವು. ನಾಲ್ಕನೇ ಕಾರ್ಯಕ್ರಮವು ಆಗಸ್ಟ್ 22ರಂದು ಪುಣೆಯಲ್ಲಿ ನಡೆಯಿತು. ಇದು ಯುವತಿಯರ ಸಮಸ್ಯೆಗಳ ಮೇಲೆ ಗಮನ ಹರಿಸಿತ್ತು.


‘ಜೂಟ್ ಕಿ ಗೂಂಜ್’ ವೆಬ್‌ಸೈಟ್‌ನ ಮುಖಪುಟದಲ್ಲಿ 4 ರ್ಯಾಲಿಗಳು, 40 ಪ್ರತಿಪಾದನೆಗಳು, 1 ಉತ್ತರ ಪತ್ರಿಕೆ ಎಂದು ಬರೆಯಲಾಗಿದೆ. ವೀಕ್ಷಕರು ಕೋಟಾ, ಡೆಹ್ರಾಡೂನ್, ಪ್ರಯಾಗ್‌ರಾಜ್ ಅಥವಾ ಪುಣೆ ನಗರಗಳನ್ನು ಆಯ್ಕೆ ಮಾಡಿ, ಅಲ್ಲಿ ರಾಹುಲ್ ಗಾಂಧಿ ನೀಡಿದ್ದ ಪ್ರತ್ಯೇಕ ಹೇಳಿಕೆಗಳು, ವೆಬ್‌ಸೈಟ್ ನೀಡಿದ ರೇಟಿಂಗ್ ಹಾಗೂ ಸಾಕ್ಷ್ಯಾಧಾರಿತ ಮೂಲಗಳೊಂದಿಗೆ ನೀಡಿರುವ ನಿರಾಕರಣೆಗಳನ್ನು ಓದಬಹುದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ. ಈ ವೆಬ್‌ಸೈಟ್ ರಾಹುಲ್ ಗಾಂಧಿ ವಿರುದ್ಧ ತೀವ್ರ ಟೀಕಾತ್ಮಕ ನಿಲುವನ್ನು ತಳೆದಿದೆ.

ಇದನ್ನೂ ಓದಿ: ದೆಹಲಿ ಪೊಲೀಸ್ ಠಾಣೆ ಮುಂದೆ ರಾಹುಲ್ ಗಾಂಧಿ ಧರಣಿ; ಕೊನೆಗೂ ‘ಪೆಲೆಟ್ ಗನ್’ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಈ ವೆಬ್‌ಸೈಟ್‌ನ ಪರಿಚಯದಲ್ಲಿ, “ರಾಹುಲ್ ಗಾಂಧಿ ತಮ್ಮ ಸೋಕಾಲ್ಡ್ ‘ಚಾತ್ರೋಂ ಕಿ ಗೂಂಜ್’ ವೇಳೆ ಹೇಳಿದ ಎಲ್ಲಾ ಸುಳ್ಳುಗಳು ಇಲ್ಲಿವೆ” ಎಂದು ಪ್ರಕಟಿಸಲಾಗಿದೆ. ಆದ್ದರಿಂದ, ಅಲ್ಲಿ ನೀಡಲಾದ ರೇಟಿಂಗ್‌ಗಳು ಮತ್ತು ನಿರಾಕರಣೆಗಳು ಹಾಗೂ ರಾಹುಲ್ ಗಾಂಧಿ ಕುರಿತಾದ ಟೀಕೆಗಳು ಆ ವೆಬ್‌ಸೈಟ್‌ನ ಸ್ವಂತ ಅಭಿಪ್ರಾಯವಾಗಿದ್ದು, ಅವುಗಳನ್ನು ಫ್ಯಾಕ್ಟ್-ಚೆಕ್ ಎಂದು ಪರಿಗಣಿಸಲಾಗುವುದಿಲ್ಲ. ಕೋಟಾ, ಡೆಹ್ರಾಡೂನ್ ಮತ್ತು ಪ್ರಯಾಗ್‌ರಾಜ್ ರ್ಯಾಲಿಗಳಲ್ಲಿ ನೀಡಲಾದ ವಿಭಿನ್ನ ಅಂಕಿ-ಅಂಶಗಳನ್ನು ಈ ವೆಬ್‌ಸೈಟ್ ಪ್ರಸ್ತಾಪಿಸಿದ್ದು, ಅದರಲ್ಲಿ “ಪ್ರತಿ 150 ಉದ್ಯೋಗಾಕಾಂಕ್ಷಿಗಳಲ್ಲಿ ಒಬ್ಬರು ಮಾತ್ರ ಯಶಸ್ವಿಯಾಗುತ್ತಾರೆ” ಎಂಬ ಹೇಳಿಕೆಯೂ ಸೇರಿದೆ. ಈ ವೆಬ್‌ಸೈಟ್ ಹಿನ್ನೆಲೆಯಲ್ಲಿರುವ ವ್ಯಕ್ತಿ ಅಥವಾ ಗುಂಪಿನ ಗುರುತು ಇನ್ನೂ ಅಸ್ಪಷ್ಟವಾಗಿದೆ.


ಒಂದೆಡೆ, ರಾಹುಲ್ ಗಾಂಧಿಯವರ ವಿದ್ಯಾರ್ಥಿ ಪ್ರಚಾರದ ಅಭಿಯಾನವು ಈಗಾಗಲೇ ರಾಜಕೀಯ ಕಿಡಿ ಹೊತ್ತಿಸಿರುವಾಗ, ಈ ಹೊಸ ವೆಬ್‌ಸೈಟ್ ಮುಂಬರುವ ರಾಜಕೀಯ ಸ್ಪರ್ಧೆಯ ಹೊಸ್ತಿಲಿನಲ್ಲಿ ಉದ್ಯೋಗ, AI, ಶಿಕ್ಷಣ ಮತ್ತು ಯುವಜನರ ವಿಷಯಗಳ ಮೇಲಿನ ಆನ್‌ಲೈನ್ ವಾಕ್ಸಮರಕ್ಕೆ ಮತ್ತೊಂದು ವೇದಿಕೆಯನ್ನು ಸೇರ್ಪಡೆಗೊಳಿಸಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಸೂಚನೆಯಂತೆ ಹಿಮಂತ ಶರ್ಮ ವಿರುದ್ಧ ಸುಳ್ಳು ಆರೋಪ; ಪವನ್ ಖೇರಾ ಬಗ್ಗೆ ಕಿರಣ್ ರಿಜಿಜು ಟೀಕೆ

ರಾಹುಲ್ ಗಾಂಧಿ ಕುರಿತ ವೆಬ್​ಸೈಟ್ ವರದಿಯ ಮುಖ್ಯಾಂಶಗಳು:

ಪರಿಶೀಲಿಸಿದ ಹೇಳಿಕೆಗಳು: 40

ಸುಳ್ಳು ಎಂದು ದೃಢಪಟ್ಟ ಹೇಳಿಕೆಗಳು: 29

ಹಾದಿತಪ್ಪಿಸುವಂತಿವೆ ಎಂದು ಕಂಡುಬಂದವು: 11

ಬಳಸಿದ ಆಧಾರಗಳು/ಸಾಕ್ಷ್ಯಗಳು: ಅಧಿಕೃತ ದತ್ತಾಂಶ ಮತ್ತು ವರದಿಗಳನ್ನು ಒಳಗೊಂಡ 134 ಪ್ರಮುಖ ಮೂಲಗಳು


ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ:

ಸಾರ್ವಜನಿಕರು ಮತ್ತು ಯುವಜನರು ಈ ವೆಬ್‌ಸೈಟ್ ಅನ್ನು ಹೊಣೆಗಾರಿಕೆಯನ್ನು ಉತ್ತೇಜಿಸುವ ಒಂದು ಪ್ರಮುಖ ‘ಯುವಚಾಲಿತ ಉಪಕರಣ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈ ವಿವರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ವೆಬ್​ಸೈಟ್​ ಎಷ್ಟು ವಿಶ್ವಾಸಾರ್ಹ ಮೂಲದ್ದು ಎಂಬುದು ದೃಢಪಟ್ಟಿಲ್ಲವಾದ್ದರಿಂದ ಈ ಮೇಲಿನ ಎಲ್ಲ ಮಾಹಿತಿಗಳು ಆ ವೆಬ್​ಸೈಟ್​​ನದ್ದು ಮಾತ್ರವೇ ಆಗಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us