AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷುಲ್ಲಕ ಕಾರಣಕ್ಕೆ ಹರಿದ ನೆತ್ತರು: ಮದ್ಯಕ್ಕೆ ನೀರು ತರಲು ನಿರಾಕರಿಸಿದ್ದಕ್ಕೆ 9 ವರ್ಷದ ಬಾಲಕನಿಗೆ ಗುಂಡು ಹಾರಿಸಿ ಕೊಲೆ

ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ಮದ್ಯದ ಅಮಲಿನಲ್ಲಿ ನಡೆದ ದಾರುಣ ಘಟನೆ ಇದು. ನಾಮಕರಣ ಸಮಾರಂಭದಲ್ಲಿ 9 ವರ್ಷದ ಬಾಲಕ ನೀರು ತರಲು ನಿರಾಕರಿಸಿದಾಗ, ಕೋಪಗೊಂಡ ಸಂಬಂಧಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆರೋಪಿ ಧನೇಶ್ ಯಾದವ್ ಬಂಧನವಾಗಿದ್ದು, ಈ ಘಟನೆ ಇಡೀ ಗ್ರಾಮಕ್ಕೆ ಆಘಾತ ತಂದಿದೆ.

ಕ್ಷುಲ್ಲಕ ಕಾರಣಕ್ಕೆ ಹರಿದ ನೆತ್ತರು: ಮದ್ಯಕ್ಕೆ ನೀರು ತರಲು ನಿರಾಕರಿಸಿದ್ದಕ್ಕೆ 9 ವರ್ಷದ ಬಾಲಕನಿಗೆ ಗುಂಡು ಹಾರಿಸಿ ಕೊಲೆ
ಗುಂಡಿನ ದಾಳಿ ಸಾಂದರ್ಭಿಕ ಚಿತ್ರ Image Credit source: Shutterstock
ನಯನಾ ರಾಜೀವ್
|

Updated on: May 03, 2026 | 8:32 AM

Share

ಲಕ್ನೋ, ಮೇ 03:   ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಸಂಭ್ರಮದ ಮನೆಯೊಂದು ಮದ್ಯದ ಅಮಲಿನಿಂದಾಗಿ ಕ್ಷಣಮಾತ್ರದಲ್ಲಿ ಸ್ಮಶಾನ ಮೌನಕ್ಕೆ ಸಾಕ್ಷಿಯಾದ ದಾರುಣ ಘಟನೆ ನಡೆದಿದೆ. ಕೇವಲ ನೀರು ತರಲು ನಿರಾಕರಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಲೆ(Murder) ಮಾಡಲಾಗಿದೆ. ಕಾಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾಕುತ್‌ಗಂಜ್ ಗ್ರಾಮದಲ್ಲಿ ಕಳೆದ ಶುಕ್ರವಾರದಂದು ನಾಮಕರಣ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಸಂಬಂಧಿಕರು ಮತ್ತು ಗ್ರಾಮಸ್ಥರು ಸೇರಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಾಲಕನ ತಂದೆಯ ಸಂಬಂಧಿಯಾದ ಧನೇಶ್ ಯಾದವ್ ಎಂಬಾತ ಮದ್ಯ ಸೇವಿಸುತ್ತಾ ಕುಳಿತಿದ್ದ.

ಮದ್ಯದ ಅಮಲಿನಲ್ಲಿ ಸಾರಾಯಿ ಕುಡಿಯುತ್ತಿದ್ದ ಧನೇಶ್, ಮದ್ಯಕ್ಕೆ ಬೆರೆಸಲು ನೀರು ತರುವಂತೆ ಅಲ್ಲಿಯೇ ಇದ್ದ ಒಂಬತ್ತು ವರ್ಷದ ಬಾಲಕನಿಗೆ ಹೇಳಿದ್ದಾನೆ. ಆದರೆ ಬಾಲಕ ನೀರು ತರಲು ನಿರಾಕರಿಸಿದಾಗ, ಕೋಪಗೊಂಡ ಧನೇಶ್ ತನ್ನ ಬಳಿಯಿದ್ದ ಬಂದೂಕಿನಿಂದ ಮಗುವಿನ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದಿನಿಂದಾಗಿ ಅಲ್ಲಿ ನೆರೆದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದು, ಸಮಾರಂಭದಲ್ಲಿ ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಕಾಸ್ಗಂಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಲಿಗಢಕ್ಕೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆಯ ವೇಳೆ ಶನಿವಾರ ಬಾಲಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಮತ್ತಷ್ಟು ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ

ಘಟನೆ ನಡೆದ ತಕ್ಷಣ ಆರೋಪಿ ಧನೇಶ್ ಸ್ಥಳದಿಂದ ಪರಾರಿಯಾಗಿದ್ದ, ಸಂತ್ರಸ್ತ ಕುಟುಂಬದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಖಿತೌಲಿ ಕಾಲುವೆ ಸೇತುವೆಯ ಬಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧಕ್ಕೆ ಬಳಸಲಾದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಣ್ಣ ಕಾರಣಕ್ಕಾಗಿ ಮದ್ಯದ ಅಮಲಿನಲ್ಲಿ ನಡೆದ ಈ ಕೊಲೆ ಪ್ರಕರಣವು ಇಡೀ ಗ್ರಾಮವನ್ನೇ ಆಘಾತಕ್ಕೀಡು ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us