ಕೇರಳದಲ್ಲಿ ಕೊವಿಡ್ ನಿರ್ಬಂಧ ಸಡಿಲಿಕೆ: ವಾರದ 6 ದಿನ ಅಂಗಡಿ,ಕಚೇರಿ ತೆರೆಯಬಹುದು ಎಂದ ಸರ್ಕಾರ
Kerala: ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಹಣಕಾಸು ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ತೆರೆದ ಪ್ರವಾಸಿ ಸ್ಥಳಗಳು ಮತ್ತು ಇತರ ಸಂಸ್ಥೆಗಳು ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಬಹುದು.
ತಿರುವನಂತಪುರಂ: ವಿರೋಧ ಪಕ್ಷಗಳು ಮತ್ತು ವ್ಯಾಪಾರಿಗಳು ದೀರ್ಘಕಾಲದ ಕೊವಿಡ್ -19 ನಿರ್ಬಂಧಗಳ ಬಗ್ಗೆ ಕೇರಳ ಸರ್ಕಾರವನ್ನು ಟೀಕಿಸಿದ್ದರಿಂದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಅಂಗಡಿಗಳು, ಮಾರುಕಟ್ಟೆಗಳು, ಬ್ಯಾಂಕುಗಳು, ಕಚೇರಿಗಳು ಮತ್ತು ಕಾರ್ಖಾನೆಗಳಿಗೆ ವಾರದ ಆರು ದಿನವೂ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಕೊವಿಡ್ ನಿರ್ಬಂಧದಲ್ಲಿನ ಈ ಸಡಿಲಿಕೆ ಆಗಸ್ಟ್ 5 ರಿಂದ ಜಾರಿಗೆ ಬರಲಿವೆ ಎಂದು ಮುಖ್ಯ ಕಾರ್ಯದರ್ಶಿ ವಿ. ಪಿ ಜಾಯ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಕೇರಳದಲ್ಲಿ 22,414 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಒಟ್ಟು ಸೋಂಕಿನ ಸಂಖ್ಯೆ 34,71,563 ಕ್ಕೆ ತಲುಪಿದೆ. 108 ಜನರ ಸಾವಿನ ನಂತರ ಕೊರೊನಾವೈರಸ್‌ಗೆ ಬಲಿಯಾದವರ ಸಂಖ್ಯೆ 17,211 ಕ್ಕೆ ಏರಿದೆ.
ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಹಣಕಾಸು ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ತೆರೆದ ಪ್ರವಾಸಿ ಸ್ಥಳಗಳು ಮತ್ತು ಇತರ ಸಂಸ್ಥೆಗಳು ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಬಹುದು. ಆದಾಗ್ಯೂ, ಈ ಎಲ್ಲಾ ಸಂಸ್ಥೆಗಳು ಉದ್ಯೋಗಿಗಳ ಲಸಿಕೆಯ ಸ್ಥಿತಿಯನ್ನು ಮತ್ತು ಒಂದು ಸಮಯದಲ್ಲಿ ಅನುಮತಿಸಲಾದ ಗ್ರಾಹಕರ ಸಂಖ್ಯೆಯನ್ನು ಪ್ರದರ್ಶಿಸಬೇಕಿದೆ. ಅಂಗಡಿಯ ಒಳಗೆ ಮತ್ತು ಹೊರಗೆ ಜನಸಂದಣಿಯನ್ನು ತಪ್ಪಿಸುವ ಜವಾಬ್ದಾರಿ ಅಂತಹ ಸಂಸ್ಥೆಗಳ ಮಾಲೀಕರ ಮೇಲಿದೆ.
ಜಾರಿ ಸಂಸ್ಥೆಗಳು ಪರಿಶೀಲನೆ ನಡೆಸುತ್ತವೆ ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತವೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ. ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸೇವಾಸಂಸ್ಥೆಗಳು, ಕಂಪನಿಗಳು, ಸ್ವಾಯತ್ತ ಸಂಸ್ಥೆಗಳು, ಆಯೋಗಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಗಳುಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯನಿರ್ವಹಿಸಬಹುದು.
ಎರಡು ವಾರಗಳ ಮೊದಲು ಕನಿಷ್ಠ ಮೊದಲ ಡೋಸ್ ಕೊವಿಡ್ ಲಸಿಕೆ ತೆಗೆದುಕೊಂಡವರು ಅಥವಾ 72 ಗಂಟೆಗಳ ಮೊದಲು ತೆಗೆದುಕೊಂಡ ಆರ್‌ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರನ್ನು ಮಾತ್ರ ಅಂಗಡಿಗಳು ಮತ್ತು ಇತರ ಸಂಸ್ಥೆಗಳ ಒಳಗೆ ಅನುಮತಿಸಲಾಗುತ್ತದೆ.
ಜನಸಂದಣಿಯನ್ನು ತಡೆಗಟ್ಟಲು, ಎಲ್ಲಾ ಅಂಗಡಿಗಳು ಮತ್ತು ಇತರ ಸಂಸ್ಥೆಗಳು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸಬಹುದು. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ರಾತ್ರಿ 9.30 ರವರೆಗೆ ಆನ್‌ಲೈನ್ ವಿತರಣೆಗೆ ಅವಕಾಶವಿರುತ್ತದೆ.
ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಾಹನಗಳಿಗೆ ಕೊವಿಡ್ -19 ಪ್ರೋಟೋಕಾಲ್‌ಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಅನುಮತಿ ನೀಡಲಾಗಿದೆ.
ಎಲ್ಲಾ ಸ್ಪರ್ಧಾತ್ಮಕ, ನೇಮಕಾತಿ ಮತ್ತು ವಿಶ್ವವಿದ್ಯಾಲಯದ ಪರೀಕ್ಷೆಗಳು/ಕ್ರೀಡಾ ಪ್ರಯೋಗಗಳನ್ನು ನಡೆಸಲು ಅನುಮತಿ ಇದೆ. ಆದಾಗ್ಯೂ, ಶಾಲೆಗಳು, ಕಾಲೇಜುಗಳು, ಚಿತ್ರಮಂದಿರಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮುಚ್ಚಿರಲಿವೆ ಎಂದು ಆದೇಶದಲ್ಲಿ ಹೇಳಲಾಗಿದೆ, ಮಾಲ್‌ಗಳನ್ನು ಆನ್‌ಲೈನ್ ವಿತರಣೆಗೆ ಮಾತ್ರ ತೆರೆಯಲು ಅನುಮತಿ ನೀಡಬಹುದು ಮತ್ತು ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಶಿಕ್ಷಣ ನೀಡಲು ಮಾತ್ರ ತೆರೆಯಬಹುದು.
ಏತನ್ಮಧ್ಯೆ, ಆಗಸ್ಟ್ 8 ಕ್ಕೆ (ಭಾನುವಾರ) ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.ಹಗಲು ಹೊತ್ತಿನಲ್ಲಿ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶವಿದೆ.
ಈ ವಿಷಯದಲ್ಲಿ ತಜ್ಞರ ಅಭಿಪ್ರಾಯಗಳನ್ನು ಅನುಸರಿಸಿ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಮತ್ತು ಸಂಸ್ಥೆಗಳನ್ನು ದೀರ್ಘಕಾಲದಿಂದ ಮುಚ್ಚುವುದರಿಂದ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಮೊದಲು ರಾಜ್ಯ ವಿಧಾನಸಭೆಯಲ್ಲಿ ಸಡಿಲಿಕೆಗಳನ್ನು ಘೋಷಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸರ್ಕಾರದ ಮುಂದೆ ಬಂದ ಸಾಮಾನ್ಯ ಸಲಹೆಯೆಂದರೆ ಪರೀಕ್ಷಾ ಧನಾತ್ಮಕ ದರ (ಟಿಪಿಆರ್) ಜೊತೆಗೆ ಇನ್ನೊಂದು ವೈಜ್ಞಾನಿಕ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು. ಇದರ ಭಾಗವಾಗಿ ಒಟ್ಟು ಜನಸಂಖ್ಯೆಯ 1000 ಜನರಿಗೆ ಹೊಸದಾಗಿ ಪತ್ತೆಯಾದ ಪ್ರಕರಣಗಳ ಸಂಖ್ಯೆಯನ್ನು ಪರಿಗಣಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಅತೀ ಹೆಚ್ಚು ಕೊವಿಡ್ ಪ್ರಕರಣಗಳಿರುವ ಜಿಲ್ಲೆಗಳು ಮಲಪ್ಪುರಂ (3691), ತ್ರಿಶೂರ್ (2912), ಎರ್ನಾಕುಲಂ (2663), ಕೋಯಿಕ್ಕೋಡ್ (2502), ಪಾಲಕ್ಕಾಡ್ (1928), ಕೊಲ್ಲಂ (1527), ಕಣ್ಣೂರು (1299), ಕೋಟ್ಟಯಂ (1208) ತಿರುವನಂತಪುರಂ (1155). ರಾಜ್ಯದ 678 ಪ್ರದೇಶಗಳಲ್ಲಿ ಶೇ 10 ಕ್ಕಿಂತ ಹೆಚ್ಚಿನ ಟಿಪಿಆರ್ ಇದೆ.
ಇದನ್ನೂ ಓದಿ: Karnataka Politics: ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ; ಮಹಿಳೆಯರು ಮಕ್ಕಳ ಸಬಲೀಕರಣಕ್ಕೆ ಅಭಿಯಾನ
(Kerala government eases Covid-19 restrictions shops markets allowed to function six days a week)