ಹನುಮನ ಜನ್ಮಸ್ಥಳ ವಿವಾದ: ವಿಷಯ ಗಮನಕ್ಕೆ ಬಂದಿದೆ ಎಂದ ಕೇಂದ್ರ ಸರ್ಕಾರ

ಹನುಮನ ಜನ್ಮಸ್ಥಳ ವಿವಾದ: ವಿಷಯ ಗಮನಕ್ಕೆ ಬಂದಿದೆ ಎಂದ ಕೇಂದ್ರ ಸರ್ಕಾರ
ಅಂಜನಾದ್ರಿ

ಮುಂದೆ ಆಗಬಹುದಾದ ಸಮಸ್ಯೆಗಳನ್ನು ನಿರ್ವಹಿಸುವ ದೃಷ್ಟಿಯಿಂದ ಆದಷ್ಟು ಬೇಗ ಹನುಮಂತನ ನಿಜವಾದ ಜನ್ಮಸ್ಥಳ ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಗಣ್ಣ ಕರಡಿ ಪತ್ರದ ಮೂಲಕ ಪ್ರಶ್ನೆ ಮಾಡಿದ್ದರು. 

TV9kannada Web Team

| Edited By: ganapathi bhat

Aug 04, 2021 | 11:19 PM

ದೆಹಲಿ: ಹನುಮನ ಜನ್ಮಸ್ಥಾನ ಯಾವುದು ಎಂಬ ಬಗ್ಗೆ ಇತ್ತೀಚೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ವಾದ- ವಿವಾದ ಏರ್ಪಟ್ಟಿತ್ತು. ಆಂಧ್ರದ ಟಿಟಿಡಿ ಹಾಗೂ ಕರ್ನಾಟಕದ ನಡುವೆ ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಜೋರಾಗಿ ಕೇಳಿಬಂದಿತ್ತು. ಆಂಧ್ರದ ತಿರುಪತಿಯ ಏಳು ಬೆಟ್ಟಗಳ ಪೈಕಿ ಒಂದರಲ್ಲಿ ಹನುಮಂತ ಜನಿಸಿದ್ದಾನೆ ಎಂದು ಟಟಿಡಿ ಹಾಗೂ ಹನುಮ ಕರ್ನಾಟಕ ಕೊಪ್ಪಳದ ಅಂಜನಾದ್ರಿಯಲ್ಲಿ ಜನಿಸಿದ್ದಾನೆ ಎಂದು ಕರ್ನಾಟಕದ ಕೆಲ ಇತಿಹಾಸಕಾರರು, ಪಂಡಿತರು, ರಾಜಕಾರಣಿಗಳು ಹೇಳುತ್ತಾ ಬಂದಿದ್ದಾರೆ. ಈ ಕುರಿತಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದರು. ಅದಕ್ಕೆ ಇಂದು (ಆಗಸ್ಟ್ 4) ಕೇಂದ್ರ ಸರ್ಕಾರ ಉತ್ತರಿಸಿದೆ.

ಇತ್ತೀಚೆಗೆ ಆಂಧ್ರಪ್ರದೇಶ ಮೂಲದ ಟಿಟಿಡಿ ಬೋರ್ಡ್ ಮತ್ತು ಕರ್ನಾಟಕ ರಾಜ್ಯದ ನಡುವೆ ಹನುಮಂತನ ಜನ್ಮಸ್ಥಳದ ಬಗ್ಗೆ ಭಾರೀ ಚರ್ಚೆ ಉಂಟಾಗಿತ್ತು. ಆ ಕುರಿತು ವಾದ-ವಿವಾದವು ಮಾಧ್ಯಮಗಳಲ್ಲಿಯೂ ಪ್ರಸಾರ, ಪ್ರಕಟ ಆಗಿತ್ತು. ಟಿಟಿಡಿ ಹೇಳುವಂತೆ ಹನುಮಂತನು ತಿರುಪತಿಯಲ್ಲಿ ಇರುವ ಏಳರಲ್ಲಿ ಒಂದು ಬೆಟ್ಟದಲ್ಲಿ ಜನಿಸಿದ್ದಾನೆ. ಮತ್ತು ಅದರ ಬಗ್ಗೆ ವರದಿ ಸಲ್ಲಿಸುವ ಹಂತದಲ್ಲಿ ಟಿಟಿಡಿ ಇದೆ. ಇತ್ತ ಕರ್ನಾಟಕ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಎಂಬಲ್ಲಿ ಹನುಮಂತ ಜನಿಸಿದ್ದಾನೆ ಎಂದು ದಾಖಲೆಗಳನ್ನು ನೀಡಿದೆ.

ಈ ವಿಚಾರವು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದರೆ, ಈ ಬಗೆಗಿನ ನಿಜವನ್ನು ತನಿಖೆ ಮಾಡಲು ಸರ್ಕಾರ ಕೈಗೊಂಡಿದೆಯೇ? ಇಲ್ಲವಾದರೆ, ಈ ವಿಚಾರವನ್ನು ತನಿಖೆ ಮಾಡಲು ಮತ್ತು ಹನುಮಂತನ ಜನ್ಮಸ್ಥಳದ ಬಗ್ಗೆ ವಿವರವಾದ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು.

ನೆರೆಯ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಭಿನ್ನಾಭಿಪ್ರಾಯ ಶಮನಗೊಳಿಸುವ ಉದ್ದೇಶದಿಂದ, ಮುಂದೆ ಆಗಬಹುದಾದ ಸಮಸ್ಯೆಗಳನ್ನು ನಿರ್ವಹಿಸುವ ದೃಷ್ಟಿಯಿಂದ ಆದಷ್ಟು ಬೇಗ ಹನುಮಂತನ ನಿಜವಾದ ಜನ್ಮಸ್ಥಳ ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಗಣ್ಣ ಕರಡಿ ಪತ್ರದ ಮೂಲಕ ಪ್ರಶ್ನೆ ಮಾಡಿದ್ದರು.

ಈ ವಿಷಯವು ಮಾಧ್ಯಮಗಳ ಮೂಲಕ ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಯಾವುದೇ ಪ್ರಸ್ತಾವ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ಇದಕ್ಕೆ ಸರ್ಕಾರ ಉತ್ತರಿಸಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೂ ಮುನ್ನ ಹನುಮನ ಜನ್ಮಸ್ಥಾನ ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಕೊಡಿ: ಮಧುಗಿರಿ ಮೋದಿ ಆಗ್ರಹ

ಅಂಜನಾದ್ರಿ ಪರ್ವತವೇ ಹನುಮನ ಜನ್ಮಸ್ಥಳ; ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿಪಾದನೆ

(Central Govt reply to Sanganna Karadi letter on Hanuman Birthplace Issue between Karnataka Andhra)

Follow us on

Related Stories

Most Read Stories

Click on your DTH Provider to Add TV9 Kannada