ಕೇರಳದಲ್ಲಿ ಹೈ ಅಲರ್ಟ್; ಮೆದುಳನ್ನು ತಿನ್ನುವ ಅಮೀಬಾದಿಂದ 19 ಜನ ಸಾವು, 120ಕ್ಕೂ ಹೆಚ್ಚು ಜನರಿಗೆ ಸೋಂಕು
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಪ್ರಕರಣಗಳು ಹೆಚ್ಚಾಗಿವೆ. ಕೇರಳದ ಬಹುತೇಕ ಕಡೆ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೀರಿನ ಮೂಲಕ ಹರಡುವ ಈ ಅಮೀಬಾ ಅತ್ಯಂತ ಅಪಾಯಕಾರಿ ಮತ್ತು ಮೆದುಳನ್ನು ತಲುಪಿದರೆ ಸಾವಿಗೆ ಕಾರಣವಾಗಬಹುದು. ಕೇರಳದಲ್ಲಿಯೇ ಈ ಸೋಂಕಿನ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ಈ ರೋಗವನ್ನು ಹೇಗೆ ತಡೆಗಟ್ಟುವುದು ಎಂಬುದರ ಮಾಹಿತಿ ಇಲ್ಲಿದೆ.

ತಿರುವನಂತಪುರಂ, ಸೆಪ್ಟೆಂಬರ್ 19: ಕಳೆದ ವರ್ಷಕ್ಕೆ ಹೋಲಿಸಿದರೆ ಕೇರಳದಲ್ಲಿ ಮೆದುಳನ್ನು ತಿನ್ನುವ ಅಮೀಬಾದಿಂದ (brain-eating amoeba) 19 ಸಾವುಗಳು ಸಂಭವಿಸಿವೆ ಮತ್ತು 120ಕ್ಕೂ ಅಧಿಕ ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ ವರ್ಷ 36 ಸೋಂಕುಗಳು ವರದಿಯಾಗಿತ್ತು. ಅವುಗಳಲ್ಲಿ 9 ಮಾರಕವಾಗಿತ್ತು. ಕೇರಳದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಪರೂಪದ ಹಾಗೂ ನೀರಿನಿಂದ ಹರಡುವ ‘ಮೆದುಳನ್ನು ತಿನ್ನುವ ಅಮೀಬಾ’ದಿಂದ ಉಂಟಾದ ಸೋಂಕುಗಳು ದ್ವಿಗುಣಗೊಂಡ ನಂತರ ಎಚ್ಚರಿಕೆ ವಹಿಸಲಾಗಿದೆ. ಸೆಪ್ಟೆಂಬರ್‌ನಲ್ಲಿಯೇ 9 ಸಾವುಗಳು ಸಂಭವಿಸಿದ್ದು, ಇಲ್ಲಿಯವರೆಗೆ 19 ಜನರು ಸಾವನ್ನಪ್ಪಿದ್ದಾರೆ.
ಕೇರಳದಲ್ಲಿ ಇತ್ತೀಚೆಗೆ ಮೆದುಳು ತಿನ್ನುವ ಅಮೀಬಾ (ನೇಗ್ಲೇರಿಯಾ ಫೌಲೇರಿ) ಸೋಂಕಿನಿಂದ 19 ಸಾವುಗಳು ದಾಖಲಾಗಿವೆ. ಈ ಅಂಕಿ ಅಂಶವು ಆಘಾತಕಾರಿಯಾಗಿದೆ. ಏಕೆಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಈ ಅಪರೂಪದ ಕಾಯಿಲೆಯ ಪ್ರಕರಣಗಳು ಒಟ್ಟು ಸಂಖ್ಯೆ 500ಕ್ಕಿಂತ ಕಡಿಮೆ. ಇವುಗಳಲ್ಲಿ, ಕೇರಳವೊಂದರಲ್ಲೇ 120 ಪ್ರಕರಣಗಳು ವರದಿಯಾಗಿವೆ. ಕೇರಳ ರಾಜ್ಯದಲ್ಲಿ ಈ ಸೋಂಕಿನ ಆತಂಕ ನಿರಂತರವಾಗಿ ಹೆಚ್ಚುತ್ತಿದೆ. ಈ ಅಮೀಬಾದಿಂದ ಉಂಟಾಗುವ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ ಎಂಬುದು ಇನ್ನಷ್ಟು ಆತಂಕ ಸೃಷ್ಟಿಸುವ ಸಂಗತಿ. ಈ ಸೋಂಕು ಮೆದುಳಿಗೆ ಹರಡಿದರೆ, ಅದು ಪ್ರಾಣವನ್ನೇ ಬಲಿ ಪಡೆಯಬಹುದು.
ಇದನ್ನೂ ಓದಿ: ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು
ಈ ಅಮೀಬಾ ಕೊಳಕು, ಬೆಚ್ಚಗಿನ ಸಿಹಿನೀರಿನಲ್ಲಿ ಬೆಳೆಯುತ್ತದೆ. ಸ್ನಾನ ಮಾಡುವಾಗ ಅಥವಾ ಈಜುವಾಗ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ, ಮೆದುಳನ್ನು ತಲುಪುತ್ತದೆ. ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಕೊಳಗಳು, ಸರೋವರಗಳು ಅಥವಾ ಈಜುಕೊಳಗಳಲ್ಲಿ ಈಜುವುದರಿಂದ ಅಪಾಯದಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಸ್ನಾನ ಅಥವಾ ಮನೆಕೆಲಸಕ್ಕಾಗಿ ತೆರೆದ ನೀರನ್ನು ಬಳಸುತ್ತಾರೆ, ಅವರು ಸಹ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಅದಕ್ಕಾಗಿಯೇ ಈ ರೋಗದ ತಡೆಗಟ್ಟುವಿಕೆ ಮತ್ತು ಅರಿವು ನಿರ್ಣಾಯಕವಾಗಿದೆ.
ಅಮೀಬಾ ದೇಹದ ಮೇಲೆ ಹೇಗೆ ದಾಳಿ ಮಾಡುತ್ತದೆ?:
ಸಫ್ದರ್ಜಂಗ್ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಜುಗಲ್ ಕಿಶೋರ್, ಮೆದುಳನ್ನು ತಿನ್ನುವ ಅಮೀಬಾ ಕುಡಿಯುವ ನೀರಿನ ಮೂಲಕ ದೇಹವನ್ನು ಪ್ರವೇಶಿಸುವುದಿಲ್ಲ, ಅದರ ಬದಲಿಗೆ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ ಎಂದು ವಿವರಿಸುತ್ತಾರೆ . ಈಜುವಾಗ, ಸ್ನಾನ ಮಾಡುವಾಗ ಅಥವಾ ನೀರಿನಲ್ಲಿ ನಡೆಯುವಾಗ ನೀರು ಮೂಗಿಗೆ ಸೇರಿದಾಗ, ಈ ಅಮೀಬಾ ನೇರವಾಗಿ ಮೆದುಳಿಗೆ ಚಲಿಸುತ್ತದೆ. ಇದು ಸೋಂಕನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಉಂಟಾಗುವ ರೋಗವನ್ನು ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುತ್ತದೆ.
ಡಾ. ಕಿಶೋರ್ ಅವರ ಪ್ರಕಾರ, ಲಕ್ಷಣಗಳು ಆರಂಭದಲ್ಲಿ ಸಾಮಾನ್ಯ ವೈರಲ್ ಸೋಂಕನ್ನು ಹೋಲುತ್ತವೆ, ಆದರೆ ಕ್ರಮೇಣ ರೋಗಿಯು ಗೊಂದಲ, ಸೆಳೆತ ಮತ್ತು ಕೋಮಾವನ್ನು ಅನುಭವಿಸುತ್ತಾನೆ. ಈ ಸೋಂಕು ವೇಗವಾಗಿ ಹರಡುತ್ತದೆ ಮತ್ತು ಇದಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಅದಕ್ಕಾಗಿಯೇ ಮೆದುಳನ್ನು ತಿನ್ನುವ ಅಮೀಬಾವನ್ನು ವೈದ್ಯಕೀಯ ವಿಜ್ಞಾನದಲ್ಲಿ ಅತ್ಯಂತ ಅಪಾಯಕಾರಿ ಸೋಂಕುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಶಿಲೀಂಧ್ರ ಸೋಂಕು, ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವುದೇಕೆ ಗೊತ್ತಾ? ಇಲ್ಲಿದೆ ತಜ್ಞರ ಮಾಹಿತಿ
ಕೇರಳದಲ್ಲಿಯೇ ಈ ಸೋಂಕು ಏಕೆ ಹೆಚ್ಚುತ್ತಿದೆ?:
ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ವಿವರಿಸುವಂತೆ, ಕೇರಳದಲ್ಲಿ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ಹೆಚ್ಚಾಗಲು ಅಲ್ಲಿನ ಬೆಚ್ಚಗಿನ ವಾತಾವರಣ ಒಂದು ಕಾರಣವಾಗಿರಬಹುದು. ಆಗಾಗ ಮಳೆ ಬೀಳುವುದು ಮತ್ತು ಅದರಿಂದ ಅಲ್ಲಲ್ಲಿ ನೀರು ನಿಲ್ಲುವುದು ಅಮೀಬಾಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ. ಅನೇಕ ಪ್ರದೇಶಗಳಲ್ಲಿ, ಜನರು ದೈನಂದಿನ ಅಗತ್ಯಗಳಿಗಾಗಿ ಕೊಳ ಮತ್ತು ಸರೋವರದ ನೀರನ್ನು ಬಳಸುತ್ತಾರೆ. ಇದು ಸೋಂಕಿನ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದಲ್ಲದೆ, ನಗರ ಪ್ರದೇಶಗಳಲ್ಲಿ ಈಜುಕೊಳಗಳ ಕಳಪೆ ನೈರ್ಮಲ್ಯವು ಸೋಂಕಿನ ಹರಡುವಿಕೆಗೆ ಕಾರಣವಾಗಬಹುದು.
ರೋಗದ ಆರಂಭಿಕ ಲಕ್ಷಣಗಳು ಯಾವುವು:
ತಲೆನೋವು
ಜ್ವರ
ವಾಂತಿ, ಕುತ್ತಿಗೆ ಬಿಗಿತ
ಆಯಾಸ
ಈ ಸೋಂಕಿನ ಆರಂಭಿಕ ಪತ್ತೆ ಕಷ್ಟ, ಇದರಿಂದಾಗಿಯೇ 95%ಕ್ಕಿಂತ ಹೆಚ್ಚು ಮರಣ ಪ್ರಮಾಣ ಉಂಟಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




