ಏನಿದು ಅಮೀಬಾ ಸೋಂಕು? ಮೆದುಳು ತಿನ್ನುವ ಈ ಸೋಂಕು ಹೇಗೆ ಹರಡುತ್ತೆ? ವೈದ್ಯರು ಹೇಳೋದೇನು?
ಅದೊಂದು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿ. ಆದರೆ ಮೂಗಿನಿಂದ ಮೆದುಳಿಗೆ ಪ್ರವೇಶಿಸಿ ಇಡೀ ಮೆದುಳನ್ನೇ ತಿಂದು ಹಾಕುತ್ತೆ. ಕಳೆದ ಕೆಲ ತಿಂಗಳಿಂದ ದೇವರ ನಾಡು ಕೇರಳದಲ್ಲಿ ಅಪರೂಪದ ಅಮೀಬಾ ಎಂಬ ಸೋಂಕು ಪತ್ತೆಯಾಗುತ್ತಿದೆ. ಇದು ಕೇರಳಿಗರಿಗೆ ಅಷ್ಟೇ ಅಲ್ಲದೆ ಇಡೀ ದೇಶಕ್ಕೆ ಆತಂಕ ಹುಟ್ಟಿಸಿದೆ. ಕಳೆದ ಎರಡು ತಿಂಗಳಲ್ಲಿ 4 ಪ್ರಕರಣಗಳು ಪತ್ತೆಯಾಗಿದ್ದು ಈಗಾಗಲೇ ಮೂವರು ಬಲಿಯಾಗಿದ್ದಾರೆ. ಅದರಲ್ಲೂ ಮಕ್ಕಳಲ್ಲೇ ಈ ಸೋಂಕು ಕಂಡುಬಂದಿದ್ದು ಪೋಷಕರಿಗೆ ಆತಂಕ ಹೆಚ್ಚಾಗಿದೆ. ಬನ್ನಿ ಈ ಅಮೀಬಾ ಸೋಂಕು ಹೇಗೆ ಹರಡುತ್ತೆ. ಇದು ಮೊದಲು ಕಂಡು ಬಂದಿದ್ದು ಎಲ್ಲಿ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಭಾರಿ ಮಳೆಯಿಂದಾಗಿ ಕೊಚ್ಚಿಕೊಂಡು ಬರುವ ಮಣ್ಣು, ತ್ಯಾಜ್ಯದಿಂದ ಕೆರೆ-ಕುಂಟೆ, ಕಲ್ಯಾಣಿ, ನದಿಗಳೆಲ್ಲಾ ಕಲುಷಿತಗೊಳ್ಳುತ್ತಿವೆ. ಮತ್ತೊಂದೆಡೆ ಎಷ್ಟೋ ವರ್ಷಗಳಿಂದ ಸ್ವಚ್ಛತೆ ಕಾಣದೆ ನಿಂತಲ್ಲೇ ನಿಂತ ಕಲುಷಿತ ನೀರಿನ ಬಗ್ಗೆ ಅರಿವೇ ಇಲ್ಲದೆ ಮಕ್ಕಳು ಅದೇ ನೀರಿಗೆ ಇಳಿದು ಆಟ ಆಡುತ್ತಿದ್ದಾರೆ. ಆದರೆ ಈ ರೀತಿ ಕಲುಷಿತ ನೀರಿಗೆ ಇಳಿದು ಈಜು ಆಡುವ ಮಕ್ಕಳಲ್ಲಿ, ವಯಸ್ಕರಲ್ಲಿ ಅಮೀಬಾ ಎಂಬ ಸೋಂಕು ಕಂಡು ಬರುತ್ತಿದೆ. ಈ ಸೋಂಕಿನ ಬಗ್ಗೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಸಂಜಯ್ ಅವರು ಟಿವಿ9 ಡಿಜಿಟಲ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
ಕಲುಷಿತ ನೀರಿನಲ್ಲಿ ಸ್ನಾನ ಮಾಡುವಾಗ ಅಥವಾ ಕಲುಷಿತ ನೀರು ಸಂಗ್ರಹವಾದ ಕೆರೆ, ಕುಂಟೆಗಳಲ್ಲಿ, ಸರಿಯಾಗಿ ನಿರ್ವಾಹಣೆ ಮಾಡಿಲ್ಲದ ಈಜು ಕೊಳಗಳಲ್ಲಿ ಈಜಾಡುವ ಸಂದರ್ಭದಲ್ಲಿ ಕಲುಷಿತ ನೀರಿನಲ್ಲಿರುವ ನೆಗ್ಲೆರಿಯಾ ಫೌಲೇರಿ ಎನ್ನುವ ಬ್ಯಾಕ್ಟೀರಿಯಾ ಮಾನವನ ಮೂಗಿನ ಫೆಬ್ರೊ ಫಾಂಟ್ ಪ್ಲೇಟ್ ಎಂಬ ಮೂಗಿನ ಸಣ್ಣ ಬೋನ್ ಮೂಲಕ ದೇಹಕ್ಕೆ ಸೇರಿ, ನೇರವಾಗಿ ಮಿದುಳಿನ ಜೀವಕೋಶಗಳಿಗೆ ಹಾನಿ ಮಾಡಿ, ಮಿದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳಲ್ಲಿನ ಉರಿಯೂತ ಮತ್ತು ಮಿದುಳಿನ ಉರಿಯೂತಕ್ಕೆ ಕಾರಣವಾಗುತ್ತದೆ. ಅಮೀಬಾ ಒಂದು ಸ್ವತಂತ್ರ ಏಕಕೋಶ ಜೀವಿಯಾಗಿದ್ದು ಇದಕ್ಕೆ ಪರಿಸರ ವ್ಯವಸ್ಥೆಯ ಅಗತ್ಯವಿಲ್ಲ. ಕಲುಷಿತಗೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಇವು ಅಭಿವೃದ್ಧಿ ಹೊಂದುತ್ತವೆ.
ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್ ( Primary Amoebic meningoencephalitis-PAM). ನೆಗ್ಲೇರಿಯಾ ಫೌಲೆರಿ (Naegleria fowleri) ಎಂಬ ಮಿದುಳು ತಿನ್ನುವ ಅಮೀಬಾ ಸೋಂಕು ಹೆಚ್ಚಾಗಿ ನೆರೆಯ ಕೇರಳ ರಾಜ್ಯದಲ್ಲಿ ಕಂಡುಬಂದಿದೆ. ಎರಡು ತಿಂಗಳ ಅವಧಿಯಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು ಮೂವರು ಮೃತಪಟ್ಟಿದ್ದಾರೆ. ಈ ಸೋಂಕು ಒಮ್ಮೆ ತಗುಲಿದರೆ ಅದು ವಾಸಿ ಆಗೋದು 97%ದಷ್ಟು ಕಷ್ಟ ಎಂದು ವೈದ್ಯರು ಹೇಳುತ್ತಾರೆ. ಅಪರೂಪದಲ್ಲೇ ಅಪರೂಪವಾಗಿರುವ ಈ ಸೋಂಕಿಗೆ ತುತ್ತಾದ ವ್ಯಕ್ತಿ ಬದುಕುಳಿಯುವುದೇ ಪವಾಡ. ಬದುಕುಳಿದವರ ಸಂಖ್ಯೆ ತುಂಬನೇ ಕಡಿಮೆ ಇದೆ. ಈ ಸೋಂಕಿಗೆ ತುತ್ತಾದ ವ್ಯಕ್ತಿಯ ಮೆದುಳಿನ ಜೀವಕೋಶಗಳು ಹಾನಿಯಾಗುತ್ತಾ ಬಂದು ಆತ ಮೃತಪಡುತ್ತಾನೆ. ಇದನ್ನು ಗುಣಪಡಿಸಲಾಗದ ಕಾಯಿಲೆ ಎಂದು ಪರಿಗಣಿಸಲಾಗಿದೆ.
ಕೇರಳದಲ್ಲಿ ಪತ್ತೆಯಾದ ಪ್ರಕರಣಗಳ ವಿವರ
ಕೇರಳದಲ್ಲಿ ಅಮೀಬಾ ಸೋಂಕು ಪತ್ತೆಯಾಗಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುಂಚೆಯೂ ಪತ್ತೆಯಾಗಿದೆ. ಆದರೆ ಇಷ್ಟು ವೇಗದಲ್ಲಿ ಹರಡುತ್ತಿರುವು ಇದೇ ಮೊದಲು. ಕೇರಳದಲ್ಲಿ ಈ ವರ್ಷದ ಮೊದಲ ಪ್ರಕರಣವು ಮೇ 21 ರಂದು ಪತ್ತೆಯಾಗಿತ್ತು. ಇದರಲ್ಲಿ ಮಲಪ್ಪುರಂ ಮೂಲದ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಜೂನ್ 25 ರಂದು ಕಣ್ಣೂರಿನಲ್ಲಿ ಎರಡನೆಯ ಪ್ರಕರಣ ಪತ್ತೆಯಾಗಿದ್ದು 13 ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಮೂರನೇ ಪ್ರಕರಣದಲ್ಲಿ ಕೇರಳದ ಕೋಝಿಕ್ಕೋಡ್‌ನಲ್ಲಿ ಜುಲೈ 03ರಂದು 14 ವರ್ಷದ ಬಾಲಕ ಈ ಸೋಂಕಿಗೆ ಮೃತಪಟ್ಟಿದ್ದ. ಇನ್ನು 4ನೇ ಪ್ರಕರಣದಲ್ಲಿ ಈ ಸೋಂಕಿನಿಂದ ಬಳಲುತ್ತಿರುವ ಬಾಲಕ ಕೋಯಿಕ್ಕೋಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಕೇರಳದಲ್ಲಿ ಕಳೆದ ವರ್ಷ ಈ ಸೋಂಕಿಗೆ ಅಳಪ್ಪುರ ಜಿಲ್ಲೆಯ 15 ವರ್ಷದ ಬಾಲಕ ಮೃತಪಟ್ಟಿದ್ದ. 2019 ಮತ್ತು 2020ರಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ಮತ್ತು 2020ರಲ್ಲಿ ಕೋಯಿಕ್ಕೋಡ್ ಮತ್ತು 2022ರಲ್ಲಿ ತ್ರಿಶೂರ್ ಜಿಲ್ಲೆಯಲ್ಲಿ ಪ್ರಕರಣಗಳು ಪತ್ತೆಯಾಗಿದ್ದವು. ಕೇರಳ ಬಿಟ್ಟರೆ, ಪಶ್ಚಿಮ ಬಂಗಾಳದಲ್ಲಿ ಈ ಸೋಂಕು ಹೆಚ್ಚು ಪತ್ತೆಯಾಗಿದೆ. ಈ ವರ್ಷ ಕೋಲ್ಕತ್ತದಲ್ಲಿ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಈ ಸೋಂಕು ಕಂಡು ಬಂದಿತ್ತು. ಕಳೆದ ವರ್ಷ ಹಾಗೂ 2015ರಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದ. ಇನ್ನು 2016ರಲ್ಲಿ 16 ವರ್ಷದ ಬಾಲಕ ಈ ಸೋಂಕಿನಿಂದ ಗುಣಮುಖನಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ.
ಭಾರತ ಅಷ್ಟೇ ಅಲ್ಲ ಬೇರೆ ದೇಶದಲ್ಲೂ ಇದೆ ಅಮೀಬಾ ಹಾವಳಿ
ಭಾರತ ಅಷ್ಟೇ ಅಲ್ಲದೆ ಜಗತ್ತಿನ ನಾನಾ ಕಡೆಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ವರದಿಗಳ ಪ್ರಕಾರ, ಅಂಟಾರ್ಕ್ಟಿಕಾ ಬಿಟ್ಟು ಉಳಿದ ಖಂಡಗಳ 33 ರಾಷ್ಟ್ರಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಅಮೆರಿಕದಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚು.
ಅಮೀಬಾ ಸೋಂಕು ಮೊದಲು ಕಂಡು ಬಂದಿದ್ದು ಎಲ್ಲಿ?
ಈ ಸೋಂಕು ಮೊದಲು ಪತ್ತೆಯಾಗಿದ್ದು 1961-65ರ ಇಸವಿಯಲ್ಲಿ. ಆಸ್ಟ್ರೇಲಿಯಾದ ಅಡಿಲೇಡ್ ಎಂಬಲ್ಲಿ ನಾಲ್ವರು ಈ ಸೋಂಕಿಗೆ ಮೃತಪಟ್ಟಿದ್ದರು. ಫೌಲರ್ ಮತ್ತು ಕಾರ್ಟರ್ ಎಂಬುವವರು ಈ ಸೋಂಕಿಗೆ ಕಾರಣವಾಗುವ ನೆಗ್ಲೇರಿಯಾ ಫೌಲೆರಿ ಅಮೀಬಾವನ್ನು ಪತ್ತೆ ಮಾಡಿದ್ದರು.
ಅಮೀಬಾ ಸೋಂಕಿನ ಲಕ್ಷಣಗಳು
ಮಳೆಗಾಲ ಶುರುವಾದ್ರೆ ಸಾಕು ಎಚ್1ಎನ್1, ಝೀಕಾ ವೈರಸ್, ಡೆಂಗ್ಯೂ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಇನ್ನು ಅಮೀಬಾ ಸೋಂಕಿನ ಲಕ್ಷಣ ಕೂಡ ಸಾಮಾನ್ಯ ರೋಗ ಲಕ್ಷಣದಂತಿದ್ದು ಬೇಗ ಅರಿವಿಗೆ ಬರುವುದಿಲ್ಲ. ಹೀಗಾಗಿ ಜನ ಅದನ್ನು ನಿರ್ಲಕ್ಷಿಸಿ ಕೊನೆಗೆ ಸೋಂಕು ತೀವ್ರವಾದ ಬಳಿಕ ವೈದ್ಯರ ಬಳಿ ಹೋಗುತ್ತಾರೆ. ಆಗ ಚಿಕಿತ್ಸೆ ಫಲಿಸದೆ ಸಾವು ಸಂಭವಿಸುತ್ತದೆ. ಆದರೆ ಸೋಂಕನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದ್ರೆ, ಚಿಕಿತ್ಸೆ ನೀಡಿ ಜೀವ ಉಳಿಸಬಹುದು ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಸಂಜಯ್ ತಿಳಿಸಿದ್ದಾರೆ. ಜ್ವರ, ತಲೆ ನೋವು, ವಾಂತಿ, ಸುಸ್ತು, ಕುತ್ತಿಗೆ ನೋವು ಇದು ಅಮೀಬಾ ಸೋಂಕಿನ ಆರಂಭಿಕ ಲಕ್ಷಣಗಳು.
Phagocytosis by an Amoeba. Some medically important amoeba include:
➡️ Entamoeba histolytica: Causes amoebic dysentery, an infection of the intestines characterized by severe diarrhea, abdominal pain, and sometimes liver abscesses.
➡️ Naegleria fowleri: Causes primary amoebic… pic.twitter.com/t31qa2t1Nn
— ABCTUTORIAL (@abctutorial65) May 14, 2024
ಸೋಂಕು ತಗುಲಿದ ಕೆಲ ದಿನಗಳ ಬಳಿಕ ತೀವ್ರ ತಲೆನೋವು, ಏಕಾಗ್ರತೆಯ ಕೊರತೆ, ಮಾನಸಿಕ ಅಸ್ಥಿರತೆ, ಗೊಂದಲ, ಭ್ರಮಾಧೀನ ಮನಸ್ಥಿತಿ ಎದುರಾಗುತ್ತೆ. ಸೋಂಕು ತೀವ್ರವಾದ್ರೆ ಕೋಮಾಗೆ ಜಾರುವುದು ಅಥವಾ ಸಾವು ಸಂಭವಿಸುತ್ತದೆ. ಹೆಚ್ಚಿನ ಸೋಂಕಿತರು ಸೋಂಕು ತಗುಲಿದ ಕೇವಲ 18 ದಿನಗಳ ಅವಧಿಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇನ್ನು ಕೇವಲ 7-14 ದಿನಗಳಲ್ಲೇ ಈ ಸೋಂಕು ಇಡೀ ಮೆದುಳಿಗೆ ಹರಡುತ್ತದೆ.
ಅಮೀಬಾ ಸಾಂಕ್ರಾಮಿಕ ರೋಗವಲ್ಲ
ಅಮೀಬಾ ಸೋಂಕು ಸಾಂಕ್ರಾಮಿಕವಲ್ಲ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವುದರಿಂದ, ಅಥವಾ ಅವರ ಜೊತೆ ಕೂತು ಆಹಾರ ಸೇವಿಸುವುದರಿಂದ ಇದು ಹರಡುವುದಿಲ್ಲ. ಅಥವಾ ಅಮೀಬಾ ಇರುವ ನೀರನ್ನು ಕುಡಿಯುವುದರಿಂದಲೂ ಇದು ಹರಡುವುದಿಲ್ಲ. ಇದು 40ರಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿ ಇರುವ ಬೆಚ್ಚಗಿನ ನೀರಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಉಪ್ಪು ನೀರಿನಲ್ಲಿ ಬದುಕುವುದಿಲ್ಲ.
ಅಮೀಬಾ ಸೋಂಕು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಅದರಲ್ಲೂ 10ರಿಂದ 18 ವರ್ಷದೊಳಗಿನವರಲ್ಲಿ ಹೆಚ್ಚು ಪತ್ತೆಯಾಗಿದೆ. ಆದರೆ 20 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ 5 ತಿಂಗಳ ಮಗುವಿನಲ್ಲಿ ಈ ಸೋಂಕು ಪತ್ತೆಯಾಗಿತ್ತು.
ಅಮೀಬಾ ಸೋಂಕಿಗೆ ಚಿಕಿತ್ಸೆ ಹೇಗೆ?
ಸೆರೆಬ್ರೊಸ್ಪೈನಲ್ ಫ್ಲೂಯಿಡ್ ಅನಾಲಿಸಿಸ್ (ಸಿಎಸ್‌ಎಫ್) ಲಂಬರ್ ಪಂಚರ್ (ಬೆನ್ನು ಮೂಳೆಯಿಂದ ನೀರು ತೆಗೆದು ಅದನ್ನು ಪರೀಕ್ಷಿಸುವುದು), ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಮುಂತಾದ ವಿಧಾನಗಳ ಮೂಲಕ ಸೋಂಕನ್ನು ಪತ್ತೆ ಮಾಡಬಹುದು. ಇನ್ನು ಸೋಂಕಿನ ತೀವ್ರತೆ ಹೆಚ್ಚಿದ್ದರೆ ಬ್ರೈನ್ ಸ್ಕ್ಯಾನಿಂಗ್, MRI, CT ಸ್ಕ್ಯಾನ್ ಮಾಡಲಾಗುತ್ತೆ. ಈ ವೇಳೆ ಮೆದುಳು ಊತ, ಮೆದುಳು ಹಾನಿಯಾಗಿ ಕೊಳತೆ ಸ್ಥಿತಿಯಲ್ಲಿರುವುದು, ತಲೆಯಲ್ಲಿ ನೀರು ತುಂಬಿಕೊಂಡು ತಲೆ ದೊಡ್ಡದಾಗಿರುವಂತಹ ಬದಲಾವಣೆಗಳನೆಲ್ಲವನ್ನೂ ಈ ಬ್ರೈನ್ ಸ್ಕ್ಯಾನಿಂಗ್ ಮೂಲಕ ಪತ್ತೆ ಮಾಡಬಹುದು. ಸೋಂಕು ಎಷ್ಟುರ ಮಟ್ಟಿಗೆ ಹರಡಿದೆ ಎಂದು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತೆ. ಈ ಸೋಂಕಿಗೆ ಆಂಟಿ ಫಂಗಲ್, ಆಂಟಿ ಟ್ರೋಫೋಸೈಟ್ ಮತ್ತು ಆಂಫೋಟೆರಿಸಿನ್ ಬಿ, ಸಿರೈಡ್ಗಳನ್ನು ಔಷಧಿಗಳು ನಮ್ಮಲ್ಲಿ ಲಭ್ಯವಿದೆ. ಒಟ್ಟು 28 ದಿನಗಳ ಕಾಲ ಟ್ರೀಟ್ಮೆಂಟ್ ನೀಡಲಾಗುತ್ತದೆ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಸಂಜಯ್ ಅವರು ವಿವರಿಸಿದರು.
ಅಮೀಬಾ ಸೋಂಕಿನಿಂದ ದೂರ ಇರುವುದು ಹೇಗೆ?
ಅಮೀಬಾ ಮೂಗಿನಿಂದ ದೇಹ ತಲುಪುವುದರಿಂದ ಈಜುವಾಗ ಮೂಗಿನ ಕ್ಲಿಪ್ ಧರಿಸುವುದು ಅಥವಾ ಶುದ್ಧ ನೀರಿನಲ್ಲಿ ಈಜಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಒಟ್ಟಾರೆ ಅಮೀಬಾ ಎಂಬ ಅಪರೂಪದ ಮೆದುಳು ತಿನ್ನುವ ಸೋಂಕು ಕೇರಳದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ಕೇರಳ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜೊತೆಗೆ ಕೇರಳ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆ ಸಂದರ್ಭದಲ್ಲಿ ಅನೇಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುವುದು ಅತಿ ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.