
ಹೈದರಾಬಾದ್, ಸೆಪ್ಟೆಂಬರ್ 04: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಮಗಳು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ತೆಲಂಗಾಣದ ಅರಣ್ಯ ಸಚಿವೆ ಕೊಂಡ ಸುರೇಖಾ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ. ಆದರೆ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುರೇಖಾ, ಯಾವುದೇ ವಿವರಣೆ ಕೇಳದೆ ಏಕಾಏಕಿ ಕೈಬಿಟ್ಟಿರುವುದು ಅನ್ಯಾಯ ಎಂದಿದ್ದು, ತಮ್ಮನ್ನು ತೆಗೆದುಹಾಕಲು ಸಿಎಂ ರೇವಂತ್ ರೆಡ್ಡಿ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜೀನಾಮೆ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ವಜಾಗೊಳಿಸುವಿಕೆಯ ಬಗ್ಗೆ ಮಾತನಾಡಿದ ಸುರೇಖಾ, ಮರಣದಂಡನೆ ಶಿಕ್ಷೆಗೆ ಒಳಗಾದ ಕೈದಿಗೂ ಕೊನೆಯ ಆಸೆ ಕೇಳಲಾಗುತ್ತದೆ, ಆದರೆ ನನಗೆ ಯಾವುದೇ ಮುನ್ಸೂಚನೆ ಅಥವಾ ವಿವರಣೆ ನೀಡುವ ಅವಕಾಶವನ್ನೇ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವತಂತ್ರವಾಗಿ ಮಾತನಾಡುವ ಹಕ್ಕು ಹೊಂದಿರುವ ವಯಸ್ಕ ಮಗಳ ಹೇಳಿಕೆಗೆ ತಾಯಿಯನ್ನು ಹೊಣೆಗಾರರನ್ನಾಗಿ ಮಾಡುವುದು ತಪ್ಪು ಎಂದಿರುವ ಅವರು, ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಹಾಗೂ ಸಿಎಂ ಆಪ್ತರು ತಮ್ಮ ವಿರುದ್ಧ ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕು: ಸಿಎಂ ರೇವಂತ್ ರೆಡ್ಡಿ
ಹಿಂದುಳಿದ ವರ್ಗದ (ಬಿಸಿ) ಹಿರಿಯ ನಾಯಕಿಯಾಗಿರುವ ತಮ್ಮನ್ನು ಅನ್ಯಾಯವಾಗಿ ಸಂಪುಟದಿಂದ ಕೈಬಿಟ್ಟಿರುವುದು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡರೂ ಕಾಂಗ್ರೆಸ್ ಶಾಸಕಿಯಾಗಿಯೇ ಮುಂದುವರೆಯುವುದಾಗಿ ಸ್ಪಷ್ಟಪಡಿಸಿರುವ ಸುರೇಖಾ, ತೆಲಂಗಾಣ ಸರ್ಕಾರದಲ್ಲಿ ತಮಗಾದ ಅನ್ಯಾಯ ಮತ್ತು ಸಿಎಂ ರೇವಂತ್ ರೆಡ್ಡಿ ಅವರ ದಬ್ಬಾಳಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.
ಹೈಕಮಾಂಡ್‌ಗೆ ನನ್ನನ್ನು ತೆಗೆಯುವ ಯಾವುದೇ ಇರಾದೆ ಇರಲಿಲ್ಲ. ಆದರೆ ಕೊಂಡ ಸುರೇಖಾರನ್ನು ಸಂಪುಟದಿಂದ ತೆಗೆಯದಿದ್ದರೆ ನಾನೇ ಮುಖ್ಯಮಂತ್ರಿ ಸ್ಥಾನ ಬಿಟ್ಟು ಹೋಗುತ್ತೇನೆ ಎಂದು ರೇವಂತ್ ರೆಡ್ಡಿ ಹೈಕಮಾಂಡ್‌ಗೆ ಬ್ಲ್ಯಾಕ್‌ಮೇಲ್ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಮಗಳ ಹೇಳಿಕೆಗೆ ನಾನೇಕೆ ಹೊಣೆ?:ನನ್ನ ಪುತ್ರಿ ಸುಶ್ಮಿತಾ ಸ್ವತಂತ್ರ ಆಲೋಚನೆ ಹೊಂದಿರುವ ವಯಸ್ಕ ಮಹಿಳೆ. ಆಕೆಯ ಮಾತುಗಳಿಗೆ ನನ್ನನ್ನು ದಂಡಿಸುವುದು ಎಷ್ಟು ಸರಿ ಆಕೆಯ ಹೇಳಿಕೆಯನ್ನು ನಾನು ಖಂಡಿಸಿದರೆ ನನ್ನ ಮಗಳನ್ನೇ ನಾನು ಕೀಳಾಗಿ ಕಂಡಂತೆ ಎಂದು ಅವರು ಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಪಕ್ಷ ಬಿಟ್ಟು ಹೋಗುವುದಿಲ್ಲ, ಬದಲಾಗಿ ಕಾಂಗ್ರೆಸ್ ಶಾಸಕಿಯಾಗಿಯೇ ಮುಂದುವರೆದು ಜನರಿಗಾಗಿ ಹೋರಾಡುವುದಾಗಿ ತಿಳಿಸಿದ್ದಾರೆ.
ವಾರಂಗಲ್ ಜಿಲ್ಲೆಯ ಪರಕಲ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರೇವೂರಿ ಪ್ರಕಾಶ್ ರೆಡ್ಡಿ ಅವರಿಗೇ ಮುಂದಿನ ಚುನಾವಣೆಯಲ್ಲೂ ಟಿಕೆಟ್ ನೀಡುವುದಾಗಿ ಸಿಎಂ ಘೋಷಿಸಿದ್ದರು. ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ ಸುರೇಖಾ ಪುತ್ರಿ ಕೊಂಡ ಸುಶ್ಮಿತಾ, ಸಿಎಂ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ್ದರು. ಇದು ಕಾಂಗ್ರೆಸ್‌ನಲ್ಲಿ ತೀವ್ರ ಶಿಸ್ತುಕ್ರಮದ ಬಿಕ್ಕಟ್ಟಿಗೆ ಕಾರಣವಾಗಿತ್ತು.
ಸುರೇಖಾ ವಜಾಗೊಂಡ ನಂತರ ತೆಲಂಗಾಣ ಸಚಿವ ಸಂಪುಟದಲ್ಲಿ ಕೇವಲ ಒಬ್ಬರೇ ಮಹಿಳಾ ಸಚಿವೆ (ಸೀತಕ್ಕ) ಉಳಿದುಕೊಂಡಿದ್ದಾರೆ. ಇದನ್ನು ಸರಿದೂಗಿಸಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನಿಂಗ್ ಬೋರ್ಡ್ ಉಪಾಧ್ಯಕ್ಷೆಯಾಗಿ ಗದ್ವಾಲ್ ವಿಜಯಲಕ್ಷ್ಮಿ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೆರೆಲ್ಲಾ ಶಾರದಾ ಅವರನ್ನು ತಕ್ಷಣವೇ ನೇಮಕ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:41 am, Fri, 4 September 26