ಪಹಲ್ಗಾಮ್ ದಾಳಿ ಹಿಂದೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ; ಕೊನೆಗೂ ಎನ್​ಐಎಯಿಂದ ಚಾರ್ಜ್‌ಶೀಟ್ ಸಲ್ಲಿಕೆ

ಭಾರತದಲ್ಲಿ ನಿರಂತರವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಚು ರೂಪಿಸುತ್ತಿರುವ ಜಮಾತ್-ಉದ್-ದವಾ (JuD) ಮತ್ತು ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಂದು ಗಂಭೀರ ಕ್ರಮ ಕೈಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭೀಕರ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಹಫೀಜ್ ಸಯೀದ್‌ನನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಪಹಲ್ಗಾಮ್ ದಾಳಿ ಹಿಂದೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ; ಕೊನೆಗೂ ಎನ್​ಐಎಯಿಂದ ಚಾರ್ಜ್‌ಶೀಟ್ ಸಲ್ಲಿಕೆ
Hafiz Saeed
Image Credit source: x

Updated on: Jul 06, 2026 | 5:56 PM

ಮುಖ್ಯಾಂಶಗಳು

  • ಪಹಲ್ಗಾಮ್ ದಾಳಿಯಲ್ಲಿ 26 ಜನ ಸಾವು
  • ಈ ದಾಳಿಯ ಹಿಂದೆ ಎಲ್​ಇಟಿ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ
  • ಎನ್​ಐಎಯಿಂದ ಹೊಸ ಚಾರ್ಜ್​ಶೀಟ್ ಸಲ್ಲಿಕೆ

ನವದೆಹಲಿ, ಜುಲೈ 6: ಭಾರತದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದನಾ ದಾಳಿ (Pahalgam Terror Attack) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು (ಜುಲೈ 6), ಪಾಕಿಸ್ತಾನ ಮೂಲದ ಉಗ್ರ ಹಾಗೂ ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ತನ್ನ ಪೂರಕ ದೋಷಾರೋಪ ಪಟ್ಟಿಯಲ್ಲಿ ಆರೋಪಿಯನ್ನಾಗಿ ಹೆಸರಿಸಿದೆ. ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ಪೂರಕ ದೋಷಾರೋಪ ಪಟ್ಟಿಯಲ್ಲಿ, ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪಹಲ್ಗಾಮ್​ ದಾಳಿ ಪ್ರಕರಣದಲ್ಲಿ ನಡೆದ ಮಹತ್ವದ ಬೆಳವಣಿಗೆ ಇದಾಗಿದೆ.

ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣ:

ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಲಷ್ಕರ್-ಎ-ತೊಯ್ಬಾ ಉಗ್ರರು ಈ ದಾಳಿಯನ್ನು ನಡೆಸಿದ್ದರು. ಈ ದಾಳಿಯಲ್ಲಿ 25 ಪ್ರವಾಸಿಗರು ಹಾಗೂ ಓರ್ವ ಸ್ಥಳೀಯ ಸಾವನ್ನಪ್ಪಿದ್ದರು. ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರಲು ಪಾಕಿಸ್ತಾನದಿಂದಲೇ ಈ ದಾಳಿಯ ಸಂಪೂರ್ಣ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ, ಈಗಾಗಲೇ ಹಲವು ಉಗ್ರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ತನಿಖೆಯಲ್ಲಿ ಬಯಲಾಯ್ತು ಹಫೀಜ್ ಸಯೀದ್ ಪಾತ್ರ:

ಎನ್‌ಐಎ ಅಧಿಕಾರಿಗಳು ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಪಹಲ್ಗಾಮ್ ದಾಳಿಗೆ ಧನಸಹಾಯ ಮಾಡುವುದು, ಭಾರತದೊಳಗೆ ನುಸುಳಿರುವ ಉಗ್ರರಿಗೆ ಸೂಚನೆಗಳನ್ನು ನೀಡುವುದು ಮತ್ತು ಸ್ಥಳೀಯ ಯುವಕರನ್ನು ದಿಕ್ಕು ತಪ್ಪಿಸಿ ಸಂಘಟನೆಗೆ ಸೇರಿಸಿಕೊಳ್ಳುವಲ್ಲಿ ಹಫೀಜ್ ಸಯೀದ್ ಪ್ರಮುಖ ಪಾತ್ರ ವಹಿಸಿದ್ದಾನೆ. ಡಿಜಿಟಲ್ ಪುರಾವೆಗಳು, ಹಣಕಾಸಿನ ವಹಿವಾಟುಗಳು ಮತ್ತು ಇತ್ತೀಚೆಗೆ ಬಂಧಿತರಾದ ಉಗ್ರರ ವಿಚಾರಣೆಯ ಆಧಾರದ ಮೇಲೆ ಎನ್‌ಐಎ ಈ ಪೂರಕ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿದೆ.


ಪಾಕಿಸ್ತಾನದ ಜೈಲಿನಿಂದಲೇ ಭಯೋತ್ಪಾದಕ ಸಂಚು:

ಲಷ್ಕರ್ ಮುಖ್ಯಸ್ಥ ಹಾಗೂ ಮುಂಬೈ 26/11 ದಾಳಿಯ ಮಾಸ್ಟರ್‌ಮೈಂಡ್ ಆಗಿರುವ ಹಫೀಜ್ ಸಯೀದ್ ಸದ್ಯ ಪಾಕಿಸ್ತಾನದ ಜೈಲಿನಲ್ಲಿದ್ದಾನೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಅವನಿಗೆ ಈಗಾಗಲೇ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಜೈಲಿನಲ್ಲಿದ್ದೂ ಆತ ತನ್ನ ಕಮಾಂಡರ್‌ಗಳ ಮೂಲಕ ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ಮುಂದುವರಿಸುತ್ತಿದ್ದಾನೆ ಎಂಬುದಕ್ಕೆ ಎನ್‌ಐಎ ಹೊಸ ಚಾರ್ಜ್‌ಶೀಟ್‌ನಲ್ಲಿ ಸಾಕ್ಷ್ಯಗಳನ್ನು ಒದಗಿಸಿದೆ.

ಇದನ್ನೂ ಓದಿ: Pahalgam Attack: ಪಹಲ್ಗಾಮ್​ನ​ ಭೀಕರ ದಾಳಿಯ ದಿನ ಏನೇನಾಯ್ತು? ಉಗ್ರರ ಸಿದ್ಧತೆ ಹೇಗಿತ್ತು?  

ಅಂತರರಾಷ್ಟ್ರೀಯ ಮಟ್ಟದಲ್ಲಿ ಘೋಷಿತ ಭಯೋತ್ಪಾದಕನಾಗಿರುವ ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಅಧಿಕೃತ ಮನವಿ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (UNSC) ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದು, ಇತ್ತೀಚಿನ ಈ ಎನ್‌ಐಎ ಚಾರ್ಜ್‌ಶೀಟ್ ಪಾಕಿಸ್ತಾನದ ಭಯೋತ್ಪಾದನಾ ಪೋಷಣೆಯನ್ನು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಬಯಲಿಗೆಳೆದಿದೆ. ಎನ್‌ಐಎ ಸಲ್ಲಿಸಿರುವ ಈ ಹೊಸ ದೋಷಾರೋಪ ಪಟ್ಟಿಯ ಆಧಾರದ ಮೇಲೆ ವಿಶೇಷ ನ್ಯಾಯಾಲಯವು ಹಫೀಜ್ ಸಯೀದ್ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಲಿದೆ.


ಹಫೀಜ್ ಸಯೀದ್ ಮೇಲಿರುವ ಕೇಸುಗಳು:

ಕೇಂದ್ರ ಗೃಹ ಸಚಿವಾಲಯದ 2019ರ ಅಧಿಸೂಚನೆಯ ಪ್ರಕಾರ, ಹಫೀಜ್ ಸಯೀದ್ ಭಾರತದ ಹಲವು ರಕ್ತಸಿಕ್ತ ದಾಳಿಗಳ ಮಾಸ್ಟರ್‌ಮೈಂಡ್ ಆಗಿದ್ದಾನೆ. ಅವುಗಳೆಂದರೆ,

ಡಿಸೆಂಬರ್ 22, 2000: ದೆಹಲಿಯ ಕೆಂಪುಕೋಟೆ ದಾಳಿ (ಇಬ್ಬರು ಸೈನಿಕರು ಸೇರಿ ಮೂವರ ಸಾವು).

ಜನವರಿ 1, 2008: ರಾಂಪುರ ದಾಳಿ (7 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಒಬ್ಬ ನಾಗರಿಕನ ಸಾವು).

ನವೆಂಬರ್ 26-28, 2008: ಮುಂಬೈ 26/11 ದಾಳಿ (25 ವಿದೇಶಿಗರು ಸೇರಿದಂತೆ 166 ಜನರ ಸಾವು, 235 ಜನರಿಗೆ ಗಾಯ).

ಆಗಸ್ಟ್ 5, 2015: ಉಧಂಪುರದಲ್ಲಿ ಬಿಎಸ್‌ಎಫ್ (BSF) ಬೆಂಗಾವಲು ಪಡೆಯ ಮೇಲೆ ದಾಳಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Mon, 6 July 26

Follow Us