ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒಲವು
ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸದ ಹೊರತು ಸೋಂಕಿನ ಪ್ರಮಾಣವನ್ನು ತಗ್ಗಿಸುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಠಾಕ್ರೆ ಬಹಿರಂಗಪಡಿಸಿದರೆಂದು ತಿಳಿದುಬಂದಿದೆ. ಆದರೆ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿರುವ, ಶಿವ ಸೇನೆ-ಎನ್ಸಿಪಿ -ಕಾಂಗ್ರೆಸ್ ಒಕ್ಕೂಟದ ಎಲ್ಲಾ ಸದಸ್ಯರು ಲಾಕ್ಡೌನ್ ಮಾಡುವುದೇ ಉತ್ತಮ ಮಾರ್ಗ ಎಂದು ಹೇಳುತ್ತಿಲ್ಲ.
ಮುಂಬೈ: ಮಹಾರಾಷ್ಟ್ರದಲ್ಲಿ ನಿಯಂತ್ರಣಕ್ಕೆ ಬಾರದ ಕೊವಿಡ್ ಪ್ರಕರಣಗಳಿಂದ ದಿಕ್ಕು ತೋಚದಂಥ ಸ್ಥಿತಿಯಲ್ಲಿರುವ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಹೇರುವ ಬಗ್ಗೆ ಒಲವು ಹೊಂದಿರುವುದು ಮೂಲಗಳಿಂದ ಗೊತ್ತಾಗಿದೆ. ಠಾಕ್ರೆ ತಮ್ಮ ಇಂಗಿತವನ್ನು ಶನಿವಾರದಂದು ಕೊವಿಡ್-19 ಪರಿಸ್ಥಿತಿ ಚರ್ಚಿಸಲು ತಾವು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ.
ಮಹಾರಾಷ್ಟ್ರದಲ್ಲಿ ದೇಶದ ಅರ್ಧ ಭಾಗದಷ್ಟು ಸೋಂಕಿನ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ಲಾಕ್ಡೌನ್ ಅನ್ನು ಜಾರಿಮಾಡಿದೆ. ಅದರೆ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸದ ಹೊರತು ಸೋಂಕಿನ ಪ್ರಮಾಣವನ್ನು ತಗ್ಗಿಸುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಠಾಕ್ರೆ ಬಹಿರಂಗಪಡಿಸಿದರೆಂದು ತಿಳಿದುಬಂದಿದೆ. ಆದರೆ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿರುವ, ಶಿವ ಸೇನೆ-ಎನ್ಸಿಪಿ -ಕಾಂಗ್ರೆಸ್ ಒಕ್ಕೂಟದ ಎಲ್ಲಾ ಸದಸ್ಯರು ಲಾಕ್ಡೌನ್ ಮಾಡುವುದೇ ಉತ್ತಮ ಮಾರ್ಗ ಎಂದು ಹೇಳುತ್ತಿಲ್ಲ.
ಹಾಗೆಯೇ, ವಿರೋಧ ಪಕ್ಷವಾಗಿರುವ ಬಿಜೆಪಿ ಸಹ ಇದನ್ನು ವಿರೋಧಿಸುತ್ತಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ‘ಕೆಲದಿನಗಳ ಮಟ್ಟಿಗೆ ಲಾಕ್ಮಾಡುವುದು ಅತ್ಯವಶ್ಯಕವಾಗಿದೆ. ರವಿವಾರದಂದು ಮುಖ್ಯಮಂತ್ರಿಗಳು ಕೊವಿಡ್ ಟಾಸ್ಕ್ಪೋರ್ಸ್ನೊಂದಿಗೆ ಸಭೆಯೊಂದನ್ನು ನಡೆಸಲಿದ್ದಾರೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
‘ನೀವೇನಾದರೂ ಲಾಕ್ಡೌನ್ ಹೇರಿದರೆ, ಜನ ಕೋಪಗೊಳ್ಳುತ್ತಾರೆ, ವ್ಯಾಪಾರ-ವಹಿವಾಟುಗಳೆಲ್ಲ ಸ್ಥಗಿತಗೊಳ್ಳುತ್ತವೆ, ನೀವು ಈ ಆಯಾಮದ ಬಗ್ಗೆ ಯೋಚಿಸಬೇಕಿದೆ,’ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ಚಂದ್ರಶೇಖರ್ ಪಾಟೀಲ್, ‘ಲಾಕ್ಡೌನ್ ಹೇರುವ ಬಗ್ಗೆ ಬಿಜೆಪಿಯ ವಿರೋಧವಿಲ್ಲ. ಆದರೆ ಹಾಗೆ ಮಾಡುವ ಮೊದಲು ಒಂದು ಯೋಜನೆಯನ್ನು ರೂಪಿಸಿಕೊಳ್ಳಬೇಕು,’ ಅಂತ ಹೇಳಿದ್ದಾರೆ.
ಶನಿವಾದಂದು ಮಹಾರಾಷ್ಟ್ರದಲ್ಲಿ 55,411 ಹೊಸ ಪ್ರಕರಣಗಳು ಮತ್ತು 309 ಸೋಂಕು ಸಂಬಂಧಿತ ಸಾವುಗಳು ವರದಿಯಾಗಿವೆ. ರಾಜ್ಯದಲ್ಲೀಗ ಒಟ್ಟು 5,36,682 ಸಕ್ರಿಯ ಪ್ರಕರಣಗಳಿವೆ ಮತ್ತು ಇಂದಿನವರೆಗೆ 57,638 ಜನ ಬಲಿಯಾಗಿದ್ದಾರೆ. ಭಾರತದಲ್ಲಿ ಸತತವಾಗಿ ಐದನೇ ದಿನವೂ ದಾಖಲೆಯ ಹೊಸ ಪ್ರಕರಣಗಳು ವರದಿಯಾಗಿವೆ, ಸಾವುಗಳ ಸಂಖ್ಯೆಯೂ ಮಿತಿ ಮೀರುತ್ತಿರುವುದರಿಂದ ಅಸ್ಪತ್ರೆ ಮತ್ತು ರುದ್ರಭೂಮಿಗಳಲ್ಲಿ ಸ್ಥಳವಿಲ್ಲದಂತಾಗಿದೆ.
ಜಾಗತಿಕವಾಗಿ ಕೊವಿಡ್-19 ಕೊವಿಡ್ ಪ್ರಕರಣಗಳನ್ನು ನೋಡಿದರೆ, ಅಮೇರಿಕ ಮತ್ತು ಬ್ರೆಜಿಲ್ ನಂತರ ಭಾರತ ಮೂರನೇ ಸ್ಥಾನದಲ್ಲಿದೆ. ಎರಡನೇ ಅಲೆಯ ಸೋಂಕಿತರ ಸಂಖ್ಯೆ ಬಹಳ ವೇಗವಾಗಿ ದ್ವಿಗುಣಗೊಳ್ಳುತ್ತಿದೆ. ವಿವಿಧ ರಾಜ್ಯಗಳಲ್ಲಿ ಸೋಂಕನ್ನು ತಡೆಗಟ್ಟಲು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆಯಾದರೂ ದೇಶದಲ್ಲಿ ಮತ್ತೊಮ್ಮೆ ಲಾಕ್ಡೌನ್ ಹೇರಿದರೆ, ತೀವ್ರ ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂಬ ಆತಂಕದಿಂದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಆ ಕ್ರಮಕ್ಕೆ ಮುಂದಾಗುತ್ತಿಲ್ಲ
ಇದನ್ನೂ ಓದಿ: India Covid-19 Update: ಮಧ್ಯಪ್ರದೇಶದ 4 ಜಿಲ್ಲೆಗಳಲ್ಲಿ ಲಾಕ್ಡೌನ್, ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ರಾತ್ರಿ ಕರ್ಫ್ಯೂ