1 ಕೋಟಿ ರೂ. ಹಣಕ್ಕಾಗಿ ತನ್ನ ಕಾರಿನಲ್ಲಿ ಬೇರೆಯವನಿಗೆ ಬೆಂಕಿ ಹಚ್ಚಿ ಸಾವಿನ ಕತೆ ಕಟ್ಟಿದ ವ್ಯಕ್ತಿ!
ಮಹಾರಾಷ್ಟ್ರದಲ್ಲಿ ಕೆಲವು ದಿನಗಳ ಹಿಂದೆ ಕಾರೊಂದರಲ್ಲಿ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಕಾರಿನ ಚಾಲಕರ ಸೀಟಿನಲ್ಲಿದ್ದ ವ್ಯಕ್ತಿಯೇ ಸಾವನ್ನಪ್ಪಿದ್ದರಿಂದ ಆ ಕಾರಿನ ಮಾಲೀಕರೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾವಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಯಾರನ್ನು ಸತ್ತಿದ್ದಾನೆಂದು ಪೊಲೀಸರು ಭಾವಿಸಿದ್ದರೋ ಆತ ವಿಮೆ ಹಣಕ್ಕಾಗಿ ತನ್ನ ಸಾವಿನ ಕತೆ ಕಟ್ಟಿದ್ದಾನೆ ಎಂದು ಬಯಲಾಗಿದೆ.

ಮುಂಬೈ, ಡಿಸೆಂಬರ್ 16: ಮಹಾರಾಷ್ಟ್ರದಲ್ಲಿ (Maharashtra) ವಿಚಿತ್ರವಾದ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲಾತೂರ್ ಜಿಲ್ಲೆಯ ವ್ಯಕ್ತಿಯೊಬ್ಬ ತಾನು ಸಾವನ್ನಪ್ಪಿದ್ದಾನೆಂದು ನಂಬಿಸಲು ತನ್ನದೇ ಪ್ರಾಯದ ಮತ್ತೊಬ್ಬ ವ್ಯಕ್ತಿಯ ಶವವನ್ನು ಕಾರಿನಲ್ಲಿರಿಸಿ, ಆ ಶವದ ಮುಖದ ಗುರುತು ಸಿಗಬಾರದು ಎಂದು ಬೆಂಕಿ ಹಚ್ಚಿದ್ದ. ಆ ಶವ ಪೂರ್ತಿಯಾಗಿ ಸುಟ್ಟು ಕರಕಲಾಗಿತ್ತು. ಆ ಕಾರಿನಲ್ಲಿದ್ದ ವಸ್ತುಗಳನ್ನು ನೋಡಿದ ಪೊಲೀಸರು ಆ ಕಾರಿನ ಮಾಲೀಕರದ್ದೇ ಶವವೆಂದು ಭಾವಿಸಿದ್ದರು. ಎಲ್ಲವೂ ಆ ವ್ಯಕ್ತಿ ಪ್ಲಾನ್ ಮಾಡಿದಂತೆಯೇ ನಡೆದಿತ್ತು. ಆದರೆ, ನಿನ್ನೆ ಸಂಜೆ ಆತ ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ್ದ. ಈ ಒಂದು ಮೆಸೇಜಿನಿಂದ ಆತನ ಪ್ಲಾನ್ ಪೂರ್ತಿ ಹಾಳಾಗಿದೆ. ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ.
1 ಕೋಟಿ ರೂ. ಇನ್ಷುರೆನ್ಸ್ ಹಣಕ್ಕಾಗಿ ಆತ ತಾನು ಸಾವನ್ನಪ್ಪಿರುವುದಾಗಿ ನಂಬಿಸಲು ಈ ರೀತಿ ಪ್ಲಾನ್ ಮಾಡಿದ್ದ. ಆತ ತನ್ನದೇ ವಯಸ್ಸಿನ ವ್ಯಕ್ತಿಯೊಬ್ಬನನ್ನು ಕೊಂದು, ಆತನ ಶವವನ್ನು ತನ್ನ ಕಾರಿನಲ್ಲಿ ಡ್ರೈವರ್ ಸೀಟಿನಲ್ಲಿರಿಸಿ ಬೆಂಕಿ ಹಚ್ಚಿದ್ದ. ಅಲ್ಲಿ ತನ್ನ ವಾಚ್, ಶೂ ಮುಂತಾದ ವಸ್ತುಗಳನ್ನೂ ಇಟ್ಟಿದ್ದ. ಇದರಿಂದ ಪೊಲೀಸರಿಗೆ ಆತನೇ ಸತ್ತಿದ್ದಾನೆಂದು ಅನುಮಾನ ಮೂಡಿತ್ತು. ಈ ಆರೋಪಿಯನ್ನು ಗಣೇಶ್ ಗೋಪಿನಾಥ್ ಚೌಹಾಣ್ ಎಂದು ಹೇಳಲಾಗಿದೆ. ಆತ ವಿಪರೀತ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲು ವಿಮೆ ಹಣ ಪಡೆಯಲು ಈ ಸಾವಿನ ಪ್ಲಾನ್ ಮಾಡಿದ್ದ.
ಇದನ್ನೂ ಓದಿ: ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಡೆಡ್ಲಿ ಅಟ್ಯಾಕ್: ಯುವಕ ಜಸ್ಟ್ ಮಿಸ್
ಚೌಹಾಣ್ ಮುಂಬೈನಲ್ಲಿ ಫ್ಲಾಟ್ ಖರೀದಿಸಲು 57 ಲಕ್ಷ ರೂ. ಸಾಲವನ್ನು ಪಡೆದಿದ್ದ. ಅಲ್ಲಿ ಆತ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಖಾಸಗಿ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತನ ಸಂಬಳ ಇಎಂಐ ಕಟ್ಟಲು ಮತ್ತು ಮನೆಯ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುತ್ತಿರಲಿಲ್ಲ. ಇದರಿಂದ ಆತನ ಮಾನಸಿಕ ಆರೋಗ್ಯವೂ ಕೆಡುತ್ತಿತ್ತು. ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದ. ಮುಂಬೈನ ಫ್ಲಾಟ್ನ ಸಾಲ ತೀರಿಸದೆ ಆ ಫ್ಲಾಟ್ ಮುಟ್ಟುಗೋಲು ಹಾಕಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿತ್ತು. ಹೀಗಾಗಿ, ಇದೆಲ್ಲದರಿಂದ ಹೊರಬರಲು ಪ್ಲಾನ್ ಮಾಡಿದ್ದ ಆತ ತನ್ನ ಹೆಸರಿನಲ್ಲಿ 1 ಕೋಟಿ ರೂ. ಮೌಲ್ಯದ ಟರ್ಮ್ ಇನ್ಶುರೆನ್ಸ್ ಪಾಲಿಸಿಯನ್ನು ತೆಗೆದುಕೊಂಡಿದ್ದ. ಡಿಸೆಂಬರ್ 13ರ ರಾತ್ರಿ ಆತ ತನ್ನ ಕಾರು ಮತ್ತು ಲ್ಯಾಪ್‌ಟಾಪ್‌ನೊಂದಿಗೆ ಮನೆಯಿಂದ ಹೊರಟಿದ್ದ.
ಈ ವೇಳೆ ಗೋವಿಂದ್ ಯಾದವ್ ಎಂಬ 50 ವರ್ಷದ ವ್ಯಕ್ತಿ ಚೌಹಾಣ್ ಬಳಿ ಡ್ರಾಪ್ ಕೇಳಿದ್ದರು. ಯಾದವ್ ಕುಡಿದ ಅಮಲಿನಲ್ಲಿ ಹಿಂದಿನ ಸೀಟಿನಲ್ಲಿ ಮಲಗಿ ನಿದ್ರಿಸುತ್ತಿದ್ದರು. ಆಗ ಚೌಹಾಣ್ ತನ್ನ ಕಾರಿನಲ್ಲಿದ್ದ ಯಾದವ್ ಅವರನ್ನು ಕೊಂದಿದ್ದ. ಯಾದವ್‌ನನ್ನು ಚಾಲಕನ ಸೀಟಿನಲ್ಲಿ ಕೂರಿಸಿ, ಸೀಟ್‌ಬೆಲ್ಟ್ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 3ನೇ ಮಹಡಿಯಿಂದ 7 ವರ್ಷದ ಮಗಳನ್ನು ತಳ್ಳಿ ಕೊಂದ ತಾಯಿ; ಹೈದರಾಬಾದ್ನಲ್ಲೊಂದು ಶಾಕಿಂಗ್ ಘಟನೆ!
ಬಳಿಕ ಕಾರಿನ ಎಲ್ಲಾ ಬಾಗಿಲುಗಳನ್ನು ಲಾಕ್ ಮಾಡಿ ಚೌಹಾಣ್ ಕಾರಿಗೆ ಬೆಂಕಿ ಹಚ್ಚಿ ಆ ಸ್ಥಳದಿಂದ ಪರಾರಿಯಾಗಿದ್ದ. ಚೌಹಾಣ್ ಆ ಬೆಂಕಿಯಲ್ಲಿ ಸಾವನ್ನಪ್ಪಿದ್ದರು. ಆಕಸ್ಮಿಕ ಬೆಂಕಿ ಅವಘಡದಲ್ಲಿ ಚೌಹಾಣ್ ಸತ್ತಿದ್ದಾನೆಂದು ನಂಬಿಸಿ ಇನ್ಷುರೆನ್ಸ್ ಹಣ ಪಡೆಯಲು ಆತ ಈ ಪ್ಲಾನ್ ಮಾಡಿದ್ದ. ಆದರೂ ಪೊಲೀಸರಿಗೆ ಅದು ಆಕಸ್ಮಿಕ ಘಟನೆ ಎಂದು ನಂಬಿಕೆ ಬಂದಿರಲಿಲ್ಲ. ಇದರ ನಡುವೆ ಚೌಹಾಣ್ ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ್ದ. ಆ ಮೆಸೇಜಿನಿಂದಾಗಿ ಪೊಲೀಸರಿಗೆ ಆತ ಬದುಕಿರುವ ಸಂಗತಿ ಗೊತ್ತಾಗಿತ್ತು. ಬಳಿಕ ಪೊಲೀಸರು ಆತನನ್ನು ಯಾದವ್ ಕೊಲೆ ಕೇಸಿನಲ್ಲಿ ಬಂಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




