
ಮುಂಬೈ, ಸೆಪ್ಟೆಂಬರ್ 04: ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಸಾರ್ವತ್ರಿಕ ಏಕತೆ ಮತ್ತು ಸಹಬಾಳ್ವೆಯ ಕುರಿತು ಮಾತನಾಡಿದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ 10 ದಿನಗಳ ನವರಾತ್ರಿ ಉತ್ಸವಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಿವಾದಾತ್ಮಕ ಕಠಿಣ ಮಾರ್ಗಸೂಚಿ ಹೊರಡಿಸಿದೆ. ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಿರುವ ವಿಎಚ್‌ಪಿ, ದ್ವಾರದಲ್ಲೇ ಪ್ರತಿಯೊಬ್ಬರ ಆಧಾರ್ ಕಾರ್ಡ್ ಪರಿಶೀಲನೆ ಹಾಗೂ ಹಣೆಗೆ ತಿಲಕ ಇಡುವುದನ್ನು ಕಡ್ಡಾಯಗೊಳಿಸುವಂತೆ ಆಯೋಜಕರಿಗೆ ಸೂಚಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮುಸ್ಲಿಮರಿಗೆ ನವರಾತ್ರಿ ಆಚರಿಸುವ ಅಷ್ಟೊಂದು ಆಸಕ್ತಿಯಿದ್ದರೆ, ಅವರು ತಮ್ಮ ಪತ್ನಿಯರು, ತಾಯಂದಿರು ಮತ್ತು ಸಹೋದರಿಯರೊಂದಿಗೆ ಸಕುಟುಂಬವಾಗಿ ಬರಲಿ ಅಥವಾ ತಮ್ಮದೇ ಮಸೀದಿಗಳು ಮತ್ತು ಬಡಾವಣೆಗಳಲ್ಲಿ ನವರಾತ್ರಿ ಆಯೋಜಿಸಲಿ ಎಂದು ನಾಯರ್ ಸವಾಲೆಸೆದಿದ್ದಾರೆ.
ಭಾಗವತ್ ನೀಡಿದ್ದ ಸಂದೇಶ: ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಸಮಾವೇಶದಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ ಅವನು ನಿಜವಾದ ಹಿಂದೂವೇ ಅಲ್ಲ. ಎಲ್ಲಾ ಧರ್ಮಗಳ ದಾರಿಗಳು ಅಂತಿಮವಾಗಿ ಸಾಗುವುದು ಒಂದೇ ಗುರಿಯತ್ತ. ಪ್ರತಿಯೊಬ್ಬ ಮನುಷ್ಯನಿಗೂ ಘನತೆಯಿದೆ ಎಂದು ಸ್ಪಷ್ಟಪಡಿಸಿದ್ದರು.
ಮತ್ತಷ್ಟು ಓದಿ: ಭಾರತದ್ದು ಆಕ್ರಮಣದ ಇತಿಹಾಸವಲ್ಲ, ಜ್ಞಾನ ಹಂಚಿದ ಪರಂಪರೆ: ಭಾರತ ಮಹಾಶಕ್ತಿಯಲ್ಲ, ಜಗತ್ತಿಗೆ ವಿಶ್ವಗುರು ಎಂದ ಭಾಗವತ್
ಪ್ರತಿಕ್ರಿಯಿಸಲು ವಿಎಚ್‌ಪಿ ನಕಾರ: ಭಾಗವತ್ ಅವರ ಈ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, “ನಾವು ಆರ್‌ಎಸ್‌ಎಸ್ ಸರಸಂಘಚಾಲಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾವು ಯಾರ ವಿರುದ್ಧವೂ ಇಲ್ಲ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ನಂಬುತ್ತೇವೆ. ಆದರೆ ನಮ್ಮ ನಂಬಿಕೆಗಳನ್ನೇ ಒಪ್ಪದವರಿಗೆ ಸಾಂಸ್ಕೃತಿಕ ಮಾರ್ಗಸೂಚಿ ಸಡಿಲಿಸಲು ಸಾಧ್ಯವಿಲ್ಲ” ಎಂದು ಶ್ರೀರಾಜ್ ನಾಯರ್ ಹೇಳಿದ್ದಾರೆ.
ನವರಾತ್ರಿ ಗರ್ಭಾ ಮೈದಾನಗಳಲ್ಲಿ ಅನ್ಯಕೋಮಿನ ಯುವಕರು ನಕಲಿ ಹೆಸರುಗಳಲ್ಲಿ ನುಗ್ಗಿ ಹಿಂದೂ ಯುವತಿಯರನ್ನು ವಂಚಿಸುವುದನ್ನು ಮತ್ತು ‘ಲವ್ ಜಿಹಾದ್’ ಪ್ರಕರಣಗಳನ್ನು ತಡೆಯಲು ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಈ ಕಠಿಣ ತಪಾಸಣೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಳ್ಳುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ರಾಜಕೀಯ ವಿರೋಧ ಹಾಗೂ ಕಾನೂನು ಇಕ್ಕಟ್ಟು: ವಿಎಚ್‌ಪಿಯ ಈ ಫರ್ಮಾನು ಸಾರ್ವಜನಿಕವಾಗಿ ತಾರತಮ್ಯ ಹುಟ್ಟುಹಾಕುವ ಯತ್ನವಾಗಿದ್ದು, ಸಮಾಜದಲ್ಲಿ ಧ್ರುವೀಕರಣಕ್ಕೆ ದಾರಿಮಾಡಿಕೊಡುತ್ತದೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂವಿಧಾನ ನೀಡಿರುವ ಸಮಾನತೆಯ ಹಕ್ಕನ್ನು ಕಸಿದುಕೊಳ್ಳಲಾಗದು ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ಹಾಗೂ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ