Assam Ragging Case: ಅಸ್ಸಾಂನ ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ರ‍್ಯಾಗಿಂಗ್; ಪ್ರಮುಖ ಆರೋಪಿ ಬಂಧನ
ನವೆಂಬರ್ 27ರಿಂದ ನಾಪತ್ತೆಯಾಗಿದ್ದ ರಾಹುಲ್ ಚೆಟ್ರಿ ಸೋಮವಾರ ಬೆಳಿಗ್ಗೆ ಅಸ್ಸಾಂ ಪೊಲೀಸರ ಮುಂದೆ ಶರಣಾಗಿದ್ದ. ಅದಾದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ದಿಬ್ರುಗಢ: ಅಸ್ಸಾಂನ ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ (Dibrugarh University) ನಡೆದ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಹುಲ್ ಚೆಟ್ರಿಯನ್ನು (Rahul Chetry) ಪೊಲೀಸರ ವಶಕ್ಕೆ ಪಡೆಯಲಾಗಿದೆ. ದಿಬ್ರುಗಢ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ವಿರುದ್ಧ ರ‍್ಯಾಗಿಂಗ್ (Ragging) ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ಆನಂದ್ ಶರ್ಮಾಗೆ (Anand Sharma) ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದು, ರ‍್ಯಾಗಿಂಗ್ ವೇಳೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಯೂನಿವರ್ಸಿಟಿಯ ಹಾಸ್ಟೆಲ್‌ನ 2ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗಳಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಆನಂದ್ ಶರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನ. 27ರಂದು ದಿಬ್ರುಗಢ ವಿವಿ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಚೆಟ್ರಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನವೆಂಬರ್ 27ರಿಂದ ನಾಪತ್ತೆಯಾಗಿದ್ದ ರಾಹುಲ್ ಚೆಟ್ರಿ ಸೋಮವಾರ ಬೆಳಿಗ್ಗೆ ಅಸ್ಸಾಂ ಪೊಲೀಸರ ಮುಂದೆ ಶರಣಾಗಿದ್ದ. ಅದಾದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Student Ragging: ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್ ತಡೆಯಲಾಗದೇ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಜಿಗಿದ ಜೂನಿಯರ್ ವಿದ್ಯಾರ್ಥಿ
“ದಿಬ್ರುಗಢ ವಿಶ್ವವಿದ್ಯಾಲಯದ ರ‍್ಯಾಗಿಂಗ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 7 ಜನರನ್ನು ಬಂಧಿಸಿದ್ದಾರೆ” ಎಂದು ದಿಬ್ರುಗಢ ಜಿಲ್ಲೆಯ ಎಸ್ಪಿ ತಿಳಿಸಿದ್ದಾರೆ.ಈ ಹಿಂದೆ, ದಿಬ್ರುಗಢ ವಿಶ್ವವಿದ್ಯಾಲಯದ ಪ್ರಾಧಿಕಾರವು ವಿಶ್ವವಿದ್ಯಾಲಯದ ಹಾಸ್ಟೆಲ್‌ನ ಮೂವರು ವಾರ್ಡನ್‌ಗಳನ್ನು ಅಮಾನತುಗೊಳಿಸಿತ್ತು. ಸರ್ಕಾರಿ ಸ್ವಾಮ್ಯದ ದಿಬ್ರುಗಢ ವಿಶ್ವವಿದ್ಯಾಲಯದ ಎಂಕಾಂ ವಿದ್ಯಾರ್ಥಿ ಆನಂದ್ ಶರ್ಮಾ ನವೆಂಬರ್ 27ರಂದು ರ್ಯಾಗಿಂಗ್ನ ಕಿರುಕುಳದಿಂದ ತಪ್ಪಿಸಿಕೊಳ್ಳಲು ತಮ್ಮ ಪಿಎನ್‌ಜಿಬಿ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದಿದ್ದ. ತಕ್ಷಣ ಶರ್ಮಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಈ ಘಟನೆಯಲ್ಲಿ ಭಾಗಿಯಾಗಿರುವ ಐವರ ವಿರುದ್ಧ ಆನಂದ್ ಶರ್ಮಾ ಅವರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.