ಸಿಆರ್‌ಪಿಎಫ್‌ನಲ್ಲಿ ಐತಿಹಾಸಿಕ ಸಾಧನೆ; 47 ವರ್ಷದಲ್ಲೇ ಮೊದಲ ಬಾರಿ ಸತತ 12 ತಿಂಗಳು ಒಬ್ಬ ಸಿಬ್ಬಂದಿಯ ಜೀವವೂ ಹೋಗಿಲ್ಲ

ಭಾರತದ ಪ್ರಮುಖ ಅರೆಸೈನಿಕ ಪಡೆಯಾದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಆರ್‌ಪಿಎಫ್) ದೇಶಾದ್ಯಂತ ಕಳೆದ ಒಂದು ವರ್ಷದಿಂದ ನಡೆಸಿದ ಕಾರ್ಯಾಚರಣೆಯ ವೇಳೆ ತನ್ನ ಒಬ್ಬನೇ ಒಬ್ಬ ಯೋಧನನ್ನೂ ಕಳೆದುಕೊಂಡಿಲ್ಲ. ಕಳೆದ 47 ವರ್ಷಗಳಲ್ಲೇ (1979ರ ಜನವರಿ ಬಳಿಕ) ಸಿಆರ್‌ಪಿಎಫ್ ಪಡೆ ಸಾಧಿಸಿರುವ ಅತ್ಯಂತ ಮಹತ್ವದ ಸಾಧನೆ ಇದಾಗಿದೆ. 2025ರಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 8 ಯೋಧರು ಹಾಗೂ ಫೀಲ್ಡ್ ವೈರಿಂಗ್ ಅಭ್ಯಾಸದ ವೇಳೆ ಒಬ್ಬ ಯೋಧ ಮೃತಪಟ್ಟಿದ್ದರು. 2024ರಲ್ಲಿ ಛತ್ತೀಸ್‌ಗಢ, ಜಮ್ಮು-ಕಾಶ್ಮೀರ ಮತ್ತು ಮಣಿಪುರದಿಂದ 12 ಯೋಧರ ಸಾವು ವರದಿಯಾಗಿತ್ತು. 2025ರ ಅಕ್ಟೋಬರ್ 30ರ ಬಳಿಕ ಕಾರ್ಯಾಚರಣೆ ವೇಳೆ ಯಾವುದೇ ಯೋಧರು ಮೃತಪಟ್ಟಿಲ್ಲ.

ಸಿಆರ್‌ಪಿಎಫ್‌ನಲ್ಲಿ ಐತಿಹಾಸಿಕ ಸಾಧನೆ; 47 ವರ್ಷದಲ್ಲೇ ಮೊದಲ ಬಾರಿ ಸತತ 12 ತಿಂಗಳು ಒಬ್ಬ ಸಿಬ್ಬಂದಿಯ ಜೀವವೂ ಹೋಗಿಲ್ಲ
Crpf

Updated on: Nov 02, 2026 | 9:31 PM

ನವದೆಹಲಿ, ನವೆಂಬರ್ 2: ಭಾರತೀಯ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾದ ಸಿಆರ್‌ಪಿಎಫ್ ತನ್ನ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಕಳೆದ ಸತತ 12 ತಿಂಗಳುಗಳಿಂದ (ಒಂದು ವರ್ಷ) ಸಿಆರ್‌ಪಿಎಫ್ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ತನ್ನ ಒಬ್ಬನೇ ಒಬ್ಬ ಯೋಧನನ್ನೂ ಕಳೆದುಕೊಂಡಿಲ್ಲ. 2025ರ ಅಕ್ಟೋಬರ್ 30ರಂದು ಸಿಆರ್‌ಪಿಎಫ್ ಯೋಧರೊಬ್ಬರು ಸಾವನ್ನಪ್ಪಿದ್ದರು. ಅದಾದ ಬಳಿಕ ಒಂದು ಸಾವೂ ಸಂಭವಿಸಿಲ್ಲ.

ವಿಶೇಷವೆಂದರೆ, ಕಳೆದ 47 ವರ್ಷಗಳ ಬಳಿಕ (ಕೊನೆಯ ಬಾರಿಗೆ ಇಂತಹ ಸಾಧನೆ 1979ರ ಜನವರಿಯಲ್ಲಿ ನಡೆದಿತ್ತು) ಸಿಆರ್‌ಪಿಎಫ್ ಪಡೆ ಪಡೆದಿರುವ ಅತಿದೊಡ್ಡ ಸುರಕ್ಷತಾ ಹಾಗೂ ಯಶಸ್ವಿ ಕಾರ್ಯಾಚರಣೆಯ ಸಾಧನೆ ಇದಾಗಿದೆ. ಸಿಆರ್‌ಪಿಎಫ್ ಪಡೆಗೆ ಅತ್ಯಾಧುನಿಕ, ಸಮಕಾಲೀನ ಯುದ್ಧ ಉಪಕರಣಗಳು ಮತ್ತು ಸುರಕ್ಷತಾ ಸಲಕರಣೆಗಳನ್ನು ಒದಗಿಸಿರುವುದು ಈ ಸಾಧನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಯೋಧರಿಗೆ ನೀಡಲಾದ ಉನ್ನತ ಮಟ್ಟದ ತರಬೇತಿ ಹಾಗೂ ಕಾರ್ಯಾಚರಣೆಯ ನಿಕಟ ಮತ್ತು ನಿಖರ ಕಾರ್ಯತಾಂತ್ರಿಕ ಯೋಜನೆ ಕೂಡ ಇದಕ್ಕೆ ಕಾರಣ.

ಕಾರ್ಯಾಚರಣೆ ವೇಳೆ ಗಾಯಗೊಂಡ ಯೋಧರನ್ನು ತಕ್ಷಣವೇ ಪ್ರಥಮ, ದ್ವಿತೀಯ ಹಾಗೂ ತೃತೀಯ ಹಂತದ ಹೈಟೆಕ್ ಆಸ್ಪತ್ರೆಗಳಿಗೆ ಅತಿವೇಗವಾಗಿ ಏರ್‌ಲಿಫ್ಟ್ ಮಾಡುವ ವೈದ್ಯಕೀಯ ಸೇವೆಗಳು ಈ ಪ್ರಾಣಹಾನಿಯನ್ನು ಸಂಪೂರ್ಣವಾಗಿ ತಡೆಯಲು ಪ್ರಮುಖ ಕೊಡುಗೆ ನೀಡಿವೆ.

ಇದನ್ನೂ ಓದಿ: ನಿರ್ಭಯವಾಗಿ ಕರ್ತವ್ಯ ನಿರ್ವಹಿಸಿ, ಜವಾಬ್ದಾರಿ ನನ್ನದು, ಪೆಲೆಟ್ ಗನ್ ವಿವಾದದ ನಡುವೆ ಸಿಬ್ಬಂದಿಗೆ ಧೈರ್ಯ ತುಂಬಿದ ಸಿಆರ್​ಪಿಎಫ್ ಮುಖ್ಯಸ್ಥ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ಅಕ್ಟೋಬರ್ 2025ರಲ್ಲಿ ನಡೆದ ಸ್ಫೋಟದಲ್ಲಿ ಇನ್ಸ್‌ಪೆಕ್ಟರ್ ಕೌಶಲ್ ಕುಮಾರ್ ಮಿಶ್ರಾ ಮತ್ತು ಹೆಡ್ ಕಾನ್ಸ್ಟೇಬಲ್ ಮಹೇಂದ್ರ ಲಷ್ಕರ್ ಹುತಾತ್ಮರಾಗಿದ್ದರು. ತದನಂತರ ನಕ್ಸಲ್ ಕೇಂದ್ರ ಸಮಿತಿಯ ಕೊನೆಯ ನಾಯಕ ಮಿಸಿರ್ ಬೆಸ್ರಾನನ್ನು ಜುಲೈ 28ರಂದು ಬಂಧಿಸಲಾಯಿತು.

ಸಿಆರ್‌ಪಿಎಫ್ ಸಾಧನೆ ಬಗ್ಗೆ ಸಿಆರ್‌ಪಿಎಫ್ ಡೈರೆಕ್ಟರ್ ಜನರಲ್ ಜಿ.ಪಿ. ಸಿಂಗ್ ಹೇಳಿಕೆ ನೀಡಿದ್ದು, “ಇದು ಅತ್ಯಂತ ಮಹತ್ವದ ಮೈಲಿಗಲ್ಲು. ಅತ್ಯಾಧುನಿಕ ಯುದ್ಧ ಸಲಕರಣೆಗಳು, ಸುಧಾರಿತ ತರಬೇತಿ, ನಿಖರ ಕಾರ್ಯಾಚರಣೆಯ ಯೋಜನೆ ಹಾಗೂ ಗಾಯಗೊಂಡ ಯೋಧರನ್ನು ಅತಿವೇಗವಾಗಿ ಹೈಟೆಕ್ ಆಸ್ಪತ್ರೆಗಳಿಗೆ ರವಾನಿಸುವ ವೈದ್ಯಕೀಯ ವ್ಯವಸ್ಥೆಯು ಈ ಸಾಧನೆಗೆ ಪ್ರಮುಖ ಕಾರಣ” ಎಂದು ಸಿಆರ್‌ಪಿಎಫ್ ಮುಖ್ಯಸ್ಥರು ‘ಎಕ್ಸ್​’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


3 ಲಕ್ಷಕ್ಕೂ ಹೆಚ್ಚು ಬಲ ಹೊಂದಿರುವ ಸಿಆರ್‌ಪಿಎಫ್‌ನ 50,000 ಕ್ಕೂ ಹೆಚ್ಚು ಯೋಧರನ್ನು ಹಿಂದೆ ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಆದರೆ ಈಗ ನಕ್ಸಲ್ ಪೀಡಿತ ಪ್ರದೇಶಗಳು ಕೇವಲ ಮೇಲ್ವಿಚಾರಣೆಗೆ ಸೀಮಿತವಾಗಿದ್ದು, ಸಿಆರ್‌ಪಿಎಫ್‌ನ ಬಹುಪಾಲು ತುಕಡಿಗಳನ್ನು ಜನಾಂಗೀಯ ಸಂಘರ್ಷ ಪೀಡಿತ ಮಣಿಪುರಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿದ್ದ ಸಿಆರ್​ಪಿಎಫ್​ ಯೋಧ ಸೇವೆಯಿಂದ ವಜಾ

ಅಸ್ಸಾಂ ರೈಫಲ್ಸ್ ಪಡೆಯನ್ನು ಬದಲಾಯಿಸಿರುವ ಸಿಆರ್‌ಪಿಎಫ್, ನಾಗಾ-ಕುಕಿ ಸಂಘರ್ಷ ತೀವ್ರಗೊಂಡಿರುವ ಮಣಿಪುರದಲ್ಲಿ ಪ್ರಸ್ತುತ ಶಾಂತಿ ಸುವ್ಯವಸ್ಥೆ ಕಾಪಾಡುವ ದೊಡ್ಡ ಸವಾಲನ್ನು ಎದುರಿಸುತ್ತಿದೆ. “ದೇಶವನ್ನು ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಸುರಕ್ಷಿತವಾಗಿಡಲು ನಾವು ಸದಾ ಬದ್ಧರಾಗಿದ್ದೇವೆ” ಎಂದು ಸಿಆರ್‌ಪಿಎಫ್ ಘೋಷಿಸಿದೆ.

ಕಾರ್ಯಾಚರಣೆಯ ಪ್ರಾಮುಖ್ಯತೆ:

ದೇಶದ ನಕ್ಸಲ್ ಪೀಡಿತ ಪ್ರದೇಶಗಳು, ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಂತಹ ಅತ್ಯಂತ ಸೂಕ್ಷ್ಮ ಮತ್ತು ಅಪಾಯಕಾರಿ ಕಾರ್ಯಾಚರಣೆಯ ವಲಯಗಳಲ್ಲಿ ಸಿಆರ್‌ಪಿಎಫ್ ಪಡೆ ನಿರಂತರವಾಗಿ ಕಠಿಣ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡು, ಹಲವು ಪ್ರಮುಖ ಯಶಸ್ಸುಗಳನ್ನು ಸಾಧಿಸುತ್ತಿರುವ ನಡುವೆಯೇ ಈ ಶೂನ್ಯ ಸಾವಿನ ಸಾಧನೆ ದಾಖಲಾಗಿರುವುದು ಅತ್ಯಂತ ಪ್ರಶಂಸನೀಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Mon, 2 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us