ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಮಸೂದೆಗಳ ಮಂಡನೆ,ನೀಟ್ ಪೇಪರ್ ಸೋರಿಕೆ ಕುರಿತು ಗದ್ದಲ ಸಾಧ್ಯತೆ
Parliament Monsoon Session 2026: ಸಂಸತ್ ಮುಂಗಾರು ಅಧಿವೇಶನ 2026 ಆರಂಭಗೊಂಡಿದ್ದು, ಆಗಸ್ಟ್ 13 ರವರೆಗೆ ನಡೆಯಲಿದೆ. ನೀಟ್ ಪೇಪರ್ ಸೋರಿಕೆ, ರಾಮಮಂದಿರ ಹಗರಣ, ಮತ್ತು ಬಂಡಾಯ ಸಂಸದರ ವಿಲೀನದಂತಹ ವಿಷಯಗಳು ಭಾರೀ ಚರ್ಚೆಗೆ ವೇದಿಕೆ ಕಲ್ಪಿಸಲಿವೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸುವ, FCRA, ಮತ್ತು ಮಹಿಳಾ ಮೀಸಲಾತಿ ಕುರಿತ ಪ್ರಮುಖ ಮಸೂದೆಗಳು ಮಂಡನೆಯಾಗಲಿವೆ. ಇದು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿನ ವಾದಕ್ಕೆ ಸಾಕ್ಷಿಯಾಗಲಿದೆ.

ನವದೆಹಲಿ, ಜುಲೈ 20: ಸಂಸತ್ ಮುಂಗಾರು ಅಧಿವೇಶನ(Parliament Monsoon Session) ಇಂದಿನಿಂದ ಪ್ರಾರಂಭವಾಗಲಿದೆ. ಆಗಸ್ಟ್ 13 ರವರೆಗೆ ಒಟ್ಟು 19 ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಪ್ರಮುಖ ಮಸೂದೆಗಳ ಮಂಡನೆ, ಕ್ಷೇತ್ರ ಪುನರ್ವಿಂಗಡಣೆ ಹಾಗೂ ದೇಶಾದ್ಯಂತ ಸದ್ದು ಮಾಡುತ್ತಿರುವ ವಿವಿಧ ವಿಷಯಗಳ ಕುರಿತು ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಗ್ವಾದಗಳು ನಡೆಯುವ ಸಾಧ್ಯತೆಯಿದೆ. ಅಧಿವೇಶನ ಶುರುವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಧಿವೇಶನದ ಆರಂಭಕ್ಕೂ ಮುನ್ನವೇ ತೃಣಮೂಲ ಕಾಂಗ್ರೆಸ್‌ನಿಂದ ಬಂಡಾಯವೆದ್ದ 20 ಸಂಸದರು ಸೇರಿ ರಚಿಸಿಕೊಂಡಿರುವ ‘ಭಾರತೀಯ ರಾಷ್ಟ್ರೀಯತಾವಾದಿ ನಾಗರಿಕರ ಪಕ್ಷ’ (NCPI) ವಿಷಯವಾಗಿ ಭಾರಿ ಗದ್ದಲ ಏರ್ಪಟ್ಟಿದೆ.
ಸರ್ವಪಕ್ಷ ಸಭೆಯಲ್ಲಿ ವಿರೋಧ: ಸರ್ವಪಕ್ಷ ಸಭೆಗೆ ಎನ್‌ಸಿಪಿಐ ಪಕ್ಷವನ್ನು ಕರೆಯಲಾಗಿತ್ತು. ಇದನ್ನು ವಿರೋಧಿಸಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಾಂಕೇತಿಕವಾಗಿ ಸಭಾತ್ಯಾಗ ಮಾಡಿದರು.
ಮತ್ತಷ್ಟು ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ, ತೆರಿಗೆ, ಉದ್ಯಮ ಸುಧಾರಣೆ ಸೇರಿ 5 ಹೊಸ ಮಸೂದೆ ಮಂಡನೆಗೆ ಸಜ್ಜು
ವಿರೋಧ ಪಕ್ಷಗಳ ಆರೋಪ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಅವರು, ಈ 20 ಸಂಸದರ ವಿಲೀನವನ್ನು ಲೋಕಸಭಾ ಸ್ಪೀಕರ್ ಇನ್ನೂ ಅಧಿಕೃತವಾಗಿ ಅನುಮೋದಿಸಿಲ್ಲ, ಹೀಗಾಗಿ ಸಭೆಯಲ್ಲಿ ಅವರ ಭಾಗವಹಿಸುವಿಕೆ ಕಾನೂನುಬಾಹಿರ ಎಂದು ವಾದಿಸಿದ್ದಾರೆ.
ಸಂಖ್ಯಾಬಲದ ಸಮೀಕರಣ: ಲೋಕಸಭೆಯ 540 ಸದಸ್ಯರಲ್ಲಿ ಎನ್‌ಡಿಎ ಬಳಿ ಪ್ರಸ್ತುತ 298 ಸ್ಥಾನಗಳಿವೆ. ಒಂದು ವೇಳೆ ಸ್ಪೀಕರ್ ಈ 20 ಬಂಡಾಯ ಸಂಸದರ ವಿಲೀನವನ್ನು ಒಪ್ಪಿಕೊಂಡರೆ ಎನ್‌ಡಿಎ ಬಲ 318 ಕ್ಕೆ ಏರಿಕೆಯಾಗಲಿದೆ.
ಅಧಿವೇಶನದಲ್ಲಿ ಮಂಡನೆಯಾಗಲಿರುವ ಪ್ರಮುಖ ಮಸೂದೆಗಳು ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ, 2026: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗರಿಷ್ಠ ಸಂಖ್ಯೆಯನ್ನು 33 ರಿಂದ 37 ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಮಸೂದೆಯನ್ನು ಮಂಡಿಸಲಿದ್ದಾರೆ.
ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (FCRA): ಅವಧಿ ಮುಗಿದ ಎನ್‌ಜಿಒಗಳ ಫಾರಿನ್ ಫಂಡಿಂಗ್ ಪ್ರಮಾಣಪತ್ರಗಳನ್ನು ರದ್ದುಗೊಳಿಸಲು ಮತ್ತು ವಿದೇಶಿ ಆಸ್ತಿಗಳ ವಿಲೇವಾರಿಗೆ ಕಠಿಣ ನಿಯಮ ತರುವ ಮಸೂದೆ ಇದಾಗಿದೆ.
ಸಂವಿಧಾನ (131 ನೇ ತಿದ್ದುಪಡಿ) ಮಸೂದೆ: ಲೋಕಸಭೆ ಸ್ಥಾನಗಳನ್ನು 850 ಕ್ಕೆ ಹೆಚ್ಚಿಸುವ ಮತ್ತು ಶೇ. 33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವ ಮಸೂದೆಯನ್ನು ಕೇಂದ್ರ ಸರ್ಕಾರ ಮತ್ತೆ ತರಬಹುದು ಎಂಬ ಊಹಾಪೋಹಗಳಿವೆ.
ವಿರೋಧ ಪಕ್ಷಗಳ ಅಸ್ತ್ರ: ನೀಟ್ ಅಕ್ರಮ ಮತ್ತು ರಾಮಮಂದಿರ ಹಗರಣ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಂಪೂರ್ಣ ತಂತ್ರ ರೂಪಿಸಿವೆ. ಆಮ್ ಆದ್ಮಿ ಪಕ್ಷದ (AAP) ಸಂಸದ ಸಂಜಯ್ ಸಿಂಗ್ ಅವರು ‘ನೀಟ್-ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ರಾಜ್ಯಸಭೆಯಲ್ಲಿ ಚರ್ಚಿಸಲು ಈಗಾಗಲೇ ನೋಟಿಸ್ ನೀಡಿದ್ದಾರೆ. ಇದರ ಜೊತೆಗೆ ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣವನ್ನು ಕೂಡ ಪ್ರಮುಖವಾಗಿ ಎತ್ತಲು ವಿರೋಧ ಪಕ್ಷಗಳು ಸಿದ್ಧವಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




