
ಮುಂಬೈ, ನವೆಂಬರ್ 24: ತನ್ನ ಸಹೋದರಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ, ತೀರ್ಪು ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನ್ಯಾಯಾಲಯದ ಕಟ್ಟಡದಿಂದ ಕೆಳಗೆ ಹಾರಿ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೃತವ್ಯಕ್ತಿ ಹೆಸರು ನಾಗೇಶ್ ಬಾಬು ಲಾಡ್ . ಸೋಮವಾರ ಮಧ್ಯಾಹ್ನ ಬೇಲಾಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ.
2019ರಲ್ಲಿ ತನ್ನ ಸಹೋದರಿ ಸುನೀತಾ ಸಿಂಗ್ ಅವರನ್ನು ಹತ್ಯೆ ಮಾಡಿದ್ದಕ್ಕಾಗಿ ನಾಗೇಶ್‌ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೆ, ತನ್ನ ಪತ್ನಿ ಜ್ಯೋತ್ಸ್ನಾ ಅವರನ್ನು ಕೊಲ್ಲಲು ಯತ್ನಿಸಿದ್ದಕ್ಕಾಗಿ ಸೆಕ್ಷನ್ 307ರ ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನೂ ನ್ಯಾಯಾಲಯ ನೀಡಿತ್ತು.
ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ಬಳಿಕ ನಾಗೇಶ್‌ನನ್ನು ಮತ್ತೆ ತಲೋಜಾ ಜೈಲಿಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಶೌಚಾಲಯಕ್ಕೆ ಹೋಗಬೇಕೆಂದು ಆತ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರ ಗಮನಕ್ಕೆ ಬಾರದಂತೆ ಓಡಿ ಹೋಗಿ ನ್ಯಾಯಾಲಯದ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ ಎಂದು ವರದಿಯಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ನವಿ ಮುಂಬೈನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ನಾಗೇಶ್ ಕಳೆದ ಏಳು ವರ್ಷಗಳಿಂದ ತಲೋಜಾ ಜೈಲಿನಲ್ಲಿದ್ದ. ಆತ ನ್ಯಾಯಾಲಯದ ವಿಚಾರಣೆಯ ಬಳಿಕ ಮತ್ತೆ ಜೈಲಿಗೆ ಕರೆದೊಯ್ಯುವ ಸಂದರ್ಭದಲ್ಲಿ ಪೊಲೀಸ್ ವಶದಲ್ಲಿದ್ದ ಕಾರಣ, ಈ ಘಟನೆಯನ್ನು ಕಸ್ಟಡಿ ಸಾವು ಎಂದು ಪರಿಗಣಿಸಿ ಸಿಐಡಿ ತನಿಖೆ ನಡೆಸಲಿದೆ ಎಂದು ನವಿ ಮುಂಬೈ ಪೊಲೀಸ್ ಆಯುಕ್ತ ಮಿಲಿಂದ್ ಭಾರಂಬೆ ತಿಳಿಸಿದ್ದಾರೆ.
ಇದನ್ನೂ ಓದಿ: 5 ತಿಂಗಳ ಹಿಂದಷ್ಟೇ ಮದುವೆ; 2 ತಿಂಗಳ ಹಿಂದೆಯೇ ಕೊಲೆ; ಬೆಂಗಳೂರಿನ ಅಸ್ಥಿಪಂಜರ ಕೇಸ್‌ಗೆ ಬಿಗ್ ಟ್ವಿಸ್ಟ್
2019ರ ಜುಲೈ 17ರಂದು ನಾಗೇಶ್ ತನ್ನ ಪತ್ನಿ ಜ್ಯೋತ್ಸ್ನಾ ಮತ್ತು ಸಹೋದರಿ ಸುನೀತಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ತನ್ನ ಪತ್ನಿಗೆ ಸಹೋದರಿಯ ಪತಿ ಜರ್ಮನ್‌ಜಿತ್ ಸಿಂಗ್ ಜೊತೆ ವಿವಾಹೇತರ ಸಂಬಂಧವಿದೆ ಎಂದು ನಾಗೇಶ್ ಅನುಮಾನಪಟ್ಟಿದ್ದ ಎನ್ನಲಾಗಿದೆ. ಮೊದಲು ನವಿ ಮುಂಬೈನ ನೆರೂಲ್‌ನ ಕುಕ್ಶೇತ್ ಗ್ರಾಮದ ತನ್ನ ಪತ್ನಿಯ ತವರು ಮನೆಗೆ ತೆರಳಿದ್ದ ನಾಗೇಶ್, ಅಲ್ಲಿ ಜ್ಯೋತ್ಸ್ನಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ದಾಳಿಯಲ್ಲಿ ಆಕೆ ಗಂಭೀರವಾಗಿ ಗಾಯಗೊಂಡಿದ್ದರು.
ನಂತರ ತನ್ನ ಸಹೋದರಿ ಸುನೀತಾ ಅವರ ಮನೆಗೆ ತೆರಳಿದ್ದ. ಪತ್ನಿಯ ಮೇಲಿನ ದಾಳಿಯ ವಿಚಾರ ತಿಳಿದಿದ್ದ ಸುನೀತಾ, ನಾಗೇಶ್‌ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ನಾಗೇಶ್ ಸಹೋದರಿಯ ಮೇಲೆ ಚಾಕುವಿನಿಂದ ಹಲವು ಬಾರಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ತೀವ್ರ ಗಾಯಗಳಿಂದ ಸುನೀತಾ ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ಕೆಲವು ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಂದ ಹಿಂದೆ ಸರಿದಿದ್ದರು. ಆದರೂ ಪೊಲೀಸರು ಸಂಗ್ರಹಿಸಿದ್ದ ಚಾಕು, ರಕ್ತದ ಕಲೆಗಳಿದ್ದ ಬಟ್ಟೆಗಳು, ಚಾಕು ಮಾರಾಟಗಾರನ ಗುರುತು ಮತ್ತು ವಾಟ್ಸ್‌ಆ್ಯಪ್ ಸಂದೇಶಗಳು ಸೇರಿದಂತೆ ಹಲವು ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಗಣಿಸಿತು.
ಪತ್ನಿಯನ್ನು ಕೊಲ್ಲಲು ನಾಗೇಶ್ ಯೋಜಿಸಿದ್ದರೂ, ಆಕೆ ಸಹಾಯಕ್ಕೆ ಬಂದಿದ್ದ ಸಹೋದರಿಯೇ ಆತನ ಕೋಪಕ್ಕೆ ಬಲಿಯಾದರು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಪ್ರಕರಣವು ಅಪರೂಪದಲ್ಲೇ ಅಪರೂಪದ ಪ್ರಕರಣವಲ್ಲ ಮತ್ತು ಆರೋಪಿಯ ಹಿಂದಿನ ಅಪರಾಧ ಹಿನ್ನೆಲೆ ಸಾಬೀತಾಗಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ತೀರ್ಪಿನ ಬಳಿಕ ನಡೆದ ನಾಗೇಶ್‌ನ ಸಾವಿನ ಕುರಿತು ಇದೀಗ ಸಿಐಡಿ ತನಿಖೆ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ