
ಮುಂಬೈ, ಆಗಸ್ಟ್ 23: ಮುಂಬೈನ ದಕ್ಷಿಣ ಭಾಗದ ಭುಲೇಶ್ವರ ಪ್ರದೇಶದಲ್ಲಿ ಶನಿವಾರ ರಾತ್ರಿ ‘ಭುಲೇಶ್ವರಚ ರಾಜ’ ಗಣೇಶ(Ganesha) ಮೂರ್ತಿಯ ಆಗಮನ ಮೆರವಣಿಗೆಯ ವೇಳೆ ಬೃಹತ್ ವಿಗ್ರಹವೊಂದು ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಭುಲೇಶ್ವರದ ಜೈ ಅಂಬೆ ಚೌಕ್‌ನಲ್ಲಿರುವ ಕಬುತರ್ಖಾನಾ ಬಳಿ ರಾತ್ರಿ ಸುಮಾರು 9.51 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತಿಳಿಸಿದೆ.
ಮೆರವಣಿಗೆ ವಾಹನದಲ್ಲಿದ್ದ 22 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಯನ್ನು ಭದ್ರಪಡಿಸಿದ್ದ ಬೋಲ್ಟ್‌ಗಳಲ್ಲಿ ತಾಂತ್ರಿಕ ದೋಷ ಉಂಟಾಗಿ, ಭಾರೀ ತೂಕದ ವಿಗ್ರಹವು ಭಕ್ತರ ಮೇಲೆಯೇ ಮುರಿದು ಬಿದ್ದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಂಕೇತ್ ನೆವ್ಶೆ (33) ಮತ್ತು ಬ್ರಿಜೇಶ್ ಹೇಮಂತ್ ಜೋಶಿ (30) ಎಂಬುವವರನ್ನು ಜಿ.ಟಿ. ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಗಾಯಗೊಂಡ ಐವರ ಪೈಕಿ 5 ಮತ್ತು 7 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದ್ದು, ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
ತುರ್ತು ತಂಡಗಳ ನಿಯೋಜನೆ: ಘಟನೆ ಸಂಭವಿಸಿದ ತಕ್ಷಣ ಮುಂಬೈ ಪೊಲೀಸ್, ಅಗ್ನಿಶಾಮಕ ದಳ, ಟ್ರಾಫಿಕ್ ಪೊಲೀಸ್ ಮತ್ತು 108 ತುರ್ತು ಆಂಬ್ಯುಲೆನ್ಸ್ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಅವಶೇಷಗಳನ್ನು ತೆರವುಗೊಳಿಸಿದವು. ಹಬ್ಬದ ಸಂಭ್ರಮದಲ್ಲಿದ್ದ ನೂರಾರು ಭಕ್ತರು ಜಮಾಯಿಸಿದ್ದ ಸ್ಥಳದಲ್ಲಿ ವಿಗ್ರಹ ಕುಸಿದ ಪರಿಣಾಮ ತೀವ್ರ ಕಾಲ್ತುಳಿತದ ವಾತಾವರಣ ಉಂಟಾಗಿತ್ತು, ಪೊಲೀಸರು ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಮತ್ತಷ್ಟು ಓದಿ: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿ; ಪೂಜಾ ವಿಧಾನ ಮತ್ತು ಮಹತ್ವ ತಿಳಿಯಿರಿ
ಬೃಹತ್ ವಿಗ್ರಹಗಳ ಸುರಕ್ಷತೆ: ಮುಂಬೈನಲ್ಲಿ ಗಣೇಶೋತ್ಸವದ ಆಗಮನ ಮೆರವಣಿಗೆಗಳು ತೀವ್ರಗೊಳ್ಳುತ್ತಿದ್ದು, 20 ಅಡಿಗಿಂತ ಎತ್ತರದ ವಿಗ್ರಹಗಳನ್ನು ಸಾಗಿಸುವಾಗ ಟ್ರಕ್ ಮತ್ತು ಟ್ರಾಲಿಯ ಫಿಟ್ಟಿಂಗ್‌ಗಳು ಹಾಗೂ ರಸ್ತೆಯ ವಿದ್ಯುತ್ ತಂತಿಗಳ ಸುರಕ್ಷತೆಯನ್ನು ಕಡ್ಡಾಯವಾಗಿ ಪರಿಶೀಲಿಸಲು ಬಿಎಂಸಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.
ಸಮಿತಿಗಳಿಗೆ ಎಚ್ಚರಿಕೆ: ಜನನಿಬಿಡ ಮತ್ತು ಕಿರಿದಾದ ರಸ್ತೆಗಳಲ್ಲಿ ಬೃಹತ್ ಮೂರ್ತಿಗಳನ್ನು ಸಾಗಿಸುವ ಮುನ್ನ ಆಯೋಜಕರು ನುರಿತ ತಜ್ಞರಿಂದ ಮೆರವಣಿಗೆ ವಾಹನದ ಸಾಮರ್ಥ್ಯ ಹಾಗೂ ಬೋಲ್ಟ್ ಬಿಗಿತವನ್ನು ಪ್ರಮಾಣೀಕರಿಸಿಕೊಳ್ಳಬೇಕು ಎಂದು ಮುಂಬೈ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ