
ನವದೆಹಲಿ, ನವೆಂಬರ್ 22: ಮಾರ್ಚ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ನೇಪಾಳದ ಪ್ರಧಾನಮಂತ್ರಿ ಬಾಲೇಂದ್ರ ಶಾ (ಬಾಲೇನ್ ಶಾ), 2 ದಿನಗಳ ಭೇಟಿಗಾಗಿ ಇಂದು ನವದೆಹಲಿಗೆ ಆಗಮಿಸಿದ್ದಾರೆ. ಸೋಮವಾರ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಈ ಸಭೆಯಲ್ಲಿ ಇಂಧನ, ಜಲವಿದ್ಯುತ್, ರೈಲು ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಳೆಯ ಮಾತುಕತೆಯ ನಂತರ, ಇಬ್ಬರೂ ನಾಯಕರು ನೇಪಾಳದ ಹಲವು ಯೋಜನೆಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸುವ ನಿರೀಕ್ಷೆಯಿದೆ. ಅಲ್ಲದೆ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ಒಪ್ಪಂದಗಳನ್ನು ಉಭಯ ದೇಶಗಳು ವಿನಿಮಯ ಮಾಡಿಕೊಳ್ಳುವ ಸಾಧ್ಯತೆಯಿದೆ.
ಭಾರತದ ‘ನೆರೆಹೊರೆ ಮೊದಲು’ ನೀತಿಯಡಿ ನೇಪಾಳವು ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಅಧಿಕಾರ ವಹಿಸಿಕೊಂಡ ಬಳಿಕ ನೇಪಾಳ ಪ್ರಧಾನಿ ತಮ್ಮ ಮೊದಲ ವಿದೇಶ ಪ್ರವಾಸವಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಉಭಯ ದೇಶಗಳ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ನೀಡುತ್ತಿರುವ ಆದ್ಯತೆಯನ್ನು ಎತ್ತಿ ತೋರಿಸುತ್ತದೆ.
ರಾಷ್ಟ್ರಪತಿ ಮತ್ತು ಗಣ್ಯರ ಭೇಟಿ:
ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆಯ ಜೊತೆಗೆ, ನೇಪಾಳ ಪ್ರಧಾನಿ ಬಾಲೆನ್ ಶಾ ಭಾರತದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೆ, ಉಭಯ ದೇಶಗಳ ಉದ್ಯಮಿಗಳ ಸಭೆಯಲ್ಲೂ ಅವರು ಪಾಲ್ಗೊಳ್ಳುವ ಕಾರ್ಯಕ್ರಮವಿದೆ.
ಮೂಲಸೌಕರ್ಯಗಳನ್ನು ವಿಸ್ತರಿಸಲು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹಾಗೂ ವಿಪತ್ತು ನಿರ್ವಹಣೆ ಮತ್ತು ಹವಾಮಾನ ಬದಲಾವಣೆ ವಿಷಯಗಳಲ್ಲಿ ಹೆಚ್ಚು ನಿಕಟವಾಗಿ ಸಹಕರಿಸಲು ಎರಡೂ ದೇಶಗಳು ಎದುರು ನೋಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆಯುತ್ತಿದೆ ಎಂದು ಮೂಲವೊಂದು ತಿಳಿಸಿದೆ.
ವಿದ್ಯುತ್, ವ್ಯಾಪಾರ ಮತ್ತು ರೈಲು ಸಂಪರ್ಕಕ್ಕೆ ಆದ್ಯತೆ:
ಬಾಲೆನ್ ಶಾ- ಮೋದಿ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಿದ್ದು, ದೀರ್ಘಕಾಲೀನ ವಿದ್ಯುತ್ ವ್ಯಾಪಾರ ಒಪ್ಪಂದವು ಈ ಸಹಕಾರಕ್ಕೆ ಬುನಾದಿಯಾಗಿದೆ. 2025-26ನೇ ಸಾಲಿನಲ್ಲಿ ಭಾರತಕ್ಕೆ ನಿವ್ವಳ ವಿದ್ಯುತ್ ರಫ್ತು ಮಾಡುವ ಮೂಲಕ ನೇಪಾಳವು ಸುಮಾರು 1,800 ಕೋಟಿ ನೇಪಾಳಿ ರೂ. ಆದಾಯ ಗಳಿಸಿದೆ.
ಇದನ್ನೂ ಓದಿ: ನ. 22ರಂದು ನೇಪಾಳ ಪ್ರಧಾನಿ ಬಾಲೆನ್ ಶಾ ಭಾರತ ಪ್ರವಾಸ; ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ದ್ವಿಪಕ್ಷೀಯ ಭೇಟಿ
ರೈಲು ಸಂಪರ್ಕ ಯೋಜನೆಗಳು:
ಗಡಿಯಾಚೆಗೆ ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಅನುಕೂಲವಾಗುವಂತೆ ರಕ್ಸೌಲ್ ಮತ್ತು ಕಠ್ಮಂಡು ನಡುವಿನ ಪ್ರಸ್ತಾವಿತ ರೈಲು ಮಾರ್ಗದ ಕುರಿತು ಉಭಯ ದೇಶಗಳು ಚರ್ಚಿಸುತ್ತಿವೆ. ಇದರೊಂದಿಗೆ, ರಾಮಾಯಣದೊಂದಿಗೆ ನಂಟು ಹೊಂದಿರುವ 2 ಪ್ರಮುಖ ನಗರಗಳಾದ ಅಯೋಧ್ಯೆ ಮತ್ತು ಜನಕಪುರ ಧಾಮ ನಡುವೆ ಹೊಸ ಪ್ರಯಾಣಿಕ ರೈಲು ಸೇವೆಯೂ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ವ್ಯಾಪಾರ ಮತ್ತು ಹೂಡಿಕೆ:
ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಆಳಗೊಳಿಸುವ ಮಾರ್ಗಗಳ ಬಗ್ಗೆ ಇಬ್ಬರೂ ಪ್ರಧಾನಿಗಳು ಚರ್ಚಿಸುವ ನಿರೀಕ್ಷೆಯಿದೆ. ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ನೇಪಾಳದ ವಿದೇಶಿ ನೇರ ಹೂಡಿಕೆಯಲ್ಲಿ (ಎಫ್ಡಿಎಐ) ಸುಮಾರು ಮೂರನೇ ಒಂದರಷ್ಟು ಪಾಲನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಗೆ ಸುಂಕ ರಹಿತ ಪ್ರವೇಶ ಹೊಂದಿರುವ ನೇಪಾಳದ ಸರಕು ರಫ್ತಿನ ಸುಮಾರು ಶೇ. 80ರಷ್ಟನ್ನು ಭಾರತವೇ ಸ್ವೀಕರಿಸುತ್ತದೆ.
ಭಾರತದೊಂದಿಗಿನ ದೀರ್ಘಕಾಲದ ಗಡಿ ವಿವಾದದ ಕುರಿತು ಕಠ್ಮಂಡು ಸರ್ಕಾರವು ಬೀಜಿಂಗ್ (ಚೀನಾ) ಮತ್ತು ಲಂಡನ್ (ಬ್ರಿಟನ್) ಜೊತೆ ಸಂಪರ್ಕದಲ್ಲಿದೆ ಎಂದು ಬಾಲೇನ್ ಶಾ ನೇಪಾಳದ ಸಂಸತ್ತಿಗೆ ತಿಳಿಸಿದ ಸುಮಾರು 6 ತಿಂಗಳ ನಂತರ ಈ ಭೇಟಿ ನಡೆಯುತ್ತಿದೆ. ಮೇ 31ರಂದು ಸಂಸತ್ತಿನಲ್ಲಿ ಮಾತನಾಡಿದ್ದ ಬಾಲೆನ್ ಶಾ, ಈ ಗಡಿ ವಿವಾದವು ವಸಾಹತುಶಾಹಿ ಯುಗಕ್ಕೆ ಸಂಬಂಧಿಸಿದ್ದಾದ್ದರಿಂದ ಬ್ರಿಟನ್ ಅನ್ನು ಇದರಲ್ಲಿ ಒಳಗೊಳ್ಳಬೇಕು ಎಂದು ವಾದಿಸಿದ್ದರು. ಭಾರತ ಮತ್ತು ನೇಪಾಳ ಎರಡೂ ದೇಶಗಳು ಪರಸ್ಪರರ ಭೂಪ್ರದೇಶವನ್ನು ಅತಿಕ್ರಮಿಸಿವೆ ಎಂದು ಅವರು ಹೇಳಿದ್ದರಿಂದ ನೇಪಾಳದ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.
ಜೂನ್ 2ರಂದು ನವದೆಹಲಿಯು ಈ ವಿಚಾರದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವನ್ನು ತಳ್ಳಿಹಾಕಿತ್ತು. ಭಾರತ ಮತ್ತು ನೇಪಾಳ ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸ್ಥಾಪಿತ ಕಾರ್ಯವಿಧಾನಗಳನ್ನು ಹೊಂದಿವೆ ಮತ್ತು ಉಭಯ ದೇಶಗಳ ಗಡಿಯ ಸುಮಾರು ಶೇ. 98ರಷ್ಟು ಭಾಗವನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ