AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲೆನ್ ಶಾ ರಾಜತಾಂತ್ರಿಕತೆಯಲ್ಲಿ ಯು-ಟರ್ನ್; ಭಾರತ ಭೇಟಿಗೂ ಮುನ್ನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿಯನ್ನು ಭೇಟಿಯಾದ ನೇಪಾಳದ ಪ್ರಧಾನಿ

ನೇಪಾಳ ಭೇಟಿಯ ವೇಳೆ ವಿಕ್ರಮ್ ಮಿಸ್ರಿ ನೇಪಾಳದ ಪ್ರಧಾನಿ ಬಾಲೆನ್ ಶಾ ಅವರನ್ನು ಭೇಟಿಯಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯದ ಸಂದೇಶವನ್ನು ತಲುಪಿಸಿದ್ದಾರೆ. ಮುಂಬರುವ ನವೆಂಬರ್ 22ರ ಪ್ರಧಾನಿ ಬಾಲೆನ್ ಶಾ ಅವರ ಭಾರತ ಪ್ರವಾಸದ ಸಿದ್ಧತೆಗಳು, ದ್ವಿಪಕ್ಷೀಯ ಸಹಕಾರದ ಪ್ರಗತಿ ಹಾಗೂ ಕೈಗೊಳ್ಳಬಹುದಾದ ಪ್ರಮುಖ ನಿರ್ಧಾರಗಳ ಕುರಿತು ಇಬ್ಬರೂ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯ 2 ದಿನಗಳ ಕಠ್ಮಂಡು ಭೇಟಿಯ ಬಳಿಕ, ವ್ಯಾಪಾರ, ಜಲವಿದ್ಯುತ್, ಮೂಲಸೌಕರ್ಯ, ಇಂಧನ, ಡಿಜಿಟಲ್ ಸಂಪರ್ಕ ಹಾಗೂ ಸಾರ್ವಜನಿಕ ಸಂಬಂಧಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಭಾರತ ಮತ್ತು ನೇಪಾಳ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ.

ಬಾಲೆನ್ ಶಾ ರಾಜತಾಂತ್ರಿಕತೆಯಲ್ಲಿ ಯು-ಟರ್ನ್; ಭಾರತ ಭೇಟಿಗೂ ಮುನ್ನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿಯನ್ನು ಭೇಟಿಯಾದ ನೇಪಾಳದ ಪ್ರಧಾನಿ
ವಿಕ್ರಮ್ ಮಿಸ್ರಿ - ಬಾಲೆನ್ ಶಾImage Credit source: PTI
ಸುಷ್ಮಾ ಚಕ್ರೆ
|

Updated on: Nov 06, 2026 | 9:12 PM

Share

ಕಠ್ಮಂಡು, ನವೆಂಬರ್ 6: ಪ್ರೋಟೋಕಾಲ್ (ರಾಜತಾಂತ್ರಿಕ ಶಿಷ್ಟಾಚಾರ) ನೆಪವೊಡ್ಡಿ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಭೇಟಿಯಾಗಲು ನಿರಾಕರಿಸಿದ್ದ ನೇಪಾಳ ಪ್ರಧಾನಮಂತ್ರಿ ಬಾಲೆನ್ ಶಾ (ಬಾಲೇಂದ್ರ ಶಾ), ಇದೀಗ ತಮ್ಮ ನಿಲುವನ್ನು ಬದಲಿಸಿಕೊಂಡು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರೊಂದಿಗೆ ಕಠ್ಮಂಡುವಿನಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಬಾಲೆನ್ ಶಾ ಶೀಘ್ರದಲ್ಲೇ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಈ ಭೇಟಿಯ ಸಿದ್ಧತೆ ಮತ್ತು ರಾಜತಾಂತ್ರಿಕ ಬಾಂಧವ್ಯ ಮರುಸ್ಥಾಪನೆಯ ಭಾಗವಾಗಿ ಈ ಮಹತ್ವದ ಸಭೆ ನಡೆದಿದೆ.

ಸುಮಾರು 6 ತಿಂಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ನೇಪಾಳಕ್ಕೆ ಭೇಟಿ ನೀಡಬೇಕಿತ್ತು. ಆದರೆ, ತಮ್ಮ ಸಮಾನ ದರ್ಜೆಯ ಅಧಿಕಾರಿಗಳಲ್ಲದ ಹೊರದೇಶದ ಪ್ರತಿನಿಧಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗುವುದಿಲ್ಲ ಎಂಬ ನಿಲುವನ್ನು ಪುನರುಚ್ಛರಿಸಿದ್ದ ನೇಪಾಳದ ಪ್ರಧಾನಿ ಬಾಲೆನ್ ಶಾ, ವಿಕ್ರಮ್ ಮಿಸ್ರಿ ಅವರೊಂದಿಗಿನ ಭೇಟಿಗೆ ನಿರಾಕರಿಸಿದ್ದರು. ಇದರಿಂದಾಗಿ ಅಂದು ಭಾರತೀಯ ಅಧಿಕಾರಿಯ ನೇಪಾಳ ಭೇಟಿ ರದ್ದಾಗಿತ್ತು.

ಇದನ್ನೂ ಓದಿ: ಅಧಿಕಾರಕ್ಕೇರಿದ 150 ದಿನಗಳಲ್ಲೇ ರಾಜಕೀಯ ವರ್ಚಸ್ಸು ಕಳೆದುಕೊಂಡ ನೇಪಾಳದ ಪ್ರಧಾನಿ ಬಾಲೆನ್ ಶಾ

ಬದಲಾದ ನಿಲುವು ಮತ್ತು ಸಭೆ:

ಕಠ್ಮಂಡುವಿನಲ್ಲಿ ನಡೆದ ಇತ್ತೀಚಿನ ಸಭೆಯಲ್ಲಿ ಪ್ರಧಾನಿ ಬಾಲೆನ್ ಶಾ ಅವರು ವಿಕ್ರಮ್ ಮಿಸ್ರಿ ಅವರನ್ನು ಆಹ್ವಾನಿಸಿ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯ ಸಂದೇಶವನ್ನು ಮಿಸ್ರಿ ಅವರು ನೇಪಾಳ ಪ್ರಧಾನಿಗೆ ತಲುಪಿಸಿದರು. ನವೆಂಬರ್ ಕೊನೆಯಲ್ಲಿ ಪ್ರಧಾನಿ ಬಾಲೆನ್ ಶಾ ಭಾರತಕ್ಕೆ ಕೈಗೊಳ್ಳಲಿರುವ ಮೊದಲ ಅಧಿಕೃತ ಭೇಟಿಯ ಕಾರ್ಯಸೂಚಿ ಮತ್ತು ಆದ್ಯತೆಗಳ ಕುರಿತು ಎರಡೂ ಕಡೆಯಿಂದ ಚರ್ಚಿಸಲಾಯಿತು.

ನವೆಂಬರ್ 4ರಂದು ವಿಕ್ರಮ್ ಮಿಸ್ರಿ ಮತ್ತು ರಾಯ್ ನೇತೃತ್ವದಲ್ಲಿ ನಡೆದ ನಿಯೋಗ ಮಟ್ಟದ ಮಾತುಕತೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಯೋಜನೆಗಳ ಪರಿಶೀಲನೆ ನಡೆಸಲಾಯಿತು. ಜೊತೆಗೆ ಭಾರತ-ನೇಪಾಳ ಸಂಸದೀಯ ಮೈತ್ರಿ ಗುಂಪಿನ ಸದಸ್ಯರು ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳ ಸಂಸದೀಯ ಸಮಿತಿಯ ಪ್ರತಿನಿಧಿಗಳೊಂದಿಗೂ ಮಿಸ್ರಿ ಸಂವಾದ ನಡೆಸಿದರು.

ಇದನ್ನೂ ಓದಿ: ನೇಪಾಳದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,259ಕ್ಕೆ ಏರಿಕೆ, 5 ಸಾವಿರ ಜನರಿಗಾಗಿ ಹುಡುಕಾಟ

ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ರಸುವಾ-ಭೋಟೇಕೋಶಿ ಪ್ರವಾಹದ ಸಮಯದಲ್ಲಿ ಭಾರತ ನೀಡಿದ ತಕ್ಷಣದ ಮಾನವೀಯ ಹಾಗೂ ತಾಂತ್ರಿಕ ನೆರವಿಗಾಗಿ ನೇಪಾಳ ಸರ್ಕಾರವು ಭಾರತಕ್ಕೆ ಕೃತಜ್ಞತೆ ಸಲ್ಲಿಸಿತು. ವ್ಯಾಪಾರ, ಮೂಲಸೌಕರ್ಯ, ಜಲವಿದ್ಯುತ್, ಗಡಿ ನಿರ್ವಹಣೆ ಹಾಗೂ ಇಂಧನ ಪೂರೈಕೆಯಂತಹ ಸಾಂಪ್ರದಾಯಿಕ ಕ್ಷೇತ್ರಗಳ ಜೊತೆಗೆ, ಸ್ಟಾರ್ಟ್​ಅಪ್​ಗಳು, ಡಿಜಿಟಲ್ ಸಂಪರ್ಕ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ರೀಡಾ ಕ್ಷೇತ್ರದಲ್ಲೂ ಪರಸ್ಪರ ಸಹಕಾರ ವಿಸ್ತರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.

ಈ ಮಾತುಕತೆ ವೇಳೆ ಇತ್ತೀಚೆಗೆ ನೇಪಾಳದ ರಸುವಾ-ಭೋಟೇಕೋಶಿ ಪ್ರದೇಶದಲ್ಲಿ ಸಂಭವಿಸಿದ ಭಾರಿ ಪ್ರವಾಹದ ಸಮಯದಲ್ಲಿ ಭಾರತ ನೀಡಿದ ತಕ್ಷಣದ ಪರಿಹಾರ ಸಾಮಗ್ರಿ ಮತ್ತು ರಕ್ಷಣಾ ಕಾರ್ಯಾಚರಣೆಗೆ ಪ್ರಧಾನಿ ಬಾಲೆನ್ ಶಾ ಕೃತಜ್ಞತೆ ಸಲ್ಲಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More