‘ತ್ರಿಶಾ ಹೆಸರನ್ನೇ ಹೇಳಿಲ್ಲ’; ಉದಯನಿಧಿ ಬಂಧನದ ಬಳಿಕ ಟಿವಿಕೆ ಸರ್ಕಾರದ ವಿರುದ್ಧ ತಿರುಗಿಬಿದ್ದ ಡಿಎಂಕೆ

ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಇಂದು ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಉದಯನಿಧಿ ಸ್ಟಾಲಿನ್ ಬಂಧನದ ನಂತರ ಡಿಎಂಕೆ ಪಕ್ಷ ಟಿವಿಕೆ ಪಕ್ಷ ಮತ್ತು ಮುಖ್ಯಮಂತ್ರಿ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ತ್ರಿಶಾ ಹೆಸರನ್ನೇ ಹೇಳಿಲ್ಲ’; ಉದಯನಿಧಿ ಬಂಧನದ ಬಳಿಕ ಟಿವಿಕೆ ಸರ್ಕಾರದ ವಿರುದ್ಧ ತಿರುಗಿಬಿದ್ದ ಡಿಎಂಕೆ
Udayanidhi Stalin-Trisha
Image Credit source: TV9

Updated on: Aug 04, 2026 | 3:17 PM

ಚೆನ್ನೈ, ಆಗಸ್ಟ್ 4: ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ತಮಿಳುನಾಡು ಪೊಲೀಸರು ಇಂದು ಬೆಳಿಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ಇದರಿಂದ ಚೆನ್ನೈನಲ್ಲಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಸೋಮವಾರ ನಡೆದ ರ‍್ಯಾಲಿಯಲ್ಲಿ ಉದಯನಿಧಿ ಸ್ಟಾಲಿನ್ ನಟಿ ತ್ರಿಶಾ ಕುರಿತು ನೀಡಿದ್ದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಡಿಎಂಕೆ ನಾಯಕನ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ತ್ರಿಶಾ ಅವರ ಹೆಸರನ್ನೇ ಹೇಳದಿದ್ದರೂ ಸುಳ್ಳು ಆರೋಪ ಮಾಡಿ ಉದಯನಿಧಿಯನ್ನು ಬಂಧಿಸಲಾಗಿದೆ ಎಂದು ಡಿಎಂಕೆ ಆರೋಪಿಸಿದೆ.

ಈ ಬಂಧನವನ್ನು ರಾಜಕೀಯ ಸೇಡಿನ ಕೃತ್ಯ ಎಂದು ಡಿಎಂಕೆ ಟೀಕಿಸಿದೆ. “ಉದಯನಿಧಿ ಸ್ಟಾಲಿನ್ ಯಾರ ವಿರುದ್ಧವೂ ಏನೂ ಹೇಳಿಲ್ಲ. ಉದಯನಿಧಿ ಕೇವಲ ಸಿಎಂ ವಿಜಯ್ ಅವರ ವೈಫಲ್ಯಗಳನ್ನು ಪಟ್ಟಿ ಮಾಡಿದ್ದಾರಷ್ಟೇ. ಅವರ ಭಾಷಣದಲ್ಲಿ ನಿಂದನೀಯ ಮಾತುಗಳಿರಲಿಲ್ಲ. ಅವರು ತ್ರಿಶಾ ಹೆಸರನ್ನೇ ಹೇಳಿಲ್ಲ” ಎಂದು ಡಿಎಂಕೆ ನಾಯಕ ಟಿ.ಕೆ.ಎಸ್. ಇಲಂಗೋವನ್ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆ!

ಈ ಘಟನೆಯ ಹಿನ್ನೆಲೆ ಏನು?:

ಸೋಮವಾರ ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಸಭೆಯಲ್ಲಿದ್ದ ಯಾರೋ ಒಬ್ಬರು “ತ್ರಿಶಾ, ತ್ರಿಶಾ” ಎಂದು ಘೋಷಣೆ ಕೂಗಿದರು. ಆಗ ತಮ್ಮ ಭಾಷಣವನ್ನು ನಿಲ್ಲಿಸಿ ಕುಹಕವಾಡಿದ ಉದಯನಿಧಿ, ನಟಿ ತ್ರಿಶಾ ಕುರಿತು ದ್ವಂದ್ವಾರ್ಥದ ಆಕ್ಷೇಪಾರ್ಹ ಹೇಳಿಕೆ ನೀಡಿದರು. ಈ ಮಾತುಗಳು ವ್ಯಾಪಕ ರಾಜಕೀಯ ಆಕ್ರೋಶಕ್ಕೆ ಕಾರಣವಾದವು.


ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಟಿವಿಕೆ, ಡಿಎಂಕೆ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಪೊಲೀಸರಿಗೂ ದೂರು ನೀಡಿತ್ತು. ಇದಕ್ಕೂ ಮುನ್ನ ತಮಿಳುನಾಡು ಬಿಜೆಪಿಯೂ ಉದಯನಿಧಿ ಬಂಧನಕ್ಕೆ ಆಗ್ರಹಿಸಿತ್ತು. “ಮುಖ್ಯಮಂತ್ರಿ ವಿಜಯ್ ಮತ್ತು ತ್ರಿಶಾ ಅವರ ಕುರಿತು ಉದಯನಿಧಿ ಆಡಿರುವ ಮಾತುಗಳು ಅಸಹ್ಯಕರ ಮತ್ತು ನಾಚಿಕೆಗೇಡಿನ ಸಂಗತಿ. ತಾಯಿ, ಹೆಂಡತಿ, ಮಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯೂ ಇಷ್ಟು ಅಶ್ಲೀಲವಾಗಿ ಮಾತನಾಡಲಾರ. ಇಂತಹ ಕೀಳುಮಟ್ಟದ ಭಾಷಣಕ್ಕಾಗಿ ಉದಯನಿಧಿ ಅವರನ್ನು ಬಂಧಿಸಿ ಜೈಲಿಗಟ್ಟುವುದು ತಮಿಳುನಾಡಿಗೆ ಹೆಮ್ಮೆ ತರುತ್ತದೆ” ಎಂದು ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಹೇಳಿದ್ದಾರೆ.

ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದವರನ್ನು ಮತ್ತೆ ನಂಬುವುದಿಲ್ಲ; ಕಾಂಗ್ರೆಸ್ ವಿರುದ್ಧ ಉದಯನಿಧಿ ಸ್ಟಾಲಿನ್ ಆಕ್ರೋಶ

ನಟಿ ತ್ರಿಶಾ ಅವರ ಕುರಿತು ಇಂತಹ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿರುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲಿ, ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು, ವಿಜಯ್ ರಾಜಕೀಯಕ್ಕೆ ಬರುವ ಮುನ್ನ ‘ತ್ರಿಶಾ ಮನೆಯಿಂದ ಹೊರಬರಬೇಕು’ ಎಂದು ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ತ್ರಿಶಾ ಅವರ ಕಾನೂನು ತಂಡವು ಈ ಹೇಳಿಕೆಗೆ ಕಾನೂನುಬದ್ಧವಾಗಿ ತಿರುಗೇಟು ನೀಡಿತ್ತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us