ಸರ್ಕಾರಿ ನೌಕರರಿಗೆ ಶಾಕ್: ಹೆಂಡತಿ-ಮಕ್ಕಳಿಗೆ ಜೀವನಾಂಶ ಕೊಡದಿದ್ರೆ ಸಂಬಳದಲ್ಲೇ ಹಣ ಕಟ್

Odisha Government: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಜೀವನಾಂಶ ಪಾವತಿಸದೆ ನಿರ್ಲಕ್ಷ್ಯ ತೋರುವ ಸರ್ಕಾರಿ ನೌಕರರ ವೇತನದಿಂದಲೇ ಹಣ ಕಡಿತಗೊಳಿಸಿ ಫಲಾನುಭವಿಗಳಿಗೆ ವರ್ಗಾಯಿಸಲು ಸೂಚಿಸಲಾಗಿದೆ. ಜನಸ್ಪಂದನ ಸಭೆಗಳಲ್ಲಿ ಬಂದ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸರ್ಕಾರಿ ನೌಕರರಿಗೆ ಶಾಕ್: ಹೆಂಡತಿ-ಮಕ್ಕಳಿಗೆ ಜೀವನಾಂಶ ಕೊಡದಿದ್ರೆ ಸಂಬಳದಲ್ಲೇ ಹಣ ಕಟ್
ಮೋಹನ್ ಚರಣ್ ಮಾಝಿ
Image Credit source: tv9 kannada

Updated on: Aug 30, 2026 | 9:36 PM

ಭುವನೇಶ್ವರ, ಆಗಸ್ಟ್​ 30: ನ್ಯಾಯಾಲಯದ ನಿರ್ದೇಶನವಿದ್ದರೂ ಪತ್ನಿ ಹಾಗೂ ಮಕ್ಕಳಿಗೆ ನೀಡಬೇಕಾದ ಜೀವನಾಂಶವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸುವ ಸರ್ಕಾರಿ ನೌಕರರ ವೇತನದಿಂದಲೇ ಹಣವನ್ನು ಕಡಿತಗೊಳಿಸಿ ಫಲಾನುಭವಿಗಳಿಗೆ ವರ್ಗಾಯಿಸುವಂತೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ (Mohan Charan Majhi) ಆದೇಶ ಹೊರಡಿಸಿದ್ದಾರೆ. ಆ ಮೂಲಕ ಸರ್ಕಾರಿ ನೌಕರರಿಗೆ ಶಾಕ್​ ನೀಡಿದ್ದಾರೆ.

ಜನಸ್ಪಂದನದಲ್ಲಿ ಕೇಳಿಬಂದ ದೂರುಗಳು

ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಕೈಗೊಂಡ ಜನಸ್ಪಂದನ ಸಭೆಗಳಲ್ಲಿ ಸಂತ್ರಸ್ತ ಮಹಿಳೆಯರಿಂದ ಈ ಕುರಿತಾಗಿ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಸರ್ಕಾರ ಈ ಮಹ್ವದ ಆದೇಶ ಹೊರಡಿಸಿದೆ. ವಿಚ್ಛೇದನದ ಬಳಿಕವೂ ಹಲವು ಪುರುಷ ನೌಕರರು ನಿರ್ವಹಣಾ ವೆಚ್ಚ ನೀಡದೇ ನ್ಯಾಯಾಲಯದ ನಿಯಮಗಳನ್ನು ಪಾಲಿಸದಿರುವುದು ತಿಳಿದುಬಂದಿದೆ. ಸಿಎಂ ಕುಂದುಕೊರತೆ ಸಭೆಗಳಲ್ಲಿ ಇಂತಹ ದೂರುಗಳು ಕೇಳಿಬರುತ್ತಿದ್ದವು. ಸರ್ಕಾರದ ಖಜಾನೆಯಿಂದ ವೇತನ ಪಡೆಯುತ್ತಾ, ತಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆಯೇ ಅನ್ಯಾಯ ಎಸಗುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಿಎಂ ಮಾಝಿ ತೀವ್ರವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ: ನೇಪಾಳ ಪ್ರವಾಹದ ನೀರಿನಲ್ಲಿ ಭಾರತಕ್ಕೆ ಕೊಚ್ಚಿಕೊಂಡು ಬಂದ ಮೃತದೇಹಗಳು; ಉತ್ತರಪ್ರದೇಶದಲ್ಲಿ 7 ಶವಗಳು ಪತ್ತೆ

ನ್ಯಾಯಾಲಯದ ಆದೇಶ ಬಂದ ತಕ್ಷಣ, ಆಯಾ ಇಲಾಖೆಯ ಆಯವ್ಯಯ ಮತ್ತು ವಿತರಣಾ ಅಧಿಕಾರಿ ನೌಕರರ ವೇತನ ಬಿಲ್‌ನಿಂದ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿ ನೇರವಾಗಿ ಫಲಾನುಭವಿಗಳಿಗೆ ವರ್ಗಾಯಿಸಲಿದ್ದಾರೆ. ಯಾವುದೇ ವಿಳಂಬವಿಲ್ಲದೆ ಸ್ವಯಂಚಾಲಿತ ಅನುಷ್ಠಾನಕ್ಕಾಗಿ ಈ ಪ್ರಕ್ರಿಯೆಯನ್ನು ರಾಜ್ಯದ ಕೇಂದ್ರೀಕೃತ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಯೋಜಿಸುವಂತೆ ಸಿಎಂ ನಿರ್ದೇಶಿಸಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ 

ಇನ್ನು ಸರ್ಕಾರದ ಈ ನಿರ್ಧಾರಕ್ಕೆ ಹಿರಿಯ ವಕೀಲ ಪ್ರಮೋದ್ ಮಿಶ್ರಾ ಹಾಗೂ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸುನಿತಾ ಪಟ್ನಾಯಕ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಪ್ರಮೋದ್ ಮಿಶ್ರಾ, ‘ಸರ್ಕಾರದ ಈ ನಿರ್ಧಾರದಿಂದ ನ್ಯಾಯಾಲಯದ ಆದೇಶಗಳು ಕೇವಲ ಕಾಗದದ ಮೇಲೆ ಉಳಿಯದಂತೆ ತಡೆಯಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಶಾಂತಿಯುತವಾಗಿ ಮುಗಿದ ನೀಟ್-ಪಿಜಿ ಪರೀಕ್ಷೆ: ತಾಂತ್ರಿಕ ಸಮಸ್ಯೆಗೆ ಸಿಲುಕಿದ ಜೈಪುರದ ಅಭ್ಯರ್ಥಿಗಳಿಗೆ ಸೆ. 5ಕ್ಕೆ ಮರುಪರೀಕ್ಷೆ

‘ವರ್ಷಾನುಗಟ್ಟಲೆ ಹೋರಾಟ ನಡೆಸುತ್ತಿದ್ದ ಮಹಿಳೆಯರಿಗೆ ಇದು ದೊಡ್ಡ ನಿರಾಳತೆ ಹಾಗೂ ಗೌರವ ತರಲಿದೆ’ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸುನಿತಾ ಪಟ್ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ. ‘ಒಟ್ಟಿನಲ್ಲಿ ಸರ್ಕಾರದ ಈ ದಿಟ್ಟ ಹೆಜ್ಜೆಯು ನ್ಯಾಯಾಲಯದ ಅಧಿಕಾರವನ್ನು ಎತ್ತಿಹಿಡಿಯುವುದರ ಜೊತೆಗೆ, ಹಕ್ಕುಗಳಿಗಾಗಿ ಪರದಾಡುವ ಕುಟುಂಬಗಳ ಸಂಕಷ್ಟಕ್ಕೆ ಮುಕ್ತಿ ದೊರೆಯಲಿದೆ’ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us